Monday, December 29, 2025

ಸತ್ಯ | ನ್ಯಾಯ |ಧರ್ಮ

ಕಳೆದ 10 ವರ್ಷಗಳ ರೈಲು ಅಪಘಾತಗಳ ಆಘಾತಕಾರಿ ಅಂಕಿಅಂಶ: ಬೆಚ್ಚಿಬೀಳಿಸುವಂತಿದೆ ರೈಲ್ವೆ ಮಂಡಳಿಯ ವರದಿ

2025ನೇ ವರ್ಷ ಮುಕ್ತಾಯಕ್ಕೆ ಕೇವಲ ಎರಡು ದಿನ ಬಾಕಿ ಇರುವಾಗಲೇ ಆಂಧ್ರಪ್ರದೇಶದ ಎಲಮಂಚಿಲಿ ರೈಲು ನಿಲ್ದಾಣದಲ್ಲಿ ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು ಓರ್ವ ವ್ಯಕ್ತಿ ಸಾವಿಗೀಡಾಗಿದ್ದಾರೆ.

ಈ ದುರಂತದ ಬೆನ್ನಲ್ಲೇ ರೈಲ್ವೆ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗುತ್ತಿದ್ದು, ರೈಲ್ವೆ ಮಂಡಳಿಯು ಕಳೆದ 10 ವರ್ಷಗಳ ಅಪಘಾತಗಳ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಆರ್‌ಟಿಐ (RTI) ಅಡಿಯಲ್ಲಿ ಲಭ್ಯವಾಗಿರುವ ಈ ಮಾಹಿತಿಯು ರೈಲು ಪ್ರಯಾಣಿಕರಲ್ಲಿ ದಿಗಿಲು ಹುಟ್ಟಿಸುವಂತಿದೆ.

ರೈಲ್ವೆ ಮಂಡಳಿಯ ಅಂಕಿಅಂಶಗಳ ಪ್ರಕಾರ, 2014-15ರಿಂದ 2023-24ರ ಆರ್ಥಿಕ ವರ್ಷದ ಅವಧಿಯಲ್ಲಿ ನಡೆದ ವಿವಿಧ ರೈಲು ಅಪಘಾತಗಳಲ್ಲಿ ಒಟ್ಟು 766 ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಇದೇ ಅವಧಿಯಲ್ಲಿ ಸುಮಾರು 2,126 ಪ್ರಯಾಣಿಕರು ತೀವ್ರವಾಗಿ ಅಥವಾ ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದಾರೆ.

2014-15ರಲ್ಲಿ ಅತಿ ಹೆಚ್ಚು ಅಂದರೆ 135 ಅಪಘಾತಗಳು ದಾಖಲಾಗಿದ್ದವು. ನಂತರದ ವರ್ಷಗಳಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾದಂತೆ ಕಂಡರೂ, ಸಂಭವಿಸಿದ ಕೆಲವು ದೊಡ್ಡ ಮಟ್ಟದ ದುರಂತಗಳು ಭಾರಿ ಸಾವು-ನೋವುಗಳಿಗೆ ಕಾರಣವಾಗಿವೆ.

ಮರಣಗಳ ಸಂಖ್ಯೆಯನ್ನು ಗಮನಿಸಿದರೆ, 2016-17ರಲ್ಲಿ 193 ಮಂದಿ ಸಾವಿಗೀಡಾಗಿದ್ದರು. ಆದರೆ, 2023-24ನೇ ಸಾಲು ಕಳೆದ ದಶಕದಲ್ಲೇ ಅತ್ಯಂತ ಭೀಕರ ವರ್ಷವಾಗಿ ದಾಖಲಾಗಿದೆ. ಈ ಒಂದೇ ವರ್ಷದಲ್ಲಿ ಬರೋಬ್ಬರಿ 296 ಮಂದಿ ರೈಲು ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಇದಕ್ಕೆ ಪ್ರಮುಖ ಕಾರಣ 2023ರ ಜೂನ್‌ನಲ್ಲಿ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದ ತ್ರಿವಳಿ ರೈಲುಗಳ ಭೀಕರ ಸಂಘರ್ಷ. ಈ ಒಂದು ಅಪಘಾತವೇ ದೇಶದ ರೈಲ್ವೆ ಸಿಗ್ನಲಿಂಗ್ ವ್ಯವಸ್ಥೆಯ ಲೋಪದೋಷಗಳನ್ನು ಜಗತ್ತಿನ ಮುಂದೆ ಅನಾವರಣಗೊಳಿಸಿತು.

ವರದಿಯ ಪ್ರಕಾರ, ಶೇ. 80ರಷ್ಟು ಅಪಘಾತಗಳು ರೈಲುಗಳು ಹಳಿ ತಪ್ಪುವುದರಿಂದ (Derailment) ಸಂಭವಿಸಿವೆ. ಕಳೆದ 10 ವರ್ಷಗಳಲ್ಲಿ 438 ಬಾರಿ ರೈಲುಗಳು ಹಳಿ ತಪ್ಪಿವೆ. ಇದರ ಜೊತೆಗೆ ಲೆವೆಲ್ ಕ್ರಾಸಿಂಗ್‌ಗಳಲ್ಲಿನ ಅಜಾಗರೂಕತೆ, ರೈಲುಗಳ ಮುಖಾಮುಖಿ ಡಿಕ್ಕಿ ಮತ್ತು ಬೋಗಿಗಳಲ್ಲಿನ ಬೆಂಕಿ ಅವಘಡಗಳು ಪ್ರಮುಖ ಕಾರಣಗಳಾಗಿವೆ.

ಇವುಗಳನ್ನು ತಡೆಯಲು ರೈಲ್ವೆಯು ‘ಕವಚ’ (Kavach) ಎಂಬ ಸ್ವದೇಶಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆಯಾದರೂ, ಅದು ಇನ್ನು ದೇಶಾದ್ಯಂತ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಹಳೆಯ ಹಳಿಗಳ ಬದಲಾವಣೆ ಮತ್ತು ಆಧುನಿಕ ಸಿಗ್ನಲಿಂಗ್ ವ್ಯವಸ್ಥೆಯ ವೇಗದ ಅನುಷ್ಠಾನ ಮಾತ್ರ ಇಂತಹ ದುರಂತಗಳಿಗೆ ಮುಕ್ತಿ ನೀಡಬಲ್ಲದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page