Monday, February 17, 2025

ಸತ್ಯ | ನ್ಯಾಯ |ಧರ್ಮ

ಬದಲಾಗಬೇಕೆ ನಮ್ಮ ಶಿಕ್ಷಣ ಪದ್ಧತಿ ? ಆರ್.ಪಿ ವೆಂಕಟೇಶ್‌ ಮೂರ್ತಿ

ಭಾರತೀಯ ಆಧುನಿಕ  ಶಿಕ್ಷಣ ಪದ್ಧತಿ ಹೆಚ್ಚು ಕಡಿಮೆ ನಡುಹರೆಯವನ್ನೇ  ಸವೆಸಿರುವ ಈ ಹೊತ್ತಿನಲ್ಲಿ ಬಹುಪಾಲು ಯುವಜನ ಸಮೂಹದ ಹತಾಶೆ, ಆತಂಕಕ್ಕೆ ಕಾರಣವಾಯ್ತೇ  ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಗುಮಾಸ್ತರನ್ನು ಸೃಷ್ಟಿ ಮಾಡಲು, ಬ್ರಿಟಿಷರು ರೂಪಿಸಿದ ಶಿಕ್ಷಣ ಪದ್ಧತಿಯನ್ನು ಭಾರತ ಅನುಸರಿಸುತ್ತಿದೆ ಎಂದೂ, ಅದನ್ನು ನಮ್ಮ ದೇಶವನ್ನು ಕಟ್ಟಲು ಅನುಕೂಲ ಆಗುವಂತೆ ರೂಪಿಸುವ ಅಗತ್ಯ ಇದೆ ಎಂದೂ ಶಿಕ್ಷಣ ತಜ್ಞರು ಬಹಳ ಹಿಂದೆ ಟೀಕೆ ಮಾಡುತ್ತಿದ್ದರು. ಇಂದೂ ಕೂಡ ಬಹುಪಾಲು ಅದೇ ಶಿಕ್ಷಣ ಪದ್ಧತಿಯನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಈ ಶಿಕ್ಷಣ ಪದ್ಧತಿಯಲ್ಲಿ ಕಲಿತು ಪದವಿ ಪಡೆದವರಿಗೆ ಗುಮಾಸ್ತನ ಕೆಲಸ ಮಾಡಲು ಕೂಡ ಬರುವುದಿಲ್ಲ ಅಥವ ವ್ಯವಧಾನ ಉಳಿಸಿಲ್ಲ ಎಂದು ವಿಶಾದದಿಂದಲೇ ಹೇಳಬೇಕಾಗಿದೆ.

 ಬಹುಪಾಲು ವಿದೇಶದಿಂದ ಜ್ಞಾನವೇ ಶ್ರೇಷ್ಠ ಎಂಬ ಭ್ರಮೆಯಲ್ಲಿ ದೇಸೀ ಜ್ಞಾನ- ತಂತ್ರಜ್ಞಾನಗಳನ್ನು ಕಡೆಗಣಿಸಿದ್ದು ಇಂದಿನ ವೈಫಲ್ಯಕ್ಕೆ ಕಾರಣ. ಉದಾಹರಣೆಗೆ, ಕೃಷಿಗಾಗಿ ಆಧುನಿಕ ತಂತ್ರಜ್ಞಾನ ಹೆಸರಲ್ಲಿ, ಕೃಷಿ ಜಮೀನಿಗೆ ಅಪಾರ ಪ್ರಮಾಣದಲ್ಲಿ ಸುರಿದ ರಾಸಾಯನಿಕಗಳಿಂದಾಗಿ ಇಂದು ರೈತನ ಭೂಮಿಯೂ ಹಾಳಾಯ್ತು. ವಿಪರೀತ ರಾಸಾಯನಿಕಗಳು ಹಾಗು ಕೀಟನಾಶಕಗಳಿಂದ ಆರೋಗ್ಯದ ಜೊತೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಯ್ತು.  ಯಾವ ವಿಜ್ಞಾನಿಗಳು ರಾಸಾಯನಿಕಗಳ ಬಳಕೆಗೆ ಪ್ರೋತ್ಸಾಹಿಸಿದ್ದರೋ ಅವರೇ ಇದೀಗ ಸಾವಯವ, ಸಹಜ, ಸುಸ್ಥಿರ ಕೃಷಿ ಮಾಡಬೇಕೆಂದು ಹೇಳುತ್ತಿದ್ದಾರೆ. ಇವೆಲ್ಲದ ಭಾರತೀಯ ಪರಂಪರೆಯಲ್ಲಿ ಇದ್ದ ಪದ್ಧತಿಗಳು. ಆಧುನಿಕತೆ ಹೆಸರಲ್ಲಿ ದೇಸೀ ಜ್ಞಾನಶಾಖೆಗಳನ್ನು ನಾಶ ಮಾಡಿದ್ದರ ಫಲ ಇದು.

     ಸ್ವಾತಂತ್ರ್ಯ ಬಂದಾಗಿನಿಂದ ಶಿಕ್ಷಣದ ವಿಚಾರವೂ ಬಹುಪಾಲು ಕಲಿಕೆಯ ಭಾಷಾ ಮಾಧ್ಯಮದ ಕುರಿತೆ ಬಂದಿದೆಯೇ ಹೊರತು, ಶಿಕ್ಷಣದ ತಿರುಳಿನ ಕುರಿತು ಚರ್ಚೆ ನಡೆದದ್ದು ಬಹಳ ಕಮ್ಮಿ ಎಂದೇ  ಹೇಳಬೇಕು.

* ಇಂಜಿನಿಯರ್ಗಳು, ವೈದ್ಯರು …ಹೀಗೆ ಕೆಲವೇ ಕೆಲವು ವೃತ್ತಿಗಳನ್ನು ಗಳಿಸಲು, ಶಿಕ್ಷಣ ವ್ಯವಸ್ಥೆಯು ತನ್ನ ಗಮನವನ್ನು ಕೇಂದ್ರೀಕರಿಸಿದೆ. ಆದಕಾರಣ ಬೇರೆಲ್ಲ ವೃತ್ತಿಗಳು ನಿರ್ಲಕ್ಷಕ್ಕೆ ಗುರಿಯಾಗಿವೆ.

ಒಂದು ವೇಳೆ ಭಾರತದ ದೇಸೀ ಜ್ಞಾನವನ್ನ ಆಧರಿಸಿದ ವೃತ್ತಿಗಳಿಗೆ ಸಮಾಜ ಮಹತ್ವ ನೀಡಿದ್ದಲ್ಲಿ, ಕನ್ನಡವೂ ಸೇರಿದಂತೆ ಪ್ರಾದೇಶಿಕ ಭಾಷೆಗಳಿಗೆ ಖಂಡಿತ ಮಹತ್ವ ಬರುತ್ತಿತ್ತು. ಆದರೆ ವೈದ್ಯಕೀಯ ಶಿಕ್ಷಣ ಮತ್ತು ಇಂಜಿನಿಯರಿಂಗ್ ನಂತಹ ಜ್ಞಾನ ಶಾಖೆಗಳು ಇಂಗ್ಲಿಷ್ ಭಾಷಾ ನೆಲೆಗೇ ಹೆಚ್ಚು ಅಂಟಿಕೊಂಡದ್ದಾದ್ದರಿಂದ ಸಹಜವಾಗಿ ಶಿಕ್ಷಣದಲ್ಲಿ ಇಂಗ್ಲಿಷ್ ಭಾಷೆ ಪ್ರಧಾನವಾಯ್ತು. ಉದಾಹರಣೆಗೆ ನಮ್ಮ ದೇಶ ನೇಕಾರಿಕೆ , ಕುಂಬಾರಿಕೆಗಳಂತ ದೇಸೀ  ಕೌಶಲ್ಯಗಳನ್ನು ಪ್ರಧಾನವಾಗಿ ಪರಿಗಣಿಸಿದ್ದಲ್ಲಿ ಖಂಡಿತಾ ದೇಸೀಯ ಭಾಷೆಗಳು ಈಗಿನ ದುಸ್ಥಿತಿಗೆ ಹೋಗುತ್ತಿರಲಿಲ್ಲ. ಹಾಗೆಯೇ ಸಮಾಜದಲ್ಲಿ ಈಗ ಸೃಷ್ಟಿಯಾಗಿರುವ ಮೇಲು ಕೀಳು ಎಂಬ ವೃತ್ತಿ ಸಂಬಂಧಿತ ಅಸಮಾನತೆ ಇಲ್ಲದೇ ಇಡೀ ಸಮಾಜ ಒಂದು ಸಮತೋಲನದಲ್ಲಿರುತ್ತಿತ್ತು.

* ಈ ಶಿಕ್ಷಣ ಪದ್ಧತಿಯಲ್ಲಿ ಕಲಿತು ಶೇಕಡ 85ಕ್ಕಿಂತ ಹೆಚ್ಚು ಅಂಕ ಗಳಿಸುವ ಶೇಕಡಾ 15 ರಷ್ಟು ವಿದ್ಯಾರ್ಥಿಗಳು, ತಾವು ಆಯ್ಕೆ ಮಾಡಿಕೊಂಡ ವೃತ್ತಿಯಲ್ಲಿ ಮುಂದುವರಿಯ ಬಲ್ಲರು.  ಶೇಕಡ 85 ಕ್ಕೆ ಕ್ಕಿಂತ ಕಡಿಮೆ ಅಂಕ ಗಳಿಸುವ ಶೇಕಡ 85ರಷ್ಟು ವಿದ್ಯಾರ್ಥಿಗಳಿಗೆ ಈ ಶಿಕ್ಷಣ ಪದ್ಧತಿ  ಏನು ನೀಡಿದೆ ? ಎಂಬ ಪ್ರಶ್ನೆಗೆ ಉತ್ತರ, ನಿರಾಶದಾಯಕವಾಗಿದೆ.

* ಶಿಕ್ಷಣದ ಕುರಿತು, ನಾವು ಏನೇ ಉನ್ನತ ಆದರ್ಶಗಳ ಬಗ್ಗೆ ಮಾತನಾಡಿದರೂ, ಅದರ ಮುಖ್ಯ ಕರ್ತವ್ಯ ಒಬ್ಬ ವ್ಯಕ್ತಿ ಮುಂದೆ ತಾನು ಮಾಡಬಹುದಾದ ವೃತ್ತಿಗೆ ತರಬೇತಿ ನೀಡುವುದು. ಒಬ್ಬ ವಿದ್ಯಾರ್ಥಿ ಪೂರ್ವ  ಪ್ರಾಥಮಿಕ ಎರಡು ವರ್ಷ ಸೇರಿ ಪದವಿಗಳಿಸುವ ಹೊತ್ತಿಗೆ 17 ವರ್ಷಗಳ ಕಾಲ, ಶಿಕ್ಷಣ ವ್ಯವಸ್ಥೆಯಲ್ಲಿ ಇರುತ್ತಾನೆ. ಅಂದರೆ ಅವನು / ಅವಳು ಮುಂದಿನ ಜೀವನಕ್ಕೆ ಅಗತ್ಯವಾದ ತರಬೇತಿ ಪಡೆಯುತ್ತಿರುತ್ತಾನೆ. ಆದರೆ ಇಷ್ಟು ದೀರ್ಘ ಅವಧಿಯ ತರಬೇತಿ ಪಡೆದ ಒಬ್ಬ ಪದವೀಧರ, ಯಾವ ಕೆಲಸವನ್ನೂ ಮಾಡಲಾಗದ ವ್ಯಕ್ತಿಯಾಗಿ ಹೊರ ಬರುತ್ತಿರುವುದು, ನಮ್ಮ ಶಿಕ್ಷಣ ಪದ್ಧತಿಯ ಬಹುದೊಡ್ಡ ದುರಂತವಾಗಿದೆ. ಈ ಶಿಕ್ಷಣ ಪದ್ಧತಿಯು ದೇಶದ ಕೋಟ್ಯಾಂತರ ಯುವಕರ ಭವಿಷ್ಯವನ್ನು ಹೊಸಕಿಹಾಕಿದೆ.

* ಶಿಕ್ಷಣವೆಂದರೆ ಬಹುಪಾಲು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ಹೊರೆ ಹೊರುವ ಕರ್ಮವಾಗಿದೆ. ಉತ್ತಮ ಶಿಕ್ಷಣ ಪದ್ಧತಿಯ ಮೂಲಕ ಅದ್ಭುತವನ್ನು ಸಾಧಿಸಿರುವ ದೇಶಗಳಿಂದ ಆದರೂ ಪಾಠ ಕಲಿಯುವ ಮುಕ್ತ ಮನಸ್ಸನ್ನು ನಾವು ಈಗಲಾದರೂ ಹೊಂದಬೇಕಾಗಿದೆ.

* ಶಿಕ್ಷಣದ ವಿಷಯದಲ್ಲಿ ಫಿನ್ಲ್ಯಾಂಡ್, ಜಪಾನ್ ಹಾಗೂ ಚೀನಾ ದೇಶಗಳು ಅತ್ಯುತ್ತಮ ಮಾದರಿ ಹೊಂದಿದ ಖ್ಯಾತಿ ಪಡೆದಿವೆ. ಇಂತಹ ಇನ್ನೂ ಅನೇಕ ಅತ್ಯುತ್ತಮ ಶಿಕ್ಷಣ ಮಾದರಿಗಳನ್ನು   ಅಳವಡಿಸಿಕೊಳ್ಳಲು ನಮ್ಮ ಸರ್ಕಾರಗಳು ತಕ್ಷಣ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ.

*  ಬಹುಪಾಲು ದೇಶಗಳಲ್ಲಿ 12ನೇ ತರಗತಿಯ ತನಕದ ಕಲಿಕೆಯನ್ನು ಪ್ರೌಢಶಾಲಾ ಶಿಕ್ಷಣ ಎಂದು ಪರಿಗಣಿಸಲಾಗಿದೆ. ಹಲವು ದೇಶಗಳಲ್ಲಿ ಪ್ರಾಥಮಿಕ ಹಂತದಿಂದಲೇ ಅವರವರ ಪರಿಸರದ ಕೌಶಲ್ಯಗಳನ್ನು ಕಲಿಸಲು ಆದ್ಯತೆ ನೀಡಲಾಗಿದೆ. ಪ್ರೌಢಶಾಲೆ ರ್ಪೂಣಗೊಳಿಸುವ ಹೊತ್ತಿಗೆ ವಿದ್ಯಾರ್ಥಿಯೊಬ್ಬನಿಗೆ ಕನಿಷ್ಠ 15 ಕೌಶಲ್ಯಗಳನ್ನು ಕಲಿಯುವ ಅವಕಾಶ ಒದಗಿಸಿಕೊಡಲಾಗುತ್ತದೆ. ಈ ಕೌಶಲ್ಯಗಳಲ್ಲಿ ಯಾವುದಾದರೂ  ಒಂದನ್ನು ಆಯ್ಕೆ ಮಾಡಿಕೊಂಡು, ಜೀವನ ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಪ್ರೌಢ ಶಿಕ್ಷಣ ಮುಗಿಸಿದ ತಕ್ಷಣ ಬಹುಪಾಲು ದೇಶಗಳ ಮಕ್ಕಳು, ವೃತ್ತಿಯೊಂದನ್ನು ಆರಿಸಿಕೊಂಡು ಸ್ವಂತ ಸಂಪಾದನೆ ಆರಂಭಿಸುತ್ತಾರೆ. ಅಗತ್ಯವೆನಿಸಿದರೆ ಮಾತ್ರ ಉನ್ನತ ಶಿಕ್ಷಣ ಪಡೆಯಲು ಪ್ರಯತ್ನ ಆರಂಭಿಸುತ್ತಾರೆ. ಈ ಕೌಶಲ್ಯಗಳಲ್ಲಿ ಚಿತ್ರಕಲೆ, ಸಂಗೀತ ಕೂಡ ಸೇರಿರುತ್ತದೆ.

*  ನಮ್ಮ ದೇಶದಲ್ಲಿ ಪ್ರಾಥಮಿಕ ಹಂತದಿಂದ ಪ್ರೌಢ ಶಾಲೆಗಳ ತನಕ ಈ ರೀತಿಯ ಕೌಶಲ್ಯಾಧಾರಿತ ಜೀವನ ಶಿಕ್ಷಣ ನೀಡುವುದು ಅತ್ಯಗತ್ಯವಾಗಿದೆ.

* ಪ್ರಾಥಮಿಕ ಹಂತದಿಂದಲೇ ಹೇರ್ ಕಟಿಂಗ್, ಬಟ್ಟೆ ಹೊಲಿಯುವುದು, ಹಣ್ಣು- ತರಕಾರಿ ಕತ್ತರಿಸುವುದು, ಮಣ್ಣಿನಿಂದ ಮಡಿಕೆ ಮಾಡುವುದು, ಪ್ರೌಢಶಾಲಾ ಹಂತದಲ್ಲಿ ಬಡಗಿ ಕೆಲಸ, ಎಲೆಕ್ಟ್ರಿಕಲ್ ಕೆಲಸ, ಪ್ಲಂಬಿಂಗ್, ರೇಡಿಯೋ, ಮೊಬೈಲ್ ರಿಪೇರಿ, ಚಪ್ಪಲಿ ಹೊಲಿಯುವುದು,ಎಣ್ಣೆ ತಯಾರಿಕೆ, ಇಟ್ಟಿಗೆ ತಯಾರಿಸುವುದು, ಗಿಡಗಳನ್ನು ನೆಟ್ಟು ಪೋಷಿಸುವುದು, ಕಸ ಗುಡಿಸುವುದು,  ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು… ಹೀಗೆ ನಾನಾ ರೀತಿಯ ಕೆಲಸಗಳನ್ನು ಮಾಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರತಿಯೊಂದು ವೃತ್ತಿಯ ಬಗೆಗೂ ಗೌರವ ಬರುವಂತೆ ಮಾಡಲಾಗುತ್ತದೆ. ಕ್ರೀಡೆಗಳಿಗೂ ಪ್ರಾಮುಖ್ಯತೆ ನೀಡಲಾಗುತ್ತದೆ. ಸಮ ಸಮಾಜದ ಬಗ್ಗೆ ಮಾತನಾಡುವ ನಾವು, ಇಂತಹ ಶಿಕ್ಷಣ ಪದ್ಧತಿಯಿಂದ ಕಲಿಯುವುದು ಬೇಕಾದಷ್ಟಿದೆ.

* ಗಾಂಧೀಜಿಯವರು ದೇಹಕ್ಕೆ ಶಿಕ್ಷಣ, ಮನಸ್ಸಿಗೆ ಶಿಕ್ಷಣ ಹಾಗೂ ಹೃದಯ ಶಿಕ್ಷಣ ಎಂದು ಹೇಳಿದ್ದರು.  ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಸಮಗ್ರ ನೋಟದ ಅಗತ್ಯ ಇದೆ.

ಸರ್ಕಾರಿ ಶಾಲೆಗಳ ಸುಧಾರಣೆ

    ಸರ್ಕಾರಿ ಶಾಲೆಗಳು ಅಧೋಗತಿಗಿಳಿಯಲು,   ನಮ್ಮ ಕೇಂದ್ರೀಕೃತ ಸರ್ಕಾರಿ ವ್ಯವಸ್ಥೆಯ ಅಧಿಕಾರಿಗಳು ಹಾಗೂ ಶಿಕ್ಷಕರಿಗೆ ಒದಗಿಸಿರುವ ವಿಪರೀತ ಭದ್ರತೆಯೇ ಮುಖ್ಯ ಕಾರಣ ಎನ್ನಬಹುದು.   ಅಮೇರಿಕಾವು ಬಂಡವಾಳಶಾಹಿ ದೇಶವಾದರೂ ಸಹ, ಅಲ್ಲಿನ ಶೇಕಡ 90ಕ್ಕಿಂತ ಹೆಚ್ಚು ವಿದ್ಯಾರ್ಥಿ, ಸಾರ್ವಜನಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತಿದ್ದಾರೆ ಎಂದರೆ ನಮಗೆಲ್ಲಾ ಆಶ್ಚರ್ಯವಾಗಬಹುದು. ಇದಕ್ಕೆ ಮುಖ್ಯ ಕಾರಣ ಅಲ್ಲಿರುವ ವಿಕೇಂದ್ರೀಕೃತ ಶಿಕ್ಷಣ ವ್ಯವಸ್ಥೆ.

   ಅಮೆರಿಕಾದಲ್ಲಿ ಶಿಕ್ಷಣ ವ್ಯವಸ್ಥೆಗಾಗಿ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶವನ್ನು ಗುರುತಿಸಿ, ಅದನ್ನು ಒಂದು ಸ್ಕೂಲ್ ಡಿಸ್ಟ್ರಿಕ್ಟ್ ಎಂದು ಕರೆಯಲಾಗುತ್ತದೆ. ಅಲ್ಲಿ ಇಂತಹ 12500ಕ್ಕೂ ಹೆಚ್ಚು ಸ್ಕೂಲ್ ಡಿಸ್ಟ್ರಿಕ್ಟ್ ಗಳಿವೆ.

 ಕರ್ನಾಟಕದಲ್ಲಿ ತಾಲೂಕಿಗೆ ಒಂದು ಹಾಗೂ ದೊಡ್ಡ ನಗರಗಳಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಸ್ಕೂಲ್ ಡಿಸ್ಟ್ರಿಕ್ಟ್ ಗುರುತಿಸಬಹುದು. ಈ ಪರಿಕಲ್ಪನೆಗೆ ನಾವು ನಮ್ಮದೇ ಆದ ಹೆಸರನ್ನು ಇಟ್ಟುಕೊಳ್ಳಬಹುದು. ಪ್ರತಿ ಸ್ಕೂಲ್ ಡಿಸ್ಟ್ರಿಕ್ಟ್ ನ ಶಿಕ್ಷಣ ವ್ಯವಸ್ಥೆಯನ್ನು ನೋಡಿಕೊಳ್ಳಲು ಪ್ರಜೆಗಳು/ ಪೋಷಕರಿಂದ ಆಯ್ಕೆ ಆದ ಒಂದು ಆಡಳಿತ ಮಂಡಳಿ ಇರುತ್ತದೆ. ಅಧಿಕಾರಿಗಳ ಆಯ್ಕೆ, ಶಿಕ್ಷಕರ ನೇಮಕಾತಿಯನ್ನು  ಈ ಆಡಳಿತ ಮಂಡಳಿಯು ನೋಡಿಕೊಳ್ಳುತ್ತದೆ.

ಶಿಕ್ಷಕರ ವರ್ಗಾವಣೆ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಅಧಿಕಾರವನ್ನು ಈ ಆಡಳಿತ ಮಂಡಳಿಗೆ ನೀಡಲಾಗಿದೆ. ಪ್ರತಿಯೊಂದು ಸ್ಕೂಲ್ ಡಿಸ್ಟ್ರಿಕ್ಟ್ ಗೆ  ನಿರ್ದಿಷ್ಟ ಪ್ರಮಾಣದಲ್ಲಿ, ಅಲ್ಲಿಯ ಫೆಡರಲ್ ಸರ್ಕಾರದಿಂದ, ರಾಜ್ಯ ಸರ್ಕಾರದಿಂದ ಹಾಗು  ಸ್ಥಳೀಯ ಸಂಸ್ಥೆಗಳಿಂದ ಅನುದಾನ ಬರುತ್ತದೆ. ಹೆಚ್ಚಿನ ಸಂಪನ್ಮೂಲದ ಅಗತ್ಯ ಬಿದ್ದರೆ ಆಡಳಿತ ಮಂಡಳಿಯು ಸ್ಥಳೀಯರಿಂದ ನಿಧಿ ಸಂಗ್ರಹಿಸುತ್ತದೆ. ಈ ವಿಕೇಂದ್ರೀಕೃತ ವ್ಯವಸ್ಥೆಯು, ಪ್ರತಿಯೊಂದು ಸ್ಕೂಲ್ ಡಿಸ್ಟ್ರಿಕ್ಟ್ ನಡುವೆ ಆರೋಗ್ಯಕರ ಸ್ಪರ್ಧೆಗೆ ಕಾರಣವಾಗಿದೆ. ಇಲ್ಲಿನ ಸ್ಕೂಲ್ ಡಿಸ್ಟ್ರಿಕ್ಟ್ ಗೆ ಎಷ್ಟು ಮಹತ್ವ ಇದೆ ಎಂದರೆ,ಅಮೆರಿಕಾಗೆ ಉದ್ಯೋಗ ಅರಸಿ ಹೋದವರು ತಾವು ಕೆಲಸ ಮಾಡುವ ಕಂಪನಿ ಇರುವ ಸ್ಕೂಲ್ ಡಿಸ್ಟ್ರಿಕ್ಟ್ ಗುಣಮಟ್ಟ ಹೇಗಿದೆ ಎಂದು ವಿಚಾರಿಸಿಕೊಳ್ಳುತ್ತಾರೆ. ಸ್ಕೂಲ್ ಡಿಸ್ಟ್ರಿಕ್ಟ್ ನೋಡಿ,  ಉದ್ಯೋಗದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲಿ ಒಂದು ಪ್ರದೇಶದ ವಿದ್ಯಾರ್ಥಿ, ಇನ್ನೊಂದು ಸ್ಕೂಲ್ ಡಿಸ್ಟ್ರಿಕ್ಟ್ ಶಾಲೆಗೆ ಸೇರುವಂತಿಲ್ಲ. ಆಸ್ಟ್ರೇಲಿಯಾದಲ್ಲಿ, ಒಂದು ನಗರದ  ಒಂದು ಬಡಾವಣೆಯಲ್ಲಿ ವಾಸ ಮಾಡುವ ವಿದ್ಯಾರ್ಥಿ ಇನ್ನೊಂದು ಬಡಾವಣೆಯ ಶಾಲೆಗೆ ಸೇರುವಂತಿಲ್ಲ.

ನಮ್ಮ ಶಿಕ್ಷಣ ಪದ್ಧತಿಯ ಸ್ಥಿತಿ ಹೀಗಿರುವಾಗ ಕೆಲವು ದೇಶಗಳ ಶಿಕ್ಷಣ ಕ್ರಮಗಳು ಹೆಚ್ಚು ಪರಿಣಾಮಕಾರಿಯಾಗಿದ್ದು, ಜನಪ್ರಿಯ ಮಾದರಿಗಳಾಗಿವೆ. ಹೀಗಿರುವಾಗ ನಮ್ಮ ಶಿಕ್ಷಣಕ್ರಮವನ್ನು ಈಗಲಾದರೂ ಸುಧಾರಿಸಲು ಸರ್ಕಾರಗಳು ಮುಂದಾಗದಿದ್ದರೆ, ವಿದ್ಯಾರ್ಥಿಗಳ ಭವಿಷ್ಯ ನಾನು ದೇಶದ ಹಿತದೃಷ್ಟಿಯಿಂ ದ ಭಾರೀ ತೊಡಕಾಗುತ್ತದೆ. ಹಾಗಾಗಿ ವಿವಿಧ ದೇಶಗಳ ಶಿಕ್ಷಣ ಕ್ರಮಗಳನ್ನು ಅಧ್ಯಯನ ಮಾಡಿ, ನಮ್ಮ ದೇಶದಲ್ಲಿ ಸಾಧ್ಯವಾದ ರೀತಿಯಲ್ಲಿ   ಅಳವಡಿಸುವ ಸಲುವಾಗಿ, ಸಮರ್ಥವಾದ ತಂಡವೊಂದನ್ನು ಅಧ್ಯಯನ ಪ್ರವಾಸಕ್ಕೆ ಕಳುಹಿಸಿಕೊಡಬೇಕಾಗಿದೆ.

    – ಆರ್. ಪಿ. ವೆಂಕಟೇಶ ಮೂರ್ತಿ, ಹಿರಿಯ ಪತ್ರಕರ್ತರು

ಹಾಸನ

9448407561

Related Articles

ಇತ್ತೀಚಿನ ಸುದ್ದಿಗಳು

You cannot copy content of this page