ಹೊಸದೆಹಲಿ: ಸಂಸತ್ತಿನ ವಿಶೇಷ ಅಧಿವೇಶನದ ವೇಳೆ ದೆಹಲಿಯ ಬಿಜೆಪಿ ಸಂಸದ ರಮೇಶ್ ಬಿಧುರಿ ಬಹುಜನ ಸಮಾಜ ಪಕ್ಷದ ಸಂಸದ ಡ್ಯಾನಿಶ್ ಅಲಿ ಅವರ ವಿರುದ್ಧ ನೀಡಿದ ವಿಕೃತ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದೆ.
ಅವರನ್ನು ಅಮಾನತುಗೊಳಿಸಬೇಕು ಎಂದು ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ರಮೇಶ್ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಬಿಜೆಪಿ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ.
ಗುರುವಾರ, ಚಂದ್ರಯಾನ 3ರ ಯಶಸ್ಸಿನ ಚರ್ಚೆಯ ಸಂದರ್ಭದಲ್ಲಿ, ಬಿಧುರಿ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ಆಕ್ಷೇಪಾರ್ಹ ಭಾಷೆಯಲ್ಲಿ ವಾಗ್ದಾಳಿ ನಡೆಸಿದರು. ಈ ಹೇಳಿಕೆಗಳನ್ನು ನಂತರ ದಾಖಲೆಗಳಿಂದ ತೆಗೆದುಹಾಕಲಾಯಿತು. ಬಿಧುರಿ ಅವರ ಹೇಳಿಕೆಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಡ್ಯಾನಿಶ್ ಅಲಿ ಬಗ್ಗೆ ಬಿಧುರಿ ಅವರ ಕಾಮೆಂಟ್‌ಗಳು ಆಕ್ಷೇಪಾರ್ಹವಾಗಿವೆ. ಅಂತಹ ಶಬ್ದವನ್ನು ಹಿಂದೆಂದೂ ಕೇಳಿರಲಿಲ್ಲ. ಸಂಸತ್ತಿನ ಹೊಸ ಕಟ್ಟಡ ಇಂತಹ ಮಾತುಗಳಿಂದ ಆರಂಭವಾಗುತ್ತಿರುವುದು ಬೇಸರದ ಸಂಗತಿ. ಬಿಧುರಿ ಅವರ ಹೇಳಿಕೆಗಳು ಬಿಜೆಪಿಯ ಉದ್ದೇಶವನ್ನು ಬಹಿರಂಗಪಡಿಸುತ್ತವೆ ಎಂದು ವಿರೋಧ ಪಕ್ಷಗಳು ಹೇಳಿವೆ.
ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ. ಒಬಿಸಿಗಳು ಮತ್ತು ಮುಸ್ಲಿಮರನ್ನು ಅವಮಾನಿಸುವುದು ಬಿಜೆಪಿಯ ಸಂಸ್ಕೃತಿಯ ಭಾಗವಾಗಿದೆ ಎಂದು ತೃಣಮೂಲ ಸಂಸದ ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ.
ಮುಸ್ಲಿಂ ಸಂಸದರ ವಿರುದ್ಧ ಬಿಜೆಪಿ ಸಂಸದ ರಮೇಶ್ ಬಿಧುರಿ ಹೇಳಿಕೆಯನ್ನು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಖಂಡಿಸಿದ್ದಾರೆ. ಇಂತಹ ಹೇಳಿಕೆಗಳಿಂದ ದೇಶದ ಶ್ರೇಷ್ಠ ಸಂಸದೀಯ ಸಂಪ್ರದಾಯಗಳಿಗೆ ಧಕ್ಕೆಯಾಗುತ್ತಿದೆ. ಪ್ರಧಾನಿ ಸೂಚನೆ ಮೇರೆಗೆ ಸಂಸತ್ತಿನಲ್ಲಿ ಬಿಜೆಪಿ ಸದಸ್ಯರೊಬ್ಬರು ವಿರೋಧ ಪಕ್ಷದ ಸಂಸದರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ತೀವ್ರ ಆಕ್ಷೇಪಾರ್ಹ ಎಂದು ಹೇಳಲಾಗುತ್ತಿದೆ.