Saturday, June 15, 2024

ಸತ್ಯ | ನ್ಯಾಯ |ಧರ್ಮ

ಶ್ರಾವಣ ಮಾಸವೂ- ಕುಂಕುಮ ಜಾತ್ರೆಯೂ

ಹೆಣ್ಣನ್ನು ಭೂ ತತ್ವದವಳು ಎಂದು ಕರೆದು ಸಹನೆ ತಾಳ್ಮೆಯ ಪ್ರತಿರೂಪ ಎಂದ ಅದೇ ಪುರಾಣಗಳು ಅವಳನ್ನು ‘ಚಂಚಲೆ’ ಎಂದೂ ಕರೆದಿವೆ. ಈ ಚಂಚಲೆಯನ್ನು ನಿಯಂತ್ರಿಸಲು ಅವಳಿಗೆ ಕುಂಕುಮವನ್ನು ಇಟ್ಟು ಅಗ್ನಿ ಬಂಧನ, ಮೂಗುತಿ ಹಾಕಿ ವಾಯು ಬಂಧನ, ಕಿವಿ ಚುಚ್ಚಿ ಜಲತತ್ವ ಬಂಧನ, ಬೈತಲೆ ತೆಗೆದು ಆಕಾಶ ತತ್ವ ಬಂಧನ, ಕಾಲುಂಗುರವಿಟ್ಟು ಭೂತತ್ವ ಬಂಧನವನ್ನು ಮಾಡಿವೆ. ಗಂಡಿನ ಮೂಲಕವೇ ನಿನಗೊಂದು ಸ್ಥಾನ ಎಂದು ಗುರುತಿಸುವ ಹುನ್ನಾರ ಇದು – ನಾಗರೇಖಾ ಗಾಂವಕರ, ಉಪನ್ಯಾಸಕರು.

ಮೊನ್ನೆ ಕಾಲೇಜಿನ ಕಾರ್ಯಕ್ರಮವೊಂದಕ್ಕೆ ವೇದಿಕೆ ಸಹಾಯಕಿಯರು ಬೇಕಿತ್ತು. ಬಂದ ಅತಿಥಿಗಳಿಗೆ ಹೂ, ಕಾಣಿಕೆಗಳನ್ನು  ನೀಡುವಾಗ  ಇವರಿದ್ದರೆ ಆಗ ಕಾರ್ಯಕ್ರಮಕ್ಕೆ ಒಂದು ರಂಗು ಬರುತ್ತದೆ. ಅವರ ಸುಂದರವಾದ ನಗು, ಕ್ಲಾಸಿಕಲ್ ಆದ ಲುಕ್,  ಎಲ್ಲರ ಗಮನ ಸೆಳೆಯುತ್ತದೆ.  ಭಾರತೀಯರ ಹೆಣ್ಣುಮಕ್ಕಳ ಸಾಮಾನ್ಯ ಉಡುಗೆ ಸೀರೆ. ಅದಕ್ಕೆ ಎಲ್ಲರನ್ನೂ ಬೆಸೆಯುವ ಶಕ್ತಿಯಂತೂ ಇದ್ದೇ ಇದೆ. ಹಾಗಾಗಿ ಸೀರೆನೇ ಇರಲಿ ಆ ಹುಡುಗಿಯರಿಗೆ ಅಂತ ತಿರ್ಮಾನಿಸಿ ಕ್ಲಾಸ್‌ ರೂಮಿಗೆ ಹೋದೆವು. ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರುವ ಹುಡುಗಿಯರನ್ನು ಆಯ್ಕೆ ಮಾಡಬೇಕಿತ್ತು. ಯಾರನ್ನು ಅಂತಾ ನೋಡ್ತಾ ಇದ್ದೆವು. ಇಬ್ಬರು ಹುಡುಗಿಯರು ತಾವಾಗಿಯೇ ಎದ್ದು ನಿಂತರು. ಇನ್ನೊಬ್ಬಳ ಶೋಧ ನಡೆಯುತ್ತಿರುವಾಗ ಮುಸ್ಲಿಂ ಹುಡುಗಿಯೊಬ್ಬಳು ತಟ್ಟಂತ ಸೆಳೆದಳು. ಎಲ್ಲರಿಗೂ ಸೀರೆ ಉಟ್ಟು ಬರಲು ಹೇಳಿದೆವು. ಹಾಗೇ ಸಹಜವಾಗಿ ಎಲ್ಲರೂ ಒಂದೇ ರೀತಿ ತಲೆ ಬಾಚಿ ಗುಲಾಬಿ ಒಂದನ್ನು ಮುಡಿದು, ಹಣೆಗೆ ಕೆಂಪು ಬಣ್ಣದ ಉರುಟು ಬೊಟ್ಟನ್ನು ಹಾಕಿಕೊಂಡು ಬನ್ನಿ ಎಂದೆವು. ಅಷ್ಟನ್ನುವಾಗ ಆ ಮುಗ್ಧ ಮುಸ್ಲಿಂ ಹುಡುಗಿ “ಹಮ್ ಕುಂಕುಮ ನಹೀ ಲಗಾನಾ ಹೈ ಮೇಡಂ” ಅಂದೇ ಬಿಟ್ಟಳು. ನಮ್ಮ ಆಚರಣೆಯಲ್ಲಿ ಅದು ನಿಷಿದ್ಧ ಎಂದಳು. ಇಂತಹ ವಿಚಾರಗಳು ಎಷ್ಟು ಸೂಕ್ಷ್ಮ ಎನಿಸಿ ಬಿಟ್ಟಿತು. ಈ ಉಡುವ ತೊಡುವ ವಿಚಾರಗಳಲ್ಲೆ ಇರುವ ವಿವಿಧತೆಯಲ್ಲಿ ಏಕತೆ ಕೂಡಾ ಎಷ್ಟು ಚಂದ ಅನ್ನಿಸಿದರೂ, ಪುರುಷ ಸಮಾಜ ಹಾಕಿಕೊಟ್ಟ ಈ ಎಲ್ಲ ಸಂಪ್ರದಾಯ ಆಚರಣೆಗಳಿಗೆ ನಾವೆಷ್ಟು ಬೇಗ ಕೊರಳು ಕೊಡುತ್ತೇವೆ ಎನಿಸಿತು. ಶಾಲಾ ಕಾಲೇಜುಗಳಲ್ಲಿ ಹಿಜಾಬ್ ವಿಚಾರ ಬಂದಾಗಿನಿಂದ ಈ ರೀತಿಯ ಕಟ್ಟುನಿಟ್ಟಿನ ಆಚರಣೆಗಳನ್ನು ಜನ ಮುದ್ದಾಂ ಆಗಿಯೇ ಪಾಲಿಸುತ್ತಿರುವುದು ಹೆಚ್ಚೇ ಕಂಡುಬರುತ್ತಿದೆ. ಈ ಎಲ್ಲ ಸೂಕ್ಷ್ಮ ವಿಚಾರಗಳು ಮನಸ್ಸುಗಳನ್ನು ಒಡೆಯುತ್ತವೆಯೇ ಹೊರತು ಒಂದುಗೂಡಿಸಲಾರವು. ಆ ಹುಡುಗಿ ಪ್ರಾಜ್ಞಳು. ಸ್ವಲ್ಪ ತಿಳಿ ಹೇಳುತ್ತಲೂ ಅರ್ಥಮಾಡಿಕೊಂಡಳು.

ಅವಳಿಗೆ ನಾನು ಹೇಳಿದಿಷ್ಟು. ‘ಬಹುತೇಕ ಹಿಂದೂಗಳಲ್ಲಿ ಕೆಂಪು ಕುಂಕುಮವನ್ನು ಮಾತ್ರ ವಿವಾಹಿತ ಸ್ತ್ರೀಯರು ಧರಿಸುತ್ತಾರೆ. ಆದರೆ ನನ್ನ ಬುದ್ಧಿ ಬಲಿತಂದಿನಿಂದ ನಾನು ಕಣ್ಣಿಗೆ ಹಾಕುವ ಐ ಲೈನರ್‌ನಿಂದಲೇ ಕಪ್ಪು ಬಣ್ಣದ ಸಣ್ಣ ಚುಕ್ಕಿ ಇಟ್ಟುಕೊಳ್ಳುವುದು. ಮದುವೆ ದಿನ ಬಿಟ್ಟರೆ ನಾನು ಕೆಂಪು ಕುಂಕುಮ ಧರಿಸಿದ್ದೇ ಇಲ್ಲ ಎನ್ನಬಹುದು. ಕಪ್ಪು ಕುಂಕುಮ ಧರಿಸಬೇಡ. ಗಂಡನ ಆಯಸ್ಸು ಕಮ್ಮಿಯಾಗುತ್ತೆ ಅನ್ನುವ ಅಜ್ಜಿಯರು ಸತ್ತು ಕಾಲವಾಯ್ತು. ಆಗಾಗ ಭೇಟಿಯಾಗುವ ಗೆಳತಿಯರು, ಸಂಬಂಧಿ ಸ್ತ್ರೀಯರು ಈಗಲೂ ಕೆಲವೊಮ್ಮೆ ಇದೇ ಮಾತು ಹೇಳುತ್ತಿರುತ್ತಾರೆ. ಆದರೆ ಆಶ್ಚರ್ಯವೆಂದರೆ ಅಜ್ಜಿ ಹೇಳಿದ ಸಂಗತಿಯಾಗಲಿ ಗೆಳತಿಯರು ಹೇಳುವ ಸಂಗತಿಯಾಗಲಿ ನನ್ನನ್ನೇನೂ ಬದಲಾಯಿಸಲಿಲ್ಲ. ಬದಲಾಯಿಸಿಕೊಳ್ಳುವ ಅಗತ್ಯವೂ ನನಗೆ ಕಾಣಲಿಲ್ಲ. ಇದರಿಂದ ನನಗ್ಯಾವ ತೊಂದರೆಯೂ ಆಗಿಲ್ಲ. ನಮ್ಮತನವನ್ನು ಯಾರಿಗಾಗಿಯೋ ಮಾರಿಕೊಳ್ಳುವ, ಬದಲಾಯಿಸಿಕೊಳ್ಳುವ ಅಗತ್ಯವಿಲ್ಲ. ಇಂತಹ ಕಟ್ಟಳೆಗಳಿಂದ ಸ್ತ್ರೀ ಆದಷ್ಟು ತನ್ನನ್ನು ಸ್ವತಂತ್ರಗೊಳಿಸಿಕೊಳ್ಳುವತ್ತ ದೃಷ್ಟಿ ಪರಾಂಬರಿಸಬೇಕು’ ಎಂದೆ.

ಈ ಕುಂಕುಮದ ವಿಚಾರ ಮಾಡುತ್ತಾ ಸ್ಕೂಟಿ ಚಲಾಯಿಸುತ್ತಿದ್ದೆ. ತಕ್ಷಣ ಎದುರಿಗೆ ಬರುತ್ತಿರುವ ಇಬ್ಬರು ಮುತ್ತೈದೆ ಸ್ತ್ರೀಯರು ಕಣ್ಣಿಗೆ ಬಿದ್ದರು. ಅಧಿಕ ಶ್ರಾವಣ ಮುಗಿದು ನಿಜ ಶ್ರಾವಣ ಮಾಸ ಶುರುವಾಗಿ ಸಮೀಪ ಹದಿನೈದು ದಿನಗಳಾಗುತ್ತಾ ಬಂದವು. ಶುಕ್ರವಾರಗಳು ಬಂದರೆ ಸಾಕು. ಮಾರ್ಕೆಟ್ಟಿನಲ್ಲಿ ಜನಜಾತ್ರೆ. ಸ್ಕೂಟಿ ಓಡಿಸಲು ಬರುವುದಾದರೂ ಜನಜಂಗುಳಿ ಮಧ್ಯೆ ನನಗೆ ಸರಾಗ ಹೊಡೆಯಲಾಗದು. ಅಪ್ಪಿತಪ್ಪಿ ಯಾರ ಮೊಣಕೈಗೋ, ಇನ್ನಾರದೋ ಕಾಲಿಗೋ ತಾಕಿದರೆ ಅವರಿಂದ ಉಗಿಸಿಕೊಳ್ಳುವ ಭಯದ ಜೊತೆ ಇನ್ನೊಬ್ಬರಿಗೆ ವೇದನೆ ನೀಡಿದ ನೋವು. ಹಾಗಾಗಿ ಈಗೆರೆಡು ವಾರದಿಂದ ಸಂತೆಯ ರಸ್ತೆಗಳಲ್ಲಿ ನಾನು ಎರಡೂ ಕಾಲುಗಳನ್ನು ಆಚೀಚೆ ಇಳಿಬಿಟ್ಟೇ ಸ್ಕೂಟಿ ಚಲಾಯಿಸುತ್ತಿದ್ದೇನೆ. ಮಧ್ಯೆ ಮಧ್ಯೆ ಎದುರಾಗುವ ಗಂಡಸರ ನಡುವೆ ಮೈತುಂಬಾ ಅಲಂಕರಿಸಿಕೊಂಡ ಹೆಣ್ಣು ಮಕ್ಕಳು ಅದರಲ್ಲೂ ವೈದಿಕೇತರ ಹೆಣ್ಣುಮಕ್ಕಳೇ ಹೆಚ್ಚು ಕಾಣುತ್ತಾರೆ. ಸಂಜೆ ಹೊತ್ತಿಗಂತೂ ಈ ಸವಾರಿ ಬಹಳವೇ ಕಾಣಸಿಗುತ್ತದೆ. ಯಾರಾದರೂ ಕೇಳಿದರೆ  “ಹಳದಿ ಕುಂಕುಮಕ್ಕೆ ಮುತ್ತೈದೆಯರಿಗೆ ಕರೆದಾರೆ,  ಹೋಗಿರ‍್ತಿವ್ರಿ. ನೀವೂ ಹೊರಟಿದ್ದೀರಾ? ಎಂದು ಮರು ಪ್ರಶ್ನೆ.

ಮುತ್ತು ಐದು ಧರಿಸಿದವಳು ಮುತ್ತೈದೆ. ಕುಂಕುಮ, ಮೂಗುತಿ, ಕಿವಿಯೋಲೆ, ಬೈತಲೆ, ಕಾಲುಂಗುರ ಈ ಐದು ಮುತ್ತುಗಳು ವಿವಾಹಿತ ಸ್ತ್ರೀಯರ ಮುತ್ತೈದೆತನದ ಸಂಕೇತಗಳೆಂದು, ಕೆಲವನ್ನು ವಿವಾಹಕ್ಕೂ ಮೊದಲೇ ಧರಿಸಿ ಅಭ್ಯಾಸ ಮಾಡಿಕೊಳ್ಳುವುದು,  ಇನ್ನು ಕೆಲವನ್ನು ವಿವಾಹದ ನಂತರ ತೊಡುವ  ಸಂಪ್ರದಾಯವೂ ಇದೆ. ಹೆಣ್ಣು ಇವುಗಳನ್ನು ಪಾಲಿಸಲೇಬೇಕು ಎನ್ನುವ ಅಲಿಖಿತ ಕಾಯಿದೆಗೆ ಫರ್ಮಾನು ಹೊರಡಿಸುವ ನಮ್ಮ ತಾಯಂದಿರು, ಅಜ್ಜಿ ಮುತ್ತಜ್ಜಿಯರು ಇವುಗಳನ್ನು ತೊಡದ ಮನೆ ಹುಡುಗಿಯರ ಮೇಲೆ  ಬೈಗುಳಗಳ ದಾಳಿ, ಪೆಟ್ಟಿನ ದಾಳಿ ನಡೆಸಿ ಎಳೆಯ ಬಾಲೆಯರಿಗೆ ನಿಯಂತ್ರಣದ ಪಾಠ ಮಾಡುತ್ತಿದ್ದರು.

ಹೆಣ್ಣನ್ನು ಭೂ ತತ್ವದವಳು ಎಂದು ಕರೆದು ಸಹನೆ ತಾಳ್ಮೆಯ ಪ್ರತಿರೂಪ ಎಂದ ಅದೇ ಪುರಾಣಗಳು ಅವಳನ್ನು ‘ಚಂಚಲೆ’ ಎಂದೂ ಕರೆದಿವೆ. ಇಂಥ ವಿಪರ್ಯಾಸ, ವಿರೋಧಾಭಾಸದ ಗುಣಲಕ್ಷಣಗಳನ್ನು ಗಂಡಿಗೆ ಸಮೀಕರಿಸುವುದಿಲ್ಲ ನಮ್ಮ ಶಾಸ್ತ್ರ ಪುರಾಣಗಳು. ಈ ಚಂಚಲೆಯನ್ನು ನಿಯಂತ್ರಿಸಲು ಅವಳಿಗೆ ಕುಂಕುಮವನ್ನು ಇಟ್ಟು ಅಗ್ನಿ ಬಂಧನ, ಮೂಗುತಿ ಹಾಕಿ ವಾಯು ಬಂಧನ, ಕಿವಿ ಚುಚ್ಚಿ ಜಲತತ್ವ ಬಂಧನ, ಬೈತಲೆ ತೆಗೆದು ಆಕಾಶ ತತ್ವ ಬಂಧನ, ಕಾಲುಂಗುರವಿಟ್ಟು ಭೂತತ್ವ ಬಂಧನ ಮಾಡಿ ಅವಳನ್ನು ನಿಯಂತ್ರಣದಲ್ಲಿ ಇಡುವ ಒಂದು  ಉಪಾಯ. ಗಂಡಿನ ಮೂಲಕವೇ ನಿನಗೊಂದು ಸ್ಥಾನ ಎಂದು ಗುರುತಿಸುವ ಹುನ್ನಾರ.

ಸಮಾನತೆಗೆ  ಹಲಬುವ ಸ್ತ್ರೀ ಸಮುದಾಯಗಳು ದೇವರ ಹೆಸರಿನಲ್ಲಿ ಪೂಜೆ ಪುನಸ್ಕಾರಗಳ ಹೆಸರಿನಲ್ಲಿ ಮತ್ತದೇ ಆಚರಣೆಗಳಲ್ಲಿ ನಮ್ಮತನ ಕಳೆದುಕೊಳ್ಳುವತ್ತ ಸಾಗುತ್ತಿದ್ದೇವೆ. ವರ ಮಹಾಲಕ್ಷಿ ಪೂಜೆ, ದೇವಿ ಪೂಜೆ ಅದೂ ಇದೂ ಎನ್ನುತ್ತಾ ಸನಾತನದತ್ತ ಮರಳುತ್ತಿದ್ದೇವೆ. ವ್ರತಹಿಡಿದು ಮಾಡುವ ಈ ಆಚರಣೆಗಳು ಮೊದಲೆಲ್ಲ ಮೀನು ಮಾಂಸಾಹಾರಿಗಳಾದ ನಮ್ಮಲ್ಲಿ ಅಂತಹ ಆಚರಣೆಗಳಾಗಿರಲಿಲ್ಲ.  ಮೀನುಮಾಂಸಗಳೆ ಮೊದಲ ಆದ್ಯತೆಯಾಗಿ ಬದುಕಿದ ಕರಾವಳಿಯ ವೈದಿಕೇತರ ಸಮುದಾಯದಲ್ಲಿ ಇಲ್ಲದ ಆಚರಣೆಗಳಿಗೆ ಮಹತ್ತು ಇರಲಿಲ್ಲ. ಆದರೆ ನನ್ನ ಕಾಡುತ್ತಿರುವ ವಿಚಿತ್ರ ಪ್ರಶ್ನೆಯೊಂದಿದೆ. ಆಧುನಿಕರಾಗುತ್ತಾ, ಮೌಢ್ಯ ಅಸಮಾನತೆ ಯನ್ನು ಮೀರಿ ನಡೆಯಬೇಕಾದ ನಾವುಗಳು ಮೇಲ್ಜಾತಿಯ ಜನರೊಂದಿಗೆ ಸ್ಪರ್ಧೆಗಿಳಿದು, ನಮ್ಮ ಕೀಳರಿಮೆ ದೂರ ಮಾಡಲು ಆಡಂಬರದ ಜೀವನ ಶೈಲಿಗೆ, ಆಡಂಬರದ ತೋರಿಕೆಯ ಭಕ್ತಿಗೆ ಮುಗಿಬಿದ್ದು  ಮತ್ತದೇ  ದಾಸ್ಯಕ್ಕೆ ಬಲಿಯಾಗುತ್ತಿದ್ದೇವೆಯೇ? ಪ್ರಶ್ನೆ ಕಾಡದೇ ಇರದು.

ಈ ಉಡುಗೆ ತೊಡುಗೆ, ಹಾವಭಾವ ಇಲ್ಲೆಲ್ಲಾ ಕೇವಲ ಮಹಿಳೆಯರೇ ಗುರಿಯಾಗಲು ಕಾರಣವೇನು? ಎಂಬ ಪ್ರಶ್ನೆ ಎದ್ದಾಗಲೆಲ್ಲಾ ಗಂಡಿನಲ್ಲಿ ಹೆಣ್ಣಿನ ಬಗೆಗಿನ ಗೌರವಕ್ಕಿಂತ, ಅವಳನ್ನು  ಆಳುವ ಪ್ರವೃತ್ತಿಯು ಢಾಳಾಗಿ ಕಾಣುತ್ತದೆ.  ಹೂವು, ಮಾಂಗಲ್ಯ, ಬೊಟ್ಟು, ನತ್ತು, ಕಿವಿಯೋಲೆ, ಬಳೆ, ಕಾಲುಂಗುರ, ಅವಕುಂಟನ ಮುತ್ತೈದೆತನದ ಸಂಕೇತಗಳನ್ನು ತೊಟ್ಟ ಹೆಣ್ಣು ಸುಂದರವಾಗಿ ಕಾಣಲು ನಮಗೆ ಆ ನೋಟದಲ್ಲಿ ಕಾಣುವ ಭಾರತೀಯತೆ ಎಂಬ ನಮ್ಮತನ ಕಾರಣ. ಆದರೆ ಈ ಎಲ್ಲ ಸಂಕೇತಗಳು  ಗಂಡನ ಹೆಂಡತಿ ಎಂಬ ಪರ್ಮಿಟ್ಟಿನ ಸಂಕೇತವಾಗಿರದೇ ನಮ್ಮ ನಮ್ಮ ಖುಷಿಗಳಿಗಾಗಿ ತೊಟ್ಟಾಗ ಮಾತ್ರ  ಆ ಸೌಂದರ್ಯ ಇನ್ನಷ್ಟು ಬೆಳಗಲು ಸಾಧ್ಯ.  ಯಾಕೆಂದರೆ ಇಂದಿಗೆ ಮುತ್ತೈದೆ ಎಂಬ ಪದವೇ ಅರ್ಥಹೀನ.

ನಾಗರೇಖಾ ಗಾಂವಕರ

ಕನ್ನಡದ ಸೃಜನಶೀಲ ಬರಹಗಾರ್ತಿ, ಅನುವಾದಕಿ ಮತ್ತು ಅಂಕಣಕಾರ್ತಿಯಾಗಿರುವ ಇವರು ಪ್ರಸ್ತುತ  ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.

ಇದನ್ನೂ ಓದಿ-ಗೃಹಲಕ್ಷ್ಮಿ ಓಕೆ, ಕುಂಕುಮ ಬಳೆ ಯಾಕೆ?

Related Articles

ಇತ್ತೀಚಿನ ಸುದ್ದಿಗಳು