Saturday, June 15, 2024

ಸತ್ಯ | ನ್ಯಾಯ |ಧರ್ಮ

ಸಂಕಷ್ಟ ಕಾಲದಲ್ಲಿ ದೇಶವನ್ನು ಮುನ್ನಡೆಸಿದ ನೆಹರೂ

ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ನೆನಪನ್ನು ಜನಮಾನಸದಿಂದ ಅಳಿಸಿಹಾಕುವ ಪ್ರಯತ್ನ ದೇಶದಲ್ಲಿ ಇನ್ನಿಲ್ಲದಂತೆ ನಡೆಯುತ್ತಿದೆ. ನೆಹರೂ ಅವರ ೧೩೩ನೆಯ ಜನ್ಮದಿನದ ಹಿನ್ನೆಲೆಯಲ್ಲಿ ಚಾರಿತ್ರಿಕ ದಾಖಲೆಗಳ ಮೂಲಕ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಶ್ರೀನಿವಾಸ ಕಾರ್ಕಳ ʼಶ್ರೀನಿ ಕಾಲಂʼ ನಲ್ಲಿ


ನೋಡಿದರೆ ಪ್ರಾಥಮಿಕ ಶಾಲಾ ಓದನ್ನೂ ಪೂರ್ತಿ ಮಾಡಿರಲಿಕ್ಕಿಲ್ಲ. ಆದರೆ, ಆತ ನೆಹರೂ ಬಗ್ಗೆ ಎಲ್ಲವನ್ನೂ ತಿಳಿದಂತೆ ಮಾತನಾಡುತ್ತಿದ್ದ! ದೇಶ ವಿಭಜನೆ, ಇಂದಿನ ಬಡತನ, ಆರೋಗ್ಯ ಕ್ಷೇತ್ರದ ಸಮಸ್ಯೆ, ಆರ್ಥಿಕ ಸಮಸ್ಯೆ, ಗಡಿ ಸಮಸ್ಯೆ, ಒಟ್ಟಿನಲ್ಲಿ ದೇಶದ ಎಲ್ಲ ಸಮಸ್ಯೆಗಳಿಗೂ ನೆಹರೂ ಕಾರಣ ಎನ್ನುತ್ತಾ, ನೆಹರೂ ಬಗ್ಗೆ ಮಾನಹಾನಿಕರವಾಗಿ ಬರೆಯುವುದು, ಅವಾಚ್ಯ ಪದಗಳಿಂದ ನಿಂದಿಸುವುದು ಎಲ್ಲ ಮಾಡುತ್ತಿದ್ದ. ಸಹಿಸಲಾಗದೆ, “ನೀನು ನೆಹರೂ ಅವರ ಬಗೆಗಿನ ಅಥವಾ ನೆಹರೂ ಬರೆದ ಯಾವುದಾದರೂ ಪುಸ್ತಕ ಓದಿದ್ದೀಯಾ?” ಎಂದು ತಾಳ್ಮೆಯಿಂದ ಕೇಳಿದೆ. “ನಾನು ನೆಹರೂ ಬಗ್ಗೆ ಏನನ್ನೂ ಓದಿಯೂ ಇಲ್ಲ, ಓದುವುದೂ ಇಲ್ಲ” ಎಂಬ ಸಿಟ್ಟಿನ ಉತ್ತರ ತಕ್ಷಣ ಬಂತು. ಇದು ಇಂದಿನ ಹೊಸ ಕಾಲದ ಹುಡುಗರ ಮನಸ್ಥಿತಿಯ ಒಂದು ರೂಪಕದಂತಿದೆ.
ನನಗೆ ಆತನ ಬಗ್ಗೆ ಸಿಟ್ಟು ಬರಲಿಲ್ಲ, ಬೇಸರವೂ ಅಗಲಿಲ್ಲ; ಬದಲಿಗೆ ಮರುಕ ಹುಟ್ಟಿತು. ಈವತ್ತು ನೆಹರೂ ಅವರನ್ನು ದುರುಳೀಕರಿಸುವ ಮತ್ತು ಅವರ ತೇಜೋವಧೆ ಮಾಡುವುದಕ್ಕಾಗಿಯೇ ಬಹುದೊಡ್ಡ ಒಂದು ‘ಪ್ರೊಪಗಾಂಡಾ ಮಶಿನರಿ’ ದೇಶದಾದ್ಯಂತ ದಶಕ ದಶಕಗಳಿಂದ ಕೆಲಸ ಮಾಡುತ್ತಿದೆ. ಈಗ ಪ್ರಭುತ್ವದ ಆಶೀರ್ವಾದ ಮತ್ತು ಆರ್ಥಿಕ, ಸಂಘಟನಾತ್ಮಕ ಸರ್ವ ರೀತಿಯ ಬೆಂಬಲ ಇರುವುದರಿಂದ ಅದರ ಕಾರ್ಯ ಇನ್ನಷ್ಟು ವೇಗ ಪಡೆದುಕೊಂಡಿದೆ. ವಾಟ್ಸಪ್, ಫೇಸ್ ಬುಕ್, ಟ್ವಿಟರ್ ನಂತಹ ಸಾಮಾಜಿಕ ಮಾಧ್ಯಮಗಳು ಬಂದ ಮೇಲೆ ಮನೆ ಮನೆಗಳಿಗೆ, ಮನ ಮನಗಳಿಗೆ ಸುಳ್ಳುಗಳನ್ನು ತಲಪಿಸುವ ಕೆಲಸ ಭರದಿಂದ ಸಾಗಿದೆ. ಎಳೆಯ ಮನಸುಗಳು ಏನನ್ನೂ ಓದದೆ, ಆಲೋಚಿಸದೆ, ವಿಮರ್ಶಿಸದೆ ಎಲ್ಲವನ್ನೂ ಪರಮ ಸತ್ಯ ಎಂಬಂತೆ ಒಪ್ಪಿಕೊಳ್ಳುತ್ತಿವೆ. ಆ ಪರಮ ಸುಳ್ಳನ್ನು ಮತ್ತೆ ನೂರಾರು ಮಂದಿಗೆ ಹಂಚುತ್ತಿವೆ. ನೆಹರೂ ‘ಅವರೊಂದಿಗೆ ಮಲಗಿದ, ಇವರೊಂದಿಗೆ ಮಲಗಿದ’ ಅನ್ನುತ್ತವೆ, ಗಾಂಧಿ ‘ಕಳ್ಳ’ ಎನ್ನುತ್ತವೆ! ನೆಹರೂ ಯಾರೊಂದಿಗೆ ಮಲಗಿದರೇನು, ಅದು ಅವರ ಖಾಸಗಿ ವಿಚಾರ, ನಮಗೆ ಅವರ ಕೆಲಸ ಮುಖ್ಯ ಎನ್ನುವ ವಿಶಾಲ ಮನಸು ಯಾರಿಗೂ ಇಲ್ಲವಾಗಿದೆ. ನಮ್ಮ ಸಿದ್ಧಾಂತಕ್ಕೆ ಅವರು ಸಲ್ಲದವರೋ, ತೇಜೋವಧೆ ಶುರು ಮಾಡುವುದೇ; ಗಾಂಧಿಯಾದರೇನು, ನೆಹರೂ ಆದರೇನು? ಒಟ್ಟಿನಲ್ಲಿ ಭಯಂಕರ ಕೃತಘ್ನ ಭಾರತವೊಂದು ಸೃಷ್ಟಿಯಾಗಿದೆ.

ಜಗತ್ತು ನಿದ್ರಿಸುವಾಗ ಭಾರತ ಎದ್ದು ಕುಳಿತಿತು


ದೇಶ ಸ್ವತಂತ್ರಗೊಳ್ಳತ್ತಿರುವ ರಾತ್ರಿ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಒಂದು ಚಾರಿತ್ರಿಕ ಭಾಷಣ ಮಾಡಿದ್ದರು. ಅದರಲ್ಲಿ – “ಹಲವು ವರ್ಷಗಳ ಹಿಂದೆ ನಾವು ಒಂದು ಪ್ರತಿಜ್ಞೆಯನ್ನು ಮಾಡಿದ್ದೆವು. ಇಂದು ಆ ಪ್ರತಿಜ್ಞೆಯು ಸಂಪೂರ್ಣ ಸಫಲವಾಗುವ ಸಮಯ ಬಂದಿದೆ ಈ ಮಧ್ಯರಾತ್ರಿಯ ಸಮಯದಲ್ಲಿ, ಇಡೀ ಜಗತ್ತೇ ನಿದ್ರಿಸುತ್ತಿರುವಾಗ, ಭಾರತವು ಸ್ವತಂತ್ರಗೊಂಡು ಹೊಸ ಜೀವ ಪಡೆಯುತ್ತಿದೆ. ಈಗ ಬಂದಿರುವ ಕ್ಷಣವು ಇತಿಹಾಸದಲ್ಲಿ ಒಂದು ಅಪರೂಪದ ಕ್ಷಣ. ಹಳೆಯ ಯುಗದಿಂದ ನವಯುಗಕ್ಕೆ ನಾವು ಕಾಲಿಡುತ್ತಿದ್ದೇವೆ. ಬಹುವರ್ಷಗಳ ಕಾಲ ಹತ್ತಿಕ್ಕಲ್ಪಟ್ಟಿದ್ದ ದೇಶವೊಂದರ ಚೇತನವು ಪುನಃ ಜೀವವನ್ನು ಪಡೆಯುತ್ತಿದೆ. ಈ ಅಮೂಲ್ಯ ಕ್ಷಣದಲ್ಲಿ ನಾವು ಭಾರತಾಂಬೆಗೆ, ಇಲ್ಲಿನ ಜನರಿಗೆ ಮತ್ತು ಮಾನವೀಯತೆಯ ಪ್ರತಿಷ್ಠಾಪನೆಗೆ ನಮ್ಮ ಜೀವನವನ್ನು ಸಮರ್ಪಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಿದ್ದೇವೆ.
ಹೋರಾಟದ ಯುಗವೊಂದು ಮುಗಿದು ಹೊಸ ಇತಿಹಾಸವೊಂದು ನಮ್ಮ ಮುಂದೆ ತೆರೆದುಕೊಳ್ಳಲಿದೆ. ಇನ್ನು ಮುಂದೆ ನಾವು ಬದುಕುವ ಮತ್ತು ಕಾರ್ಯ ನಿರ್ವಹಿಸುವ ರೀತಿಯು ನಾಳೆ ಬರುವವರಿಗೆ ಇತಿಹಾಸ ಆಗಲಿದೆ. ಈ ಕ್ಷಣವು ಭಾರತಕ್ಕೆ, ಏಷ್ಯಾ ಖಂಡಕ್ಕೆ ಹಾಗೂ ಇಡೀ ಜಗತ್ತಿಗೇ ಶುಭ ಸಂದರ್ಭವಾಗಿದೆ. ಪೌರ್ವಾತ್ಯ ದೇಶವೊಂದು ಸ್ವತಂತ್ರಗೊಂಡು ನವತಾರೆಯಾಗಿ ಉದಯಿಸುತ್ತದೆ. ಹೊಸ ಭರವಸೆಯು ಚಿಗುರುತ್ತದೆ. ಸುದೀರ್ಘಕಾಲದ ಧ್ಯೇಯವೊಂದು ಹೊಸ ಜನ್ಮ ಪಡೆದು ಚಿಮ್ಮುತ್ತದೆ” ಎಂದಿದ್ದರು.


ಬೆಟ್ಟದಂತಹ ಸವಾಲಿನ ದಿನಗಳವು


ನೆಹರೂ ಅವರ ಬಳಿ ಭಾರತದ ಬಗ್ಗೆ ಒಂದು ಸುಂದರ ಕನಸಿತ್ತು. ದೂರದೃಷ್ಟಿಯ ಯೋಜನೆಯೂ ಇತ್ತು. ಅದೇ ಹೊತ್ತಿನಲ್ಲಿ, ಅವರ ಮುಂದೆ ಒಂದು ಕಟು ವಾಸ್ತವವೂ ಇತ್ತು. ಬ್ರಿಟಿಷರು ಉಳಿಸಿ ಹೋದದ್ದು ‘mud and filth’ ” (ಮಣ್ಣು ಮತ್ತು ಕೊಚ್ಚೆ) ಎಂದಿದ್ದರು ವಿಶ್ವಕವಿ ರವೀಂದ್ರನಾಥ ಠಾಗೋರ್ ಅಂದಿನ ಭಾರತದ ಪರಿಸ್ಥಿತಿಯ ಬಗ್ಗೆ. ಸರಿ ಸುಮಾರು 200 ವರ್ಷಗಳ ಆಳ್ವಿಕೆಯಲ್ಲಿ, ಒಂದು ಅಂದಾಜಿನ ಪ್ರಕಾರ ಇಂದಿನ ಮೌಲ್ಯದಲ್ಲಿ 45 ಟ್ರಿಲಿಯನ್ ಡಾಲರ್ ನಷ್ಟು ಸಂಪತ್ತನ್ನು ವಸಾಹತುಶಾಹಿ ಶಕ್ತಿಗಳು ದೋಚಿ ತಮ್ಮ ದೇಶಕ್ಕೆ ಒಯ್ದಿದ್ದವು. ಹಾಗಾಗಿ ಭಾರತ ಸ್ವತಂತ್ರವಾದಾಗ ಭಾರತದ ಕೈಯಲ್ಲಿ ಅಕ್ಷರಶಃ ಏನೂ ಇರಲಿಲ್ಲ. ಇದ್ದುದು ಖಾಲಿ ಖಜಾನೆ, ಬಡತನ, ಅನಕ್ಷರತೆ, ಅನಾರೋಗ್ಯ, ಅವ್ಯವಸ್ಥೆ ಇತ್ಯಾದಿಗಳು ಮಾತ್ರ. ಎಲ್ಲವನ್ನೂ ಶುರುವಿನಿಂದ ಆರಂಭಿಸಬೇಕು ಎನ್ನುವ ಪರಿಸ್ಥಿತಿ. ದೇಶಕ್ಕೊಂದು ಸಂವಿಧಾನ ಇನ್ನೂ ಬಂದಿರಲಿಲ್ಲ. ಸೂಕ್ತ ಆರೋಗ್ಯ ಸೇವೆಯ ಕೊರತೆಯಿಂದ ಅಂದಿನ ಭಾರತೀಯರ ಸರಾಸರಿ ಆಯುಷ್ಯ ಕೇವಲ 30 ವರ್ಷವಿತ್ತು. ದೇಶದ ಸಾಕ್ಷರತೆ ಕೇವಲ 17 ಪ್ರತಿಶತ (ಇಂದು 75%), ತಲಾವಾರು ವಾರ್ಷಿಕ ಆದಾಯ ಕೇವಲ 249.6 ರುಪಾಯಿ (ಇಂದು 1,28,829). ಸಾಲದೆಂಬಂತೆ, ದೇಶದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿ ರಾಷ್ಟ್ರಪಿತ ಅನಿಸಿಕೊಂಡ ಗಾಂಧೀಜಿಯ ಹತ್ಯೆಯಾಗಿತ್ತು (1948). ದೇಶವಿಭಜನೆಯಿಂದ ಲಕ್ಷಾಂತರ ಮಂದಿ ಸತ್ತರು, ಮಿಲಿಯಗಟ್ಟಲೆ ಮಂದಿ ನಿರಾಶ್ರಿತರಾದರು. ನಿರಾಶ್ರಿತರಾಗಿ ಬಂದ 80 ಲಕ್ಷ ಜನಕ್ಕೆ ಬದುಕಿನ ವ್ಯವಸ್ಥೆ ಮಾಡಬೇಕಾಯಿತು. ಕೋಮುಗಲಭೆಯಿಂದಾಗಿ ‘ಹೋಲೋಕಾಸ್ಟ್’ ನಂತಹ ಪರಿಸ್ಥಿತಿ ನಿರ್ಮಾಣವಾಯಿತು. ದೇಶ ಸ್ವತಂತ್ರವಾಗುತ್ತಿದ್ದಂತೆಯೇ ಭಾರತ ಪಾಕಿಸ್ತಾನ ಯುದ್ಧ (1947-48) ನಡೆಯಿತು, ಸ್ವತಂತ್ರಗೊಂಡ ಕೇವಲ 14 ವರ್ಷಗಳಲ್ಲಿ ಭಾರತ ಚೀನಾ ಯುದ್ಧ ನಡೆಯಿತು (1962). ಅದೇ ಹೊತ್ತಿನಲ್ಲಿ ‘ಮುಸ್ಲಿಂ ಪಾಕಿಸ್ತಾನ’ದ ಹಾಗೆಯೇ ‘ಹಿಂದೂ ಪಾಕಿಸ್ತಾನ’ ಮಾಡುವ ಯತ್ನವೂ ನಡೆದಿತ್ತು.
ಇಂತಹ ದಟ್ಟ ದಾರಿದ್ರ್ಯದ ಮತ್ತು ಕಡುಕಷ್ಟದ ಕಾಲದಲ್ಲಿ ಜವಾಹರಲಾಲ್ ನೆಹರೂ ಅವರು ಈ ದೇಶದ ನಾಯಕತ್ವ ವಹಿಸಿಕೊಂಡರು. 1951- 52 ರ ಸಾರ್ವತ್ರಿಕ ಚುನಾವಣೆಯನ್ನು ‘ಸೆಕ್ಯುಲರ್ ಇಂಡಿಯಾ ಬೇಕೋ?’, ‘ಹಿಂದೂ ಇಂಡಿಯಾ ಬೇಕೋ?’ ಎಂಬುದರ ಜನಮತ ಗಣನೆಯಾಗಿ ಪರಿವರ್ತಿಸಿದರು ನೆಹರೂ. 40,000 ಕಿಲೋಮೀಟರ್ ಸಂಚರಿಸಿ 35 ದಶಲಕ್ಷ ಜನರನ್ನು ಉದ್ದೇಶಿಸಿ ಮಾತನಾಡಿದರು, ಸೆಕ್ಯುಲರ್ ತತ್ತ್ವವನ್ನು ಪ್ರೋತ್ಸಾಹಿಸಿದರು. ಪರಿಣಾಮವಾಗಿ, ಭಯಾನಕ ಕೋಮುಗಲಭೆಯ ಬೆನ್ನಿಗೇ ನಡೆದ ಚುನಾವಣೆಯಲ್ಲಿಯೂ ಹಿಂದೂ ಕೋಮುವಾದಿ ಪಕ್ಷಗಳು, ಹಿಂದೂ ಮಹಾಸಭಾ, ಜನಸಂಘ, ರಾಮರಾಜ್ಯ ಪರಿಷತ್ ಇವೆಲ್ಲ ನೆಲಕಚ್ಚಿದವು. ಅವು ಗೆದ್ದುದು ಒಟ್ಟು 6 ಪ್ರತಿಶತ ಮತ, 489 ಸ್ಥಾನಗಳಲ್ಲಿ ಗಳಿಸಿದ್ದು ಕೇವಲ 10 ಸ್ಥಾನ. ಹೀಗೆ ದೇಶವು ಕೋಮುವಾದಿಗಳ ಕೈಗೆ ಹೋಗದಂತೆ ನೋಡಿಕೊಂಡರು; ‘ಐಡಿಯಾ ಆಫ್ ಇಂಡಿಯಾ’ವನ್ನು ಉಳಿಸಿಕೊಟ್ಟರು ನೆಹರೂ.

Jawaharlal Nehru at Konar Dam – Oct. 1955


ವಿಜ್ಞಾನ ತಂತ್ರಜ್ಞಾನಕ್ಕೆ ಆದ್ಯತೆ


‘ಬಡತನ ಮತ್ತು ಕೆಳಮಟ್ಟದ ಜೀವನ ಮುಂದುವರಿದರೆ ಪ್ರಜಾತಂತ್ರದಲ್ಲಿ ಎಷ್ಟೇ ಶ್ರೇಷ್ಠ ಸಂಸ್ಥೆಗಳಿರಲೀ, ಆದರ್ಶಗಳಿರಲೀ, ಅವು ವಿಮೋಚನಾ ಶಕ್ತಿಗಳಾಗುವುದು ಅಸಾಧ್ಯ. ಆದ್ದರಿಂದ ಬಡತನ ನಿವಾರಣೆಯತ್ತ ನಿರಂತರ ಯತ್ನ ನಡೆಯಬೇಕು’ ಎಂದು ಅವರು 1952 ರಲ್ಲಿ ಹೇಳಿದ್ದರು. ಆಹಾರ ಸ್ವಾವಲಂಬನೆಯಿಲ್ಲದೆ ಸಾರ್ವಭೌಮತೆಯನ್ನು ಸಾಕಾರಗೊಳಿಸುವುದು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ಆದ್ದರಿಂದ ಪಂಚ ವಾರ್ಷಿಕ ಯೋಜನೆಗಳ ಮೂಲಕ ಸ್ವಯಂಪರಿಪೂರ್ಣ ಭಾರತದ ನಿರ್ಮಾಣಕ್ಕೆ ನಾಂದಿ ಹಾಡಿದರು. ಭೂಸುಧಾರಣೆ ಮತ್ತು ಅಗತ್ಯ ತಂತ್ರಜ್ಞಾನ ಬದಲಾವಣೆಯ ಮೂಲಕ ಹಸಿರು ಕ್ರಾಂತಿಯ ಹಾದಿಯಲ್ಲಿ ಭಾರತವನ್ನು ಇರಿಸಿದರು. ಪ್ರಸಿದ್ಧ ಆರ್ಥಿಕ ತಜ್ಞ ಡೇನಿಯಲ್ ಥಾರ್ನರ್ ಹೇಳುವಂತೆ, ಭಾರತದಲ್ಲಿ ‘ಹಿಂದಿನ 200 ವರ್ಷಗಳಲ್ಲಿ ಮಾಡಿದುದಕ್ಕಿಂತ ಹೆಚ್ಚು ಕೃಷಿ ಪೋಷಣೆಯ ನಿಟ್ಟಿನ ಬದಲಾವಣೆಯನ್ನು ಸ್ವಾತಂತ್ರ್ಯದ ಮೊದಲ 21 ವರ್ಷಗಳಲ್ಲಿ ಮಾಡಲಾಯಿತು’.
ವಿಜ್ಞಾನ ಮತ್ತು ತಂತ್ರಜ್ಞಾನ ವಲಯವನ್ನು ವಸಾಹತು ಕಾಲದಲ್ಲಿ ಬರಡು ಬಿಡಲಾಗಿತ್ತು. ಈ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದರ ಅನಿವಾರ್ಯತೆಯ ಅರಿವಿತ್ತು ನೆಹರೂ ಅವರಿಗೆ. ಎಂದೇ ಜ್ಞಾನ ಕ್ರಾಂತಿಯ ಹಾದಿಯಲ್ಲಿ 1950ರ ದಶಕದ ಆದಿಯಲ್ಲಿಯೇ IIT. IIM, NPL, NCL, BARC, AIIMS ಗಳನ್ನು ಸ್ಥಾಪಿಸಿದರು. ಈವತ್ತು ಭಾರತದಲ್ಲಿ ಸೇವಾವಲಯವು ಪ್ರಧಾನ ವಲಯವಾಗಿದ್ದು, ದೇಶದ ಜಿಡಿಪಿಗೆ ಅರ್ಧದಷ್ಟು ಕೊಡುಗೆ ಕೊಡುತ್ತಿದೆಯಾದರೆ ಅದಕ್ಕೆ ಮುಖ್ಯ ಕಾರಣ, ಅಂದು ಹಾಕಿದ ಜ್ಞಾನ ಕ್ರಾಂತಿಯ ಬುನಾದಿ.
1947 ರಲ್ಲಿ ಯಾವುದೇ ಹೂಡಿಕೆಗೆ, ಕ್ಯಾಪಿಟಲ್ ಗೂಡ್ಸ್ ಮತ್ತು ಯಂತ್ರಗಳಿಗೆ ಮುಂದುವರಿದ ರಾಷ್ಟ್ರಗಳನ್ನು ನೂರಕ್ಕೆ ನೂರು ಅವಲಂಬಿಸಬೇಕಾಗಿತ್ತು. ನೆಹರೂ ಅದನ್ನು ಬದಲಾಯಿಸಿದರು. ಅವರ ಯೋಜನೆಗಳ ಕಾರಣವಾಗಿ 1960 ಕ್ಕಾಗುವಾಗ ಈ ಅವಲಂಬನೆ ತೀರಾ ಕಡಿಮೆಯಾಗಿ, ಕೇವಲ 43 ಪ್ರತಿಶತ ಮತ್ತು 1970 ಕ್ಕಾಗುವಾಗ ಕೇವಲ 9 ಪ್ರತಿಶತ ಮಾತ್ರ ಆಮದು ಮಾಡುವಂತಾಯಿತು. ಸ್ವಾವಲಂಬನೆಯ ಈ ನಡೆಯ ಪರಿಣಾಮವಾಗಿಯೇ ಸ್ವತಂತ್ರ ವಿದೇಶನೀತಿ ಹೊಂದುವುದು ಸಾಧ್ಯವಾಯಿತು, ಭಾರತವು 100 ದೇಶಗಳ ಅಲಿಪ್ತ ಚಳುವಳಿಯ ನಾಯಕತ್ವ ವಹಿಸಿತು. ಬಲಾಢ್ಯ ಶಕ್ತಿಗಳಿಗೆ ತಲೆಬಾಗಲು ನಿರಾಕರಿಸಿತು.
ಎಲ್ಲಕ್ಕಿಂತ ಮುಖ್ಯವಾಗಿ ಶತಶತಮಾನಗಳಿಂದ ಅಜ್ಞಾನ, ಮೂಢ ನಂಬಿಕೆಗಳಲ್ಲಿ ತೊಳಲಾಡುತ್ತಿದ್ದ ದೇಶಕ್ಕೆ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ಚಿಂತನೆಯ ಒಂದು ಭದ್ರ ಬುನಾದಿ ಹಾಕಿದರು ನೆಹರೂ. ಪೂಜೆ ಪುನಸ್ಕಾರಗಳಿಗಿಂತ ಶಿಕ್ಷಣ ವಿಜ್ಞಾನಕ್ಕೆ ಅವರು ಆದ್ಯತೆ ನೀಡಿದರು, ಮಂದಿರಗಳಿಗಿಂತ ಕಾರ್ಖಾನೆ, ಅಣೆಕಟ್ಟುಗಳಿಗೆ ಮಹತ್ತ್ವ ನೀಡಿದರು. ಆರಾಧನಾಲಯಗಳಿಗಿಂತ ಸಂಶೋಧನಾಲಯ ಅವರಿಗೆ ಮುಖ್ಯವೆನಿಸಿತ್ತು. ಪ್ರಧಾನಿಯ ಘನತೆಯ ಸ್ಪಷ್ಟ ಅರಿವಿದ್ದ ಅವರು ಎಂದೂ ಗುಡಿಗುಡಾರಗಳನ್ನು ಸುತ್ತಲಿಲ್ಲ, ಗುಹೆಯಲ್ಲಿ ಕುಳಿತು ತಪಸ್ಸಿನ ಸೋಗು ಹಾಕಲಿಲ್ಲ, ಯಾವುದೇ ಧಾರ್ಮಿಕ ಗುರುತುಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಿಲ್ಲ, ಕಾವಿ ವಸ್ತ್ರ ತೊಟ್ಟು ಹೋಮ ಹವನಗಳಲ್ಲಿ ಭಾಗವಹಿಸಲಿಲ್ಲ. ಖಾಸಗಿಯಾಗಬೇಕಾದ ಧಾರ್ಮಿಕ ನಂಬಿಕೆ ಆಚರಣೆಗಳನ್ನು ಖಾಸಗಿ ಜಾಗಕ್ಕೇ ಮೀಸಲಿಟ್ಟು ಸಂವಿಧಾನದ ತತ್ತ್ವಗಳಿಗೆ ಮತ್ತು ಕುವೆಂಪು ಅವರ ವಿಶ್ವಮಾನವ ತತ್ತ್ವಗಳಿಗೆ ಬದ್ಧವಾಗಿ ನಡೆದುಕೊಳ್ಳುತ್ತಾ ಒಂದು ರೋಲ್ ಮಾಡೆಲ್ (ಅನುಕರಣೀಯ ಮಾದರಿ) ಎನಿಸಿಕೊಂಡರು.


ನೆಹರೂ ಬಗ್ಗೆ ಮೆಚ್ಚಿ ನುಡಿದರು ಕುವೆಂಪು


ಈ ಬಗ್ಗೆ ಬೇರಾರೂ ಅಲ್ಲ, ನಮ್ಮ ರಾಷ್ಟ್ರಕವಿ ಕುವೆಂಪು ಅವರೇ, “ವೈಜ್ಞಾನಿಕ ದೃಷ್ಟಿ ಮತ್ತು ವಿಚಾರಬುದ್ಧಿ ಎರಡೂ ಮೂರ್ತಿವೆತ್ತಂತಿದ್ದ ಶ್ರೀ ಜವಾಹರಲಾಲ್ ನೆಹರೂ ಆಧ್ಯಾತ್ಮ ಮತ್ತು ವಿಜ್ಞಾನಗಳಿಗೆ ಸರ್ವೋಚ್ಚ ಪ್ರತಿನಿಧಿಯಾಗಿದ್ದಾರೆ. ಇದುವರೆಗಿನ ನಮ್ಮ ಆಧುನಿಕ ರಾಜಕೀಯ ಮುಂದಾಳುಗಳಲ್ಲಿ ವಿಜ್ಞಾನ ಮತ್ತು ವಿಚಾರಗಳನ್ನು ಬೇರೆ ಯಾರೂ ಅವರಂತೆ ಎತ್ತಿ ಹಿಡಿದಿಲ್ಲ. ಬೇರೆ ಯಾರೂ ಅವರಷ್ಟು ಅನನ್ಯತೆಯಿಂದ ಅವುಗಳ ಪ್ರತಿಷ್ಠಾಪನೆಗೆ ದುಡಿದಿಲ್ಲ.
ಕಾರ್ಖಾನೆ ಕಟ್ಟಿಸಿದರು, ಅಣೆಕಟ್ಟು ಹಾಕಿಸಿದರು, ಮಹಾ ಕಟ್ಟಡಗಳನ್ನು ನಿರ್ಮಿಸಿದರು, ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಗಳನ್ನೂ, ಸಂಶೋಧನಾಲಯಗಳನ್ನು ಸ್ಥಾಪಿಸಿದರು, ವಿಜ್ಞಾನಿಗಳಿಗೆ ಮತ್ತು ತಾಂತ್ರಿಕ ತಜ್ಞರಿಗೆ ಪ್ರೋತ್ಸಾಹ ಕೊಟ್ಟರು.
ಜನಿವಾರ ಹಾಕಿಕೊಳ್ಳಲಿಲ್ಲ, ನಾಮ ಹಚ್ಚಿಕೊಳ್ಳಲಿಲ್ಲ, ವಿಭೂತಿ ಬಳಿದುಕೊಳ್ಳಲಿಲ್ಲ, ದೇವಾಲಯಗಳಿಗೆ ಆರಾಧನೆಗೆ ಹೋಗಲಿಲ್ಲ, ತೀರ್ಥಗಳಿಗೆ ಯಾತ್ರೆ ಹೋಗಿ ಮೀಯಲಿಲ್ಲ, ಪುರೋಹಿತರ ಪಾದ ತೊಳೆದು ನೀರು ಕುಡಿಯಲಿಲ್ಲ, ಪೂಜಾರಿಗಳಿಗೆ ಅಡ್ಡಬೀಳಲಿಲ್ಲ, ಅಡ್ಡ ಪಲ್ಲಕ್ಕಿಯ ಜಗದ್ಗುರುಗಳಿಗೆ ಕೈ ಮುಗಿದು ಮಾಲೆ ಹಾಕಲಿಲ್ಲ, ರಾಹುಕಾಲ ಗುಳಿಕ ಕಾಲ ನೋಡಲಿಲ್ಲ, ಜ್ಯೋತಿಷ್ಯವನ್ನು ನಂಬಲಿಲ್ಲ, ಗ್ರಹಣ ಕಾಲದಲ್ಲಿ ತಂಬಟೆ ಬಡಿದು ಸೂರ್ಯನನ್ನು ರಾಹುವಿನಿಂದ ಪಾರು ಮಾಡು ಎನ್ನಲಿಲ್ಲ” ಎಂದು ಅಭಿಮಾನದಿಂದ ಹೇಳಿದರು.
ಬುನಾದಿಯು ಭದ್ರವಿದ್ದಾಗ ಮಾತ್ರ ಅದರ ಮೇಲೆ ನಿಲ್ಲುವ ಸೌಧವು ಗಟ್ಟಿಯಾಗಿರಬಲ್ಲುದು, ದೀರ್ಘಾಯುಷ್ಯ ಹೊಂದಬಲ್ಲುದು. ದೇಶ ಸ್ವತಂತ್ರಗೊಂಡ ಹೊತ್ತು ಆಧುನಿಕ ಭಾರತದ ನಿರ್ಮಾಣಕ್ಕೆ ಇಂತಹ ಒಂದು ಭದ್ರ ಬುನಾದಿ ಹಾಕುವ ಅಗತ್ಯವಿತ್ತು. ಈ ಕೆಲಸಕ್ಕೆ ಆಧುನಿಕ ಮನೋಭಾವ, ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ, ಪ್ರಜಾತಂತ್ರದಲ್ಲಿ ಆಳ ನಂಬಿಕೆ, ಭಾರತದ ಬಹುತ್ವ ಪರಂಪರೆಯ ಪೂರ್ಣ ಅರಿವು, ಸೆಕ್ಯುಲರ್ ತತ್ತ್ವದಲ್ಲಿ ಅಚಲ ವಿಶ್ವಾಸ, ಬಡವರ ಪರ ಕಾಳಜಿ ಇರುವ ಒಂದು ಸಮರ್ಥ ನಾಯಕತ್ವದ ಅಗತ್ಯವಿತ್ತು. ಆ ಅಗತ್ಯವನ್ನು ನೆಹರೂ ಅವರು ಯಶಸ್ವಿಯಾಗಿ ಪೂರೈಸಿದರು. ಜವಾಹರಲಾಲ್ ನೆಹರೂರಂಥವರ ಆಧುನಿಕ ಚಿಂತನೆಯ ಮತ್ತು ದೂರದರ್ಶಿತ್ವದ ನಾಯಕನೊಬ್ಬ ಸಿಗದಿದ್ದರೆ ಇಂದಿನ ಭಾರತದ ಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ಊಹಿಸಿಕೊಂಡರೂ ಸಾಕು ನೆಹರೂ ಅವರ ಮಹತ್ತ್ವ ನಮಗೆ ಅರ್ಥವಾದೀತು. ಈ ಅರ್ಥದಲ್ಲಿ ‘ಜವಾಹರಲಾಲ್ ಒಂದು ಅನರ್ಘ್ಯ ರತ್ನ, ಅವನನ್ನು ಪಡೆದ ಈ ಭೂಮಿ ಧನ್ಯ’ ಎಂಬ ಮಹಾತ್ಮ ಗಾಂಧಿಯವರ ಮಾತು ನೂರಕ್ಕೆ ನೂರು ಸತ್ಯ.


ಶ್ರೀನಿವಾಸ ಕಾರ್ಕಳ
ಚಿಂತಕರು, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

Related Articles

ಇತ್ತೀಚಿನ ಸುದ್ದಿಗಳು