Saturday, September 20, 2025

ಸತ್ಯ | ನ್ಯಾಯ |ಧರ್ಮ

ರಾಜ್ಯದ ಶಾಲಾ ವಿದ್ಯಾರ್ಥಿನಿಯರಿಗೆ ಶುಭ ಸುದ್ದಿ : ‘ಶುಚಿ ಯೋಜನೆ’ ಮತ್ತೆ ಪುನರಾರಂಭದ ಮುನ್ಸೂಚನೆ

ರಾಜ್ಯದ ಎಲ್ಲಾ ಸರ್ಕಾರಿ ಅನುಧಾನಿತ ಶಾಲೆಗಳ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ನೀಡುವ ‘ಶುಚಿ ಯೋಜನೆ’ ಪುನರಾರಂಭದ ಮುನ್ಸೂಚನೆ ಸಿಕ್ಕಿದೆ. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (KSMSCL) ಎಂಡಿ ಚಿದಾನಂದ ಎಸ್ ವಟಾರೆ ಅವರು ಈ ಬಗ್ಗೆ ಸುಳಿವನ್ನು ನೀಡಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆದರೆ ಕರ್ನಾಟಕದ ಎಲ್ಲಾ ಸರ್ಕಾರಿ ಅನುದಾನಿತ ಶಾಲೆಗಳಲ್ಲಿನ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್ಕಿನ್ ಒದಗಿಸುವ ಶುಚಿ ಯೋಜನೆಯು ಸೆಪ್ಟೆಂಬರ್ 10 ರಿಂದ ಮತ್ತೆ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿದುಬಂದಿದೆ.

ಪದವಿಪೂರ್ವ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರಿಗೆ ಮುಟ್ಟಿನ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ, ಉಚಿತ ಸ್ಯಾನಿಟರಿ ಪ್ಯಾಡ್ ಗಳನ್ನು ವಿತರಿಸುವ ಶುಚಿ ಯೋಜನೆಯನ್ನು ಅಂದಿನ ಕಾಂಗ್ರೆಸ್ ಸರ್ಕಾರ 2013-14 ರಲ್ಲಿ ಜಾರಿಗೊಳಿಸಿತ್ತು. ಆದರೆ ಕೋವಿಡ್ ಸಂದರ್ಭದಲ್ಲಿ ವಿತರಣೆ ಮತ್ತು ಹಣಕಾಸಿನ ಕೊರತೆಯ ನೆಪವೊಡ್ಡಿ ಬಿಜೆಪಿ ಸರ್ಕಾರ ಇದನ್ನು ಸ್ಥಗಿತಗೊಳಿಸಿತ್ತು.

ಇದರಿಂದ ಹಣ ನೀಡಿ ಸ್ಯಾನಿಟರಿ ಪ್ಯಾಡ್ ಖರೀದಿ ಮಾಡಲು ಸಾಧ್ಯವಾಗದೆ ಬಡಮಕ್ಕಳು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಇದೀಗ ಸರ್ಕಾರ ಯೋಜನೆ ಪುನರಾರಂಭ ಮಾಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಬಡ ಹಾಗೂ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳ ಮುಖದಲ್ಲಿ ಸಂತಸ ಮೂಡುವಂತೆ ಮಾಡಿದೆ.

ಪ್ರಸ್ತುತ ಈ ಯೋಜನೆಯಡಿಯಲ್ಲಿ 34,369 ಹಾಸ್ಟೆಲ್ ಹಾಗೂ ಶಾಲೆಗಳನ್ನು ಗುರುತಿಸಲಾಗಿದೆ. 17.99 ಲಕ್ಷದಷ್ಟು ವಿದ್ಯಾರ್ಥಿನಿಯರು ಈ ಯೋಜನೆಯ ಫಲಾನುಭವಿಗಳಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಜಂಟಿಯಾಗಿ ಈ ಯೋಜನೆಯನ್ನು ರೂಪಿಸಿದೆ. ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಈ ಯೋಜನೆ ಹೆಚ್ಚು ಸಹಕಾರಿಯಾಗಲಿದೆ.

KSMSCL (ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ) ವ್ಯವಸ್ಥಾಪಕ ನಿರ್ದೇಶಕರಾದ ಚಿದಾನಂದ ಎಸ್ ವಟಾರೆ ಅವರು ಮಾತನಾಡಿ, ಯೋಜನೆಗೆ ಈಗಾಗಲೇ ಟೆಂಡರ್ ಕರೆದಿದ್ದು, ಆಗಸ್ಟ್ ಅಂತ್ಯದೊಳಗೆ ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಈ ಯೋಜನೆ ಅಡಿಯಲ್ಲಿ 2023-24 ನೇ ಸಾಲಿನ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಘಟಕದಲ್ಲಿ ಪ್ರತಿ ಹೆಣ್ಣುಮಕ್ಕಳಿಗೆ ಹತ್ತು ನ್ಯಾಪ್ಕಿನ್ಗಳನ್ನು ಹೊಂದಿರುವ ಎಂಟು ಪ್ಯಾಕೆಟ್ಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page