ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ ಮಾಡುವ ಉದ್ದೇಶದಿಂದ ನಕಲಿ ಹಾಗೂ ಮಾನಹಾನಿಕರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೈಬರ್ ಕ್ರೈಂ ಪೊಲೀಸರ ವಿಶೇಷ ತನಿಖಾ ತಂಡವು ಮತ್ತಷ್ಟು ಶಂಕಿತರನ್ನು ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದೆ. ಸಿದ್ದರಾಮಯ್ಯ ಅವರು ನೀಡಿದ ದೂರಿನ ಮೇರೆಗೆ ದಾಖಲಾಗಿರುವ ಎಫ್ಐಆರ್ ಆಧಾರದಲ್ಲಿ ಈ ತನಿಖೆ ಚುರುಕುಗೊಂಡಿದೆ.
ಸೆಪ್ಟೆಂಬರ್ 27ರಂದು ಯೂಟ್ಯೂಬ್ನಲ್ಲಿ ರಹಸ್ಯ ಚಿತ್ರೀಕರಣದ (Covert Recording) ಹೆಸರಿನಲ್ಲಿ ನಕಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಲಾಗಿದ್ದು, ಅದರಲ್ಲಿ ತಮ್ಮ ವಿರುದ್ಧ ಗಂಭೀರ ಹಾಗೂ ಆಧಾರರಹಿತ ಆರೋಪಗಳನ್ನು ಹೊರಿಸಿ ಸಾರ್ವಜನಿಕವಾಗಿ ತಮ್ಮ ಘನತೆಗೆ ಧಕ್ಕೆ ತರುವ ದುರುದ್ದೇಶ ಹೊಂದಲಾಗಿತ್ತು ಎಂದು ಸಿದ್ದರಾಮಯ್ಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಿಡಿಗೇಡಿಗಳು ನಕಲಿ ಗುರುತನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ಹರಡಿದ್ದು, ವಿಡಿಯೋ ಸೃಷ್ಟಿಸಿದವರು, ಅದನ್ನು ಪ್ರಸಾರ ಮಾಡಿದವರು ಹಾಗೂ ಹಂಚಿಕೊಂಡವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಕೋರಿದ್ದಾರೆ.
ಈ ಸಂಬಂಧ ದಾಖಲಾಗಿರುವ ಎಫ್ಐಆರ್ನಲ್ಲಿ ‘ಕರ್ನಾಟಕ ಹನಿಟ್ರ್ಯಾಪ್’ (Karnataka Honeytrap) ಎಂಬ ಯೂಟ್ಯೂಬ್ ಚಾನೆಲ್ನ ಮಾಲೀಕ ಅಥವಾ ನಿರ್ವಾಹಕರನ್ನು ಮೊದಲ ಆರೋಪಿಯನ್ನಾಗಿ (A1) ಹಾಗೂ ಮತ್ತೊಬ್ಬ ಅಪರಿಚಿತ ವ್ಯಕ್ತಿಯನ್ನು ಎರಡನೇ ಆರೋಪಿಯನ್ನಾಗಿ (A2) ಹೆಸರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಎಂಟಕ್ಕೂ ಹೆಚ್ಚು ಮಂದಿ ಶಂಕಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಸದ್ಯಕ್ಕೆ ಯಾರನ್ನೂ ಅಧಿಕೃತವಾಗಿ ಬಂಧಿಸಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವಿಡಿಯೋ ಅಪ್ಲೋಡ್ ಮಾಡಿದವರ ಜತೆಗೆ ಅದನ್ನು ವ್ಯವಸ್ಥಿತವಾಗಿ ಶೇರ್ ಮಾಡಿದ ಜಾಲದ ಬೆನ್ನುಬಿದ್ದಿರುವ ತನಿಖಾ ತಂಡ, ಮುಂದಿನ ದಿನಗಳಲ್ಲಿ ಮತ್ತಷ್ಟು ಜನರನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ.
