Home ಬೆಂಗಳೂರು ವಿದ್ಯಾವಂತರು ಜಾತಿ ವ್ಯವಸ್ಥೆ ಮೈಗೂಡಿಸಿಕೊಳ್ಳುವುದು ದುರದೃಷ್ಟಕರ: ಸಿದ್ದರಾಮಯ್ಯ

ವಿದ್ಯಾವಂತರು ಜಾತಿ ವ್ಯವಸ್ಥೆ ಮೈಗೂಡಿಸಿಕೊಳ್ಳುವುದು ದುರದೃಷ್ಟಕರ: ಸಿದ್ದರಾಮಯ್ಯ

0

ಬೆಂಗಳೂರು: ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶೂದ್ರ ಸೇವಾ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿದ್ಯಾವಂತರೇ ಜಾತಿ ವ್ಯವಸ್ಥೆಯನ್ನು ಮೈಗೂಡಿಸಿಕೊಳ್ಳುತ್ತಿರುವುದು ದುರದೃಷ್ಟಕರ ಎಂದಿದ್ದಾರೆ.

ಜಾತಿ ವ್ಯವಸ್ಥೆಯ ಮೂಲಕ ಯಾರನ್ನೂ ಕೀಳಾಗಿ ಕಾಣಬಾರದು. ಚಾತುರ್ವರ್ಣ ವ್ಯವಸ್ಥೆಯನ್ನು ಮನುವಾದಿಗಳು ಈ ದೇಶದಲ್ಲಿ ಉದ್ದೇಶಪೂರ್ವಕವಾಗಿ ಸೃಷ್ಟಿ ಮಾಡಿದರು. ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕಾದರೆ ಸಮಾನತೆಯ ಸಮಾಜ ನಿರ್ಮಾಣವಾಗಬೇಕು. ಶೂದ್ರ ವರ್ಗವು ನೂರಾರು ವರ್ಷಗಳ ಕಾಲ ಅಕ್ಷರ ಸಂಸ್ಕೃತಿ ಮತ್ತು ಸಮಾನ ಅವಕಾಶಗಳಿಂದ ವಂಚಿತವಾಗಿತ್ತು. ಹೀಗಾಗಿ ಶೂದ್ರ ವರ್ಗದವರು ಮೇಲ್ವರ್ಗದವರೊಂದಿಗೆ ನೇರವಾಗಿ ಸ್ಪರ್ಧಿಸುವುದು ಅಸಾಧ್ಯವಾಗಿತ್ತು; ಅಕ್ಷರ ವಂಚಿತರು ಅಕ್ಷರ ಕಲಿತವರಿಂದ ಸೋಲುವುದು ಸಹಜ ಎಂದು ಅವರು ಅಭಿಪ್ರಾಯಪಟ್ಟರು.

ನಮ್ಮೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿಯೇ ಬ್ರಿಟಿಷರು ನಮ್ಮನ್ನು ಆಳಲು ಸಾಧ್ಯವಾಯಿತು. ಆದ್ದರಿಂದ ಇತಿಹಾಸದಿಂದ ಪಾಠ ಕಲಿತು ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲ ಶೋಷಿತ ವರ್ಗಗಳು ಒಗ್ಗೂಡಬೇಕು. ಅಸಮಾನತೆ ತೊಲಗಿ ಸಮ ಸಮಾಜ ನಿರ್ಮಾಣವಾಗಬೇಕೆಂಬುದೇ ನಮ್ಮ ಸಂವಿಧಾನದ ಮೂಲ ಆಶಯ. ಗೌತಮ ಬುದ್ಧ, ಬಸವಣ್ಣ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ್ದೂ ಇದನ್ನೇ. ಆದರೆ ಪಟ್ಟಭದ್ರ ಹಿತಾಸಕ್ತಿಗಳು ನಮ್ಮನ್ನು ಒಂದಾಗಲು ಬಿಡುವುದಿಲ್ಲ. ಜಾತಿ ಪದ್ಧತಿ ತೊಲಗಬೇಕಾದರೆ ಮೊದಲು ವಿದ್ಯಾವಂತರು ವೈಜ್ಞಾನಿಕವಾಗಿ ಆಲೋಚಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ತಮ್ಮ ಆಡಳಿತಾವಧಿಯಲ್ಲಿ ಜಾರಿಗೆ ಬಂದ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯು ಸಮಾಜದಲ್ಲಿ ಇನ್ನೂ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲದಿರುವುದಕ್ಕೆ ವಿದ್ಯಾವಂತರೇ ಮುಖ್ಯ ಕಾರಣ. ಇಂದಿಗೂ ವಿದ್ಯಾವಂತರಲ್ಲಿ ಬಹುತೇಕರು ಮೌಢ್ಯ ಮತ್ತು ಕಂದಾಚಾರಗಳನ್ನು ಪಾಲಿಸುತ್ತಿದ್ದಾರೆ. ಇಂದಿನ ಯುವಪೀಳಿಗೆ ವೈಜ್ಞಾನಿಕತೆ ಹಾಗೂ ವೈಚಾರಿಕತೆಯನ್ನು ಬೆಳೆಸಿಕೊಳ್ಳದಿದ್ದರೆ ಸಮಾನತೆಯ ಸಮಾಜ ನಿರ್ಮಾಣ ಮತ್ತು ಜಾತಿ ವ್ಯವಸ್ಥೆಯ ನಿರ್ಮೂಲನೆ ಎರಡೂ ಅಸಾಧ್ಯ ಎಂದು ಎಚ್ಚರಿಸಿದರು.

ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ನಿವಾರಣೆಗೆ ನೆರವಾಗುತ್ತಿವೆ. ಇಡೀ ವ್ಯವಸ್ಥೆಯನ್ನು ಬದಲಾಯಿಸಲು ಪ್ರತಿಯೊಬ್ಬರ ಸಮಷ್ಟಿ ಪ್ರಯತ್ನ ಮತ್ತು ಕಾಲಾವಕಾಶ ಅಗತ್ಯವಿದ್ದು, ಸರಿಯಾದ ಮಾರ್ಗದಲ್ಲಿ ಸಾಗಿದಾಗ ಈ ಪ್ರಯತ್ನಕ್ಕೆ ನಿಶ್ಚಿತ ಯಶಸ್ಸು ಸಿಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಹಾಗೂ ‘ಶೂದ್ರ’ ಪತ್ರಿಕೆಯ ಸಂಪಾದಕ ರಾಮೇಗೌಡ, ಸಂಚಾಲಕ ಮುರಳೀಧರ ಹಾಲಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

You cannot copy content of this page

Exit mobile version