Home ರಾಜಕೀಯ 2028ರ ವಿಧಾನಸಭಾ ಚುನಾವಣೆಯೂ ಸಿದ್ದರಾಮಯ್ಯ ನೇತೃತ್ವದಲ್ಲೇ: ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟನೆ

2028ರ ವಿಧಾನಸಭಾ ಚುನಾವಣೆಯೂ ಸಿದ್ದರಾಮಯ್ಯ ನೇತೃತ್ವದಲ್ಲೇ: ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟನೆ

0

ಚಿತ್ರದುರ್ಗ: ಕರ್ನಾಟಕದಲ್ಲಿ ಮುಂಬರುವ 2028ರ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಎದುರಿಸಲಿದೆ ಎಂದು ವಸತಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ರಾಜಕೀಯವಾಗಿ ದುರ್ಬಲರಾಗಿದ್ದಾರೆ ಎಂಬ ಮಾತುಗಳನ್ನು ತಳ್ಳಿಹಾಕಿದ ಅವರು, ಹಿರಿಯ ನಾಯಕರ ಸಂಪೂರ್ಣ ಬೆಂಬಲ ಹೊಂದಿರುವ ಸಿದ್ದರಾಮಯ್ಯ ಎಂದಿಗೂ ಪಕ್ಷದ ಪ್ರಶ್ನಾತೀತ ಹಾಗೂ ಪ್ರಬಲ ನಾಯಕ ಎಂದು ಸಮರ್ಥಿಸಿಕೊಂಡಿದ್ದಾರೆ.

ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸಿದ್ದರಾಮಯ್ಯ ಅವರ ರಾಜಕೀಯ ಶಕ್ತಿ ಕುಂದುತ್ತಿದೆ ಎಂಬ ಚರ್ಚೆಗಳನ್ನು ನಿರಾಕರಿಸಿದರು. ಸಿದ್ದರಾಮಯ್ಯ ಅವರು ‘ಟಗರು’ ಇದ್ದಂತೆ, ಅವರ ಶಕ್ತಿ ಎಂದಿಗೂ ಕುಗ್ಗಲು ಸಾಧ್ಯವಿಲ್ಲ ಮತ್ತು ಅವರ ನಾಯಕತ್ವ ದುರ್ಬಲವಾಗಲು ನಾವು ಬಿಡುವುದಿಲ್ಲ ಎಂದು ಜಮೀರ್ ಪ್ರತಿಪಾದಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರೆಲ್ಲರೂ 2028ರ ಚುನಾವಣೆಯನ್ನು ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಎದುರಿಸಲಾಗುವುದು ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಅವರು ನೆನಪಿಸಿದರು.

ಇತ್ತೀಚೆಗೆ ಮೈಸೂರಿನಲ್ಲಿ ಸಿದ್ದರಾಮಯ್ಯ ಅವರು ಸರಳವಾಗಿ ಗೃಹಪ್ರವೇಶ ಮಾಡಿದ ವಿಚಾರವನ್ನು ಪ್ರಸ್ತಾಪಿಸಿದ ಜಮೀರ್, ಸಿದ್ದರಾಮಯ್ಯ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ ಯಾವುದೇ ದೊಡ್ಡ ಅರಮನೆಯಂತಹ ಬಂಗಲೆ ಕಟ್ಟಿಕೊಂಡಿಲ್ಲ ಎಂದರು. ಈ ಹಿಂದೆ ಇದ್ದ ಸ್ವಂತ ಮನೆಯನ್ನು ಮಾರಿ, ಈಗ ಕೇವಲ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಸಣ್ಣದೊಂದು ಮನೆಯನ್ನು ಸರಳವಾಗಿ ಪ್ರವೇಶಿಸಿದ್ದಾರೆ. ಸಿದ್ದರಾಮಯ್ಯ ಕೇವಲ ಅಹಿಂದ ಮಾತ್ರವಲ್ಲದೆ ಎಲ್ಲಾ ಸಮಾಜದವರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ನಾಯಕ ಎಂದು ಅವರು ಶ್ಲಾಘಿಸಿದರು. ಸಿದ್ದರಾಮಯ್ಯ ಅವರೊಂದಿಗೆ ತಮಗೆ ಯಾವುದೇ ಮುನಿಸಿಲ್ಲ, ಅದೆಲ್ಲವೂ ಕೇವಲ ಮಾಧ್ಯಮ ಸೃಷ್ಟಿ ಎಂದೂ ಜಮೀರ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

You cannot copy content of this page

Exit mobile version