ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ನಮ್ಮನ್ನೆಲ್ಲ ನಿರಾಸೆಗೊಳಿಸಿದೆ. ಈ ಹಿಂದಿನ ಬಿಜೆಪಿ ಪಕ್ಷದ ಆಡಳಿತದಲ್ಲಿದ್ದಂತೆ ಈ ಸರಕಾರದಲ್ಲಿಯೂ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮುಂದುವರಿದೆ. ಬಿಜೆಪಿ ಆಡಳಿತದ ವಿರುದ್ಧ ಹೋರಾಡಿದ ನಾವು ಈಗ ರಾಜ್ಯ ಸರ್ಕಾರದ ವಿರುದ್ಧವೂ ಹೋರಾಡಬೇಕಾಗಿದೆ ಎಂದು “ಎದ್ದೇಳು ಕರ್ನಾಟಕ’ ಸೆಂಟ್ರಲ್ ವರ್ಕಿಂಗ್ ಗ್ರೂಪ್‌ನ ನೂರ್ ಶ್ರೀಧರ್ ಹೇಳಿದರು.
ದಾವಣಗೆರೆಯಲ್ಲಿ ಎದ್ದೇಳು ಕರ್ನಾಟಕ ಸಂಘಟನೆಯಿಂದ ಹಮ್ಮಿಕೊಂಡಿದ್ದ ‘ಸಂವಿಧಾನ ಸಂರಕ್ಷಕರ ಸಮಾವೇಶ’ದಲ್ಲಿ ನೂರ್ ಶ್ರೀಧರ್ ಈ ರೀತಿಯಾಗಿ ಅಭಿಪ್ರಾಯ ತಿಳಿಸಿದ್ದಾರೆ.
ಸರಕಾರದ ಸಾಧನೆಯ ರಿಪೋರ್ಟ್ ಕಾರ್ಡ್ ಕೇಳಿ ಜುಲೈ ತಿಂಗಳಲ್ಲಿ ವಿಧಾನಸಭೆ ಕ್ಷೇತ್ರವಾರು ಜನಾಧಿವೇಶನ ನಡೆಸಬೇಕು. ಮುಂದಿನ ಒಂದು ವರ್ಷದೊಳಗೆ ಎಲ್ಲ ಸಂಘಟನೆ, ಆಂದೋಲನಗಳು ಸೇರಿ ರಾಷ್ಟ್ರೀಯ ಸಮಾವೇಶ ಮಾಡಿ ಈ ಹೋರಾಟಕ್ಕೆ ಬುನಾದಿ ಹಾಕಬೇಕಾಗಿದೆ ಎಂದರು.
ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ದೇಶಕ್ಕೆ ಆರೆಸ್ಸೆಸ್ ಅತಿ ಮಾರಕವಾಗಿದೆ. ದೇಶದ ಮೂಲ ತತ್ವ ಸಿದ್ಧಾಂತಕ್ಕೆ ಮತ್ತು ಸಂವಿಧಾನಕ್ಕೆ ಆರೆಸ್ಸೆಸ್ ಪೆಟ್ಟು ಕೊಡುತ್ತಿದೆ. ದೇಶಾದ್ಯಂತ ಎಲ್ಲೆಲ್ಲಿ ಆರೆಸ್ಸೆಸ್ ಶಾಖೆಗಳಿವೆಯೋ ಅಲ್ಲಲ್ಲಿ ಸಂವಿಧಾನದ ಕೇಂದ್ರ ತೆರೆಯುವ ಮೂಲಕ ಸಂವಿಧಾನ ಉಳಿಸಲು ಮುಂದಾಗಬೇಕಿದೆ ಎಂದರು.
ಮಾಜಿ ಐಎಎಸ್ ಅಧಿಕಾರಿ, ಹಾಲಿ ಸಂಸದ ಶಶಿಕಾಂತ್ ಸೆಂಥಿಲ್ ಅವರು ಮಾತನಾಡಿ ಸಂವಿಧಾನ ಉಳಿದರೆ ಮಾತ್ರ ಘನತೆಯಿಂದ ಜೀವನ ನಡೆಸಬಹುದು. ಆದ್ದರಿಂದ ಇದನ್ನು ಯಾರಧ್ದೋ ಕೆಲಸ, ದೇಶದ ಕೆಲಸ ಅಂದುಕೊಳ್ಳಬೇಡಿ. ಇದು ನಿಮ್ಮ ಮನೆಯ ಕೆಲಸ, ನಮ್ಮ ಮಕ್ಕಳಿಗಾಗಿ ನಾವು ಮಾಡಬೇಕಾದ ಕೆಲಸವೆಂದುಕೊಂಡು ಸಂವಿಧಾನ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
ಆರೆಸ್ಸೆಸ್‌ಗೆ ಸಮಾನತೆ ಬೇಡ, ಹಾಗಾಗಿ ಅದು ಸಮಾನತೆ ನೀಡುವ ಸಂವಿಧಾನವನ್ನು ವಿರೋಧಿಸುತ್ತದೆ. ಎಲ್ಲ ಜಾತಿ-ಧರ್ಮಗಳ ದುಡಿಯುವ ಜನರೇನಿದ್ದೇವೆ ಈ ದೇಶದಲ್ಲಿ ನಾವೇ ಬಹುಸಂಖ್ಯಾಕರು. ಯಾರಾದರೂ ಇಂತಹ ದೇಶವನ್ನು ವಿರೋಧಿಸುವವರಿದ್ದರೆ ಅವರು ಆರೆಸ್ಸೆಸ್‌ನವರು ಎಂದು ಹೇಳಿದರು.