Sunday, June 16, 2024

ಸತ್ಯ | ನ್ಯಾಯ |ಧರ್ಮ

ಆದ್ಯತೆಗಳ ಮರು ಜಾರಿ: ಸಿದ್ಧರಾಮಯ್ಯನವರ ಬಜೆಟ್

ಭಾಜಪ ಸರಕಾರ ಅಸ್ತವ್ಯಸ್ತಗೊಳಿಸಿದ್ದ ಆರ್ಥಿಕ ವ್ಯವಸ್ಥೆಯನ್ನು ಮತ್ತೆ ಹಳಿಗೆ ತರುವುದೇ ಬಲು ದೊಡ್ಡ ಸವಾಲು ಮತ್ತು ಪ್ರಯಾಸದ ಕೆಲಸ ಎಂಬುದನ್ನು 2023-2024ರ ಬಜೆಟ್‌ನಲ್ಲಿ ಹೇಳಿರುವ ಅಂಕಿ-ಅಂಶಗಳು ಒತ್ತಿ ಹೇಳಿವೆ. ಇದರೊಂದಿಗೇ ಕೇಂದ್ರದ ಅಸಹಕಾರ, ತೆರಿಗೆ ಪಾಲಿನಲ್ಲಿ ಕಡಿತ, ಅನುದಾನ ಬಿಡುಗಡೆಯಲ್ಲಿ ವಿಳಂಬ ಇತ್ಯಾದಿಗಳನ್ನು ಪರಿಗಣಿಸಿದರೆ  ಈ ಹಗ್ಗದ ನಡಿಗೆ ಸ್ಪಷ್ಟವಾಗುತ್ತದೆ – ಚಿಂತಕ ಕೆ ಪಿ ಸುರೇಶ

ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು  ದಾಖಲೆಯ ಬಜೆಟ್‌ ಮಂಡಿಸಿದ್ದಾರೆ. ಬಜೆಟ್‌ ಗಾತ್ರ  ರೂ. 3,27,747 ಕೋಟಿ. ಈ ಬಾರಿಯ ಬಜೆಟ್‌ ನಲ್ಲಿ ಕ್ಷೇತ್ರವಾರು ಹಂಚಿಕೆಯಲ್ಲಿ ಹೆಚ್ಚಳ, ಹೊಸ ಯೋಜನೆಗಳ ಘೋಷಣೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಕಾಂಗ್ರೆಸ್ಸಿನ ಮಹತ್ವಾಕಾಂಕ್ಷಿ ಗ್ಯಾರಂಟಿಗಳ ಅನುಷ್ಠಾನಕ್ಕೆ ಹೇಗೆ ಹಣ ಹೊಂದಿಸುತ್ತದೆ ಎಂಬುದಷ್ಟೇ ಇದ್ದ ಕುತೂಹಲ. ಸಿದ್ಧರಾಮಯ್ಯನವರು ತಮ್ಮ ಸುದೀರ್ಘ ಅನುಭವದ ಮೂಲಕ ಅದನ್ನು ಹೊರೆಯಾಗದಂತೆ ನಿಭಾಯಿಸಿದ್ದಾರೆ ಎನ್ನಬಹುದು.

ಮುಖ್ಯತಃ ಈ ಬಜೆಟ್ಟನ್ನು ನೋಡಬೇಕಿರುವುದು ಆರ್ಥಿಕ ನೀತಿಯ ನೆಲೆಯಲ್ಲಿ. ನವ ಉದಾರವಾದೀ ಆರ್ಥಿಕ ನೀತಿಯಲ್ಲಿ ಆದಾಯ- ಖರ್ಚಿನ ಹೊಂದಾಣಿಕೆಯಲ್ಲಿ ಕೊರತೆ/ ಸಾಲ ಹೆಚ್ಚಾಗದಂತೆ ನೋಡಿಕೊಳ್ಳಬೇಕೆಂಬುದು ವಿಶ್ವ ಬ್ಯಾಂಕಿನ ರಾಜಾಜ್ಞೆ. ಈ ಚೌಕಟ್ಟಿನಲ್ಲಿ, ಮೊದಲು ಕೆಂಗಣ್ಣು ಬೀಳುವುದು ಕಲ್ಯಾಣ ಕಾರ್ಯಕ್ರಮಗಳ ಮೇಲೆ. ಇವೆಲ್ಲಾ ವೇಸ್ಟ್;‌ ಪ್ರಗತಿಗೆ ಮಾರಕ ಎಂಬ ದೃಷ್ಟಿಕೋನವನ್ನು ಬಿತ್ತಲಾಗಿದೆ.

ಆದರೆ ಅರ್ಥಶಾಸ್ತ್ರದ ವೈರುಧ್ಯವೆಂದರೆ ಇದನ್ನು ವಿಸ್ತರಿಸಿದಲ್ಲೆಲ್ಲಾ ದೀರ್ಘ ಕಾಲೀನವಾಗಿ ದೊಡ್ಡ  ಮಟ್ಟದ ಅಭಿವೃದ್ಧಿ ಕಂಡಿದೆ. ಯುರೋಪಿನ ದೇಶಗಳೇ ವರ್ಷಕ್ಕೆ 3 ಟ್ರಿಲಿಯನ್‌ ಪೌಂಡುಗಳಷ್ಟು ಇಂಥಾ ಕಲ್ಯಾಣ ಕಾರ್ಯಕ್ರಮಗಳಿಗೆ ವೆಚ್ಚ ಮಾಡುತ್ತಿವೆ. ಮತ್ತು ಸಿರಿವಂತರ ಮೇಲೆ ನಿರ್ದಾಕ್ಷಿಣ್ಯವಾದ ತೆರಿಗೆ ಹಾಕುತ್ತಿವೆ. ಆದರೆ ಅಭಿವೃದ್ಧಿ ಶೀಲ ದೇಶಗಳಿಗೆ ಮಾತ್ರ, ಹೂಡಿಕೆದಾರರ ಮೇಲೆ ಉದ್ಯಮಿಗಳ ಮೇಲೆ ತೆರಿಗೆ ಹಾಕಿದರೆ ಅವರು ಬೇರೆಡೆ ಹೋಗುತ್ತಾರೆ, ಅವರಿಗೆ ಭೀತಿ ಉಂಟಾಗುತ್ತದೆ ಎಂಬಿತ್ಯಾದಿ ನೆಪದ ಮೂಲಕ ಅವರಿಗೆ ಬಂಡವಾಳ ಹೂಡಿಕೆಯಿಂದ ಹಿಡಿದು, ಉದ್ಯಮದ ಆದಾಯದ ವರೆಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ  ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. ಭಾರತದಲ್ಲಿ ಇದನ್ನೊಂದು ನೀತಿ ಮಾರ್ಗವೆಂಬಂತೆ ಮೋದಿ ಸರಕಾರ ಪರಿಪಾಲಿಸುತ್ತಾ, ತನ್ನ ಆದಾಯ ವೃದ್ಧಿಗೆ ಪರೋಕ್ಷ ತೆರಿಗೆಯನ್ನೇ ಹೆದ್ದಾರಿಯಾಗಿಸಿದೆ. ಜಿಎಸ್‌ಟಿಯಂಥಾ ತೆರಿಗೆ ಚೌಕಟ್ಟಿನ ಮೂಲಕ ಬಹುಪಾಲು ತೆರಿಗೆ ಸಂಗ್ರಹಿಸುತ್ತಿದೆ. ಇದರೊಂದಿಗೇ ಸೆಸ್‌ ಮತ್ತು ಸರಚಾರ್ಜುಗಳು. ಇದರಲ್ಲೀ ಬಹುಪಾಲು ತೆರಿಗೆ ಪಾವತಿಸುವುದು ಬಡವರೇ ಎಂಬುದು ಅಂಕಿ-ಅಂಶಗಳಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯನವರ ಸರಕಾರ ಒಂದು ದೊಡ್ಡ ನೀತಿ ಪರ್ಯಾಯವನ್ನು ಮುಂದಿಟ್ಟಿದೆ.

ಈ ಹಿಂದಿನ ಭಾಜಪ ಸರಕಾರ ಕಲ್ಯಾಣ ಕಾರ್ಯಕ್ರಮವೂ ಇಲ್ಲದ ಬಂಡವಾಳ ಶಾಹೀ ಹಾದಿಯೂ ಹಿಡಿಯದ ವಿಚಿತ್ರ ಆದ್ಯತೆಗಳಿಗೆ ಹಣ ಖರ್ಚು ಮಾಡಿದೆ. ಭಾಜಪದ ಧಾರ್ಮಿಕ ಒಲವಿನ ಒತ್ತಾಸೆಯೇ ಮುಖ್ಯವಾಗಿ ಮಠ ಮಾನ್ಯಗಳು, ಯಜಮಾನ ಜಾತಿಗಳಿಗೆ ಸಾವಿರಾರು ಕೋಟಿ ಸುರಿದಿದೆ.

ಸಿದ್ಧರಾಮಯ್ಯನವರ ಬಜೆಟ್, ‌ ಅನುದಾನದ ದೃಷ್ಟಿಯಿಂದ ಕಡಿಮೆ ಅನ್ನಿಸಿದರೂ ತನ್ನ ಆದ್ಯತೆಯನ್ನು ಬಿಂಬಿಸುವ ಕಾರ್ಯಕ್ರಮ ಯೋಜನೆಗಳಿಗೆ  ಅನುದಾನದ ಮೂಲಕ ತನ್ನ ಭವಿಷ್ಯದ ಆದ್ಯತೆಯ ನೀಲಿ ನಕ್ಷೆಯೊಂದನ್ನು ಮುಂದಿಟ್ಟಿದೆ.

ಕಾಂಗ್ರೆಸ್‌ ಸರಕಾರದ  ಗ್ಯಾರಂಟಿಗಳಿಗೆ ಕನಿಷ್ಠ50 ಸಾವಿರ ಕೋಟಿ ಬೇಕು ಎಂಬ ಜವಾಬ್ದಾರಿಯನ್ನು ಒಪ್ಪಿಕೊಂಡೇ ಈ ಬಜೆಟ್‌ ಮುಂದಿಡಲಾಗಿದೆ. ಮುಖ್ಯವಾಗಿ ಈ ಗ್ಯಾರಂಟಿಗಳ ಮೂಲಕ ಕುಟುಂಬವೊಂದಕ್ಕೆ ಅಂದಾಜು ಮಾಸಿಕ 4-5 ಸಾವಿರ ರೂ.ಗಳ ಆದಾಯ ಲಭ್ಯವಾಗಲಿದೆ ಎಂಬುದು ಗಮನಾರ್ಹ. ಅರ್ಥಾತ್‌ ಇದು ದೇಶದ ಇತಿಹಾಸದಲ್ಲೇ ಕ್ರಾಂತಿಕಾರಕ  ಹೆಜ್ಜೆ. ಕನಿಷ್ಠ ಆದಾಯ ಎಂಬ ಪರಿಕಲ್ಪನೆಯನ್ನು ರಾಹುಲ್‌ ಗಾಂಧಿ ಹೇಳಿದಾಗ ಅದನ್ನು ಅನುಷ್ಠಾನಗೊಳಿಸುವ ಗಾತ್ರದ ಬಗ್ಗೆ ಗೇಲಿ ಮಾಡಿದವರೇ ಹೆಚ್ಚು.

ಉದ್ಯೋಗ ಖಾತರಿ ಹೆಚ್ಚೆಂದರೆ ವರ್ಷಕ್ಕೆ 30 ಸಾವಿರ, ಕಿಸಾನ್‌ ಸಮ್ಮಾನ್‌ 6,000ಮೊತ್ತ ಕುಟುಂಬಕ್ಕೆ ನೀಡಿದರೆ ಈ ಗ್ಯಾರಂಟಿಗಳು ಅದರ ದುಪ್ಪಟ್ಟು ನೀಡುತ್ತಿರುವುದು ಗಮನಾರ್ಹ.

ಈ ವರ್ಷ ಈಗಾಗಲೇ ನಾಲ್ಕು ತಿಂಗಳು ಕಳೆದಿರುವ ಕಾರಣ ಈ ಸರಕಾರಕ್ಕೆ ಅಷ್ಟರ ಮಟ್ಟಿಗೆ ಹೊರೆ ಕಡಿಮೆ. ಆದರೆ ಈ ಗ್ಯಾರಂಟಿಗಳು ಟ್ರಿಗರ್‌ ಮಾಡುವ ಚಲನಶೀಲತೆ, ವೆಚ್ಚ ಮಾಡುವ ಬಗೆ, ಉದ್ಯೋಗದ ಚಲನೆಗಳೆಲ್ಲಾ ದೂರಗಾಮಿಯಾಗಿ ದೊಡ್ಡ ಫಲ ನೀಡುವ ಸಾಧ್ಯತೆ ಇದೆ.

ಈ ಕಲ್ಯಾಣ ಕಾರ್ಯಕ್ರಮದ ಮುಂದುವರಿಕೆಯಾದ ಕೆಲವು ಕಾರ್ಯಕ್ರಮಗಳನ್ನು ಗಮನಿಸಿ:

  • ಕೃಷಿ ಭಾಗ್ಯದ ಮರು ಜಾರಿ
  • ಗೋಮಾಳಗಳ ಅಭಿವೃದ್ಧಿ
  • ಶಾಲಾ ಆವರಣಗಳ ಅಭಿವೃದ್ಧಿ
  • ಸ್ಮಶಾನಗಳ ಅಭಿವೃದ್ಧಿ
  • ೭೫೦ ಗ್ರಾಮೀಣ ಸಂತೆಗಳ ಅಭಿವೃದ್ಧಿ
  • ಜಲ ಮರುಪೂರಣ
  • ಬುಡಕಟ್ಟುಗಳಿಗೆ ವರ್ಷಪೂರ್ತಿ ಪೋಷಕ ಆಹಾರದ ಪೂರೈಕೆ.
  • ಅಲೆಮಾರಿ/ ಅರೆ ಅಲೆಮಾರಿ ಜನಾಂಗಗಳ ಅಭಿವೃದ್ಧಿ
  • ಕೆರೆ ತುಂಬಿಸುವ ಕಾರ್ಯಕ್ರಮಗಳ ಅನುಷ್ಠಾನ
  •  ರೈತ ಉತ್ಪಾದಕ ಸಂಸ್ಥೆಗಳ ಏಕೀಕೃತ ಬ್ರಾಂಡ್‌ ಮೂಲಕ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ

ಈ ದೃಷ್ಟಿಯಿಂದ ಇದಕ್ಕೆ ಅನುಕೂಲ ಮಾಡಿಕೊಡುವ ಕೆಲವು ಕಾರ್ಯಕ್ರಮಗಳನ್ನು ಇನ್ನಷ್ಟು ಫೋಕಸ್ಡ್‌ ಆಗಿ ಸಿದ್ಧರಾಮಯ್ಯನವರು ಪ್ರಸ್ತಾಪಿಸಬಹುದಿತ್ತು. ಆದರೆ ಅವರು ಇಂಥಾ ಕಾರ್ಯಕ್ರಮಗಳಲ್ಲೂ ಸೀಮಿತ  ಸಾಧನಾ ಗುರಿ ಪ್ರಸ್ತಾಪಿಸಿದ್ದಾರೆ.

ಭಾಜಪ ಸರಕಾರ ಅಸ್ತವ್ಯಸ್ತಗೊಳಿಸಿದ್ದ ಆರ್ಥಿಕ ವ್ಯವಸ್ಥೆಯನ್ನು ಮತ್ತೆ ಹಳಿಗೆ ತರುವುದೇ ಬಲು ದೊಡ್ಡ ಸವಾಲು ಮತ್ತು ಪ್ರಯಾಸದ ಕೆಲಸ ಎಂಬುದನ್ನು ಈ ಬಜೆಟ್‌ನಲ್ಲಿ ಹೇಳಿರುವ ಅಂಕಿ-ಅಂಶಗಳು  ಒತ್ತಿ ಹೇಳಿವೆ. ಇದರೊಂದಿಗೇ ಕೇಂದ್ರದ ಅಸಹಕಾರ, ತೆರಿಗೆ ಪಾಲಿನಲ್ಲಿ ಕಡಿತ, ಅನುದಾನ ಬಿಡುಗಡೆಯಲ್ಲಿ ವಿಳಂಬ ಇತ್ಯಾದಿಗಳನ್ನು ಪರಿಗಣಿಸಿದರೆ  ಈ ಹಗ್ಗದ ನಡಿಗೆ ಸ್ಪಷ್ಟವಾಗುತ್ತದೆ.

ಭಾಜಪ ಸರಕಾರ ಅನುದಾನದ ಎರಡು ಪಟ್ಟು ಕಾಮಗಾರಿಗಳಿಗೆ ಅನುಮೋದನೆ ನೀಡಿತ್ತು ಎಂಬ ಸಂಗತಿಯೇ ಆಘಾತಕಾರಿ. ಇಂಥಾ ಅಶಿಸ್ತನ್ನು ಸರಿಪಡಿಸುವ ಕೆಲಸ ಸಣ್ಣದೇನಲ್ಲ.

ಪ್ರಾಯಶಃ ದೊಡ್ಡ ಮಟ್ಟದ ತುಯ್ದಾಟಗಳಿಲ್ಲದೆ ಈ ವರ್ಷ ಗ್ಯಾರಂಟಿಗಳು ಅನುಷ್ಠಾನಗೊಂಡರೆ ಅದು ಬಡವರಲ್ಲಿ, ಮಹಿಳೆಯರಲ್ಲಿ ಮಂದಹಾಸ ಮತ್ತು ಕ್ರಿಯಾಶೀಲ ಚೈತನ್ಯ  ಹೊಮ್ಮಿಸುವುದು ಖಂಡಿತ. ಸದ್ಯಕ್ಕೆ ಇಷ್ಟಾದರೆ ಬೇಕಷ್ಟಾಯಿತು.

ಕೆ ಪಿ ಸುರೇಶ

ಚಿಂತಕರು

ಇದನ್ನೂ ಓದಿ-ಕೇಂದ್ರ ಸರ್ಕಾರದ ಬೆಲೆಯೇರಿಕೆಯಿಂದ ಬಳಲಿದ್ದ ಪ್ರಜೆಗಳಿಗೆ ‘ಗ್ಯಾರಂಟಿ’ ಸರ್ಕಾರದ ಭರವಸೆ : ಸಿಎಂ ಸಿದ್ದರಾಮಯ್ಯ

Related Articles

ಇತ್ತೀಚಿನ ಸುದ್ದಿಗಳು