Wednesday, January 7, 2026

ಸತ್ಯ | ನ್ಯಾಯ |ಧರ್ಮ

ಸಿದ್ದರಾಮಯ್ಯನವರದು ಸುದೀರ್ಘ ಅವಧಿಯ ದುರಾಡಳಿತದ ಕಾಲ: ಜೆಡಿಎಸ್ ತೀವ್ರ ವಾಗ್ದಾಳಿ

ಜೆಡಿಎಸ್ ತನ್ನ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಮುಖ್ಯಮಂತ್ರಿಗಳ ವಿರುದ್ಧ 10 ಪ್ರಮುಖ ಆರೋಪಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಕೋಮುಗಲಭೆಗಳು, ಹಿಂಸಾಚಾರ ಮತ್ತು ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿವೆ ಎಂದು ಪಕ್ಷವು ಕಿಡಿಕಾರಿದೆ.

ಕರ್ನಾಟಕವು ಭ್ರಷ್ಟಾಚಾರದಲ್ಲಿ ನಂಬರ್ 1 ಸ್ಥಾನಕ್ಕೆ ತಲುಪಿದ್ದು, ಕಾಂಗ್ರೆಸ್‌ನ ಅನೇಕ ಶಾಸಕರು ಭ್ರಷ್ಟಾಚಾರದ ಆರೋಪದ ಮೇಲೆ ಜೈಲು ಸೇರಿದ್ದಾರೆ ಮತ್ತು ಸರ್ಕಾರಿ ಅಧಿಕಾರಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.

ಅಲ್ಲದೆ, ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಸಾವಿರಾರು ಕೋಟಿ ರೂಪಾಯಿಗಳ ಅನುದಾನವನ್ನು ಲೂಟಿ ಮಾಡುವ ಮೂಲಕ ಜನಸಾಮಾನ್ಯರ ಬದುಕನ್ನು ನರಕ ಮಾಡಲಾಗಿದೆ ಮತ್ತು ಸಿದ್ದರಾಮಯ್ಯ ಅವರು ರಾಜ್ಯದ ಮೇಲೆ ಅತಿ ಹೆಚ್ಚು ಸಾಲ ಹೊರಿಸಿದ ಮುಖ್ಯಮಂತ್ರಿ ಎಂದು ಟೀಕಿಸಿದೆ.

ಇದರೊಂದಿಗೆ, ರಾಜ್ಯದ ಅಭಿವೃದ್ಧಿಗೆ ಪೂರಕವಾದ ಕೇಂದ್ರ ಸರ್ಕಾರದ ಯೋಜನೆಗಳಿಗೆ ಸಿದ್ದರಾಮಯ್ಯ ಸರ್ಕಾರವು ಸದಾ ಅಡ್ಡಗಾಲು ಹಾಕುತ್ತಿದೆ ಎಂದು ಜೆಡಿಎಸ್ ದೂರಿದೆ. ದ್ವೇಷದ ರಾಜಕಾರಣದಿಂದಾಗಿ ಮೆಟ್ರೋ ಹಳದಿ ಮಾರ್ಗದಂತಹ ಪ್ರಮುಖ ಯೋಜನೆಗಳಿಗೆ ಕೇಂದ್ರ ಅನುಮತಿ ನೀಡಿ ಒಂದೂಕಾಲು ವರ್ಷ ಕಳೆದರೂ ಕಾಂಗ್ರೆಸ್ ಸರ್ಕಾರ ಇನ್ನೂ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಿಲ್ಲ.

ಈ ವಿಳಂಬ ಧೋರಣೆಯಿಂದಾಗಿ ನಮ್ಮ ಮೆಟ್ರೋಗೆ ಪ್ರತಿದಿನ ಸುಮಾರು 2 ಕೋಟಿ ರೂಪಾಯಿಗಳ ಆರ್ಥಿಕ ಹೊರೆಯಾಗುತ್ತಿದ್ದು, ನೂರಾರು ಕೋಟಿ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

ಸಿದ್ದರಾಮಯ್ಯ ಅವರು ಜಾತಿಗಳ ನಡುವೆ ದ್ವೇಷದ ಬೆಂಕಿ ಹಚ್ಚುವ ಮೂಲಕ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಟೀಕಿಸಿದ್ದು, ಅವರ ಆಡಳಿತದ “ಟ್ರ್ಯಾಕ್ ರೆಕಾರ್ಡ್” ನಲ್ಲಿ ಇಂತಹ ಇನ್ನೂ ಅನೇಕ ವೈಫಲ್ಯಗಳಿವೆ ಎಂದು ತನ್ನ ಪೋಸ್ಟ್‌ನಲ್ಲಿ ಉಲ್ಲೇಖಿಸಿದೆ. ಈ ಆರೋಪಗಳು ರಾಜ್ಯ ರಾಜಕೀಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಹೊಸ ಸಂಘರ್ಷಕ್ಕೆ ನಾಂದಿ ಹಾಡಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page