Thursday, October 3, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿಗೆ ಸಿದ್ಧರಾಮಯ್ಯನವರ ಪತ್ನಿಯ ಶಾಪ ತಟ್ಟದೇ ಇರುವುದಿಲ್ಲ: ಶಾಸಕ ಕೆವೈ ನಂಜೇಗೌಡ

ಕೋಲಾರ: ಯಾವ ರೀತಿಯಲ್ಲಿಯೂ ರಾಜಕೀಯದಲ್ಲಿ ಭಾಗವಹಿಸದ ಸಿದ್ಧರಾಮಯ್ಯನವರ ಪತ್ನಿ ಪಾರ್ವತಿಯವರನ್ನು ಮುಡಾ ಹಗರಣದಲ್ಲಿ ಗೋಳಾಡಿಸಿದ ಬಿಜೆಪಿಗೆ ಆ ಹೆಣ್ಣುಮಗಳ ಶಾಪ ತಟ್ಟದೆ ಇರುವುದಿಲ್ಲ ಎಂದು ಮಾಲೂರು ಶಾಸಕ ಕೆವೈ ನಂಜೇಗೌಡ ಹೇಳಿದ್ದಾರೆ.

ಮಾಲೂರಿನಲ್ಲಿ ಕಾರ್ಯಕ್ರಮವೊಂದರ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಿದ್ದರಾಮಯ್ಯ ಅವರ ಪತ್ನಿಗೆ ಹರಿಶಿಣ – ಕುಂಕುಮ ರೂಪದಲ್ಲಿ ಕೊಟ್ಟಿರುವ ಜಾಗವನ್ನು ಇಟ್ಟುಕೊಂಡು ಆರೋಪ ಮಾಡ್ತಿದ್ದಾರೆ. ಇದು ಬಿಟ್ಟು ಬೇರೆ ಏನಾದ್ರು ಹಗರಣ ಇದ್ರೆ ತೋರಿಸಿ. ಸಿದ್ದರಾಮಯ್ಯ ಬಡವರಿಗೆ, ಸಾಮಾನ್ಯ ವರ್ಗದವರಿಗೆ ಎಲ್ಲಾ ಜಾತಿ ಜನಾಂಗದವರಿಗೆ, ಎಲ್ಲಾ ಧರ್ಮದವರಿಗೆ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಆದ್ರೆ ಬಿಜೆಪಿಯವರು ಆ ತಾಯಿಯ ಹೆಸರೇಳಿ ರಾಜಕೀಯ ಮಾಡುತ್ತಿದ್ದಾರೆ. ಈಗ ತಕ್ಷಣಕ್ಕೆ ಬಿಜೆಪಿಯವರು ಖುಷಿ ಪಡುತ್ತಿರಬಹುದು. ಆದ್ರೆ ಮುಂದಿನ ದಿನಗಳಲ್ಲಿ ಆ ತಾಯಿಯ ಶಾಪ ತಟ್ಟುತ್ತೆ” ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ – ಜೆಡಿಎಸ್ ಒತ್ತಾಯ ಮಾಡುತ್ತಿವೆ. ಆದರೆ ಅವರ ಪರವಾಗಿ ಕಾಂಗ್ರೆಸ್ ಹೈಕಮಾಂಡ್, ಎಐಸಿಸಿ, ಕೆಪಿಸಿಸಿ, 136 ಶಾಸಕರು ಸೇರಿದಂತೆ ಎಲ್ಲರೂ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ. ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಇಂತಹ ನಾಯಕರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು. ಸಿದ್ದರಾಮಯ್ಯ ಯಾರಿಗೂ ಮೋಸ ಮಾಡಿಲ್ಲ. ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿಯೇ ಆ ನಿವೇಶನಗಳನ್ನು ನೀಡಿರುವುದು” ಎಂದು ಅವರು ಹೇಳಿದರು.

ಮುಂದುವರೆದು ಮಾತನಾಡಿದ ಶಾಸಕ ನಂಜೇಗೌಡರು “ಬಿಜೆಪಿಯವರಯ ಇಂದು ಬೇರೆ ಬೇರೆ ದಾರಿಗಳನ್ನು ಹುಡುಕಿ ತೊಂದರೆ ಕೊಡೋಕೆ ಹೋಗ್ತಿದ್ದಾರೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ವೀಕ್ ಆಗಲ್ಲ. ನಾವೆಲ್ಲಾ ಅವರ ಪರ ನಿಂತಿದ್ದೇವೆ. ನಮ್ಮ ಸರ್ಕಾರವೇ ತನಿಖೆ ಮಾಡಿಸುತ್ತಿದೆ. ಆದ್ರೆ ಬಿಜೆಪಿಯವರು ಅವರದೇ ಏಜೆನ್ಸಿಗಳ ಮೂಲಕ ತನಿಖೆ ಮಾಡಿಸುತ್ತಿದ್ದಾರೆ. ಏನೇ ಮಾಡಿದ್ರೂ ಅವರು ಸಕ್ಸಸ್ ಆಗಲ್ಲ” ಎಂದು ಹೇಳಿದರು.

ನೀವು ಸಚಿವ ಸ್ಥಾನದ ಆಕಾಂಕ್ಷಿಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು “ನಾನು ಸಚಿವ ಸ್ಥಾನವನ್ನು ಕೇಳಿಕೊಂಡು ಹೋಗುವುದಿಲ್ಲ. ನನ್ನ ಕೆಲಸವನ್ನು ಗುರುತಿಸಿ ಸಚಿವ ಸ್ಥಾನವನ್ನು ಕೊಟ್ಟರೆ ಗೌರವಯುತವಾಗಿ ನಡೆದುಕೊಂಡು ಹೋಗುತ್ತೇನೆ. ನಾನೂ ಸಹ ಕೆಳ ಹಂತದ ರಾಜಕೀಯದಿಂದ ಬಂದಿದ್ದೇನೆ. ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಬಂದಾಗ ನನ್ನನ್ನು ಗುರುತಿಸುತ್ತಾರೆ ಎಂದು ನಾನು ನಂಬಿದ್ದೇನೆ. ನಾನು ನಿಷ್ಟೆಯಿಂದ ಕೆಲಸ ಮಾಡಿದ್ದೇನೆ. ಎಲ್ಲದಕ್ಕೂ ತಾಳ್ಮೆ ಮುಖ್ಯ. ಮಾಲೂರು ತಾಲೂಕಿಗೆ ಒಳ್ಳೆಯ ಯೋಜನೆಗಳನ್ನು ತಂದಿದ್ದೇನೆ. 1200 ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯ ಅವರಿಂದ ಗುದ್ದಲಿ ಪೂಜೆ ಮಾಡಿಸುತ್ತೇನೆ. ಕ್ಷೇತ್ರದ ಜನತೆಯ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ” ಎಂದು ಉತ್ತರಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page