ಎಸ್‌ಐಆರ್‌ ಭಾರತ ವಿಭಜನೆಯ ಪ್ರಯತ್ನ: ಬಹುಭಾಷಾ ನಟ ಪ್ರಕಾಶ್ ರಾಜ್

ಬೆಂಗಳೂರು : ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸೀಮಿತವಾಗಿಲ್ಲ. ಬಡವರು, ದಲಿತರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರನ್ನು ಮತದಾನದ ಹಕ್ಕಿನಿಂದ ಹೊರಗಿಡುವ ಮೂಲಕ ದೇಶವನ್ನು ವಿಭಜಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬಹುಭಾಷಾ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆರೋಪಿಸಿದರು.

ನಗರದ ಶಾಸಕರ ಭವನದಲ್ಲಿ ಬುಧವಾರ ಎಸ್‌ಐಆರ್ ವಿರೋಧಿ ಒಕ್ಕೂಟ ಆಯೋಜಿಸಿದ್ದ ಎಸ್‌ಐಆರ್ ಪರಿಶೋಧನಾ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಸ್‌ಐಆರ್‌ ಅನ್ನು ಕೇವಲ ಬಿಜೆಪಿ ಗೆಲುವಿಗೆ ಸಂಬಂಧಿಸಿದ ರಾಜಕೀಯ ತಂತ್ರವೆಂದು ನೋಡುವುದು ಸರಿಯಲ್ಲ ಎಂದು ಹೇಳಿದರು.

ದಲಿತರು, ಆದಿವಾಸಿಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಸೇರಿದಂತೆ ವಿವಿಧ ಸಮುದಾಯಗಳ ಮತದಾನದ ಹಕ್ಕು ಪ್ರಶ್ನೆಗೆ ಒಳಗಾಗುವ ಆತಂಕವಿದೆ ಎಂದು ಅವರು ಪ್ರತಿಪಾದಿಸಿದರು. ಇದು ಚುನಾವಣೆಯ ಗೆಲುವು-ಸೋಲಿನ ವಿಚಾರವಲ್ಲ; ಸಂವಿಧಾನ, ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಸಂಬಂಧಿಸಿದ ವಿಚಾರವಾಗಿದೆ ಎಂದು ಹೇಳಿದರು.

ಎಸ್‌ಐಆರ್ ಪ್ರಕ್ರಿಯೆಯೇ ಸಂಪೂರ್ಣ ರದ್ದಾಗಬೇಕು ಎಂದು ಒತ್ತಾಯಿಸಿದ ಪ್ರಕಾಶ್ ರಾಜ್, ಮತದಾರರನ್ನು ಪಟ್ಟಿಯಿಂದ ಹೊರಗಿಡುವ ರೀತಿಯಲ್ಲಿ ಪ್ರಕ್ರಿಯೆ ನಡೆಯುತ್ತಿದೆ ಎಂದು ದೂರಿದರು. 2023ರಿಂದ ಇದುವರೆಗೆ ಚುನಾವಣಾ ಆಯೋಗ ಕೈಗೊಂಡ ನಿರ್ಧಾರಗಳು ಹಾಗೂ ಅವುಗಳ ಪರಿಣಾಮಗಳ ಕುರಿತು ಸಮಗ್ರ ಪರಿಶೋಧನೆ ನಡೆಯಬೇಕು ಎಂದು ಆಗ್ರಹಿಸಿದರು.

ಮತದಾರರ ನೋಂದಣಿ ಹಾಗೂ ಪರಿಶೀಲನೆಗೆ ಸಂಬಂಧಿಸಿದ ದಾಖಲೆಗಳ ಕುರಿತು ಪ್ರಶ್ನಿಸಿದ ಅವರು, 18 ವರ್ಷ ಪೂರ್ಣಗೊಳಿಸಿದ ಯುವಕ ಅಥವಾ ಯುವತಿ ಮತದಾರರಾಗಿ ನೋಂದಾಯಿಸಿಕೊಳ್ಳುವ ಸಂದರ್ಭದಲ್ಲಿ ಪೋಷಕರ ಹಳೆಯ ದಾಖಲೆಗಳು ಸೇರಿದಂತೆ ಹಲವು ವಿವರಗಳನ್ನು ಕೇಳುವ ಅಗತ್ಯವೇನು ಎಂದು ಪ್ರಶ್ನಿಸಿದರು.

2002ರ ಮತದಾರರ ಮಾಹಿತಿ ಮ್ಯಾಪಿಂಗ್‌ನಲ್ಲಿನ ದೋಷಗಳ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದರು. ಹಳೆಯ ದಾಖಲೆಗಳಲ್ಲಿನ ಹೆಸರುಗಳ ಕಾಗುಣಿತ ಸೇರಿದಂತೆ ವಿವಿಧ ದೋಷಗಳನ್ನು ಸರಿಪಡಿಸದೆ ಮ್ಯಾಪಿಂಗ್ ಪ್ರಕ್ರಿಯೆ ನಡೆಸುತ್ತಿರುವುದರಿಂದ ಸಮಸ್ಯೆಗಳು ಎದುರಾಗುತ್ತಿವೆ ಎಂದು ಆರೋಪಿಸಿದರು.

ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿಯೂ ಬದಲಾವಣೆ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು, ಹೊಸ ಚುನಾವಣಾ ಆಯೋಗ ರಚನೆಯಾಗಬೇಕು ಹಾಗೂ ಈಗಾಗಲೇ ಮತಪಟ್ಟಿಯಿಂದ ತೆಗೆದುಹಾಕಲಾಗಿರುವ ಅರ್ಹ ಮತದಾರರನ್ನು ಮರುಸೇರಿಸಬೇಕು ಎಂದು ಆಗ್ರಹಿಸಿದರು.

ಎಸ್‌ಐಆರ್ ವಿರುದ್ಧದ ಹೋರಾಟ ಕೇವಲ ಮನವಿ ಅಥವಾ ಪ್ರಕ್ರಿಯಾತ್ಮಕ ಬದಲಾವಣೆಗೆ ಸೀಮಿತವಾಗಬಾರದು. ಜನರು ಬೀದಿಗಿಳಿದು ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತಿದಾಗ ಮಾತ್ರ ಪರಿಣಾಮಕಾರಿ ಪ್ರತಿರೋಧ ಸಾಧ್ಯ ಎಂದು ಪ್ರಕಾಶ್ ರಾಜ್ ಹೇಳಿದರು.

ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸುವ ನಿಟ್ಟಿನಲ್ಲಿ ಅಹಿಂಸಾತ್ಮಕ ಹೋರಾಟಕ್ಕೆ ಜನರು ಸಜ್ಜಾಗಬೇಕು. ಯುವಜನರು ತಮ್ಮ ಪ್ರತಿರೋಧದ ಶಕ್ತಿಯನ್ನು ಈಗಾಗಲೇ ತೋರಿಸಿದ್ದಾರೆ. ಅದೇ ರೀತಿಯಲ್ಲಿ ಶಾಂತಿಯುತವಾಗಿ ಜನಾಂದೋಲನ ರೂಪಿಸುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ನಿರ್ದೇಶಕ ಬಿ.ಸುರೇಶ್, ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್, ಹೋರಾಟಗಾರರಾದ ಕೆ.ಎಲ್.ಅಶೋಕ್, ಮುಹಮ್ಮದ್ ಯೂಸುಫ್ ಕನ್ನಿ, ವೀರಸಂಗಯ್ಯ, ಅಬ್ದುಲ್ ಮಜೀದ್, ತಾಹೇರ್ ಹುಸೇನ್, ಕೆ.ಎಸ್.ವಿಮಲಾ, ಕೆ.ವಿ.ಭಟ್, ಶಿವಸುಂದರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು