ಮದ್ಯ ಹಗರಣ ಪ್ರಕರಣದಲ್ಲಿ ಜೈಲು ಸೇರಿರುವ ಮನೀಶ್ ಸಿಸೋಡಿಯಾ (Manish Sisodia) ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯನ್ನು ಅಪ್ಪಿಕೊಂಡು ಕಣ್ಣೀರಿಟ್ಟರು. ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ಭೇಟಿ ಮಾಡಲು ಮನೀಶ್ ಸಿಸೋಡಿಯಾ ಅವರಿಗೆ ನ್ಯಾಯಾಲಯ ಶನಿವಾರ ಅನುಮತಿ ನೀಡಿತ್ತು.
ಶನಿವಾರ ತನ್ನ ಮನೆಯಲ್ಲಿ ಸ್ವಲ್ಪ ಸಮಯ ಕಳೆದ ನಂತರ ಜೈಲಿಗೆ ತೆರಳುವ ಮೊದಲು ಅವರು ಪತ್ನಿ ಸೀಮಾ ಸಿಸೋಡಿಯಾ ಅವರನ್ನು ಅಪ್ಪಿಕೊಂಡು ಕಣ್ಣೀರಿಟ್ಟರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ತಮ್ಮ ಪತ್ನಿಯನ್ನು ತಬ್ಬಿಕೊಂಡಿರುವ ಚಿತ್ರವನ್ನು ತಮ್ಮ ಟ್ವಿಟರ್ ಫಾಲೋವರ್‌ಗಳೊಡನೆ ಹಂಚಿಕೊಂಡಿದ್ದಾರೆ.
ದೇಶದ ಬಡ ಮಕ್ಕಳಿಗೆ ಆಶಾಕಿರಣವಾಗಿರುವ ವ್ಯಕ್ತಿಯೊಬ್ಬರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸಿಎಂ ಕೇಜ್ರಿವಾಲ್ ಗಮನ ಸೆಳೆದರು. ಇದು ತುಂಬಾ ನೋವಿನಿಂದ ಕೂಡಿದ ಮತ್ತು ಹೃದಯ ಹಿಂಡುವ ವಿಷಯ. ಮದ್ಯ ಹಗರಣ ಪ್ರಕರಣದಲ್ಲಿ ಭಾಗಿಯಾಗಿರುವ ಸಿಸೋಡಿಯಾ ಅವರಿಗೆ ಶನಿವಾರ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಆರು ಗಂಟೆಗಳ ಕಾಲ ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ಭೇಟಿ ಮಾಡಲು ನ್ಯಾಯಾಲಯ ಅನುಮತಿ ನೀಡಿತ್ತು.
ಸಿಸೋಡಿಯಾ ಅವರು ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಜೈಲು ವ್ಯಾನ್‌ನಲ್ಲಿ ಮಥುರಾ ರಸ್ತೆಯಲ್ಲಿರುವ ತಮ್ಮ ನಿವಾಸಕ್ಕೆ ಬಂದರು. ಈ ವಿರಾಮದ ಸಮಯದಲ್ಲಿ, ಸಿಸೋಡಿಯಾ ತಮ್ಮ ಮನೆಯಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಛೋಟಿ ದೀಪಾವಳಿ ಆಚರಣೆಯಲ್ಲಿ ಭಾಗವಹಿಸಿದರು. ಮಾಧ್ಯಮ ಸಭೆಗಳು ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ನ್ಯಾಯಾಲಯ ನೀಡಿದ್ದ ಆದೇಶವನ್ನು ಸಿಸೋಡಿಯಾ ಪಾಲಿಸಿದ್ದಾರೆ. ಸಿಸೋಡಿಯಾ ಅವರ ಪತ್ನಿ ಸೀಮಾ ಸಿಸೋಡಿಯಾ ಅವರು ಮಲ್ಟಿಪಲ್ ಸ್ಕ್ಲೆರೋಸಿಸ್ ವಿರುದ್ಧ ಹೋರಾಡುತ್ತಿದ್ದಾರೆ.
ಒಂದು ತಿಂಗಳೊಳಗೆ ಪತ್ನಿಯನ್ನು ಭೇಟಿ ಮಾಡಲು ಸಿಸೋಡಿಯಾಗೆ ನ್ಯಾಯಾಲಯ ಅನುಮತಿ ನೀಡಿದೆ. ಮದ್ಯದ ಹಗರಣಕ್ಕೆ ಸಂಬಂಧಿಸಿದ ಆರೋಪದಲ್ಲಿ ಸಿಸೋಡಿಯಾ ಅವರನ್ನು ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು. ನ್ಯಾಯಾಲಯ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿತು. ಮೂರು ತಿಂಗಳ ನಂತರ ಸಿಸೋಡಿಯಾ ಮತ್ತೆ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.