Wednesday, June 19, 2024

ಸತ್ಯ | ನ್ಯಾಯ |ಧರ್ಮ

ಭರ್ಜರಿ ರೋಡ್‌ ಶೋ ನಡೆಸಿ ಸಿಬಿಐ ಕಚೇರಿಗೆ ತೆರಳಿದ ಸಿಸೋಡಿಯಾ

ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಸಿಲುಕಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಿಬಿಐ ಸಮನ್ಸ್‌ ಹಿನ್ನೆಲೆಯಲ್ಲಿ ಬೃಹತ್‌ ಮೆರವಣಿಗೆಯಲ್ಲಿ ಸಿಬಿಐ ಕಚೇರಿಗೆ ತಲುಪಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂಸದ ಸಂಜಯ್ ಸಿಂಗ್ ಸೇರಿದಂತೆ ಹಲವು ಎಎಪಿ ನಾಯಕರನ್ನು ಬಂಧಿಸಲಾಗಿದೆ. ಬಂಧನ ಸಂದರ್ಭದಲ್ಲಿ ಪೊಲೀಸರು ತಮ್ಮೊಂದಿಗೆ “ಅನುಚಿತವಾಗಿ ವರ್ತಿಸಿದರು” ಎಂದು ಮಹಿಳಾ ಕಾರ್ಯಕರ್ತೆಯರು ಆರೋಪಿಸಿದ್ದಾರೆ.

ಸಿಬಿಐ ಕೇಂದ್ರ ಕಚೇರಿಯ ಹೊರಗೆ ನೂರಾರು ಪಕ್ಷದ ಕಾರ್ಯಕರ್ತರು ಜಮಾಯಿಸಿದ ಹಿನ್ನೆಲೆಯಲ್ಲಿ ಪೊಲೀಸರು ಎಎಪಿ ಮುಖಂಡರು, ಕಾರ್ಯಕರ್ತರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದರು.

ಆಮ್‌ ಆದ್ಮಿ ಪಾರ್ಟಿಯ ಎರಡನೇ ಅತಿದೊಡ್ಡ ನಾಯಕರಾಗಿರುವ ಮನೀಷ್‌ ಸಿಸೋಡಿಯಾ ಗುಜರಾತ್ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಳ್ಳದೇ ಇರಲು ಬಿಜೆಪಿ ರೂಪಿಸಿರುವ ಯೋಜನೆಯ ಪ್ರಕಾರ ಸಿಬಿಐ ಬಂಧಿಸಲು ಮುಂದಾಗಿದೆ ಎಂದು ಎಎಪಿ ಮುಖಂಡರು ಆರೋಪಿಸಿದ್ದಾರೆ.

ಸಿಬಿಐ ಕಚೇರಿಗೆ ಹೋಗುವ ದಾರಿಯಲ್ಲಿ ತೆರೆದ ಛಾವಣಿಯ ಎಸ್‌ಯುವಿಯಲ್ಲಿ ರೋಡ್‌ಶೋ ನಡೆಸಿದ ಮನೀಷ್‌ ಸಿಸೋಡಿಯಾ ಮಹಾತ್ಮ ಗಾಂಧಿಯವರ ಸ್ಮಾರಕ ರಾಜ್ ಘಾಟ್‌ ಬಳಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಬೃಹತ್‌ ಮೆರವಣಿಗೆಯೊಂದಿಗೆ ಮನೀಷ್‌ ಸಿಸೋಡಿಯಾ

ಪಕ್ಷದ ಸಂಸದ ಸಂಜಯ್ ಸಿಂಗ್ ಮತ್ತು ಶಾಸಕರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಮೊದಲಾದ ಎಎಪಿ ನಾಯಕರು ಮನೀಷ್‌ ಸಿಸೋಡಿಯಾ ಅವರಿಗೆ ತಿಲಕ ಹಚ್ಚಿ ಮನೆಯಿಂದ ಕರೆತಂದರು. ಸಿಬಿಐ ಕಚೇರಿಗೆ ತೆರಳುವ ಮುನ್ನ ತಮ್ಮ ತಾಯಿ ಆಶೀರ್ವಾದ ಮಾಡುತ್ತಿರುವ ವಿಡಿಯೋವನ್ನು ಕೂಡ ಶೇರ್ ಮಾಡಿರುವ ಸಿಸೋಡಿಯಾ ತಮ್ಮ ಮೇಲಿನ ಸಿಬಿಐ ಕಾರ್ಯಾಚರಣೆಯನ್ನು ಸಾರ್ವಜನಿಕ ಅನುಕಂಪ ಗಳಿಸಲು ಬಳಸಿಕೊಂಡಿದ್ದಾರೆ.

‘ಅವರು ನನ್ನ ಮನೆಗೆ ದಾಳಿ ಮಾಡಿದರು, ಅವರಿಗೆ ಏನೂ ಸಿಗಲಿಲ್ಲ, ಅವರು ನನ್ನ ವಿರುದ್ಧ ಏನನ್ನೋ ಹುಡುಕಲು ನನ್ನ ಹಳ್ಳಿಗೆ ಹೋದರು, ಆದರೆ ಅವರಿಗೆ ಏನೂ ಸಿಕ್ಕಿಲ್ಲ. ಈಗ ಅವರು ಗುಜರಾತ್‌ನಲ್ಲಿ ಪ್ರಚಾರ ಮಾಡದಂತೆ ತಡೆಯಲು ಅವರು ನನ್ನನ್ನು ಬಂಧಿಸಲು ಯೋಜಿಸಿದ್ದಾರೆ. ನಾನು ಸಿಬಿಐ, ಇಡಿಗೆ ಹೆದರುವುದಿಲ್ಲ. ಜೈಲಿಗೆ ಹೋಗಲು ಅಂಜುವುದಿಲ್ಲ ಎಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮನೀಷ್‌ ಸಿಸೋಡಿಯಾ ಹೇಳಿದರು.

“ಭಗತ್ ಸಿಂಗ್” ಕೂಡ ದೇಶಕ್ಕಾಗಿ ಜೈಲಿಗೆ ಹೋಗಬೇಕಾಯಿತು, ಹೀಗಾಗಿ ಜೈಲಿಗೆ ಹೋಗಲು ಅಳುಕುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು