Thursday, June 20, 2024

ಸತ್ಯ | ನ್ಯಾಯ |ಧರ್ಮ

ಎಸ್ಐಟಿ ಕಾಂಗ್ರೆಸ್ ಪಕ್ಷದ ಬ್ಲಾಕ್ಮೇಲ್ ತಂತ್ರದ ಒಂದು ಭಾಗ : ಎಎಪಿ ಗಂಭೀರ ಆರೋಪ

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಗಳಿಗೆ ಈಗಿನ ಕಾಂಗ್ರೆಸ್ ಸರ್ಕಾರಕ್ಕೆ ಬದ್ಧತೆ ಇದ್ದರೆ ನ್ಯಾಯಾಂಗ ತನಿಖೆಗೆ ಆದೇಶಿಸಲಿ. ಎಸ್ಐಟಿ ಎಂಬುದು ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಕಾಂಗ್ರೆಸ್ ಸರ್ಕಾರ ಬಳಸುತ್ತಿರುವ ಅಸ್ತ್ರ ಅಷ್ಟೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕ ಗಂಭೀರ ಆರೋಪ ಮಾಡಿದೆ.

ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಇಂದು ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುವುದೇ ಆದರೆ ಮೊದಲು ಬಿಜೆಪಿ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ವಹಿಸಲಿ. ಅದು ಬಿಟ್ಟು ಎಸ್ಐಟಿ ರಚನೆ ಮಾಡಿ ಪ್ರತಿಪಕ್ಷಗಳ ಬಾಯಿ ಮುಚ್ಚಿಸುವುದು ಒಂದು ಬ್ಲಾಕ್ಮೇಲ್ ತಂತ್ರವಷ್ಟೆ ಎಂದು ಹೇಳಿದ್ದಾರೆ.

ಬಿಜೆಪಿ ಅವಧಿಯಲ್ಲಿ ಗಂಭೀರವಾಗಿ ಕೇಳಿಬಂದ 40% ಕಮಿಷನ್ ಆರೋಪ, ಬಿಟ್ ಕಾಯಿನ್ ಹಗರಣ, ಕಳಪೆ ಕಾಮಗಾರಿಗಳ ಕಮಿಷನ್ ದಂಧೆ, ಕೋವಿಡ್ ಕಾಲದ ಬೆಡ್ ಬ್ಲಾಕಿಂಗ್ ಹಗರಣ, ಪಿಎಸ್ಐ ನೇಮಕಾತಿ ಹಗರಣ ಸೇರಿದಂತೆ ಪ್ರಮುಖ ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆ ಮಾಡಿದರೆ ಮಾತ್ರ ಆರೋಪಕ್ಕೆ ನಿಜವಾದ ನ್ಯಾಯ ಸಿಗಲು ಸಾಧ್ಯ. ಅದರ ಹೊರತಾಗಿ ತನಿಖೆಗೆ SIT ರಚನೆ ಕಣ್ಣೊರೆಸುವ ತಂತ್ರವಷ್ಟೆ ಎಂದು ಆರೋಪಿಸಿದ್ದಾರೆ.

‘ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದಂತಹ ದೊಡ್ಡ ದೊಡ್ಡ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ತನಿಖೆ ಮಾಡಿಸಲಾಗುತ್ತದೆ ಎಂದು ಕಾಂಗ್ರೆಸ್ ಹೇಳಿಕೆ ನೀಡಿತ್ತು. ಆದರೆ ಈಗ ನೋಡಿದರೆ ಎಸ್ಐಟಿ ರಚನೆ ಎಂಬ ಮಾತು ಬರುತ್ತಿದೆ. ಸರ್ಕಾರದ ಅಡಿಯಲ್ಲಿನ ಪೊಲೀಸ್ ಅಧಿಕಾರಿಗಳಿಂದ ಯಾವುದೇ ನ್ಯಾಯ ಸಿಗುವುದಿಲ್ಲ. ಇವರು ತಮ್ಮದೇ ಇಲಾಖೆಯ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸುವ ಬದ್ಧತೆ ಎಂದಿಗೂ ಸಾಧ್ಯವಿರುವುದಿಲ್ಲ. ಈ ಹಿಂದೆ SIT ತನಿಖೆ ಮಾಡಿದ ಎಷ್ಟೋ ಹಗರಣಗಳು ಹಾದಿ ತಪ್ಪಿವೆ. ಹಾಗಾಗಿ ಇವೂ ಸಹ ತಿಪ್ಪೆ ಸಾರಿಸುವ ಕಾರ್ಯ’ ಎಂದು ಪೃಥ್ವಿ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು