ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿನ ವಿವಾದಿತ ‘ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ’ ಸಂಬಂಧಿಸಿದಂತೆ, ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್, ಮತ್ತು ವಿಠಲಗೌಡ ಅವರಿಗೆ ಎಸ್‌ಐಟಿ ಅಧಿಕಾರಿಗಳು ಮತ್ತೊಮ್ಮೆ ನೋಟಿಸ್ ಜಾರಿ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಈ ಐವರಿಗೂ ಸೂಚಿಸಲಾಗಿದ್ದು, ಇಂದು (ಸೋಮವಾರ) ಬೆಳಗ್ಗೆ 10:30ಕ್ಕೆ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಬರುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ವಿಚಾರಣೆ ನಡೆಸಲು ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಮೂರು ದಿನಗಳ ಕಾಲ ಬೆಳ್ತಂಗಡಿಯಲ್ಲೇ ವಾಸ್ತವ್ಯ ಹೂಡಿದ್ದು, ಅವರ ಸಮ್ಮುಖದಲ್ಲಿಯೇ ಈ ನಾಲ್ವರು ಪ್ರಮುಖರ ವಿಚಾರಣೆ ನಡೆಯಲಿದೆ.
ಪ್ರಕರಣದಲ್ಲಿ ಸುಳ್ಳು ಕಥೆ ಸೃಷ್ಟಿಸಿ ರಾದ್ಧಾಂತಕ್ಕೆ ಕಾರಣರಾಗಿದ್ದ ಆರೋಪ ಎದುರಿಸುತ್ತಿರುವ ಸುಜಾತಾ ಭಟ್ ಅವರಿಗೂ ಇಂದು ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿಯಿಂದ ನೋಟಿಸ್ ನೀಡಲಾಗಿದೆ. ಈ ಹಿಂದೆ ಸುಜಾತಾ ಭಟ್ ಹಲವು ಬಾರಿ ವಿಚಾರಣೆಗೆ ಹಾಜರಾಗಿದ್ದರು.
ಎಸ್‌ಐಟಿ ಮುಖ್ಯಸ್ಥರ ನೇತೃತ್ವದಲ್ಲಿ ನಡೆಯಲಿರುವ ಈ ಐವರ ಮಹತ್ವದ ವಿಚಾರಣೆಯ ವೇಳೆ, ಪ್ರಕರಣಕ್ಕೆ ಸಂಬಂಧಿಸಿದ ಮತ್ತಷ್ಟು ಹೊಸ ವಿಷಯಗಳು ಹೊರಬರುವ ಸಾಧ್ಯತೆ ಇದೆ.
