Home ರಾಜ್ಯ ದಕ್ಷಿಣ ಕನ್ನಡ ಧರ್ಮಸ್ಥಳದ ಪ್ರಕರಣಗಳನ್ನು ಎಸ್‌ಐಟಿ ತನಿಖೆಗೆ ಒಳಪಡಿಸಿ: ಸಮಾನ ಮನಸ್ಕ ಸಂಘಟನೆಗಳ ಆಗ್ರಹ

ಧರ್ಮಸ್ಥಳದ ಪ್ರಕರಣಗಳನ್ನು ಎಸ್‌ಐಟಿ ತನಿಖೆಗೆ ಒಳಪಡಿಸಿ: ಸಮಾನ ಮನಸ್ಕ ಸಂಘಟನೆಗಳ ಆಗ್ರಹ

0

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದ ಪದ್ಮಲತಾ, ವೇದವಲ್ಲಿ, ಸೌಜನ್ಯಾ, ಯಮುನಾ, ನಾರಾಯಣ್ ಮತ್ತು ಇತರರ ನಾಪತ್ತೆ ಹಾಗೂ ಕೊಲೆ ಪ್ರಕರಣಗಳನ್ನು ವಿಶೇಷ ತನಿಖಾ ತಂಡದ (SIT) ವ್ಯಾಪ್ತಿಗೆ ಒಳಪಡಿಸಬೇಕು ಎಂದು ವಿವಿಧ ಸಂಘಟನೆಗಳ ಕಾರ್ಯಕರ್ತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಈ ಬೇಡಿಕೆಗಳನ್ನು ಇಡಲಾಗಿದೆ. ಕಳೆದ 20 ವರ್ಷಗಳಲ್ಲಿ ದಾಖಲಾದ ಅಸಹಜ ಸಾವುಗಳು, ಅತ್ಯಾಚಾರಗಳು, ಹಲ್ಲೆಗಳು, ಕೊಲೆಗಳು ಮತ್ತು ಹುಡುಗಿಯರ ನಾಪತ್ತೆ ಪ್ರಕರಣಗಳನ್ನು ಎಸ್‌ಐಟಿ ತನಿಖೆಗೆ ಒಪ್ಪಿಸಿರುವುದನ್ನು ಸ್ವಾಗತಿಸಿದ ಸಮಾನ ಮನಸ್ಕರು, ಎಸ್‌ಐಟಿ ತನಿಖೆಯನ್ನು ನಿಲ್ಲಿಸಲು ಬಿಜೆಪಿ ಮತ್ತು ಕೆಲವು ಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು. ಜೊತೆಗೆ, ದೂರುದಾರರು ಮತ್ತು ಸಾಕ್ಷಿದಾರರನ್ನು ಬೆದರಿಸಲಾಗುತ್ತಿದೆ ಎಂದೂ ಹೇಳಿದ್ದಾರೆ. ಸರ್ಕಾರವು ಈ ಒತ್ತಡಕ್ಕೆ ಮಣಿಯದೆ, ಪ್ರಕರಣಗಳ ಪೂರ್ಣ ಪ್ರಮಾಣದ ತನಿಖೆಗೆ ಅವಕಾಶ ನೀಡಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಗಿದೆ.

ಜನ ಚಳವಳಿ ಮತ್ತು ದೂರುದಾರರಿಗೆ ಯಾವುದೇ ನೇರ ಸಂಬಂಧವಿಲ್ಲವಾದರೂ, ದೂರುದಾರರಿಗೆ ನ್ಯಾಯ ಸಿಗುವವರೆಗೂ ಜನ ಚಳವಳಿಗಳು ಅವರಿಗೆ ನೈತಿಕ ಬೆಂಬಲ ನೀಡುತ್ತಾ ಹೋರಾಟ ಮುಂದುವರಿಸುತ್ತವೆ ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ.

ಸಿಪಿಐ ಮುಖಂಡರಾಗಿದ್ದ ಎಂ.ಕೆ. ದೇವಾನಂದ ಅವರು ಸ್ಥಳೀಯ ಫ್ಯೂಡಲ್ ಶಕ್ತಿಗಳ ನಿಯಮಗಳನ್ನು ಮುರಿದು ಮಂಡಲ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಮತ್ತು ಮಲೆಕುಡಿಯರನ್ನು ಒಕ್ಕಲೆಬ್ಬಿಸುವಿಕೆಯ ವಿರುದ್ಧ ಚಳವಳಿ ಕಟ್ಟಿದ್ದೇ ಅವರ ಮಗಳು ಪದ್ಮಲತಾ ಕೊಲೆಗೆ ಕಾರಣ ಎಂದು ಅವರು ಸಾಯುವವರೆಗೂ ಹೇಳುತ್ತಿದ್ದರು. ಆದರೆ ಅವರಿಗೆ ನ್ಯಾಯ ಸಿಗಲಿಲ್ಲ. ಅದೇ ರೀತಿ, ಎಸ್‌ಡಿಎಂ ಅನುದಾನಿತ ಹೈಸ್ಕೂಲ್‌ನಲ್ಲಿ ಶಿಕ್ಷಕಿಯಾಗಿದ್ದ ವೇದವಲ್ಲಿ ಅವರು ಮುಖ್ಯೋಪಾಧ್ಯಾಯಿನಿ ಹುದ್ದೆಗೆ ಹಕ್ಕು ಮಂಡಿಸಿದ್ದಕ್ಕಾಗಿ ಅವರನ್ನು ಸುಟ್ಟು ಕೊಲ್ಲಲಾಗಿದೆ. ಮಾವುತ ನಾರಾಯಣ ಮತ್ತು ಅವರ ಸಹೋದರಿ ಯಮುನಾ ಅವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ, ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ. ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣದಲ್ಲಿಯೂ ನಿಜವಾದ ಆರೋಪಿಗಳು ಪತ್ತೆಯಾಗಿಲ್ಲ. ಈ ಎಲ್ಲ ಪ್ರಕರಣಗಳನ್ನು ಎಸ್‌ಐಟಿ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಲಾಯಿತು.

ಇದಲ್ಲದೆ, ಇತರ ಪ್ರಮುಖ ಬೇಡಿಕೆಗಳನ್ನೂ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ:

ಅಶೋಕನಗರ ಕಾಲೋನಿಯ 128 ದಲಿತ ಕುಟುಂಬಗಳಿಗೆ ಮತ್ತು ಮುಂಡ್ರುಪಾಡಿಯ 42 ಕುಟುಂಬಗಳಿಗೆ ಹಕ್ಕುಪತ್ರ ಮತ್ತು ತಲಾ ಒಂದು ಎಕರೆ ಜಮೀನು ಒದಗಿಸಬೇಕು.

ಸ್ವಚ್ಛತಾ ಕಾರ್ಯಕರ್ತರಿಗೆ ಕಾರ್ಮಿಕ ಕಾಯ್ದೆಯ ಪ್ರಕಾರ ಸರಿಯಾದ ವೇತನ ನೀಡಬೇಕು.

ದಲಿತರಿಗೆ ಮೀಸಲಾದ ಜಮೀನು ಸೇರಿದಂತೆ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ನೂರಾರು ಎಕರೆ ಭೂಮಿಯನ್ನು ತೆರವುಗೊಳಿಸಿ, ದಲಿತರಿಗೆ ವಿತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.

ಗ್ರಾಮೀಣಾಭಿವೃದ್ಧಿ ಯೋಜನೆಯ ಹೆಸರಿನಲ್ಲಿ ನಡೆದ ಮೈಕ್ರೋಫೈನಾನ್ಸ್ ಹಗರಣಗಳ ಬಗ್ಗೆ ತನಿಖೆ ನಡೆಸಬೇಕು.

ಸ್ನಾನಘಟ್ಟ ಮತ್ತು ಲಾಡ್ಜ್‌ಗಳಲ್ಲಿ ಮೃತಪಟ್ಟವರ ಕುಟುಂಬಗಳನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡದೆ, ಶವಗಳನ್ನು ತಕ್ಷಣವೇ ಹೂಳಲು ಪೊಲೀಸರು ಸೂಚಿಸಿರುವ ಪ್ರಕರಣಗಳ ಬಗ್ಗೆಯೂ ತನಿಖೆ ನಡೆಸಬೇಕು. ಈ ಪ್ರಕರಣಗಳು ಅನುಮಾನಕ್ಕೆ ಕಾರಣವಾಗಿವೆ ಎಂದು ಸಭೆ ಹೇಳಿದೆ.

You cannot copy content of this page

Exit mobile version