ಅಯೋಧ್ಯೆ ರಾಮ ಮಂದಿರ ಕಾಣಿಕೆ ಹಗರಣ: 8 ತಿಂಗಳ ಸಿಸಿಟಿವಿ ಫುಟೇಜ್ ನಾಪತ್ತೆ, 2 ಕೋಟಿ ರೂ. ಜಪ್ತಿ ಮಾಡಿದ ಎಸ್‌ಐಟಿ!

ಹೊಸ ದೆಹಲಿ: ಅಯೋಧ್ಯೆಯ ಶ್ರೀರಾಮ ಮಂದಿರದ ಕಾಣಿಕೆ ಹಣ ಮತ್ತು ದೇಣಿಗೆಯಾಗಿ ಬಂದ ವಸ್ತುಗಳ ಅಕ್ರಮದ ವರದಿಗಳು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿವೆ. ಭಕ್ತರು ಸಮರ್ಪಿಸಿದ ನಗದು, ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆಗಳು ಪತ್ತೆಹಚ್ಚಿವೆ. ಇಷ್ಟು ದೊಡ್ಡ ದೇವಾಲಯದ ಆಡಳಿತದಲ್ಲಿ ಪ್ರಮುಖ ವಿಭಾಗಗಳನ್ನು ನಿರ್ವಹಿಸುವ ಅಧಿಕಾರಿಗಳ ಮೇಲಿನ ಪರ್ಯವೇಕ್ಷಣೆಯ ಕೊರತೆ ಹಾಗೂ ಸಿಸಿಟಿವಿ (CCTV) ಫುಟೇಜ್‌ಗಳು ನಾಪತ್ತೆಯಾಗಿರುವುದು ತನಿಖಾ ತಂಡಕ್ಕೆ ಆಶ್ಚರ್ಯ ಮೂಡಿಸಿದೆ.

ರಾಮ ಮಂದಿರದ ಕಾಣಿಕೆ ಹಣ ದುರುಪಯೋಗವಾಗಿರುವ ಆರೋಪಗಳು ಸಂಘ ಪರಿವಾರದಲ್ಲೂ ಆತಂಕ ಮೂಡಿಸಿದ್ದು, ಬಿಜೆಪಿಯ ಕೆಲವು ನಾಯಕರೇ ಈ ಕುರಿತು ಕೇಂದ್ರ ಸಂಸ್ಥೆಗಳಿಂದ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್ ಮಂದಿರದ ಕೋಟ್ಯಂತರ ರೂಪಾಯಿ ದೇಣಿಗೆ ಹಣ ಮಾಯವಾಗಿದೆ ಎಂದು ಆರೋಪಿಸಿದ ಬೆನ್ನಲ್ಲೇ ಈ ವಿವಾದ ಮುಂಚೂಣಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ಜೂನ್ 13 ರಂದು ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು.

ಹಗರಣದ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡವು, ಭಾನುವಾರದಂದು ತನ್ನ ಪ್ರಾಥಮಿಕ ವರದಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸಿದೆ. ಕಳೆದ ಆರು ದಿನಗಳಿಂದ ನಡೆಸಿರುವ ತನಿಖೆಯ ವಿವರಗಳನ್ನು ಮುಖ್ಯಮಂತ್ರಿಗಳಿಗೆ ವಿವರಿಸಿರುವ ತಂಡವು, ಅಕ್ರಮಗಳಲ್ಲಿ ಭಾಗಿಯಾಗಿರುವ ಕೆಲವು ವ್ಯಕ್ತಿಗಳನ್ನು ಗುರುತಿಸಿದೆ. ಆದರೆ, ಪ್ರಾಥಮಿಕ ವರದಿಯ ಪ್ರಕಾರ ದೇವಸ್ಥಾನದ ಟ್ರಸ್ಟ್‌ನ ಪ್ರಮುಖ ಜವಾಬ್ದಾರಿಯುತ ಸ್ಥಾನಗಳಲ್ಲಿರುವ ಯಾರೊಬ್ಬರ ಹೆಸರೂ ಇದರಲ್ಲಿ ನೇರವಾಗಿ ಉಲ್ಲೇಖವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಇದುವರೆಗೆ 150 ಕ್ಕೂ ಹೆಚ್ಚು ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುತಿಸಿದ್ದು, ಇವರಲ್ಲಿ 25 ಜನರನ್ನು ನೇರವಾಗಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ತನಿಖೆ ಮುಗಿಯುವವರೆಗೆ ಟ್ರಸ್ಟ್‌ನ ನಿರ್ವಾಹಕರು ಹಾಗೂ ಮಂದಿರದ ಸಿಬ್ಬಂದಿ ಅಯೋಧ್ಯೆಯನ್ನು ಬಿಟ್ಟು ಹೊರಹೋಗಬಾರದು ಎಂದು ಆದೇಶಿಸಲಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಟ್ರಸ್ಟಿ ಅನಿಲ್ ಮಿಶ್ರಾ ಮತ್ತು ಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲ್ ರಾವ್ ಅವರನ್ನು ಎಸ್‌ಐಟಿ ತಂಡವು ಶುಕ್ರವಾರ ಮಂದಿರದ ಆವರಣದಲ್ಲೇ ಸತತ ಆರು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದೆ. ‌

ಈಗಾಗಲೇ ಐದು ಜನ ಪ್ರಮುಖ ಆರೋಪಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಎಸ್‌ಐಟಿ 2 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದೆ. ಮುಖ್ಯವಾಗಿ ಕಾಣಿಕೆ ಹಣವನ್ನು ಎಣಿಕೆ ಮಾಡುವ ಸಮಯದಲ್ಲಿ ಈ ಅಕ್ರಮ ಎಸಗಲಾಗಿದ್ದು, ಆರೋಪಿಗಳ ಪೈಕಿ ಒಬ್ಬನ ಮನೆಯಿಂದ ಚಿನ್ನವನ್ನೂ ಜಪ್ತಿ ಮಾಡಲಾಗಿದೆ.

ತನಿಖಾ ತಂಡಕ್ಕೆ ಮಂದಿರದ ಹಾಗೂ ಕಾಣಿಕೆ ಎಣಿಕೆ ಕೊಠಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಾಗ ಅಡಚಣೆ ಎದುರಾಗಿದೆ. ಮಂದಿರದ ವ್ಯವಸ್ಥೆಯ ಪ್ರಕಾರ ಕೇವಲ 45 ದಿನಗಳ ಫುಟೇಜ್ ಮಾತ್ರ ಸಿಸ್ಟಮ್‌ನಲ್ಲಿ ಲಭ್ಯವಿದ್ದು, ಆ ಬಳಿಕ ಅದು ಸ್ವಯಂಚಾಲಿತವಾಗಿ ಡಿಲೀಟ್ ಆಗುತ್ತದೆ ಎಂದು ಮಂದಿರದ ಆಡಳಿತ ಮಂಡಳಿ ತಿಳಿಸಿದೆ. ಆದರೆ, ಲಭ್ಯವಿರುವ ಫುಟೇಜ್‌ನಲ್ಲೂ ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಎಸ್‌ಐಟಿ ಶಂಕಿಸಿದ್ದು, ಸುಮಾರು 8 ತಿಂಗಳ ಅವಧಿಯ ಸಿಸಿಟಿವಿ ಫುಟೇಜ್ ಅನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿರುವುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಮಂದಿರದ ವಿಷಯದ ಕುರಿತು ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಈ ಹಗರಣದ ಹಿಂದೆ ಪ್ರಭಾವಿ ವ್ಯಕ್ತಿಗಳ ಹಸ್ತವಿದ್ದು, ಅವರ ಹೆಸರುಗಳನ್ನು ಹೊರಹಾಕದಿದ್ದರೆ ಸರ್ಕಾರವೇ ತೊಂದರೆಗೆ ಸಿಲುಕುವ ಸಾಧ್ಯತೆಯಿದೆ ಎಂದು ಭಾನುವಾರ ಆರೋಪಿಸಿದ್ದಾರೆ. ಮತ್ತೊಂದೆಡೆ, ಈ ವಿವಾದದ ಸುದ್ದಿಗಳು ಹೊರಬರುತ್ತಿದ್ದಂತೆ ಮಂದಿರಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಯಾವುದೇ ಕೊರತೆಯಾಗದಿದ್ದರೂ, ಕಾಣಿಕೆ ನೀಡುವ ಪ್ರಮಾಣ ಗಣನೀಯವಾಗಿ ಕುಸಿದಿದೆ. ದಿನನಿತ್ಯ ಮಂದಿರಕ್ಕೆ ಬರುತ್ತಿದ್ದ 8 ರಿಂದ 12 ಲಕ್ಷ ರೂಪಾಯಿಗಳ ಕಾಣಿಕೆ ಆದಾಯವು ಸದ್ಯ 1 ಲಕ್ಷ ರೂಪಾಯಿಗಿಂತಲೂ ಕೆಳಮಟ್ಟಕ್ಕೆ ಕುಸಿದಿದೆ.

ಮಂದಿರದ ವಿವಾದದ ಕುರಿತು ಮೌನ ಮುರಿದಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಾರ್ವಜನಿಕರು ಇನ್ನು 15 ದಿನಗಳ ಕಾಲ ಕಾಯಬೇಕು ಎಂದು ಮನವಿ ಮಾಡಿದ್ದಾರೆ. ಮಂದಿರದ ನಿಧಿಯನ್ನು ದುರುಪಯೋಗಪಡಿಸಿಕೊಂಡವರು ಎಷ್ಟೇ ಪ್ರಭಾವಿಯಾಗಿದ್ದರೂ ಅವರನ್ನು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಇದೇ ವೇಳೆ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಸಮಾజವಾದಿ ಪಕ್ಷಗಳ ಧೋರಣೆಯನ್ನು ಟೀಕಿಸಿದ ಯೋಗಿ, “ಹಿಂದೆ ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿ, ರಾಮಭಕ್ತರ ಮೇಲೆ ಕ್ರಮ ಕೈಗೊಂಡಿದ್ದ ಸಮಾಜವಾದಿ ಪಕ್ಷದ ನಾಯಕರು, ಇಂದು ತಾವೇ ದೊಡ್ಡ ರಾಮಭಕ್ತರಂತೆ ತೋರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ,” ಎಂದಿದ್ದಾರೆ.

ಇತ್ತ, ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರ ಹೇಳಿಕೆಗಳು ವಿವಾದವನ್ನು ಮತ್ತಷ್ಟು ಹೆಚ್ಚಿಸಿವೆ. ಆರಂಭದಲ್ಲಿ ತಮಗೂ ಕಾಣಿಕೆ ಹಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದ ಮಿಶ್ರಾ, ಈಗ ಮಂದಿರದ ಉಸ್ತುವಾರಿ ಹಾಗೂ ಜವಾಬ್ದಾರಿಯ ನಿರ್ವಹಣೆಯಲ್ಲಿ ಲೋಪಗಳಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಮಂದಿರದ ಹಲವು ಪ್ರಮುಖ ವ್ಯವಸ್ಥೆಗಳು ಮತ್ತು ಕಾರ್ಯಕ್ರಮಗಳು ಯಾವುದೇ ಅಧಿಕೃತ ನಿರ್ದೇಶನಗಳಿಲ್ಲದೆ ಕೇವಲ ಸ್ವಯಂಚಾಲಿತವಾಗಿ ಹಾಗೂ ಸ್ವಯಂಸೇವಕರ ಮೂಲಕ ಜವಾಬ್ದಾರಿಯಿಲ್ಲದ ರೀತಿಯಲ್ಲಿ ನಡೆಯುತ್ತಿರುವುದೇ ಇದಕ್ಕೆ ಕಾರಣ ಎಂದು ಅವರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು