Sunday, July 14, 2024

ಸತ್ಯ | ನ್ಯಾಯ |ಧರ್ಮ

‘ಕಾರ್ಪೊರೇಟ್ ಕ್ವಿಟ್ ಇಂಡಿಯಾ ಡೇ’: ಮತ್ತೆ ದೇಶವ್ಯಾಪಿ ಹೋರಾಟಕ್ಕೆ ಸಜ್ಜಾದ ರೈತ ಸಂಘಟನೆಗಳು

ಹೊಸದಿಲ್ಲಿ, ಜು.11: ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಮತ್ತೆ ಚಳವಳಿ ಆರಂಭಿಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಗುರುವಾರ ಘೋಷಿಸಿದೆ.

ಕೇಂದ್ರವು 2020-21ನೇ ಸಾಲಿನಲ್ಲಿ ತಂದಿದ್ದ ಕೃಷಿ ಕಾನೂನುಗಳ ವಿರುದ್ಧ ಚಳವಳಿಯನ್ನು ಕೈಗೆತ್ತಿಕೊಂಡಿರುವ ರೈತ ಸಂಘಗಳ ಐಕ್ಯ ವೇದಿಕೆಯಾದ ಸಂಯುಕ್ತ ಕಿಸಾನ್ ಮೋರ್ಚಾದ ಸಾಮಾನ್ಯ ಸಭೆ ಬುಧವಾರ ನಡೆಯಿತು. ಇದರಲ್ಲಿ ಕೈಗೊಂಡ ನಿರ್ಧಾರಗಳನ್ನು ಎಸ್‌ಕೆಎಂ ಗುರುವಾರ ಪ್ರಕಟಿಸಿದೆ.

ಮತ್ತೆ ಚಳವಳಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಚಳವಳಿಯ ನೇತಾರರು ತಿಳಿಸಿದ್ದಾರೆ. ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಬೇಕು ಮತ್ತು ರೈತರ ಸಾಲ ಮನ್ನಾ ಮಾಡಬೇಕು ಎಂಬ ಬೇಡಿಕೆಯೊಂದಿಗೆ ಚಳವಳಿಯನ್ನು ಸಿದ್ಧಪಡಿಸಲಾಗಿದೆ ಎಂದು ಸಂಘಟನೆ ಹೇಳಿದೆ. 2021ರ ಡಿಸೆಂಬರ್ 9ರಂದು ರೈತ ಸಂಘಗಳ ಜತೆಗಿನ ಚರ್ಚೆಯಲ್ಲಿ ಮಾಡಿಕೊಂಡಿರುವ ಒಪ್ಪಂದದ ಷರತ್ತುಗಳನ್ನು ಈಡೇರಿಸುವಂತೆ SKM ಒತ್ತಾಯಿಸಿದೆ.

ಜುಲೈ 16ರಿಂದ 18ರವರೆಗೆ ಪ್ರಧಾನಿ ಮತ್ತು ವಿರೋಧ ಪಕ್ಷದ ನಾಯಕ ಸೇರಿದಂತೆ ಎಲ್ಲಾ ಸಂಸದರಿಗೆ ತಮ್ಮ ಬೇಡಿಕೆಗಳ ಮನವಿ ಸಲ್ಲಿಸಲಿಗುತ್ತದೆ ಎಂದು ಅದು ಹೇಳಿದೆ. ಚಳವಳಿಯ ಸಂದರ್ಭದಲ್ಲಿ ಮಡಿದ ಅನ್ನದಾತರ ಗೌರವಾರ್ಥವಾಗಿ ದೆಹಲಿಯ ಗಡಿಯಲ್ಲಿರುವ ಟಿಕ್ರಿ ಮತ್ತು ಸಿಂಘುದಲ್ಲಿ ಸ್ಮಾರಕಗಳನ್ನು ನಿರ್ಮಿಸಲಾಗುವುದು ಎಂದು ತಿಳಿದುಬಂದಿದೆ. ಅಲ್ಲದೆ, 2021ರಲ್ಲಿ, ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾನ ಬೆಂಗಾವಲು ವಾಹನ ಡಿಕ್ಕಿ ಹೊಡೆದು ಪ್ರಾಣ ಕಳೆದುಕೊಂಡ ಅನ್ನ ದಾನಿಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಈ ಬಾರಿ ರಾಷ್ಟ್ರವ್ಯಾಪಿ ಚಳವಳಿ

ಭಾರತವು ವಿಶ್ವ ವ್ಯಾಪಾರ ಸಂಸ್ಥೆಯಿಂದ (ಡಬ್ಲ್ಯುಟಿಒ) ಹಿಂದೆ ಸರಿಯಬೇಕು ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಕೃಷಿ ಕ್ಷೇತ್ರಕ್ಕೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಎಸ್‌ಕೆಎಂ ಮುಖಂಡರು ಒತ್ತಾಯಿಸಿದರು. ಈ ನಿಟ್ಟಿನಲ್ಲಿ ಆ.9ರಂದು ‘ಕ್ವಿಟ್ ಇಂಡಿಯಾ ಡೇ’ ಅನ್ನು ‘ಕಾರ್ಪೊರೇಟ್ ಕ್ವಿಟ್ ಇಂಡಿಯಾ ಡೇ’ ಎಂದು ಆಯೋಜಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಘೋಷಿಸಿದ್ದಾರೆ.

ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೊಸ ಮಾರ್ಗದಲ್ಲಿ ಚಳವಳಿ ನಡೆಸಲು ರೈತ ಸಂಘಗಳು ನಿರ್ಧರಿಸಿವೆ. ಎಸ್‌ಕೆಎಂ ನಾಯಕರು ದೆಹಲಿಗೆ ಮೆರವಣಿಗೆ ಹೋಗುವ ಬದಲು ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ನಡೆಸುವುದಾಗಿ ಘೋಷಿಸಿದ್ದಾರೆ. ವಿಶೇಷವಾಗಿ ಮಹಾರಾಷ್ಟ್ರ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣದಂತಹ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಪ್ರತಿಭಟನೆ ನಡೆಯಲಿದೆ.

Related Articles

ಇತ್ತೀಚಿನ ಸುದ್ದಿಗಳು