ಚಿಕ್ಕಬಳ್ಳಾಪುರ: ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವು ಭಾರಿ ರಾಜಕೀಯ ಹೈಡ್ರಾಮಾ ಮತ್ತು ಗದ್ದಲಕ್ಕೆ ಸಾಕ್ಷಿಯಾಗಿದೆ. ಕಾರ್ಯಕ್ರಮದ ವೇಳೆ ಶಾಸಕ ಪ್ರದೀಪ್ ಈಶ್ವರ್ ಮತ್ತು ಜೆಡಿಎಸ್-ಬಿಜೆಪಿ ಮುಖಂಡರ ಬೆಂಬಲಿಗರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ವೇದಿಕೆಯಲ್ಲೇ ಚಪ್ಪಲಿ ಎಸೆದಿರುವ ಆಘಾತಕಾರಿ ಘಟನೆ ಸಂಭವಿಸಿದೆ.
ಕೆಂಪೇಗೌಡ ಜಯಂತಿ ಆಚರಣೆ ಸಂದರ್ಭದಲ್ಲಿ ವೇದಿಕೆಗೆ ಶಾಸಕ ಪ್ರದೀಪ್ ಈಶ್ವರ್ ಆಗಮಿಸುತ್ತಿದ್ದಂತೆ, ಅಲ್ಲಿ ನೆರೆದಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಂಸದ ಡಾ. ಕೆ. ಸುಧಾಕರ್ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “ಶಾಸಕ ಪ್ರದೀಪ್ ಈಶ್ವರ್ ಒಬ್ಬ ಹುಚ್ಚ, ಅವರು ತಕ್ಷಣವೇ ಕುಮಾರಸ್ವಾಮಿ ಅವರ ಕ್ಷಮೆ ಕೇಳಬೇಕು ಮತ್ತು ಕಾರ್ಯಕ್ರಮದಿಂದ ಹೊರನಡೆಯಬೇಕು,” ಎಂದು ಒಕ್ಕಲಿಗ ಸಮುದಾಯ ಹಾಗೂ ಜೆಡಿಎಸ್ ನಾಯಕರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಸಂಸದ ಸುಧಾಕರ್ ವೇದಿಕೆಗೆ ಬರುತ್ತಿದ್ದಂತೆ ವಾತಾವರಣ ಮತ್ತಷ್ಟು ಬಿಗಡಾಯಿಸಿತು. ಇದರ ನಡುವೆಯೇ ಶಾಸಕ ಪ್ರದೀಪ್ ಈಶ್ವರ್ ಭಾಷಣ ಆರಂಭಿಸಲು ಮುಂದಾದಾಗ ಇಡೀ ಸಭಾಂಗಣ ಗೊಂದಲದ ಗೂಡಾಗಿ ಮಾರ್ಪಟ್ಟಿತು.
ಗಲಾಟೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕಾರ್ಯಕ್ರಮದಿಂದ ಹೊರಗೆ ಬಂದ ಪ್ರದೀಪ್ ಈಶ್ವರ್, ಮಾಧ್ಯಮಗಳ ಮುಂದೆ ಪದೇ ಪದೇ ಮೀಸೆ ತಿರುವುತ್ತಾ, ಎದೆ ತಟ್ಟಿಕೊಳ್ಳುತ್ತಾ ತಮ್ಮ ಆಕ್ರೋಶದ ಹಾವಭಾವಗಳನ್ನು ಪ್ರದರ್ಶಿಸಿದರು. ಈ ಹಂತದಲ್ಲಿ ಉದ್ರಿಕ್ತ ಗುಂಪಿನಿಂದ ವ್ಯಕ್ತಿಯೊಬ್ಬ ಶಾಸಕರನ್ನು ಗುರಿಯಾಗಿಸಿ ಚಪ್ಪಲಿ ಎಸೆದಿದ್ದಾನೆ. ಆದರೆ ಆ ಚಪ್ಪಲಿ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಬಿದ್ದಿದ್ದು, ತಕ್ಷಣವೇ ಎಚ್ಚೆತ್ತ ಪೊಲೀಸರು ಚಪ್ಪಲಿ ಎಸೆದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್ ನೇರವಾಗಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. “ನಾನು ಈ ಜಿಲ್ಲೆಯ ಏಕೈಕ ಶೋಷಿತ ಒಬಿಸಿ (OBC) ಶಾಸಕ. ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಆಹ್ವಾನಿಸಿ, ಈಗ ಕುಮಾರಣ್ಣನ ಬೆಂಬಲಿಗರು ನನಗೆ ಬಹಿರಂಗವಾಗಿ ಅವಮಾನ ಮಾಡಿದ್ದಾರೆ. ಕುಮಾರಣ್ಣ, ಈ ಜಿಲ್ಲೆಯಲ್ಲಿ ಒಬಿಸಿ ವರ್ಗದವರು ಬದುಕಬಾರದೇ? ನಿನ್ನ ಇಂತಹ ಚೇಲಾಗಳಿಗೆ ನಾನು ಹೆದರುವವನಲ್ಲ,” ಎಂದು ಕಿಡಿಕಾರಿದರು.
ಮುಂದುವರಿದು ಮಾತನಾಡಿದ ಅವರು, “ಕುಮಾರಣ್ಣ, ನಿನಗೆ ಡಿ.ಕೆ. ಶಿವಕುಮಾರ್ ಅವರನ್ನು ಸಹಿಸಲು ಆಗಲ್ಲ, ಚಲುವರಾಯಸ್ವಾಮಿ ಅವರನ್ನು ಸಹಿಸಲು ಆಗಲ್ಲ, ಈಗ ಒಬ್ಬ ಒಬಿಸಿ ಶಾಸಕ ಬೆಳೆಯುತ್ತಿರುವುದನ್ನೂ ಸಹಿಸಲು ಆಗುತ್ತಿಲ್ಲ. ನಿನಗೆ ತಾಕತ್ತಿದ್ದರೆ ನೇರವಾಗಿ ಬಾ. ಮುಂದಿನ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲೇ ಬಂದು ಸ್ಪರ್ಧಿಸು. ನೀನಾ ಅಥವಾ ನಾನಾ ಎಂದು ಇಲ್ಲೇ ನಿರ್ಧಾರವಾಗಿ ಹೋಗಲಿ,” ಎಂದು ಬಹಿರಂಗ ಸವಾಲು ಹಾಕಿದರು.
ಇದೇ ವೇಳೆ ಜೆಡಿಎಸ್ ಶಾಸಕರೊಬ್ಬರು ಪ್ರದೀಪ್ ಈಶ್ವರ್ ಸವಾಲಿಗೆ ತಿರುಗೇಟು ನೀಡಿದ್ದು, “ಮುಂದಿನ ಚುನಾವಣೆಯಲ್ಲಿ ನೀನು ಸೋಲುವುದು ಖಚಿತ. ಸೋತ ಬಳಿಕ ಎಚ್‌ಡಿಕೆ ಮನೆಯ ಮುಂದೆ ವಾಚ್‌ಮನ್ ಕೆಲಸಕ್ಕೆ ಸೇರುತ್ತೀಯಾ?” ಎಂದು ಪ್ರಶ್ನಿಸಿ ಸವಾಲು ಹಾಕಿದ್ದಾರೆ.
