Thursday, June 27, 2024

ಸತ್ಯ | ನ್ಯಾಯ |ಧರ್ಮ

ಸ್ಲಂ ನಿವಾಸಿಗಳಿಂದ ಪಾಲಿಕೆ ಎದುರು ಪ್ರತಿಭಟನೆ: ದಲಿತ ವಿರೋಧಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಂಗಳೂರು: ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಸ್ಲಂ ನಿವಾಸಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ಟೌನ್ಹಾಲ್ ಸರ್ಕಲ್ನಿಂದ ರ್ಯಾಲಿ ಮಾಡಿ ಮಹಾನಗರ ಪಾಲಿಕೆ ಕಛೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಸ್ಲಂ ಜನಾಂದೋಲನ ಕರ್ನಾಟಕ ಮುಖಂಡರಾದ ಎ.ನರಸಿಂಹಮೂರ್ತಿ ಮಾತನಾಡಿ, ಸಂವಿಧಾನಬದ್ದವಾಗಿ ಸ್ಲಂ ಜನರ ಪಾಲನ್ನು ಕೇಳುತ್ತಿದ್ದೇವೆ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ನಮ್ಮ ಹಕ್ಕನ್ನು ಪಡೆದುಕೊಳ್ಳುವ ಅಧಿಕಾರಿ ನಮಗೆ ಕೊಟ್ಟಿದ್ದಾರೆ. 24/2/22 ರಂದು ಕೌನ್ಸಿಲ್ ಸಭೆಯಲ್ಲಿ ಅನುಮೋದನೆಗೊಂಡಿರುವ 1.22 ಕೋಟಿ ರೂಗಳನ್ನು ಪ್ರಧಾನಮಂತ್ರಿ ಅವಾಸ್ ಯೋಜನೆಯ 188 ಎಸ್ಸಿ/ಎಸ್ಟಿ ಜನರಿಗೆ ನೀಡಲು ಪಾಲಿಕೆ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದು, ಇದು ದಲಿತ ವಿರೋಧಿ ನಡೆಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಅನ್ವಯ ದೂರು ದಾಖಲಿಸಿ ಕ್ರಮವಹಿಸಬೇಕಾಗಿದೆ. ತುಮಕೂರು ಮಹಾನಗರ ಪಾಲಿಕೆ ಮಹಾಪೌರರು ಮತ್ತು ಆಯುಕ್ತರು ತಕ್ಷಣ ಸ್ಲಂ ಜನರ ಕುಂದುಕೊರತೆ ಸಭೆ ಕರೆಯಬೇಕು. ತುಮಕೂರು ನಗರದ ಸ್ಲಂ ಸಮಸ್ಯೆಗಳು ಜ್ವಾಲಂತವಾಗಿವೆ, ನಗರ ನಿವೇಶನ ರಹಿತ 400 ಕುಟುಂಬಗಳು ಸುಮಾರು 3 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಈ ಹೋರಾಟ ಮನಗಂಡ ಮಾನ್ಯ ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ರವರು ನಗರದಲ್ಲಿರುವ ಸರ್ಕಾರಿ ಜಾಗಗಳನ್ನು ಹುಡುಕಿ 17 ಎಕರೆ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದ್ದಾರೆ ಹಾಗೂ ಸ್ಲಂ ಜನರ ಕುಂದು ಕೊರತೆ ಸಭೆಯಲ್ಲಿ 400 ನಿವೇಶನ ರಹಿತ ಕುಟುಂಬಗಳನ್ನು ವಿಶೇಷ ಪ್ರಕರಣವೆಂದು ಭಾವಿಸಿ ವಸತಿ ಕಲ್ಪಿಸಲು 5 ಎಕರೆ ಭೂಮಿ ಮೀಸಲಿರಿಸಿ ಸ್ಲಂ ಬೋರ್ಡ್ ಹಸ್ತಾಂತರಿಸಲು ಸೂಚಿಸಿದ್ದಾರೆ. ಆದರೆ ಪಾಲಿಕೆ ನಿರ್ಲಕ್ಷ್ಯವೆಸಗಿರುವುದು ಸ್ಲಂ ಜನರ ವಿರೋಧಿ ನಡೆಯಾಗಿದೆ ಎಂದು ಆರೋಪಿಸಿದ ಅವರು, ನಗರದ ವಾರ್ಡ್ ಸಂಖ್ಯೆ 1 ರ ಎಸ್.ಎನ್ ಪಾಳ್ಯ, 3 ರ ಅಮಾನಿಕೆರೆ ಕೋಡಿಹಳ್ಳ ಗುಡಿಸಲು ಪ್ರದೇಶ, ಮತ್ತು ವಾರ್ಡ್ ನಂ, 22 ರ ಭಾರತಿ ನಗರ ಸ್ಲಂಗಳು ಮಳೆ ಬಂದಾಗ ಮನೆಗಳಿಗೆ ಹಾನಿಯಾಗಿ ಬೀದಿ ಸೇರುವ ಪರಿಸ್ಥಿತಿ ಇರುವುದರಿಂದ 3 ಸ್ಲಂಗಳಿಗೆ ತಡೆಗೋಡೆ ನಿರ್ಮಿಸಬೇಕು. ಹಾಗೂ 24*7 ಯೋಜನೆಯಡಿ ಸ್ಲಂ ನಿವಾಸಿಗಳಿಗೆ ಮೀಟರ್ ಪದ್ಧತಿಯನ್ನು ಹಿಂಪಡೆದು 10 ಸಾವಿರ ಲೀಟರ್ ಪ್ರತಿಕುಟುಂಬಗಳಿಗೆ ಉಚಿತವಾಗಿ ನೀಡಬೇಕು. ಸ್ಲಂವಾರು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ 188 ಪರಿಶಿಷ್ಟ ಜಾತಿ/ಪಂಗಡ ಪಲಾನುಭವಿಗಳಿಗೆ ಪಾಲಿಕೆ ಆಶ್ರಯ ಸಮಿತಿಯಲ್ಲಿ ನಿಗಧಿಪಡಿಸಿರುವ 1 ಕೋಟಿ 22 ಲಕ್ಷ ರೂಗಳನ್ನು ತುತರ್ಾಗಿ ಮಂಜೂರು ಮಾಡಿ ಸ್ಲಂ ನಿವಾಸಿಗಳು ಸೂರು ಕಟ್ಟಿಕೊಳ್ಳಲು ಹಣ ಬಿಡುಗಡೆ ಮಾಡಬೇಕು. ನಗರದ ವಾರ್ಡ್ ನಂ 16ರ ಸಂಪಾಧನೆ ಮಠ ಸ್ಲಂ ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ನೀಡಲು ಎನ್.ಒ.ಸಿ ನೀಡಬೇಕು. ಸ್ಲಂ ನಿವಾಸಿಗಳಿಗೆ ಈ ಸಾಲಿನ ಬಜೆಟ್ನಲ್ಲಿ ಅನುಧನಾ ಮೀಸಲಿಡಬೇಕು ಎಂದು ಒತ್ತಾಯಿಸಿದ ಅವರು ಈ ಮೇಲ್ಕಂಡ ಸಮಸ್ಯೆಗಳನ್ನು ತುತರ್ಾಗಿ ಪರಿಗಣಿಸದಿದಲ್ಲಿ ದಲಿತ, ಸ್ಲಂ ಜನರ ವಿರೋಧಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪ್ರತಿಭಟನೆಗೆ ತಡವಾಗಿ ಬಂದು ಮನವಿ ಸ್ವೀಕರಿಸಿ ಮಾತನಾಡಿದ ಮಹಾಪೌರರು, ತುಮಕೂರು ಸ್ಲಂ ಸಮಿತಿ ನೀಡಿರುವ ಬೇಡಿಕೆಗಳನ್ನು ಈಡೇರಿಸಲಿದೆ. ಸ್ಲಂ ಜನರ ಪರವಾದ ತೀರ್ಮಾನಗಳನ್ನು ಕೈಗೊಳ್ಳುತ್ತೇವೆ. ಪಿಎಂಎವೈ ಯೋಜನೆಯಡಿ ಸ್ಲಂಗಳಲ್ಲಿ ನಿರ್ಮಾಣವಾಗುತ್ತಿರುವ ಮನೆಗಳಿಗೆ ವಂತಿಕೆ ಹಣವನ್ನು ಪಾಲಿಕೆ ಭರಿಸಲು ತುರ್ತು ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ಅತಂತ್ರಗೊಂಡಿರುವ ಸ್ಲಂಗಳಿಗೆ ತಡೆಗೋಡೆ ನಿರ್ಮಿಸಲು ಡಿಪಿಆರ್ ಗೆ ಮುಂದಾಗುತ್ತೇವೆ, ನಿವೇಶನ ರಹಿತರ ಕುಟುಂಬಗಳಿಗೆ 5 ಎಕರೆ ಭೂಮಿ ಮಂಜೂರಾತಿಗಾಗಿ ಆಶ್ರಯ ಸಮಿತಿ ಗಮನಕ್ಕೆ ತಂದು ಸ್ಲಂ ನಿವಾಸಿಗಳ ಸಮಸ್ಯೆಗಳನ್ನು ಭಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದ ತಿಳಿಸಿದರು. ಈ ವೇಳೆ ಆರೋಗ್ಯ ಮತ್ತು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀಣಾ ಮನೋಹರ್ ಗೌಡ ಜೊತೆಯಲ್ಲಿದ್ದರು.

ನಂತರ ಮನವಿ ಸ್ವೀಕರಿಸಿ ಮಾತನಾಡಿದ ಉಪ ಆಯುಕ್ತರಾದ ಗಿರೀಶ್ ಮಾನ್ಯ ಆಯುಕ್ತರು ಚುನಾವಣೆ ತರಬೇತಿಗೆ ಹೋಗಿದ್ದಾರೆ. ಇಂದೇ ನಗರಾಭಿವೃದ್ಧಿಗೆ ಪತ್ರ ಬರೆದು 1.22 ಕೋಟಿ ಬಿಡುಗಡೆಗೆ ಕ್ರಮವಹಿಸಲಾಗುವುದು. ಸ್ಲಂ ಜನರ ಬೇಡಿಕೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ತುರ್ತು ಪರಿಹರಿಸುವ ಕೆಲಸ ಮಾಡುತ್ತೇನೆ. ಸ್ಲಂ ಜನರು ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ ಎಂದರೆ ನಮಗೆ ಖುಷಿ ತರುವ ವಿಚಾರ, ಸಂಪಾಧನೆ ಮಠ ಸ್ಲಂ ನಿವಾಸಿಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ಎನ್.ಓ.ಸಿ ನೀಡಲು ಕ್ರಮವಹಿಸುತ್ತೇವೆ ಎಂದರು.

ಪ್ರತಿಭಟನೆಯನ್ನು ಬೆಂಬಲಿಸಿ ಪಾಲಿಕೆ ವಿರೋಧಪಕ್ಷದ ನಾಯಕರಾದ ವಿಷ್ಣುವರ್ಧನ್ ಮಾತನಾಡಿ ಹೋರಾಟ ಸಂವಿಧಾನಬದ್ಧ ಹಕ್ಕು, ಸ್ಲಂ ನಿವಾಸಿಗಳ ಹೋರಾಟ ಪಿಎಂಎವೈ ಮನೆಗಳ ನಿರ್ಮಾಣಕ್ಕೆಂದು ಈಗಾಗಲೇ ಆಶ್ರಯ ಸಮಿತಿ ಮತ್ತು ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿರುವಂತೆ 35 ವಾರ್ಡ್ ಪಾಲಿಕೆ ಸದಸ್ಯರುಗಳು ಸ್ಲಂ ನಿವಾಸಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಮೀಸಲಿಟ್ಟಿರುವ 1 ಕೋಟಿ 22 ಲಕ್ಷ ನೀಡಲು ಯಾವ ಅಭ್ಯಂತರಗಳು ಇಲ್ಲವೆಂದು ಒಮ್ಮತದಿಂದ ತೀರ್ಮಾನಿಸಲಾಗಿದೆ. ನಾನು ಹೋರಾಟದ ಮೂಲದಿಂದ ಬಂದಿರುವುದರಿಂದ ಸ್ಲಂ ನಿವಾಸಿಗಳ ಸಂವಿಧಾನ ಬದ್ಧ ಬೇಡಿಕೆಗಳನ್ನು ಈಡೇರಿಸಲು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ಸದಾ ನಿಮ್ಮ ಹೋರಾಟದಲ್ಲಿ ನಾನು ಇರುತ್ತೆನೆ ಎಂದರು.

ಈ ಸಂದರ್ಭದಲ್ಲಿ ತುಮಕೂರು ಸ್ಲಂ ಸಮಿತಿಯ ಕಾರ್ಯದರ್ಶಿ ಅರುಣ್ ಪದಾಧಿಕಾರಿಗಳಾದ ಶಂಕ್ರಯ್ಯ, ಜಾಬೀರ್ಖಾನ್, ಪುಟ್ಟರಾಜು, ತಿರುಮಲಯ್ಯ, ಗಣೇಶ್, ಕೆಂಪಣ್ಣ, ಗಂಗಮ್ಮ, ಶಾರದಮ್ಮ, ಚಿಕ್ಕನಾಗಮ್ಮ, ಅನುಪಮಾ, ಗುಲ್ನಾಜ್, ಅನುಪಮ, ಶಿವಕುಮಾರ್, ಹಯಾತ್ಸಾಬ್, ರಂಗನಾಥ್,ಟಿ.ಆರ್ ಮೋಹನ್ ನಿವೇಶನ ರಹಿತ ಹೋರಾಟ ಸಮಿತಿಯ ಮಂಗಳಮ್ಮ, ತಿರುಮಲ, ಹನುಮಕ್ಕ, 300 ಕ್ಕೂ ಹೆಚ್ಚು ಮಹಿಳಾ ಪದಾಧಿಕಾರಿಗಳು ಹೋರಾಟದಲ್ಲಿ ಪಾಲ್ಗೊಂಡಿದ್ದರು.

Related Articles

ಇತ್ತೀಚಿನ ಸುದ್ದಿಗಳು