• ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಹ್ವಾನ ಪತ್ರಿಕೆಯಲ್ಲಿಲ್ಲ ಎಸ್,ಎಂ.ಕೃಷ್ಣ ಹೆಸರು
• ಮಾಜಿ ಮುಖ್ಯಮಂತ್ರಿ ಹುದ್ದೆಯ ಯಡಿಯೂರಪ್ಪರಿಗಿದೆ ಆಹ್ವಾನ, ಎಸ್.ಎಂ.ಕೃಷ್ಣರಿಗೇಕಿಲ್ಲ
• ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂದಂತಾಯ್ತೆ ಎಸ್.ಎಂ ಕೃಷ್ಣ ಸ್ಥಿತಿ
ಬೆಂಗಳೂರು: ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಉದ್ಘಾಟನೆ ಮತ್ತು ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪುತ್ತಳಿ ಅನಾವರಣ ಕಾರ್ಯಕ್ರಮ ಅದ್ದೂರಿಯಾಗೇನೋ ನೆರವೇರಿದೆ. ಆದರೆ ಕಾರ್ಯಕ್ರಮದ ಆಹ್ವಾನದಲ್ಲಾದ ಗೊಂದಲದಿಂದ ರಾಜ್ಯ ಸರ್ಕಾರ ತೀವ್ರ ಮುಜುಗರಕ್ಕೆ ಈಡಾಗಿದೆ. ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡರಿಗೆ ಆಹ್ವಾನ ನೀಡದೇ ಜೆಡಿಎಸ್ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದ ರಾಜ್ಯ ಬಿಜೆಪಿ ಸರ್ಕಾರ ತನ್ನದೇ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರನ್ನೂ ಕಾರ್ಯಕ್ರಮದಿಂದ ಹೊರಗಿಟ್ಟು ಹೊಸ ವಿವಾದ ಸೃಷ್ಟಿಸಿಕೊಂಡಿದೆ.
ಕರ್ನಾಟಕಕ್ಕೆ ಈ ವರ್ಷ ಚುನಾವಣೆಯ ವರ್ಷ ಅನ್ನೋದು ಎಲ್ಲರಿಗೂ ತಿಳೆದಿರೋ ವಿಚಾರ. ಹಾಗಾಗಿ ಆಡಳಿತಾರೂಡ ಬಿಜೆಪಿ ಪಕ್ಷ ಮತ ಭೇಟೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಅದರ ಭಾಗವಾಗಿ ಜಾತಿಯಾಧಾರಿತವಾಗಿ ಒಂದೊಂದೇ ಅಸ್ತ್ರದ ಮೂಲಕ ಎಲ್ಲಾ ಜಾತಿ ಜನಾಂಗಗಳನ್ನೂ ಗುರಿಯಾಗಿಸಿ ಯೋಜನೆಗಳನ್ನು ರೂಪಿಸುತ್ತಿದೆ. ಇಂದಿನ ಕೆಂಪೇಗೌಡರ ಪುತ್ತಳಿ ಅನಾವರಣ ಕೂಡ ಈ ಯೋಜನೆಯ ಒಂದು ಭಾಗ ಅನ್ನೋದರಲ್ಲಿ ಎರಡು ಮಾತಿಲ್ಲ.
ಆದರೆ ಜಾತಿ ಜನಾಂಗಗಳ ವಿಶ್ವಾಸಕ್ಕೆ ತಗೆದುಕೊಳ್ಳುವ ಭರದಲ್ಲಿ ಬಿಜೆಪಿ ಗೊತ್ತಿದ್ದೋ ಗೊತ್ತಿಲ್ಲದೆಯೋ ದೊಡ್ಡ ದೊಡ್ಡ ಪ್ರಮಾಧವನ್ನೇ ಮಾಡಿ ಹಾಕುತ್ತಿದೆ. ಕೆಂಪೇಗೌಡರ ಪುತ್ತಳಿ ಅನಾವರಣದ ಹಿಂದೆ ಬಿಜೆಪಿ ಪಕ್ಷಕ್ಕೆ ರಾಜ್ಯ ಒಕ್ಕಲಿಗ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಉದ್ದೇಶ ಇಲ್ಲಿ ಗುಟ್ಟಾಗೇನು ಉಳಿದಿಲ್ಲ. ಆದರೆ ಸಮುದಾಯದ ಆಧಾರದಲ್ಲಿ ರಾಜ್ಯದ ಪ್ರಮುಖ ನಾಯಕರೆನಿಸಿಕೊಂಡ ದೇವೇಗೌಡರನ್ನು ಆಹ್ವಾನ ಪತ್ರಿಕೆಯಲ್ಲಿ ಕಡೆಗಣಿಸಿದ್ದು ಈಗ ಜೆಡಿಎಸ್ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದೆ. ದೇವೇಗೌಡರು ಸಮುದಾಯ ಮುಖಂಡರು ಅನ್ನೋದು ಬೇಡ.. ಕನಿಷ್ಟ ಒಬ್ಬ ಮಾಜಿ ಪ್ರಧಾನಿ ಅನ್ನೋ ಕಾರಣಕ್ಕಾಗಿಯಾದರೂ ಅವರಿಗೆ ಮಾನ್ಯತೆ ಕೊಡಬೇಕಿತ್ತು ಅನ್ನೋದು ಜೆಡಿಎಸ್ ಪಕ್ಷದ ವಲಯದಲ್ಲಿ ಕೇಳಿ ಬಂದ ಆಕ್ರೋಷದ ಮಾತು.
ಇದರ ನಡುವೆ ಬಿಜೆಪಿ ತನ್ನದೇ ಪಕ್ಷದ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರನ್ನೂ ಸಹ ಕಡೆಗಣಿಸಿರುವುದು ಹಲವಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಳೆದ ಬಾರಿ ಚುನಾವಣಾ ಸಂದರ್ಭದಲ್ಲಿ ಎಸ್.ಎಂ.ಕೃಷ್ಣರನ್ನು ಪಕ್ಷಕ್ಕೆ ಕರೆದುಕೊಂಡು ಎಲ್ಲಾ ರೀತಿಯ ಪ್ರಚಾರಗಳನ್ನೂ ಮಾಡಿಸಿ ಈಗ ಎಸ್ ಎಂ ಕೃಷ್ಣರನ್ನು ಹಂತಹಂತವಾಗಿ ನಿರ್ಲಕ್ಷಿಸಿರುವುದು ಒಕ್ಕಲಿಗ ಸಮುದಾಯ ಇದನ್ನು ಸೂಕ್ಷ್ಮವಾಗಿ ಅವಲೋಕಿಸುವಂತೆ ಮಾಡಿದೆ.

ಹಾಗೆ ನೋಡಿದರೆ ಕೆಂಪೇಗೌಡರ ಪುತ್ತಳಿ ಅನಾವರಣ, ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರಿಗಿಂತ ಹೆಚ್ಚು ಸೂಕ್ತ ಇರುವುದು ಮಾಜಿ ಎಸ್.ಎಂ.ಕೃಷ್ಣ ಅವರದ್ದು. ಮಾಜಿ ಪ್ರಧಾನಿ ದೇವೇಗೌಡರ ಅವದಿ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಅಧಿಕಾರಾವಧಿಯಲ್ಲಿ ಬೆಂಗಳೂರಿನ ಇನ್‌ಫ್ರಾಸ್ಟ್ರಕ್ಷರ್ ನ್ನು ಮುಖ್ಯವಾಗಿ ಹೆಚ್ಚು ಆಸಕ್ತಿ ವಹಿಸಿ ನಿರ್ಮಾಣ ಮಾಡಲಾಗಿತ್ತು. ಬೆಂಗಳೂರು ನಗರ ನಿರ್ಮಾಣದಲ್ಲಿ ವಿಶೇಷ ಕೊಡುಗೆ ನೀಡಿದ್ದ ಈ ಇಬ್ಬರು ನಾಯಕರನ್ನು ಬಿಜೆಪಿ ಸರ್ಕಾರ ಆಹ್ವಾನ ಪತ್ರದಲ್ಲಿ ಕಡೆಗಣಿಸಿದ್ದು ಹಲವಷ್ಟು ಅನುಮಾನ ಮತ್ತು ಆಕ್ರೋಷಕ್ಕೆ ಕಾರಣವಾಗಿದೆ.