Wednesday, June 26, 2024

ಸತ್ಯ | ನ್ಯಾಯ |ಧರ್ಮ

ರಾಹುಲ್ ವಯನಾಡಿನಲ್ಲೇ ಉಳಿದರೆ 5 ವರ್ಷದ ಹಿಂದಿನ ಅಮೇಥಿಯಂತೆ ಆಗಲಿದೆ : ಸ್ಮೃತಿ ಇರಾನಿ

ರಾಹುಲ್ ಗಾಂಧಿ ವಯನಾಡಿನಲ್ಲೇ ಉಳಿದರೆ ಆಗಿನ ಅಮೇಥಿಯಂತೆಯೇ ಆಗಲಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೇರಳ ರಾಜ್ಯದ ತಿರುವನಂತಪುರಂನಲ್ಲಿ ಭಾರತೀಯ ಮಜ್ದೂರ್ ಸಂಘ, ಕೇರಳ ಘಟಕವು ಆಯೋಜಿಸಿದ್ದ ರಾಜ್ಯ ಮಟ್ಟದ ಮಹಿಳಾ ಕಾರ್ಮಿಕ ಸಮಾವೇಶವನ್ನು ಉದ್ಘಾಟಿಸಿದ ನಂತರ, ರಾಹುಲ್ ಗಾಂಧಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ರಾಹುಲ್ ಗಾಂಧಿಯನ್ನು ಅಮೇಥಿಯಿಂದ ಹೊರ ಕಳಿಸಿದ ಅದೃಷ್ಟವನ್ನು ನಾನು ಹೊಂದಿದ್ದೇನೆ. ಹಾಗಾಗಿ ವಯನಾಡಿನ ಪ್ರಜೆಗಳು ಇದನ್ನು ಮನಗಾಣಬೇಕು’ ಎಂದು ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ರಾಹುಲ್ ಗಾಂಧಿಯವರು ಅಮೇಥಿ ಸಂಸದರಾಗಿದ್ದಾಗ ಅಲ್ಲಿನ ಶೇ 80ರಷ್ಟು ಜನರಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಅಗ್ನಿಶಾಮಕ ಠಾಣೆ, ವೈದ್ಯಕೀಯ ಕಾಲೇಜು, ಕೇಂದ್ರೀಯ ವಿದ್ಯಾಲಯ, ಸೈನಿಕ ಶಾಲೆ ಕೂಡಾ ಇರಲಿಲ್ಲ. ಅಮೇಥಿಯ ಜಿಲ್ಲಾಸ್ಪತ್ರೆಯಲ್ಲೇ ಡಯಾಲಿಸಿಸ್ ಘಟಕ ಇರಲಿಲ್ಲ. ಅವರು ಹೋದ ನಂತರ ಎಲ್ಲಾ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳು ಅಲ್ಲಿ ಸಿಕ್ಕಿವೆ” ಎಂದಿದ್ದಾರೆ.

“ಹೀಗಾಗಿ ಅವರು ವಯನಾಡಿನಲ್ಲೇ ಉಳಿದುಕೊಂಡರೆ, 5 ವರ್ಷಗಳ ಹಿಂದಿನ ಅಮೇಥಿಯಂತೆಯೇ ವಯನಾಡು ಕ್ಷೇತ್ರ ಅನುಭವಿಸಬೇಕಾಗಬಹುದು. ಆದ್ದರಿಂದ, ಅವರನ್ನು ಇಲ್ಲಿಂದಲೂ ಕಳುಹಿಸುವ ಪ್ರತಿಜ್ಞೆ ಮಾಡಬೇಕೆಂದು” ಕರೆ ನೀಡಿದರು.

‘ಮೋದಿ’ ನಾಮದೇಯದ ಪ್ರಕರಣದ ಅಡಿಯಲ್ಲಿ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯವು ಎರಡು ವರ್ಷಗಳ ಕಾಲ ಶಿಕ್ಷೆ ವಿಧಿಸಿತ್ತು. ಇದಕ್ಕಿಂತ ಮೊದಲು ರಾಹುಲ್ ಗಾಂಧಿ ಅವರು ವಯನಾಡ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. ಈ ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ರಾಹುಲ್ ಗಾಂಧಿ ಅವರ ಮನವಿಯ ತೀರ್ಪನ್ನು ಗುಜರಾತ್ ಹೈಕೋರ್ಟ್ ಕಾಯ್ದಿರಿಸಿದೆ.

ಹಾಗೆಯೇ ಇತ್ತೀಚೆಗೆ ಕೇರಳದ ತಾಲ್ಲೂಕು ಆಸ್ಪತ್ರೆಯೊಂದರಲ್ಲಿ ಮಹಿಳಾ ವೈದ್ಯೆ ವಂದನಾ ದಾಸ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿ ಕೇರಳದಲ್ಲಿ ಮಹಿಳಾ ಸುರಕ್ಷತೆಯ ಕೊರತೆ ಎದ್ದು ಕಾಣುತ್ತಿದೆ. ಕೇರಳದಲ್ಲಿ ಈ ರೀತಿಯ ಘಟನೆ ನಡೆದಿರುವುದು ನನಗೆ ಆಶ್ಚರ್ಯ ತಂದಿದೆ ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು