ಬೆಂಗಳೂರು : 11ನೇ ದಿನಕ್ಕೆ ಕಾಲಿಟ್ಟಿರುವ ಇರಾನ್-ಇಸ್ರೇಲ್ (Iran-Israel) ಯುದ್ಧದ ಪರಿಣಾಮದಿಂದಾಗಿ ಇಡೀ ಜಗತ್ತಿಗೆ ಕಚ್ಚಾ ತೈಲ ಸರಬರಾಜಿನಲ್ಲಿ ಭಾರೀ ವ್ಯತ್ಯಯವಾಗಿದೆ. ವಾರ್ ಎಫೆಕ್ಟ್ನಿಂದ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸರಬರಾಜು ಸ್ಥಗಿತವಾಗಿದೆ. ಅಲ್ಲದೇ ಮೊನ್ನೆಯಷ್ಟೇ ಮನೆ ಬಳಕೆ ಎಲ್ಪಿಜಿ ದರ 60 ರೂಪಾಯಿ ಹೆಚ್ಚಾಗಿದ್ದು, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಅವರು ಆಕ್ರೋಶ ಹೊರಹಾಕಿದ್ದಾರೆ.
ಅಡುಗೆ ಅನಿಲದ ಬೆಲೆ 60ರೂ. ಏರಿಕೆ ಮಾಡುವ ಮೂಲಕ ಮಹಿಳೆಯರಿಗೆ ಉಡುಗೊರೆ ನೀಡಿರುವ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲು ಬಯಸುವೆ ಎಂದು ವ್ಯಂಗ್ಯವಾಡಿದರು. ಈ ಬಗ್ಗೆ ಮಾತನಾಡಲು ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಕಾಣಿಸುತ್ತಿಲ್ಲ ಎಂದು ಲೇವಡಿ ಮಾಡಿದರು.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆಯವರು, ಈ ಹಿಂದೆ 10, 20 ರೂಪಾಯಿ ಏರಿಕೆ ಮಾಡಿದರೂ ಸ್ಮೃತಿ ಇರಾನಿ ಬಾಯಿ ಬಡ್ಕೊಂಡು ಹೋರಾಟ ಮಾಡುತ್ತಿದ್ದರು. ಯಾಕೆ ಈಗ ಮಾತಾಡುತ್ತಿಲ್ಲ, ಎಲ್ಲಿ ಕಾಣೆಯಾಗಿದ್ದಾರೆ ಎಂದು ಪ್ರಶ್ನಿಸಿದರು. ಈಗ ಯುದ್ಧ ನಡೆಯುತ್ತಿದ್ದು, ಇದರಿಂದ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆಯಾಗುತ್ತಿದೆ. ಈಗಷ್ಟೇ ಸಂಕಷ್ಟ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಕೇಂದ್ರ ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಗ್ರಾಹಕರ ಹಾಗೂ ಹೋಟೆಲ್ ನವರ ಹಿತದೃಷ್ಟಿಯನ್ನು ಕಾಪಾಡಬೇಕು ಎಂದು ಸಚಿವೆ ಹೇಳಿದರು.
