Tuesday, October 29, 2024

ಸತ್ಯ | ನ್ಯಾಯ |ಧರ್ಮ

ಮುಡಾ ಹಗರಣದಲ್ಲಿ ಮಹತ್ತರ ವಿಡಿಯೋ ಸಾಕ್ಷಿ ಲಭ್ಯ, ಸಿಎಂ ಆಪ್ತರ ಮನೆಯಲ್ಲಿ ಇಡಿ ಶೋಧ

ಬೆಂಗಳೂರು, ಅಕ್ಟೋಬರ್ 28: ಮುಡಾ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಬಲವಾದ ಸಾಕ್ಷ್ಯಾಧಾರಗಳು ಸಿಕ್ಕಿವೆ. ಮುಡಾ ಹಗರಣದ ದೂರುದಾರರಲ್ಲಿ ಒಬ್ಬರಾದ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸೋಮವಾರ ಇಡಿಗೆ ವಿಡಿಯೋವನ್ನು ಹಸ್ತಾಂತರಿಸಿದ್ದು, ಈ ಹಗರಣದಲ್ಲಿ ಹಣ ಕೈ ಬದಲಾಗಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡಿದೆ. ಕಾರಿನ ಹಿಂಬದಿಯ ಸೀಟಿನಲ್ಲಿ ನೋಟುಗಳ ಬಂಡಲ್‌ಗಳನ್ನು ಎಣಿಸುತ್ತಿರುವುದನ್ನು ಹಾಗೂ 25 ಲಕ್ಷ ರೂಪಾಯಿ ಕೈ ಬದಲಾಯಿಸುತ್ತಿರುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಸಂಬಂಧ ಅವರು ಇಡಿ ಹೆಚ್ಚುವರಿ ನಿರ್ದೇಶಕರಿಗೆ ಪತ್ರ ಬರೆದು, ವೀಡಿಯೋ ಕುರಿತು ತನಿಖೆ ನಡೆಸಿ, ಅದರಲ್ಲಿ ಕಾಣುವವರಿಗೆ ಸಮನ್ಸ್ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಸಿಎಂ ಆಪ್ತರ ಮನೆಯಲ್ಲಿ ಶೋಧ

ಮುಡಾ ಹಗರಣದಲ್ಲಿ ಕರ್ನಾಟಕದಲ್ಲಿ ಇಡಿ ತನಿಖೆ ಮುಂದುವರೆದಿದೆ. ಸೋಮವಾರ ಬೆಂಗಳೂರು ಮತ್ತು ಮೈಸೂರಿನ ಏಳೆಂಟು ಪ್ರದೇಶಗಳಲ್ಲಿ ಶೋಧ ನಡೆಸಲಾಗಿದೆ. ಮೈಸೂರಿನಲ್ಲಿರುವ ಸಿದ್ದರಾಮಯ್ಯ ಅವರ ಆಪ್ತ ಸ್ನೇಹಿತ ರಾಕೇಶ್ ಪಾಪಣ್ಣ ಅವರ ಮನೆಯಲ್ಲಿ ಇಡಿ ಶೋಧ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ. ನಂತರ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಮುಡಾ ಮಾಜಿ ಆಯುಕ್ತರಾದ ಜಿಟಿ ದಿನೇಶ್ ಕುಮಾರ್ ಮತ್ತು ಡಿಬಿ ನಟೇಶ್ ಅವರ ಮನೆಗಳ ಜೊತೆಗೆ ಬೆಂಗಳೂರಿನ ಬಿಲ್ಡರ್ ಮನೆ ಮೇಲೆ ಇಡಿ ದಾಳಿ ನಡೆಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page