Saturday, June 15, 2024

ಸತ್ಯ | ನ್ಯಾಯ |ಧರ್ಮ

ಸೋಶಿಯಲ್ ಮೀಡಿಯಾ‌ ಗೀಳು ಮತ್ತು ಯುವಜನತೆ

ಯಾವುದೇ ಒಂದು ಆಪ್ ಬಳಸುತ್ತಿದ್ದೇವೆ ಅಂದರೆ ಅದು ನಮಗೆ ಎಷ್ಟು ಉಪಯುಕ್ತ ? ಯಾಕಾಗಿ ಬಳಸಬೇಕು? ನಮ್ಮ ಮನಸ್ಸನ್ನು ಆ ಆಪ್ ಹೇಗೆಲ್ಲ ವಿಚಲಿತ ಗೊಳಿಸಬಲ್ಲದು ಎಂಬುದನ್ನು ಯುವ ಜನರು ಅರ್ಥ ಮಾಡಿಕೊಳ್ಳಲೇ ಬೇಕು. ಇದು ಪ್ರಿಯಾಂಕಾ ಮಾವಿನಕರ್ ಅವರ ಯುವನೋಟ

ಇತ್ತೀಚಿನ ದಿನಗಳಲ್ಲಿ ಯುವಜನರು ಅತಿ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕಾಲವನ್ನು ಕಳೆಯುತ್ತಿದ್ದಾರೆ.  ಸೋಶಿಯಲ್ ಮೀಡಿಯಾ  ಬಳಸುವವರ ಸಂಖ್ಯೆಯು ಕೂಡ  ನಮ್ಮ ದೇಶದಲ್ಲಿ ಅತಿ ಹೆಚ್ಚಾಗಿದೆ. ಅದರಲ್ಲೂ ಯುವಜನರು ಇದಕ್ಕೆ ಅಂಟಿಕೊಂಡೆ ಬದುಕುತ್ತಿದ್ದಾರೆ. ಈಗೀಗ ಓದು ಬರಹಕ್ಕಿಂತಲೂ ರೀಲ್ಸ್ ಮಾಡುವುದರಲ್ಲಿ ಹೆಚ್ಚು ಹೆಚ್ಚಾಗಿ ಆಸಕ್ತಿ ತೋರಿಸ್ತಿದ್ದಾರೆ. ಹಾಗಂತೂ ರೀಲ್ಸ್ ಮಾಡುವುದು ತಪ್ಪು ಎಂದಲ್ಲ, ಮಾಡಬಾರದು ಅಂತಾನೂ ಅಲ್ಲ. ಟಿಕ್ ಟಾಕ್, ರೀಲ್ಸ್ ಗಳಿಂದಾಗಿ ಅನೇಕ‌ ಕಲಾವಿದರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕಿರುತೆರೆ ಮತ್ತು ಬೆಳ್ಳಿ ತೆರೆಯ ಮೇಲೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಸೈ ಎನ್ನಿಸಿಕೊಂಡವರು ಇದ್ದಾರೆ. ಮತ್ತೆ ಇನ್ನು ಕೆಲವರ  ರೀಲ್ಸ್ ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಮಾಡಿದ್ದವುಗಳಾಗಿವೆ.

ಈ ಮೊದಲು ಸೋಶಿಯಲ್ ಮೀಡಿಯಾವೆಂದರೆ  ವಾಟ್ಸ್ಯಾಪ್‌,  ಫೇಸ್‌ಬುಕ್‌, ಇ ಮೇಲ್ ಅಷ್ಟೇ ಇದ್ದವು. ಇತ್ತೀಚಿನ  ದಿನಗಳಲ್ಲಿ ಇನ್ಸ್ಟಾಗ್ರಾಂ, ಟೆಲಿಗ್ರಾಂ, ಟಿಕ್‌ ಟಾಕ್‌, ರೀಲ್ಸ್‌ ಹೊಸ ಹೊಸ ಆಪ್ ಗಳು ಯುವಜನರ ಮನಸ್ಸಿನಲ್ಲಿ ಗಾಢವಾಗಿ ಅಚ್ಚೊತ್ತಿ ಕುಂತಿವೆ. ಮತ್ತೆ ಅತೀ ಹೆಚ್ಚಿನ ಬಳಕೆಯ ಮಾಧ್ಯಮಗಳಾಗಿ ತಲೆ ಎತ್ತಿ ನಿಂತಿವೆ.

ಆದರೆ ಯಾವುದನ್ನು ಎಷ್ಟು ಬಳಸಬೇಕು ಎಂಬುದನ್ನು  ಇಂದಿನ ಯುವಜನರೆ  ನಿರ್ಣಯಿಸ ಬೇಕಾಗಿದೆ.  ಯಾವುದಕ್ಕಾಗಿ ಬಳಸುತ್ತಿದ್ದೇವೆ, ಈ ರೀಲ್ಸ್ ಗೀಳು ನಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಎಂಬುದರ ಬಗ್ಗೆ ಯುವಜನರು ಆಲೋಚಿಸಬೇಕು.

ಮೊನ್ನೆ ಆಳಂದ ತಾಲೂಕಿನ ಕೊರಳ್ಳಿ ಗ್ರಾಮದಲ್ಲಿ 14 ವರ್ಷದ ಹುಡುಗಿಯ ಮೇಲೆ 16  ವರ್ಷದ ಹುಡುಗರು ಅತ್ಯಾಚಾರ ಮಾಡಿ ಕೊಲೆ ಮಾಡಿದ ಘಟನೆ ನೋಡಿದ್ದೇವೆ, ಕೇಳಿದ್ದೇವೆ‌. ಅತ್ಯಾಚಾರ ಮಾಡಿದ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಮೊಬೈಲ್ ನಲ್ಲಿ ಅಶ್ಲೀಲ ‌ವಿಡಿಯೋಗಳನ್ನು ನೋಡಿ ಆ ಬಾಲಕಿಯ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು‌ ಪೊಲೀಸ್ ವಿಚಾರಣೆಯಲ್ಲಿ ತಿಳಿದು ಬಂದಿದೆ.‌

ಯಾವುದೇ ಒಂದು ಆಪ್ (App.) ಬಳಸುತ್ತಿದ್ದೇವೆ ಅಂದರೆ ಅದು ನಮಗೆ ಎಷ್ಟು ಉಪಯುಕ್ತ ? ಯಾಕಾಗಿ ಬಳಸ ಬೇಕು? ನಮ್ಮ ಮನಸ್ಸನ್ನು ಆ ಆಪ್ ಹೇಗೆಲ್ಲ ವಿಚಲಿತ ಗೊಳಿಸಬಲ್ಲದು ಎಂಬುದನ್ನು ಯುವ ಜನರು ಅರ್ಥ ಮಾಡಿಕೊಳ್ಳಲೇ ಬೇಕು.

ವಿಡಿಯೋ, ಫೋಟೋ, ಗೇಮ್ಸ್  ಮಕ್ಕಳ ಮೇಲೆ ಅತಿ  ಹೆಚ್ಚು ಪರಿಣಾಮ ಬೀರುವಂತವುಗಳಾಗಿವೆ. ತಂದೆ ತಾಯಿಗಳು ಕೂಡ ಮಕ್ಕಳ ಮೇಲೆ ನಿಗಾ ಇಡುವುದು ತುಂಬಾ ಮುಖ್ಯ. ಯಾವುದಕ್ಕೆ ಮೊಬೈಲ್ ಬಳಸಬೇಕು, ಯಾವುದಕ್ಕೆ ಬೇಡ ಎಂಬ ಅರಿವು ಇಂದಿನ ಮಕ್ಕಳಿಗೆ  ಮತ್ತು ಯುವಜನತೆಗೆ  ಅರ್ಥ ಮಾಡಿಸುವ ತುರ್ತಿದೆ. ಈ ಹಿಂದೆ ಟಿಕ್ ಟಾಕ್ ನಲ್ಲಿ ರೀಲ್ಸ್ ಮಾಡಲು ಹೋಗಿ ಅನೇಕ ಯುವಜನರು ತಮ್ಮ  ಪ್ರಾಣವನ್ನೆ ಕಳೆದು ಕೊಂಡಿರುವ ಉದಾಹರಣೆ ನಮ್ಮೆಲ್ಲರ ಕಣ್ಮುಂದೆ ಇದೆ.   

ಇನ್ನು ಕೆಲವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹೋಗಿ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸದೆ‌ ಕೈ, ಕಾಲು ಮುರಿದುಕೊಂಡು, ಪ್ರಾಣವನ್ನು ಕಳೆದು ಕೊಂಡು ಅಪ್ಪ ಅಮ್ಮನನ್ನು  ಕಣ್ಣೀರಿನಲ್ಲೆ ಕೈ ತೊಳೆಯುವಂತೆ ಮಾಡಿದ್ದಾರೆ.  ಹುಡುಗಿಯರು ಈ ರೀಲ್ಸ್, ಟಿಕ್ ಟಾಕ್ ನಿಂದ  ಮಾನಸಿಕವಾಗಿ ಹಿಂಸೆಗೊಳಗಾದ ಉದಾಹರಣೆಗಳು ಬೇಕಾದಷ್ಟಿವೆ. ಒಬ್ಬ ಹೆಣ್ಣುಮಗಳು ಡಾನ್ಸ್ ಮಾಡಿದ ವಿಡಿಯೋ ಏನಾದ್ರೂ ಅಪ್ಲೋಡ್ ಮಾಡಿದ್ರೆ ಅದಕ್ಕೆ ಬರುವ ಕಾಮೆಂಟ್ಸ್ ಗಳು ಬಹಳ  ಕೆಟ್ಟದಾಗಿರುತ್ತವೆ. ಇನ್ನು ಕೆಲವು ಪುಂಡರ “ಬನ್ನಿ ಫ್ರೆಂಡ್ಸ್ ಕಾಮೆಂಟ್ ತಜ್ಞರ ಅಭಿಪ್ರಾಯ ಕೇಳೋಣ ಎಂಬ ವ್ಯಂಗ್ಯವಾದ ಮಾತು ಬೇರೆ. ಅಶ್ಲೀಲ ಕಾಮೆಂಟ್ಸ್ ಗಳನ್ನು ನೋಡಿದರೆ ಹೆಣ್ಣನ್ನು ಭೋಗದ ವಸ್ತುವಾಗಿಯೇ ನೋಡುವುದು ಕಂಡು ಬರುತ್ತದೆ. ಅವಳಿಗೂ ಘನತೆಯ ಬದುಕಿದೆ. ಗಂಡು ಏನಾದರೂ ಮಾಡಬಹುದು. ಆದರೆ ಹೆಣ್ಣುಮಕ್ಕಳಿಗೆ ಅವಕಾಶಗಳೇ ಇಲ್ವಾ.? ಹಾಗೆಲ್ಲ ಕಾಮೆಂಟ್ಸ್  ಹಾಕುವ ಗಂಡು ಮನಸ್ಥಿತಿಗಳ ಬಗ್ಗೆ ನಿಜಕ್ಕೂ ಭಯ ಆಗುತ್ತೆ.

ಈ ಹಿಂದೆ ಒಮ್ಮೆ ಒಂದು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಭಾಳ ವೈರಲ್ ಆಗಿತ್ತು ” ಯಾಕಣ್ಣ” ಎಂಬುದು. ಆ ಹೆಣ್ಣುಮಕ್ಕಳ ಖಾಸಗಿ ವಿಷಯವನ್ನು ವಿಡಿಯೋ ಮಾಡಿ ಹರಿದಾಡಲು ಬಿಟ್ಟ ಆ ಗಂಡು ಮನಸ್ಥಿತಿಗೆ ಹೇಗೆ  ಅರ್ಥ ಆದೀತು ಅವಳು ಅನುಭವಿಸಿದ ಅವಮಾನ, ಮಾನಸಿಕ ಹಿಂಸೆ. ಅವಳ ಸ್ಥಿತಿ ಏನಾಯ್ತು ಎಂಬುದನ್ನು ಆಧಾರವಾಗಿ ಇಟ್ಟುಕೊಂಡೆ ಕನ್ನಡದಲ್ಲಿ  ʼಪಬ್ಲಿಕ್‌ ಟಾಯಿಲೆಟ್‌ʼ ಎಂಬ ಕಿರುಚಿತ್ರ ಮಾಡಿದ್ದಾರೆ. ಅವನು ಕೂಡ ಖಿನ್ನತೆಗೆ ಒಳಗಾದ ಬಗ್ಗೆ ಇದರಲ್ಲಿ ವಿವರಿಸಲಾಗಿದೆ.

ರೀಲ್ಸ್ ಮಾಡುವವರಿಗಾಗಿ ಈ ಮಾತು.

2019 ರಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಗೊಡೆಕೆರೆಯ ಕುಮಾರ ಎನ್ನುವ ಯುವಕ ಟಿಕ್ ಟಾಕ್ ಮಾಡಲು ಹೋಗಿ ಬೆನ್ನುಹುರಿ ಮುರಿದುಕೊಂಡು ಮೃತ ಪಟ್ಟಿದ್ದನು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗನನ್ನೆ ನಂಬಿಕೊಂಡ ವಯಸ್ಸಾದ ತಂದೆ ತಾಯಿಗೆ ಆಸರೆಯಾಗಿ ನಿಲ್ಲಬೇಕಾದ ಮಗ ಟಿಕ್ ಟಾಕ್ ಎಂಬ ಮಾಯಾ ಜಾಲದಲ್ಲಿ ಸಿಲುಕಿ ಪ್ರಾಣವನ್ನೆ ಕಳೆದುಕೊಂಡ ಘಟನೆಯು ನಮ್ಮೆದುರಿಗೇ ಇದೆ.

ಇತ್ತೀಚಿನ ಭಾಳ ಸುದ್ದಿಯಲ್ಲಿದ್ದ ಮಂಗಳೂರಿನ “ಕಾಫಿ ನಾಡು ಚಂದು” ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಹೆಚ್ಚು ಸದ್ದು ಮಾಡಿದ್ದವು. ಯಾರದೇ ಹುಟ್ಟುಹಬ್ಬ ಇರಲಿ ಕಾಫಿ ನಾಡ ಚಂದು ಸ್ವತಃ ಹಾಡು ರಚಿಸಿ ಹಾಡಿ, ಹೊಗಳಿ ವಿಷ್ ಮಾಡಿದ್ದು ಇದೆ‌.‌ ಆದರೆ  ಜನರು ಅವರನ್ನು ಮಾನಸಿಕವಾಗಿ, ಭಾವನಾತ್ಮಕವಾಗಿ ಹಿಂಸೆಗೆ ಒಳಪಡಿಸಿದ್ದಾರೆ. ಅವರು ಮಾಡಿದ ಎಲ್ಲ ವಿಡಿಯೋಗಳನ್ನು ಅಳಿಸಿಹಾಕಿದ್ದಾರೆ. ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸ ಬೇಕಾದವರೆ ಹೊಸಕಿ ಹಾಕುವುದು ಎಷ್ಟು ಸರಿ.?

ವಿದ್ಯಾರ್ಥಿಗಳು, ಯುವಜನತೆ  ಮೊದಲು ಓದಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ನಮ್ಮ ಸುತ್ತ ಮುತ್ತ ಏನ್ ನಡೀತಿದೆ, ಯಾಕೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ? ಯುವಜನರಿಗೆ ಯಾಕೆ ಉದ್ಯೋಗ ಸಿಗುತ್ತಿಲ್ಲ? ಅತ್ಯಾಚಾರಗಳೇಕೆ ಹೆಚ್ಚಾಗುತ್ತಿವೆ? ಎಂಬುದನ್ನು ಇಂದಿನ ಯುವಜನರು ಯೋಚಿಸ ಬೇಕು. ಹೀಗೆ ಯೋಚಿಸುವಂತೆ  ತಮ್ಮ ಬದುಕನ್ನು ರೂಪಿಸಿ ಕೊಳ್ಳಬೇಕಿದೆ. ಎಲ್ಲರಿಗೂ ಸಮ ಪಾಲು ಎಲ್ಲರಿಗೂ ಸಮ ಬಾಳು ನಮ್ಮ ನೆಲದಲ್ಲಿ ಇದೆಯೇ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಮುನ್ನಡೆಯಬೇಕಿದೆ.

ಪ್ರಿಯಾಂಕಾ ಮಾವಿನಕರ್

ಹವ್ಯಾಸಿ ಬರಹಗಾರ್ತಿ, ಕಲಬುರುಗಿ.

Related Articles

ಇತ್ತೀಚಿನ ಸುದ್ದಿಗಳು