Tuesday, June 18, 2024

ಸತ್ಯ | ನ್ಯಾಯ |ಧರ್ಮ

ಜಬಲ್ಪುರದಲ್ಲಿ ನಡೆದ ಭೀಕರ ಕೊಲೆ ; ಜಾಲತಾಣದಲ್ಲಿ ಕೊಲೆಯ ಮಾಹಿತಿ ಬಿಟ್ಟ ಆರೋಪಿ

ದೇಶದಾದ್ಯಂತ ಸಂಚಲನ ಮೂಡಿಸಿ ಭಯಾನಕ ವಿವರಗಳೊಂದಿಗೆ ಸುದ್ದಿಯಾಗಿರುವ ದೆಹಲಿ ಶ್ರದ್ಧಾ ಕೊಲೆ ಪ್ರಕರಣದ ಬೆನ್ನಲ್ಲೇ, ಇದೇ ರೀತಿಯ ಮತ್ತೊಂದು ಭಯಾನಕ ಪ್ರಕರಣ ಮಧ್ಯಪ್ರದೇಶದ ಕಡೆಯಿಂದ ಸುದ್ದಿಯಾಗುತ್ತಿದೆ. ಅಭಿಜಿತ್ ಪಾಟಿದಾರ್ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣಗಳ ಮೂಲಕ ತಾನು ಕೊಲೆ ಮಾಡಿದ್ದನ್ನು ಬಹಿರಂಗಪಡಿಸಿದ್ದಾನೆ.

ಇಂತಹ ಭಯಾನಕ ಪ್ರಕರಣವೊಂದು ನಡೆದು ಒಂದು ವಾರದ ಮೇಲಾದರೂ ಕೊಲೆಗಾರ ಅಭಿಜಿತ್ ಪಾಟಿದಾರ್ ನನ್ನು ಬಂಧಿಸಲು ಮಧ್ಯಪ್ರದೇಶ ಪೊಲೀಸರು ವಿಫಲರಾಗಿದ್ದಾರೆ. ದುರಂತ ಎಂದರೆ ದೆಹಲಿ ಶ್ರದ್ಧಾ ಕೊಲೆ ಪ್ರಕರಣದ ಬಗ್ಗೆ ಮೇಲಿಂದ ಮೇಲೆ ವರದಿ ನೀಡುತ್ತಿರುವ ಮುಖ್ಯವಾಹಿನಿಯ ಬಹುತೇಕ ಮಾಧ್ಯಮಗಳು ಮಧ್ಯಪ್ರದೇಶದ ಇಂತಹ ಭಯಾನಕ ಪ್ರಕರಣವನ್ನು ಕಂಡೂ ಕಾಣದಂತೆ ಕೇವಲ Flash News ನ್ನು ಅಷ್ಟೆ ಬಿತ್ತರಿಸಿ ಕೆಲಸ ಮುಗಿಸಿವೆ.

ಮಧ್ಯಪ್ರದೇಶದ ಜಬಲ್ಪುರ್ ನ ಮೇಕ್ಲಾ ರೆಸಾರ್ಟ್ ನಲ್ಲಿ ಕೊಲೆ ನಡೆದ ನಂತರ ಕೊಲೆಗಾರ ಅಭಿಜಿತ್ ಪಾಟಿದಾರ್ ಜಾಲತಾಣಗಳ ಮೂಲಕ ವಿಡಿಯೋ ಮಾಡಿದ್ದು ಸಧ್ಯ ವಿಡಿಯೋ ವೈರಲ್ ಆಗಿದೆ. ಶಿಲ್ಪಾ ರಜಿಯಾ (25) ಎಂಬ ಯುವತಿಯನ್ನು ಕತ್ತು ಸೀಳಿ ಕೊಲೆ ಮಾಡಿರುವುದನ್ನು ಕೊಲೆಗಾರ ವಿಡಿಯೋ ಮೂಲಕ ಸಾಕ್ಷಿ ಬಿಟ್ಟಿದ್ದಾನೆ. ನಂತರ “ಬೇವಾಫೈ ನಹೀ ಕರ್ನೆ ಕಾ” (ನಂಬಿಕೆಗೆ ದ್ರೋಹ ಮಾಡಬೇಡಿ) ಎನ್ನುವ ಮೂಲಕ ಕೊಲೆ ಪ್ರಕರಣದ ಗಂಭೀರ ಕಾರಣವನ್ನು ಬಿಚ್ಚಿಟ್ಟಿದ್ದಾನೆ. ನಂತರ ಆತ ಹಾಸಿಗೆ ಮೇಲಿರುವ ಹೊದಿಕೆಯನ್ನು ತಗೆದು ಕೊಲೆ ಮಾಡಿರುವ ಹೆಣ್ಣಿನ ಮೃತದೇಹವನ್ನು ತೋರಿಸಿದ್ದಾನೆ. ಶಿಲ್ಪಾ ರಜಿಯಾ ಎಂಬ ಯುವತಿ ಕತ್ತು ಸೀಳಿದ ಭಯಾನಕ ಸ್ಥಿತಿಯಲ್ಲಿ ವಿಡಿಯೋದಲ್ಲಿ ಪತ್ತೆಯಾಗಿದೆ.

ಅಭಿಜಿತ್ ಪಾಟಿದಾರ್ ನಡೆಸಿದ ಕೊಲೆಯ ಹಿನ್ನೆಲೆಯಲ್ಲಿ ಇದೊಂದು ಹಣಕಾಸಿನ ವ್ಯವಹಾರದ ಕೊಲೆ ಎಂಬುದು ಸಾಭೀತಾಗಿದೆ. ಅಭಿಜಿತ್ ನ ಸ್ನೇಹಿತ ಜಿತೇಂದ್ರ ಎಂಬ ವ್ಯಕ್ತಿಯ ಸೂಚನೆಯ ಮೇಲೆ ಈ ಕೊಲೆ ಮಾಡಿರುವುದಾಗಿ ಅಭಿಜಿತ್ ವಿಡಿಯೋದಲ್ಲಿ ಒಪ್ಪಿಕೊಂಡಿದ್ದಾನೆ. ಕೊಲೆಯಾದ ಶಿಲ್ಪಾ ರಜಿಯಾ ಅವರು ಜಿತೇಂದ್ರನ ಬಳಿಯಿಂದ 12 ಲಕ್ಷ ರೂಪಾಯಿ ತಗೆದುಕೊಂಡಿರುತ್ತಾರೆ. ನಡುವೆ ವ್ಯವಹಾರದಲ್ಲಿ ಬಂದ ವೈಮನಸ್ಸಿನಿಂದ ಜಿತೇಂದ್ರ ಆಕೆಯನ್ನು ಕೊಲೆಗೈಯಲು ಅಭಿಜಿತ್ ಗೆ ತಿಳಿಸಿದ್ದಾನೆ. ವಿಡಿಯೋ ನಡೆಸಿದ ಸಂದರ್ಭದಲ್ಲಿ ಅಭಿಜಿತ್, ಜಿತೇಂದ್ರ ಮತ್ತು ಸುಮಿತ್ ಪಟೇಲ್ ಎಂಬ ಹೆಸರು ಹೇಳಿದ ಹಿನ್ನೆಲೆಯಲ್ಲಿ ಪೊಲೀಸರು ಅವರಿಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗಾರ ಅಭಿಜಿತ್ ಪಾಟಿದಾರ್ ನ ಹುಡುಕಾಟ ಇನ್ನೂ ಮುಂದುವರೆದಿದೆ.

ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ಪ್ರಿಯಾಂಕಾ ಶುಕ್ಲಾ ಮಾಧ್ಯಮಗಳೊಂದಿಗೆ ಮಾತನಾಡಿ, ಅಭಿಜಿತ್ ಪಾಟ್ನಾದಲ್ಲಿರುವ ಜಿತೇಂದ್ರ ಅವರ ಮನೆಯಲ್ಲಿ ಒಂದು ತಿಂಗಳ ಕಾಲ ತಂಗಿದ್ದರು. ಈ ಸಂದರ್ಭದಲ್ಲಿ ಕೊಲೆ ವಿಚಾರವಾಗಿ ಮಾತುಕತೆ ನಡೆದಿರಬಹುದು. ಸಧ್ಯ ಬಿಹಾರದ ಹೊರತಾಗಿ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‌ನ ವಿವಿಧ ಭಾಗಗಳಿಗೆ ಅಭಿಜಿತ್‌ನ ಹುಡುಕಾಟಕ್ಕಾಗಿ ಪೊಲೀಸ್ ತಂಡಗಳನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೊಲೆಯ ವಿವರಗಳನ್ನು ಹಂಚಿಕೊಂಡ ಪೊಲೀಸರು “ಆರೋಪಿ ಅಭಿಜಿತ್ ನವೆಂಬರ್ 6 ರಂದು ಮೇಖ್ಲಾ ರೆಸಾರ್ಟ್‌ನಲ್ಲಿ ಕೊಠಡಿಯನ್ನು ಕಾಯ್ದಿರಿಸಿದ್ದಾನೆ. ರಾತ್ರಿ ಅವನು ತನ್ನ ಕೋಣೆಯಲ್ಲಿ ಒಬ್ಬನೇ ಇದ್ದನು. ಮರುದಿನ ಮಧ್ಯಾಹ್ನ ಅವನನ್ನು ಭೇಟಿಯಾಗಲು ಶಿಲ್ಪಾ ರಜಿಯಾ ರೆಸಾರ್ಟ್‌ಗೆ ಬಂದಿರುತ್ತಾರೆ. ನಂತರ ಅವರು ಊಟಕ್ಕೆ ಆರ್ಡರ್ ಮಾಡುತ್ತಾರೆ. ಸುಮಾರು ಒಂದು ಗಂಟೆಯ ನಂತರ, ಆರೋಪಿ ಹೋಟೆಲ್‌ಗೆ ರೂಂ ಗೆ ಬೀಗ ಹಾಕಿ ಒಬ್ಬರೇ ಹೊರಟಿದ್ದಾನೆ. ನಂತರ ನವೆಂಬರ್ 8 ರಂದು ಹೋಟೆಲ್ ಆಡಳಿತ ಮಂಡಳಿ ಬಾಗಿಲು ಒಡೆದು ನೋಡಿದಾಗ ಮಹಿಳೆಯ ಶವ ಪತ್ತೆಯಾಗಿದೆ” ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ.

ಸಧ್ಯ ಈ ಘಟನೆ ಹಿನ್ನೆಲೆಯಲ್ಲಿ ಪೊಲೀಸ್ ಸೈಬರ್ ಸೆಲ್ ಜೊತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಅಭಿಜಿತ್ ಸೇರಿದಂತೆ ಇನ್ನಿತರ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು