Sunday, June 16, 2024

ಸತ್ಯ | ನ್ಯಾಯ |ಧರ್ಮ

ನಟಿ ರಶ್ಮಿಕಾ ಮಂದಣ್ಣ ಡೀಪ್‌ ಫೇಕ್‌ ವಿಡಿಯೋ: ಕ್ರಮ ಕೈಗೊಳ್ಳುವಂತೆ ಅಮಿತಾಭ್‌ ಬಚ್ಚನ್‌ ಆಗ್ರಹ

ಮುಂಬಯಿ: ಕರ್ನಾಟಕ ಮೂಲದ ನಟಿ, ಕಿರಿಕ್‌ ಪಾರ್ಟಿ, ಪುಷ್ಪ ಮೊದಲಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಕನ್ನಡ, ತಮಿಳು ಹಾಗೂ ತೆಲುಗು ಚಿತ್ರರಂಗಗಳಲ್ಲಿ ಈಗಾಗಲೇ ಮನೆಮಾತಾಗಿರುವ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ ಫೇಕ್‌ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡುತ್ತಿದೆ. ಪ್ರಸ್ತುತ ಈ ಕುರಿತು ಪ್ರತಿಕ್ರಿಯಿಸಿರುವ ಅಮಿತಾಭ್‌ ಬಚ್ಚನ್‌ ಈ ವಿಷಯದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ರಕ್ಷಿತ್‌ ಶೆಟ್ಟಿಯವರೊಂದಿಗೆ ಕಿರಿಕ್‌ ಪಾರ್ಟಿ ಚಿತ್ರದಲ್ಲಿ ನಟಿಸಿದ ನಂತರ ರಶ್ಮಿಕಾ ಅವರನ್ನೇ ಮದುವೆಯಾಗಲಿದ್ದಾರೆನ್ನುವ ಸುದ್ದಿ ಕರ್ನಾಟಕದ ಮಾಧ್ಯಮಗಳಲ್ಲಿ ಓಡಾಡಿತ್ತು. ನಂತರ ಅವರು ತೆಲುಗು ಚಿತ್ರೋದ್ಯಮಕ್ಕೆ ಹೋಗಿ ರಕ್ಷಿತ್‌ ಅವರೊಂದಿಗೆ ನಿಶ್ಚಿತಾರ್ಥ ಕಡಿದುಕೊಂಡಿದ್ದಾರೆಂದು ಆರೋಪಿಸಿ ಕನ್ನಡದ ಕೆಲವು ಮಾಧ್ಯಮಗಳೂ ಸೇರಿ ಸಾಮಾಜಿಕ ಮಾಧ್ಯಮಗಳು ಅವರನ್ನು ಗುರಿಯಾಗಿಸಿಕೊಂಡಿದ್ದವು.

ಅಂದಿನಿಂದ ಇಂದಿನವರೆಗೂ ಆಕೆಯನ್ನು ವಿಕೃತವಾಗಿ ಟ್ರೋಲ್‌ ಮಾಡುವ ಮನಸ್ಥಿತಿ ಕನ್ನಡದಲ್ಲಿ ಕಂಡುಬರುತ್ತಿದ್ದು, ಅದರ ವಿರುದ್ಧ ಸಾಕಷ್ಟು ಜಜನರು ದನಿಯನ್ನೂ ಎತ್ತಿದ್ದರು. ಆದರೆ ಈ ನಟಿಯ ವಿರುದ್ಧದ ವಿಕೃತಿ ಇನ್ನೊಂದು ಹಂತವನ್ನು ತಲುಪಿದ್ದು, ಅವರ ಒಂದು ಡೀಪ್‌ ಫೇಕ್‌ ವಿಡಿಯೋ ಸೃಷ್ಟಿಸಿ ಅದಕ್ಕೆ ಚಿತ್ರ ವಿಚಿತ್ರ ವಿಕೃತ ಅಡಿಬರಹಗಳನ್ನು ಶೇರ್‌ ಮಾಡಲಾಗುತ್ತಿದೆ. ಕನ್ನಡದ ಟ್ರೋಲ್‌ ಪೇಜುಗಳಲ್ಲಿಯೂ ಈ ವಿಡಿಯೋ ಹರಿದಾಡುತ್ತಿದೆ.

ಮೂಲ ವಿಡಿಯೋದಲ್ಲಿ ಬ್ರಿಟಿಷ್‌ ಇಂಡಿಯನ್‌ ಮಹಿಳೆಯಾದ ಝಾರಾ ಪಟೇಲ್‌ ಎನ್ನುವವರು ಕಪ್ಪು ಉಡುಪಿನಲ್ಲಿ ಎಲಿವೇಟರ್‌ ಮೂಲಕ ಹೊರಬರುತ್ತಾರೆ. ಆ ವಿಡಿಯೋವನ್ನು ತಿರುಚಿ ಅದಕ್ಕೆ ರಶ್ಮಿಕಾ ಅವರ ಮುಖವನ್ನು ಅಂಟಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡಲಾಗಿದೆ.

ಈ ಕುರಿತು ಇದುವರೆಗೂ ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿಲ್ಲವಾದರೂ ಹಿರಿಯ ನಟ ಅಮಿತಾಭ್‌ ಬಚ್ಚನ್‌ ದನಿಯೆತ್ತಿದ್ದಾರೆ. ಅವರು ಈ ಕೂಡಲೇ ಇದಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಪ್ರಸ್ತುತ ರಶ್ಮಿಕಾ ‘ಅನಿಮಲ್’ ಎನ್ನುವ ಹಿಂದಿ ಚಿತ್ರದಲ್ಲಿ ರಣಬೀರ್ ಕಪೂರ್ ಜೊತೆ ನಟಿಸುತ್ತಿದ್ದು, ಈ ಚಿತ್ರವನ್ನು ಸಂದೀಪ್ ರೆಡ್ಡಿ ವಂಗಾ ಅವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಚಿತ್ರ ಡಿಸೆಂಬರ್ 1ರಂದು ತೆರೆಗೆ ಬರಲು ಸಿದ್ಧವಾಗಿದೆ.

Related Articles

ಇತ್ತೀಚಿನ ಸುದ್ದಿಗಳು