Home ದೇಶ ಸೊಹ್ರಾಬುದ್ದೀನ್ ಎನ್‌ಕೌಂಟರ್ ಕೇಸ್ | 92 ಸಾಕ್ಷಿಗಳು ಪ್ರತಿಕೂಲವಾಗಿದ್ದು ಕಳವಳಕಾರಿ ಎಂದ ಸುಪ್ರೀಂ ಕೋರ್ಟ್

ಸೊಹ್ರಾಬುದ್ದೀನ್ ಎನ್‌ಕೌಂಟರ್ ಕೇಸ್ | 92 ಸಾಕ್ಷಿಗಳು ಪ್ರತಿಕೂಲವಾಗಿದ್ದು ಕಳವಳಕಾರಿ ಎಂದ ಸುಪ್ರೀಂ ಕೋರ್ಟ್

0

2005ರ ಸೊಹ್ರಾಬುದ್ದೀನ್ ಶೇಖ್, ಆತನ ಪತ್ನಿ ಕೌಸರ್ ಬಿ ಹಾಗೂ ಸಹಚರ ತುಳಸಿರಾಮ್ ಪ್ರಜಾಪತಿ ಅವರ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಗುಜರಾತ್, ರಾಜಸ್ಥಾನ ಮತ್ತು ಆಂಧ್ರಪ್ರದೇಶದ 21 ಪೊಲೀಸರು ಸೇರಿದಂತೆ ಎಲ್ಲಾ 22 ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಖುಲಾಸೆಗೊಂಡ ಆರೋಪಿಗಳಿಗೆ ಸೋಮವಾರ ನೋಟಿಸ್ ಜಾರಿ ಮಾಡಿದೆ.

ವಿಚಾರಣೆ ವೇಳೆ ನ್ಯಾಯಪೀಠವು ಪ್ರಕರಣದ 92 ಸಾಕ್ಷಿಗಳು ವಿಚಾರಣೆಯ ಸಂದರ್ಭದಲ್ಲಿ ಪ್ರತಿಕೂಲವಾಗಿ (hostile) ಮಾರ್ಪಟ್ಟಿದ್ದರ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿತು. 92 ಸಾಕ್ಷಿಗಳು ಸಾರಾಸಗಟಾಗಿ ಪ್ರತಿಕೂಲವಾಗಿ ಬದಲಾಗಿರುವುದು ಅತ್ಯಂತ ಗಂಭೀರ ವಿಚಾರವಾಗಿದ್ದು, ಈ ಪ್ರಕರಣದಲ್ಲಿ ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತ ವಿಚಾರಣೆ ನಡೆದಿದೆಯೇ ಎಂಬುದನ್ನು ಪರಿಶೀಲಿಸುವುದು ಅಗತ್ಯವಾಗಿದೆ ಎಂದು ನ್ಯಾಯಮೂರ್ತಿ ಬಾಗ್ಚಿ ಅಭಿಪ್ರಾಯಪಟ್ಟರು. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಸಹ ಸಾಕ್ಷಿಗಳ ಹೇಳಿಕೆಗಳನ್ನು ಪರಿಶೀಲಿಸಲು ನೋಟಿಸ್ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದರು.

ಮೃತನ ಕಿರಿಯ ಸಹೋದರ ರುಬಾಬುದ್ದೀನ್ ಶೇಖ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ದಾಮ ಶೇಷಾದ್ರಿ ನಾಯ್ಡು, “ಇದು ನಕಲಿ ಎನ್‌ಕೌಂಟರ್ ಮತ್ತು ವ್ಯವಸ್ಥಿತ ಕೊಲೆ. ಸಾಕ್ಷಿಗಳು ಪ್ರತಿಕೂಲವಾದ ಕಾರಣಕ್ಕಾಗಿಯೇ ಕೆಳ ನ್ಯಾಯಾಲಯಗಳು ಖುಲಾಸೆ ಆದೇಶ ನೀಡಿವೆ,” ಎಂದು ವಾದಿಸಿ ಮರುಪರಿಶೀಲನೆಗೆ ಕೋರಿದರು. ಇದೇ ವೇಳೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು 2014ರಲ್ಲಿ ವಿಚಾರಣಾ ನ್ಯಾಯಾಲಯವು ದೋಷಮುಕ್ತಗೊಳಿಸಿದ್ದನ್ನು ಹೈಕೋರ್ಟ್ ಎತ್ತಿಹಿಡಿದಿದ್ದ ಭಾಗವನ್ನು ಸುಪ್ರೀಂ ಕೋರ್ಟ್ ಮರುಪರಿಶೀಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

You cannot copy content of this page

Exit mobile version