Monday, January 19, 2026

ಸತ್ಯ | ನ್ಯಾಯ |ಧರ್ಮ

3,600 ಸರ್ಕಾರಿ ಆಸ್ಪತ್ರೆಗಳಿಗೆ ‘ಸೌರ ಶಕ್ತಿ’ ವಿದ್ಯುತ್ ಬಿಲ್‌ಗಳಲ್ಲಿ ಶೇ. 85 ಶೇ ಉಳಿತಾಯ

ಪ್ರಮುಖ ಮುಖ್ಯಾಂಶಗಳು

  • ಒಂದು ವರ್ಷದಲ್ಲಿ 3,600 ಆಸ್ಪತ್ರೆಗಳಿಗೆ ಸೌರ ವಿದ್ಯುತ್
  • ಸೋಲಾರ್ ನಿರ್ವಹಣೆ ಗೆ ‘ಸೌರ ಇ-ಮಿತ್ರಾ’ ಮೊಬೈಲ್ ಆ್ಯಪ್
  • ವಿದ್ಯುತ್ ಬಿಲ್‌ಗಳಲ್ಲಿ ಶೇ. 80-85 ಉಳಿತಾಯ

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವಿದ್ಯುತ್ ಬಿಲ್ ಪಾವತಿ ವೆಚ್ಚಕ್ಕೆ ಕಡಿವಾಣ ಹಾಕವ ಉದ್ದೇಶದೊಂದಿಗೆ ಆರೋಗ್ಯ ಇಲಾಖೆಯು ಸೌರ ಶಕ್ತಿ ಬಳಕೆಗೆ ಆದ್ಯತೆ ನೀಡಿದೆ. ಕಳೆದೊಂದು ವರ್ಷದಲ್ಲಿ 3,600 ಆರೋಗ್ಯ ಕೇಂದ್ರಗಳು ಸೌರ ವಿದ್ಯುತ್ ಘಟಕಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್ ಬಿಲ್‌ಗಳಲ್ಲಿ ಶೇ. 80-85 ಉಳಿತಾಯ ಸಾಧಿಸಲಾಗಿದೆ. ಈ ಸಾಧನೆ ಮಾಡಿರುವ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ. ಆರೋಗ್ಯ ಇಲಾಖೆ ಹಾಗೂ ಸೆಲ್ಕೋ ಫೌಂಡೇಷನ್ ಸಹಯೋಗದಲ್ಲಿ 2024ರ ನೆವೆಂಬರ್ ನಲ್ಲಿ ‘ಸೌರ ಸ್ವಾಸ್ಥ್ಯ’ ಯೋಜನೆಗೆ ಚಾಲನೆ ನೀಡಲಾಯಿತು. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಅಡಿ ಫೌಂಡೇಷನ್ ಸೌರ ವಿದ್ಯುತ್ ಘಟಕಗಳ ಅಳವಡಿಕೆಗೆ ಆರ್ಥಿಕ ನೆರವು ಒದಗಿಸುತ್ತಿದೆ. ಈಗ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಗಳನ್ನು ಹೊಂದಿರುವ ಆಸ್ಪತ್ರೆಗಳಲ್ಲಿ ಬ್ಯಾಟರಿ ಆಧಾರಿತ ವ್ಯವಸ್ಥೆಯಿಂದ ದಿನದ 24 ಗಂಟೆಯೂ ಸೌರ ವಿದ್ಯುತ್ ದೊರೆಯುತ್ತಿದೆ.

ಫೌಂಡೇಷನ್ ಜತಗೆ ಇಲಾಖೆ ಮಾಡಿಕೊಂಡಿರುವ ಒಪ್ಪಂದದ ಅನುಸಾರ 2026ರ ವೇಳೆಗೆ 2,877 ಉಪ ಕೇಂದ್ರಗಳು, 1,971 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 28 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 12 ಸಮುದಾಯ ಆರೋಗ್ಯ ಕೇಂದ್ರಗಳು,  112 ತಾಲೂಕು ಆಸ್ಪತ್ರೆಗಳು ಸೇರಿ 5 ಸಾವಿರ ಆರೋಗ್ಯ ಕೇಂದ್ರಗಳಿಗೆ ಸೌರ ವಿದ್ಯುತ್ ಉತ್ಪಾದನಾ ಘಟಕ ಅಳವಡಿಸುವ ಗುರಿ ಇದೆ.

ವರ್ಷಾಂತ್ಯಕ್ಕೆ 3,659 ಕೇಂದ್ರಗಳ ಗುರಿ: 

ಈ ಯೋಜನೆಗೆ 120 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ 3,600 ಆರೋಗ್ಯ ಕೇಂದ್ರಗಳಿಗೆ ಸೌರ ವಿದ್ಯುತ್ ಘಟಕಗಳನ್ನು ಅಳವಡಿಸಲಾಗಿದ್ದು, ಈ ವರ್ಷಾಂತ್ಯದ ವೇಳೆಗೆ ಒಟ್ಟು 3,659 ಕೇಂದ್ರಗಳನ್ನು ತಲುಪುವ ಗುರಿ ಹೊಂದಲಾಗಿದೆ. 2026ರ ಅಂತ್ಯದ ವೇಳೆಗೆ ಎಲ್ಲಾ 5 ಸಾವಿರ ಕೇಂದ್ರಗಳಿಗೂ ಘಟಕಗಳನ್ನು ಅಳವಡಿಸಲು ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಸೌರ ಘಟಕಗಳ ಸಾಮರ್ಥ್ಯ:

ಉಪ ಕೇಂದ್ರಗಳ ಸೌರ ಲಕಗಳು 0.25 ನಿಂದ 1 ಕಿ.ವಾಟ್ ಸಾಮರ್ಥ್ಯ ಹೊಂದಿದ್ದರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಸೌರ ಲಕಗಳು 4 ಕಿಲೋವಾಟ್ ನಿಂದ 5 ಕಿಲೋ ವಾಟ್ ಸಾಮರ್ಥ್ಯ ಹೊಂದಿರಲಿವೆ. ತಾಲೂಕು ಆಸ್ಪತ್ರೆಗಳಿಗೆ 10 ಕಿಲೋವಾಟ್ ಸಾಮರ್ಥ್ಯದ ಸೌರ ಫಲಕಗಳನ್ನು ಅಳವಡಿಸಲಾಗುತ್ತಿದೆ. ಇದರಿಂದಾಗಿ ವಿದ್ಯುತ್ ಮೇಲಿನ ಅವಲಂಬನೆ ಕಡಿಮೆಯಾಗಲಿದ್ದು, ಎಲ್ಲಾ 5 ಸಾವಿರ ಆರೋಗ್ಯ ಕೇಂದ್ರಗಳಿಗೆ ಸೌರ ಘಟಕಗಳನ್ನು ಅಳವಡಿಸಿದ ಬಳಿಕ, ಮುಂದಿನ 10 ವರ್ಷಗಳಲ್ಲಿ  ಸರ್ಕಾರದ ಬೊಕ್ಕಸಕ್ಕೆ 100 ಕೋಟಿ ರೂ.  20 ವರ್ಷಗಳಲ್ಲಿ 200 ಕೋಟಿ ರೂ. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. 

ಸೌರ ವಿದ್ಯುತ್ ಸಹಕಾರಿ: 

ಆರೋಗ್ಯ ಕೇಂದ್ರಗಳಲ್ಲಿ ಉತ್ತಮ ವೈದ್ಯಕೀಯ ಸೇವೆ ಒದಗಿಸಲು ಸೌರ ವಿದ್ಯುತ್ ಸಹಕಾರಿಯಾಗಲಿದೆ. ನವೀಕರಿಸಬಹುದಾದ ಶಕ್ತಿ ಬಳಕೆಗೆ ಉತ್ತೇಜನ ನೀಡುವುದರಿಂದ ಪರಿಸರ ಸಂರಕ್ಷಣೆಯೂ ಸಾಧ್ಯವಾಗಲಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಸೌರ ವಿದ್ಯುತ್ ಘಟಕಗಳ ಅಳವಡಿಕೆತಯಿಂದ ವಿದ್ಯುತ್ ಬಳಕೆಯ ವೆಚ್ಚ ಇಳಿಕೆಯಾಗಲಿದೆ. ದುಬಾರಿ ಬೆಲೆಯ ಡಿಸೇಲ್ ಜನರೇಟರ್‌ಗಳಿಂದಲೂ ಆರೋಗ್ಯ ಕೇಂದ್ರಗಳು ಮುಕ್ತವಾಗಲಿವೆ. ಜತೆಗೆ ವಾತಾವರಣದಲ್ಲಿ ಇಂಗಾಲದ ಡೈಆಕ್ಸೆ ಡ್ (HO2) ಪ್ರಮಾಣ 2 ಲಕ್ಷ ಟನ್ ತಗ್ಗಲಿದ್ದು, ಇದರಿಂದ ಉತ್ತಮ ಪರಿಸರ ನಿರ್ಮಾಣ ಸಾಧ್ಯವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು. 

ರಿಮೋಟ್ ಮಾನಿಟರಿಂಗ್ ಸಿಸ್ಟಮ್: 

ಸೌರ ಸ್ವಾಸ್ಥ್ಯ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಿಗೆ ಅಳವಡಿಸಿರುವ ಸೌರ ವಿದ್ಯುತ್ ಉತ್ಪಾದನಾ ಘಟಕಗಳ ಮೇಲೆ ರಿಮೋಟ್ ಮಾನಿಟರಿಂಗ್ ಸಿಸ್ಟಮ್ ಮೂಲಕ ನಿರಂತರ ನಿಗಾ ವಹಿಸಲಾಗುತ್ತದೆ. ಇದರಿಂದ ಆಸ್ಪತ್ರೆಗಳಲ್ಲಿನ ಸೌರ ವಿದ್ಯುತ್ ಘಟಕಗಳಲ್ಲಿ ಸಮಸ್ಯೆ ಕಾಣಿಸಿಕೊಂಡಲ್ಲಿ ಕೂಡಲೇ ಪರಿಹರಿಸಲು ಸಾಧ್ಯವಾಗಲಿದೆ. ‘ಸೌರ ಇ-ಮಿತ್ರಾ’ ಮೊಬೈಲ್ ಆ್ಯಪ್ ಮೂಲಕವೂ ಸೋಲಾರ್ ಸಾಧನಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಫಲಕಕ್ಕೆ ಹಾನಿ ಸೇರಿ ವಿವಿಧ ಸಮಸ್ಯೆಗಳು ಕಾಣಿಸಿಕೊಂಡಾಗ ಈ ಆ್ಯಪ್ ಮೂಲಕವೇ ವೈದ್ಯಕೀಯ ಸಿಬ್ಬಂದಿ ದೂರು ದಾಖಲಿಸಬಹುದಾಗಿದೆ.  ಕೇಂದ್ರೀಕೃತ ವ್ಯವಸ್ಥೆಯಡಿ ಸೇವಾದಾರರು ಈ ದೂರನ್ನು ಪರಿಶೀಲಿಸಿ ಸ್ಥಳೀಯ ನಿರ್ವಾಹಕರಿಗೆ ಸಮಸ್ಯೆ ಪರಿಹರಿಸಲು ಸೂಚನೆ ನೀಡಲಿದ್ದಾರೆ. 

ಘಟಕಗಳ ನಿರ್ವಹಣೆಗೆ ತರಬೇತಿ: 

ಸೌರ ಇ- ಮಿತ್ರಾ ಮೊಬೈಲ್ ಆ್ಯಪ್ ಮೂಲಕ ಈವರೆಗೂ 626 ದೂರುಗಳು ದಾಖಲಾಗಿದ್ದು, ಇವುಗಳಲ್ಲಿ 314 ಪರಿಹರಿಸಲಾಗಿದೆ. ಉಳಿದ 312 ದೂರುಗಳ ನಿರ್ವಹಣೆ ಪ್ರಗತಿಯಲ್ಲಿದೆ. ಇದಲ್ಲದೆ ಸಂಸ್ಥೆಯು ಈ ಸೌರ ವಿದ್ಯುತ್ ಘಟಕಗಳ ನಿರ್ವಹಣೆಗೆ, ರಿಮೋಟ್ ಮಾನಿಟರಿಂಗ್ ಹಾಗೂ ಸೌರ ಇ-ಮಿತ್ರಾ ನಿರ್ವಹಣೆ ಕುರಿತು 2 ಸಾವಿರಕ್ಕೂ ಅಧಿಕ ಮಂದಿಗೆ ತರಬೇತಿ ನೀಡಲಾಗಿದೆ. 

Related Articles

ಇತ್ತೀಚಿನ ಸುದ್ದಿಗಳು

You cannot copy content of this page