Thursday, July 17, 2025

ಸತ್ಯ | ನ್ಯಾಯ |ಧರ್ಮ

ಅಗ್ನಿವೀರ್ ಸೈನಿಕನ ಸಾವು : ಸ್ಪಷ್ಟನೆ ನೀಡಿದ ಭಾರತೀಯ ಸೇನೆ

ಅಕ್ಟೋಬರ್ 10 ರಂದು ಜಮ್ಮು ಕಾಶ್ಮೀರದಲ್ಲಿ ಸಾವಿಗೀಡಾಗಿದ್ದ ಅಗ್ನಿವೀರ್ ಒಬ್ಬರ ಸಾವಲ್ಲಿ ಭಾರತೀಯ ಸೇನೆ ಯಾವುದೇ ಸರ್ಕಾರಿ ಗೌರವ ನೀಡದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಕೇಂದ್ರ ಸರ್ಕಾರದ ಅಗ್ನಿವೀರ್ ಯೋಜನೆ ಅಡಿಯಲ್ಲಿ ನೇಮಕವಾದ ಸೈನಿಕರೊಬ್ಬರಿಗೆ ಕನಿಷ್ಟ ಸರ್ಕಾರಿ ಗೌರವವೂ ಸಿಗದಂತಾ ಸ್ಥಿತಿ ಇದೆ ಎಂಬ ಆರೋಪದ ಬೆನ್ನಲ್ಲೇ, ಅಗ್ನಿವೀರ್ ಒಬ್ಬರ ಸಾವಿನ ಬಗ್ಗೆ ಭಾರತೀಯ ಸೇನೆ ಸ್ಪಷ್ಟನೆ ನೀಡಿದೆ.

ಭಾರತದ ಮೊದಲ ಅಗ್ನಿವೀರ್ ಯೋಧ ಪಂಜಾಬ್‌ನ ಮಾನ್ಸಾದ ಅಮೃತಪಾಲ್ ಸಿಂಗ್ ಅಕ್ಟೋಬರ್ 10 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಿಧನರಾಗಿದ್ದರು. ಅವರ ಅಂತಿಮ ವಿಧಿವಿಧಾನಗಳನ್ನು ಶುಕ್ರವಾರ ಅವರ ಗ್ರಾಮವಾದ ಕೋಟ್ಲಿ ಕಲಾನ್‌ನಲ್ಲಿ ನೆರವೇರಿಸಲಾಯಿತು.

ಡಿಸೆಂಬರ್ 2022 ರಲ್ಲಿ ಅಗ್ನಿವೀರ್ ಗೆ ನೇಮಕಗೊಂಡಿದ್ದ ಅಮೃತಪಾಲ್ ಸಿಂಗ್ ಪೂಂಚ್ ಸೆಕ್ಟರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ನ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಕ್ಟೋಬರ್ 10 ರಂದು ಘಟಕದೊಳಗೆ ಅವರ ತಲೆಗೆ ಗುಂಡಿನ ಗಾಯವಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಸಾವಿನ ನಂತರ ಮೃತದೇಹವನ್ನು ಕುಟುಂಬಸ್ಥರು ಖಾಸಗಿ ಆಂಬುಲೆನ್ಸ್ ನಲ್ಲಿ ತಂದಿದ್ದರು. ಮೃತದೇಹದ ಜೊತೆಗೆ ಯಾವುದೇ ಮಿಲಿಟರಿ ಅಧಿಕಾರಿಗಳು ಬಂದಿರಲಿಲ್ಲ. ಯಾವುದೇ ಸರ್ಕಾರಿ ಅಥವಾ ಗೌರವಗಳೂ ಸಹ ಅಮೃತಪಾಲ್ ಅವರಿಗೆ ಸಿಕ್ಕಿರಲಿಲ್ಲ. ಈ ವಿಚಾರ ಎಲ್ಲೆಡೆ ದೊಡ್ಡ ಸುದ್ದಿಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಸಾವಿನ ಹಿನ್ನೆಲೆಯಲ್ಲಿ ಭಾರತೀಯ ಸೇನೆ ನಡೆದುಕೊಂಡ ರೀತಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ಹೊರಹಾಕಿದ್ದರು.

ಆದರೆ ಈ ಬಗ್ಗೆ ಭಾರತೀಯ ಸೇನೆ ಈಗ ತನ್ನ ಸ್ಪಷ್ಟನೆ ನೀಡಿದೆ. ಅಗ್ನಿವೀರ್ ಅಮೃತಪಾಲ್ ಸಿಂಗ್ ಅವರು ಸೆಂಟ್ರಿ ಡ್ಯೂಟಿಯಲ್ಲಿದ್ದಾಗ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಸ್ವಯಂ ಪ್ರೇರಿತ ಗಾಯಗಳಿಂದ ಉಂಟಾಗುವ ಸಾವುಗಳಿಗೆ ಅಂತಹ ಗೌರವಗಳನ್ನು ನೀಡದ ಕಾರಣ ಅವರ ಅಂತ್ಯಕ್ರಿಯೆಗೆ ಮಿಲಿಟರಿ ಗೌರವವನ್ನು ವಿಸ್ತರಿಸಲಾಗಿಲ್ಲ ಎಂದು ಸೇನೆ ಹೇಳಿದೆ.

ಅಗ್ನಿವೀರ್ ಅಮೃತಪಾಲ್ ಸಿಂಗ್ ಸಾವಿನ ಬಗ್ಗೆ ಎಲ್ಲೆಡೆ ತಪ್ಪು ಮಾಹಿತಿ ರವಾನೆಯಾಗುತ್ತಿದೆ. ಅಗ್ನಿವೀರ್ ಮತ್ತು ನೇರವಾಗಿ ಭಾರತೀಯ ಸೇನೆಗೆ ಸೇರಿದ ಎಲ್ಲಾ ಸೈನಿಕರಿಗೆ ಸಮಾನ ಗೌರವ ಸಿಗಲಿದೆ. ಆದರೆ ಅಮೃತಪಾಲ್ ಸಿಂಗ್ ಅವರದು ಆತ್ಮಹತ್ಯೆ ಆಗಿದೆ. ಆತ್ಮಹತ್ಯೆಯಂತಹ ಸ್ವಯಂಪ್ರೇರಿತ ಸಾವಿಗೆ ಸೇನೆಯಲ್ಲಿ ಗೌರವ ಇಲ್ಲ ಎಂದು ಈ ಬಗ್ಗೆ ಭಾರತೀಯ ಸೇನೆ ಸ್ಪಷ್ಟಪಡಿಸಿದೆ.

ಆದರೂ ಸಹ ಅಮೃತಪಾಲ್ ಸಿಂಗ್ ಅವರ ಇಲ್ಲಿಯವರೆಗಿನ ಸೇವೆಯನ್ನು ಮನಗಂಡು ಸಶಸ್ತ್ರ ಪಡೆಗಳು ಕುಟುಂಬದೊಂದಿಗೆ ಆಳವಾದ ಮತ್ತು ನಿರಂತರ ಸಹಾನುಭೂತಿಯೊಂದಿಗೆ ಸರಿಯಾದ ಗೌರವವನ್ನು ನೀಡುತ್ತೇವೆ” ಎಂದು ಭಾರತೀಯ ಸೇನೆ ಹೇಳಿದೆ. ಭಾರತೀಯ ಸೇನೆಯ ADG PI ಟ್ವಿಟರ್‌ನ ಮೂಲಕ ಸೇನೆಯ ಕಡೆಯಿಂದ ಅಧಿಕೃತವಾಗಿ ಪೋಸ್ಟ್ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page