Home ರಾಜ್ಯ ಮೈಸೂರು ಸಿದ್ದರಾಮಯ್ಯ ಈಗ ಮೊದಲಿನ ಸಿದ್ದರಾಮಯ್ಯ ಅಲ್ಲ, ಅವರ ಸಿದ್ಧಾಂತ ಬದಲಾಗಿದೆ: ವಿ ಸೋಮಣ್ಣ

ಸಿದ್ದರಾಮಯ್ಯ ಈಗ ಮೊದಲಿನ ಸಿದ್ದರಾಮಯ್ಯ ಅಲ್ಲ, ಅವರ ಸಿದ್ಧಾಂತ ಬದಲಾಗಿದೆ: ವಿ ಸೋಮಣ್ಣ

0

ಮೈಸೂರಿನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ವಿ. ಸೋಮಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಹಿಂದಿನ ಸಿದ್ದರಾಮಯ್ಯ ಮತ್ತು ಅವರ ಸಿದ್ಧಾಂತ ಈಗ ಉಳಿದಿಲ್ಲ. ಸದ್ಯದ ಸಿದ್ದರಾಮಯ್ಯ ಅವರು ಕೇವಲ ಅಧಿಕಾರಕ್ಕಾಗಿ ಮಾತ್ರ ರಾಜಕಾರಣ ಮಾಡುತ್ತಿದ್ದಾರೆ” ಎಂದು ಲೇವಡಿ ಮಾಡಿದರು. ತಾವು ಸಿದ್ದರಾಮಯ್ಯ ಅವರೊಂದಿಗೆ ಕೆಲಸ ಮಾಡಿದ್ದು, ಅವರನ್ನು ಹತ್ತಿರದಿಂದ ಬಲ್ಲೆ ಎಂದು ಸೋಮಣ್ಣ ತಿಳಿಸಿದರು.

ಸಿದ್ದರಾಮಯ್ಯನವರಿಗೆ ಮಹಿಳೆಯರ ಮೇಲೆ ನಿಜವಾದ ಕಾಳಜಿ ಇದ್ದರೆ, ತಮ್ಮ ಪಕ್ಷದ ಹೈಕಮಾಂಡ್ ನಾಯಕರಿಗೆ ಮಹಿಳಾ ಮೀಸಲಾತಿ ಮಸೂದೆಯ ಮಹತ್ವದ ಬಗ್ಗೆ ತಿಳಿಹೇಳಬೇಕು ಎಂದು ಸೋಮಣ್ಣ ಒತ್ತಾಯಿಸಿದರು. ಮಹಿಳಾ ಮೀಸಲಾತಿಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ತಮ್ಮ ರಾಜಕೀಯ ಭವಿಷ್ಯವನ್ನು ತಾವೇ ಹಾಳುಮಾಡಿಕೊಳ್ಳುತ್ತಿವೆ. ದೇಶದ ಮಹಿಳೆಯರು ಮುಂಬರುವ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, “ಖರ್ಗೆ ಅವರಿಗೆ ವಯಸ್ಸಾಗಿದೆ. ಅಂತಹ ಹಿರಿಯರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕೀಳುಮಟ್ಟದ ಭಾಷೆಯನ್ನು ಬಳಸುವುದು ಸರಿಯಲ್ಲ. ಅವರು ಕೂಡಲೇ ಕ್ಷಮೆಯಾಚನೆ ಮಾಡಬೇಕು. ಬಾಯಿಚಪಲಕ್ಕೆ ಮಾತನಾಡಬಾರದು” ಎಂದು ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕ ಹೆಸರಿಗಾಗಿ ಮೀಸಲಾತಿ ಜಾರಿಗೆ ತರುತ್ತಿಲ್ಲ ಎಂದು ಸೋಮಣ್ಣ ಸಮರ್ಥಿಸಿಕೊಂಡರು. ಮೋದಿ ಅವರಿಗೆ ಅಂತಹ ಅಗತ್ಯವಿಲ್ಲ ಎಂದ ಅವರು, “ಸೂರ್ಯ ಚಂದ್ರರು ಇರುವವರೆಗೂ ಮೋದಿ ಅವರ ಹೆಸರು ಶಾಶ್ವತವಾಗಿರುತ್ತದೆ” ಎಂದು ಕೇಂದ್ರ ಸಚಿವರು ಬಣ್ಣಿಸಿದರು.

You cannot copy content of this page

Exit mobile version