ಅಹಮದಾಬಾದ್: ಕೆಲವು ಸಮಾಜ ವಿರೋಧಿ ಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಒಡೆಯಲು ಯತ್ನಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಆ ಶಕ್ತಿಗಳ ಯತ್ನದ ಗಂಭೀರತೆಯನ್ನು ಅರಿತು ಅವರನ್ನು ಸೋಲಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು. 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ಏಕತೆ ಮತ್ತು ಸಮಗ್ರತೆ ಮುಖ್ಯ ಎಂದು ಅವರು ಒತ್ತಿ ಹೇಳಿದರು.
ಗುಜರಾತ್‌ನ ಖೇಡಾ ಜಿಲ್ಲೆಯ ವಡ್ತಾಲ್‌ನಲ್ಲಿರುವ ಶ್ರೀ ಸ್ವಾಮಿನಾರಾಯಣ ದೇವಸ್ಥಾನದ 200 ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಸೋಮವಾರ ಮಾತನಾಡಿದರು.
‘‘2047ರ ವೇಳೆಗೆ ದೇಶದ ಅಭಿವೃದ್ಧಿಗೆ ಜನರ ಏಕತೆ ಮತ್ತು ದೇಶದ ಸಮಗ್ರತೆ ಬಹಳ ಮುಖ್ಯ. ಆದರೆ ಕೆಲವರು ನಮ್ಮ ಸಮಾಜವನ್ನು ಜಾತಿ, ಧರ್ಮ, ಭಾಷೆ, ಗಂಡು-ಹೆಣ್ಣು, ಹಳ್ಳಿ-ನಗರ ಎಂದು ತಮ್ಮ ಲಾಭಕ್ಕಾಗಿ ಅಥವಾ ತಮ್ಮ ಸಂಕುಚಿತ ಮನೋಭಾವನೆಗಾಗಿ ವಿಭಜಿಸುತ್ತಿದ್ದಾರೆ. ಇಂತಹ ಶಕ್ತಿಗಳ ಕುತಂತ್ರವನ್ನು ಅರಿತುಕೊಳ್ಳಬೇಕು. ಅವರನ್ನು ಸೋಲಿಸಲು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು,’’ ಎಂದು ಮೋದಿ ಹೇಳಿದರು.
ಅಭಿವೃದ್ಧಿ ಹೊಂದಿದ ದೇಶವಾಗಲು ಮೊದಲ ಹೆಜ್ಜೆ ‘ಸ್ವಾವಲಂಬನೆ’ ಎಂದರು. ಸ್ವಾಮಿನಾರಾಯಣ ಅವರ ಮಾರ್ಗ ಅನುಸರಿಸುವ ಸಾಧುಗಳು ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಪ್ರತಿಯೊಬ್ಬ ನಾಗರಿಕರು ಪ್ರತಿಜ್ಞೆ ಮಾಡಬೇಕು ಎಂದು ಮನವಿ ಮಾಡಿದರು.