Home ದೇಶ ನನ್ನನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಬಹುದು: ಸೋನಮ್ ವಾಂಗ್‌ಚುಕ್ ಆತಂಕ, ಅಮಿತ್ ಶಾ ರಾಜೀನಾಮೆಗೆ ಆಗ್ರಹ

ನನ್ನನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಬಹುದು: ಸೋನಮ್ ವಾಂಗ್‌ಚುಕ್ ಆತಂಕ, ಅಮಿತ್ ಶಾ ರಾಜೀನಾಮೆಗೆ ಆಗ್ರಹ

0

ಲೇಹ್: “ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕಾಗಿ ನನ್ನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡುವ ಸಾಧ್ಯತೆಯಿದೆ” ಎಂದು ಖ್ಯಾತ ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ.ಲಡಾಖ್‌ಗೆ ರಾಜ್ಯದ ಸ್ಥಾನಮಾನ ಮತ್ತು ಸಂವಿಧಾನದ ಆರನೇ ಪರಿಚ್ಛೇದದ ರಕ್ಷಣೆ ನೀಡುವಂತೆ ಆಗ್ರಹಿಸಿ ಕಳೆದ ವರ್ಷ ಲೇಹ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಸಂಭವಿಸಿದ ಹಿಂಸಾಚಾರಕ್ಕೆ ಸೆಪ್ಟೆಂಬರ್ 24 ರಂದು ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ವರ್ಷ ಸೆಪ್ಟೆಂಬರ್ 24 ರಂದು ಲೇಹ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ನಾಗರಿಕರು ಸಾವನ್ನಪ್ಪಿದ್ದರು ಮತ್ತು ಹತ್ತಾರು ಮಂದಿ ಗಾಯಗೊಂಡಿದ್ದರು.ಈ ಘಟನೆ ನಡೆದು ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದ ವಾಂಗ್‌ಚುಕ್, ಈ ಹಿಂಸಾಚಾರ ಮತ್ತು ಸಾವು-ನೋವುಗಳಿಗೆ ನೇರ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.ಅಲ್ಲದೆ, ಈ ಘಟನೆಯ ಕುರಿತು ನಡೆದಿರುವ ನ್ಯಾಯಾಂಗ ತನಿಖೆಯ ವರದಿಯನ್ನು ತಕ್ಷಣ ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ಸಂದರ್ಭದಲ್ಲಿ ಹಿಂದೂಗಳು ಮತ್ತು ಬೌದ್ಧರ ನಡುವೆ ಸಂಘರ್ಷ ಸೃಷ್ಟಿಸಿ, ಪ್ರಾಂತ್ಯದಲ್ಲಿ ಅಶಾಂತಿ ಹರಡುವ ಉದ್ದೇಶಪೂರ್ವಕ ಪಿತೂರಿ ನಡೆದಿತ್ತು ಎಂದು ವಾಂಗ್‌ಚುಕ್ ಆರೋಪಿಸಿದರು. “ಶಾಂತಿಯುತವಾಗಿ ಹಕ್ಕುಗಳನ್ನು ಕೇಳುತ್ತಿದ್ದ ನಿರಾಯುಧ ಯುವಕರ ಮೇಲೆ ಎಚ್ಚರಿಕೆಯನ್ನೂ ನೀಡದೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಲಾಯಿತು.

ನಾನು ಈ ಸತ್ಯಗಳ ಬಗ್ಗೆ ಮಾತನಾಡಿದ ನಂತರ ಸರ್ಕಾರ ನನ್ನ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತದೆ. ಈ ಹಿಂದೆ ನನ್ನನ್ನು ಸುಳ್ಳು ಪ್ರಕರಣಗಳಡಿ ಜೈಲಿಗಟ್ಟಿದ್ದರು. ಈಗ ಉಳಿದಿರುವುದು ನನ್ನನ್ನು ಎಲ್ಲಾದರೂ ಎನ್‌ಕೌಂಟರ್ ಮಾಡುವುದು ಮಾತ್ರ. ನನ್ನ ಎನ್‌ಕೌಂಟರ್ ನಡೆಯಬಹುದು ಎಂದು ಪರಿಣಿತರೇ ನನಗೆ ಹೇಳುತ್ತಿದ್ದಾರೆ; ಹಾಗೇನಾದರೂ ನಡೆದು ಈ ದೇಶ ಎಚ್ಚೆತ್ತುಕೊಳ್ಳುವುದಾದರೆ, ಆ ಎನ್‌ಕೌಂಟರ್‌ಗೆ ನಾನು ಸಿದ್ಧ,” ಎಂದು ಅವರು ಹೇಳಿದರು.

You cannot copy content of this page

Exit mobile version