Saturday, January 31, 2026

ಸತ್ಯ | ನ್ಯಾಯ |ಧರ್ಮ

ನ್ಯಾಯಾಂಗ ಬಂಧನದಲ್ಲಿದ್ದ ಸೋನಮ್ ವಾಂಗ್ಚುಕ್ ಆರೋಗ್ಯದಲ್ಲಿ ಏರುಪೇರು, ಏಮ್ಸ್‌ಗೆ ದಾಖಲು

ಸುಪ್ರೀಂಕೋರ್ಟ್‌ನ ನಿರ್ದೇಶನದ ಮೇರೆಗೆ ನ್ಯಾಯಾಂಗ ಬಂಧನದಲ್ಲಿರುವ ಸಾಮಾಜಿಕ ಕಾರ್ಯಕರ್ತ ಹಾಗೂ ವಿಜ್ಞಾನಿ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆಗಾಗಿ ಜೋಧಪುರದ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಪೊಲೀಸರು ಶನಿವಾರ (ಜನವರಿ 31) ಬೆಳಿಗ್ಗೆ ಸುಮಾರು 6.30ರ ವೇಳೆಗೆ ಜೋಧಪುರ ಕೇಂದ್ರ ಕಾರಾಗೃಹದಿಂದ ವಾಂಗ್ಚುಕ್ ಅವರನ್ನು ಏಮ್ಸ್‌ನ ತುರ್ತು ವಾರ್ಡ್‌ಗೆ ಕರೆತಂದರು. ಸುಮಾರು ಒಂದೂವರೆ ಗಂಟೆಗಳ ಕಾಲ ಅವರನ್ನು ವೀಕ್ಷಣೆಯಲ್ಲಿ ಇರಿಸಲಾಗಿದ್ದು, ಗ್ಯಾಸ್ಟ್ರೋಎಂಟರಾಲಜಿಸ್ಟ್ ಮೂಲಕ ಪರೀಕ್ಷೆ ನಡೆಸಲಾಗಿದೆ.

ಏಮ್ಸ್ ಮೂಲಗಳ ಪ್ರಕಾರ, ವಾಂಗ್ಚುಕ್ ಅವರಿಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಇದ್ದು, ದೇಹದ ಹಲವಾರು ಭಾಗಗಳಲ್ಲಿ ನೋವು ಇದೆ ಎಂದು ಅವರು ದೂರು ನೀಡಿದ್ದಾರೆ. ಒಂದು ದಿನದ ಹಿಂದೆಯೂ ವೈದ್ಯಕೀಯ ಪರೀಕ್ಷೆಗಳಿಗಾಗಿ ಅವರನ್ನು ಏಮ್ಸ್‌ಗೆ ಕರೆತರಲಾಗಿತ್ತು.

ಪರೀಕ್ಷೆಗಳ ಬಳಿಕ ಅವರನ್ನು ಬಿಗಿ ಭದ್ರತೆಯೊಂದಿಗೆ ಮತ್ತೆ ಜೋಧಪುರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ.

ವಾಂಗ್ಚುಕ್ ಅವರ ಆರೋಗ್ಯದ ಬಗ್ಗೆ ಪತ್ನಿ ಕಳವಳ ವ್ಯಕ್ತಪಡಿಸಿದ್ದು, ಹಿರಿಯ ವಕೀಲ ಕಪಿಲ್ ಸಿಬಲ್ ಅವರ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಗುರುವಾರ (ಜನವರಿ 29) ನಡೆದ ವಿಚಾರಣೆಯಲ್ಲಿ, ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ.ಬಿ. ವರಾಳೆ ಅವರನ್ನೊಳಗೊಂಡ ನ್ಯಾಯಪೀಠವು ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯರಿಂದ ವಾಂಗ್ಚುಕ್ ಅವರನ್ನು ಪರೀಕ್ಷಿಸುವಂತೆ ಜೈಲು ಆಡಳಿತಕ್ಕೆ ನಿರ್ದೇಶನ ನೀಡಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page