Rajya sabha elections: ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಇಂದು ರಾಜಸ್ಥಾನದಿಂದ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಇಂದು ಬೆಳಗ್ಗೆ ನಾಮಪತ್ರ ಸಲ್ಲಿಸಲು ಸೋನಿಯಾ ಗಾಂಧಿ ಜೈಪುರಕ್ಕೆ ಬರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
1998 ಮತ್ತು 2022ರ ನಡುವೆ ಸುಮಾರು 22 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಐದು ಬಾರಿ ಲೋಕಸಭೆ ಸಂಸದರಾಗಿ ಆಯ್ಕೆಯಾಗಿದ್ದರು. ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಇಬ್ಬರೂ ಸೋನಿಯಾ ಗಾಂಧಿ ಅವರೊಂದಿಗೆ ಜೈಪುರಕ್ಕೆ ತೆರಳುವ ಸಾಧ್ಯತೆಯಿದೆ. ಸೋನಿಯಾ ಗಾಂಧಿ ಅವರನ್ನು ಇತರ ಕೆಲವು ರಾಜ್ಯಗಳಿಂದ ನಾಮಪತ್ರ ಸಲ್ಲಿಸಲು ಕೇಳಲಾಯಿತು ಆದರೆ ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜಸ್ಥಾನದಿಂದ ಕೊನೆಯ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಈ ವರ್ಷದ ಏಪ್ರಿಲ್‌ನಲ್ಲಿ ನಿವೃತ್ತರಾಗಲಿದ್ದಾರೆ. ಪಕ್ಷದ ನಾಯಕತ್ವ ಒಂದೇ ಪ್ರದೇಶದಲ್ಲಿ ಕೇಂದ್ರೀಕೃತವಾಗಬಾರದು ಎಂಬ ಕಾರಣಕ್ಕೆ ತೆಲಂಗಾಣದಂತಹ ರಾಜ್ಯಗಳನ್ನು ಆಯ್ಕೆ ಮಾಡದೆ ರಾಜಸ್ಥಾನವನ್ನು ಸೋನಿಯಾ ಗಾಂಧಿ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದವರಾಗಿದ್ದು, ರಾಹುಲ್ ಗಾಂಧಿ ಅವರು ಕೇರಳದ ವಯನಾಡಿನಿಂದ ಸಂಸದರಾಗಿ ಮುಂದುವರಿದಿದ್ದಾರೆ. ರಾಜಸ್ಥಾನದಿಂದ ರಾಜ್ಯಸಭಾ ಸ್ಥಾನಕ್ಕೆ ಸೋನಿಯಾ ಗಾಂಧಿ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.
ಉತ್ತರ ಪ್ರದೇಶದ ರಾಯ್ ಬರೇಲಿ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. 2004ರ ಚುನಾವಣೆಯಿಂದ 2019ರ ಚುನಾವಣೆಯವರೆಗೆ, ಸೋನಿಯಾ ಗಾಂಧಿ ರಾಯ್ ಬರೇಲಿಯಲ್ಲಿ ಸತತವಾಗಿ ಗೆದ್ದಿದ್ದಾರೆ. ಏತನ್ಮಧ್ಯೆ, ಚುನಾವಣಾ ಆಯೋಗವು 56 ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣಾ ವೇಳಾಪಟ್ಟಿಯನ್ನು ಕಳೆದ ತಿಂಗಳು ಪ್ರಕಟಿಸಿತು. 15 ರಾಜ್ಯಗಳ 56 ಸ್ಥಾನಗಳಿಗೆ ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆಯ ದಿನ.. ಫೆಬ್ರವರಿ 27ರಂದು ಮತದಾನ ನಡೆಯಲಿದೆ.