Saturday, June 15, 2024

ಸತ್ಯ | ನ್ಯಾಯ |ಧರ್ಮ

ಹಿಂದುತ್ವ ರಾಜಕಾರಣದ ಕಥೆ – 16 : “ಸಾರಿ… ಸಾರಿ…”

೧೯೧೧ ಆಗಸ್ಟ್‌ ೩೦ರಂದು ಸಾವರ್ಕರ್‌ ಮೊದಲ ಕ್ಷಮಾಪಣಾ ಪತ್ರ ಸಮರ್ಪಿಸಿದ್ದರು. ಅಂಡಮಾನ್‌ ತಲುಪಿ ಎರಡು ತಿಂಗಳುಗಳು ಕಳೆಯುವ ಮೊದಲೇ! ಅದು ತಳ್ಳಿ ಹಾಕಲ್ಪಟ್ಟಿತು. ೧೯೧೨ ಅಕ್ಟೋಬರ್‌ ೨೯ರಂದು ʼತನ್ನ ಸ್ವಭಾವ ಉತ್ತಮಗೊಂಡಿದೆʼ ಎಂದು ವಾದಿಸಿ ಎರಡನೇ ಕ್ಷಮಾಪಣಾ ಪತ್ರ ಬರೆದರಾದರೂ ಅನುಮತಿಯಿಲ್ಲದೆ ಪತ್ರ ಬರೆಯಕೂಡದು ಎಂಬ ಕಾರಣದಿಂದ ಅದನ್ನು ಮುಟ್ಟುಗೋಲು ಹಾಕಲಾಯಿತು. ಅದರ ನಂತರ ನಾವು ಈ ಹಿಂದಿನ ಅಧ್ಯಾಯದಲ್ಲಿ ಕಂಡ ಕ್ಷಮಾಪಣಾ ಪತ್ರವನ್ನು ಸಾವರ್ಕರ್‌ ಬರೆಯುವುದು.

೧೯೧೪ರಲ್ಲಿ ಮೊದಲ ಮಹಾಯುದ್ಧ ಶುರುವಾಗುತ್ತದೆ. ಇದನ್ನು ಮುಂದಿಟ್ಟುಕೊಂಡು ಮುಂದಿನ ಕ್ಷಮಾಪಣಾ ಪತ್ರವನ್ನು ಅಂಡಮಾನಿನ ಚೀಫ್‌ ಕಮಿಷನರಿಗೆ ಸಾವರ್ಕರ್‌ ಬರೆಯುತ್ತಾರೆ. ೧೯೧೪ ಅಕ್ಟೋಬರಿನಲ್ಲಿ ಸಮರ್ಪಿಸಿದ ಪತ್ರ ಇದಾಗಿತ್ತು.

‌ʼಸರ್,

ಈ ಕೆಳಗೆ ಸಹಿ ಹಾಕಿರುವ ವಿಧೇಯನು, ಭಾರತ ಸರಕಾರಕ್ಕೆ ಕಳಿಹಿಸಿಕೊಡಲಾಗುವುದು ಎಂಬ ಅತ್ಯಂತ ನಿರೀಕ್ಷೆಯಲ್ಲಿ, ತಮ್ಮ ಮುಂದೆ ವಿನೀತವಾಗಿ ಸಮರ್ಪಿಸುವ ಅರ್ಜಿ ಏನೆಂದರೆ:

೧. ಈಗ ಆರಂಭವಾಗಿರುವ ಈ ಲೋಕವನ್ನೇ ನಡುಗಿಸುವ ಯುದ್ಧದ ತೀವ್ರತೆ ಯುರೋಪನ್ನು ನಲುಗಿಸುತ್ತಿರುವಾಗ, ಬೇರೆ ಯಾವುದು ಕೂಡ ನೀಡಲಾಗದಷ್ಟು ನಿರೀಕ್ಷೆ, ಉಲ್ಲಾಸ ಮತ್ತು ಉತ್ಸಾಹವನ್ನು ಪ್ರತಿಯೊಬ್ಬ ನಿಷ್ಠಾವಂತ ಭಾರತೀಯ ದೇಶಪ್ರೇಮಿಯ ಒಳಗೆ ಅದು ತುಂಬುತ್ತಿದೆ. ಅದು ಈ ದೇಶದ ಮತ್ತು (ಬ್ರಿಟಿಷ್)‌ ಸಾಮ್ರಾಜ್ಯದ ರಕ್ಷಣೆಗಾಗಿ ಸಮಾನ ಶತ್ರುವಿನ ವಿರುದ್ಧ ಸಶಸ್ತ್ರಧಾರಿಗಳಾಗಲು ಯುವಜನತೆಯ ಸಹಿತ ಎಲ್ಲ ಭಾರತೀಯರನ್ನು ಪ್ರಾಪ್ತರನ್ನಾಗಿಸುತ್ತದೆ ಎಂಬುದೇ ವಾಸ್ತವ. ಒಡೆತನದ ಪ್ರಜ್ಞೆ ಹುಟ್ಟಿಸುವ ಒಂದನ್ನು ರಕ್ಷಿಸಲು ಒಬ್ಬನಿಗೆ ಸ್ವಾತಂತ್ರ್ಯವಿದೆ ಎಂಬ ಸಂಗತಿಯ ಜೊತೆಗೆ (ಬ್ರಿಟಿಷ್)‌ ಸಾಮ್ರಾಜ್ಯದ ಉಳಿದ ಪೌರರೊಂದಿಗೆ ಭುಜಕ್ಕೆ ಭುಜ ತಾಗಿಸಿ ಹೋರಾಡುವಾಗ, ಭಾರತದಲ್ಲಿ ಬೆಳೆಯುತ್ತಿರುವ ಒಂದು ತಲೆಮಾರಿಗೆ ಸಮತೆಯ ಭಾವನೆಯೊಂದು ಹರಿದು ಸಿಗಲಿದೆ ಮತ್ತು ಅದರ ಮೇಲೆ ಅವರು ಇನ್ನಿಲ್ಲದ ನಿಷ್ಠೆ ಹೊಂದುತ್ತಾರೆ ಎಂಬುದು ಖಡಾಖಂಡಿತ.

೨. ಎಲ್ಲ ರಾಜಕೀಯ ಸಿದ್ಧಾಂತಗಳ ಮತ್ತು ಪ್ರಯೋಗಗಳ ಆದರ್ಶವೆಂಬುದು ಒಂದು ಮೌಲಿಕ ಅವಸ್ಥೆಯೆಂಬುದನ್ನು ನಂಬಿಕೊಂಡೇ; ಮನುಷ್ಯತ್ವವೆಂಬುದು ಉನ್ನತ ದೇಶಪ್ರೇಮ ಎಂದೂ, ಆದ್ದರಿಂದ ಪರಸ್ಪರ ಕಲಹದಲ್ಲಿ ಮುಳುಗಿರುವ ಜನಾಂಗಗಳನ್ನು ಮತ್ತು ದೇಶಗಳನ್ನು ಲಯಬದ್ಧವಾದ ಒಂದು ಏಕತೆಯಲ್ಲಿ ತಂದು, ಅದರಲ್ಲಿ ಯಾವುದಾದರು ಒಂದರ ಬೆಳವಣಿಗೆ ಇನ್ನೊಂದರ ಅಧಿಪತ್ಯದ ಕಾರಣದಿಂದ ತಡೆಯಲ್ಪಡದಿರುವುದು ಆದರ್ಶದ ವಾಸ್ತವೀಕರಣ ಆಗಿರುತ್ತದೆ ಎಂಬುದನ್ನು ನಂಬಿಕೊಂಡು; ಸ್ವಯಂಸೇವೆಗೆ ಸಿದ್ಧಗೊಂಡಿರುವ ಪ್ರಸ್ಥಾನವೊಂದು ಗೆಲ್ಲುವುದು ಮತ್ತು ಹಾರ್ಡಿಂಗ್ಸ್‌ ಪ್ರಭುವಿನ ಆಡಳಿತದಲ್ಲಿ ಉದ್ಘಾಟನೆಗೊಂಡ ದೂರದೃಷ್ಟಿಯುಳ್ಳ, ಆಕರ್ಷಕವಾದ ನೀತಿಯ ಮೂಲಕ ಬರಲಿರುವ ಆತ್ಯಂತಿಕ ವಿಜಯದಲ್ಲಿ ದೃಢವಾದ ನಂಬಿಕೆ ಇರಿಸುವುದರಲ್ಲಿ ನಾನು ಸಂತೋಷಪಡುತ್ತೇನೆ. ಸರಕಾರ ಅದನ್ನು ಮುಂದುವರಿಯಲು ಬಿಡುವುದಾದರೆ, ದೇಶದ ಗಂಡಸ್ತನ (ಬ್ರಿಟಿಷ್)‌ ಸಾಮ್ರಾಜ್ಯದ ಮಹತ್ವ ಮತ್ತು ಜವಾಬ್ದಾರಿಯನ್ನು ಉಳಿದ ಪ್ರಜೆಗಳೊಂದಿಗೆ ಹಂಚಿಕೊಳ್ಳಲು ಸಮ್ಮತಿಸುವುದಾದರೆ ಭಿನ್ನ ವರ್ಣಗಳಲ್ಲಿ ಮತ್ತು ಭಿನ್ನ ಅಭಿಪ್ರಾಯಗಳಲ್ಲಿ ವ್ಯವಹರಿಸುತ್ತಿರುವ ಭಾರತದ ಜನರಲ್ಲಿ ಒಬ್ಬನಿಗೆ ಸ್ವಂತ ದೇಶದ ಮೇಲೆ ಮೂಡುವ ದೇಶಭಕ್ತಿಯ ಉತ್ಕಟತೆಯನ್ನು ನಿಜವಾಗಿ ಅನುಭವಿಸಲು ಸಾಧ್ಯವಾಗುತ್ತದೆ.

೩. ಆದ್ದರಿಂದ ಈಗಿನ ಯುದ್ಧದ ಯಾವ ಸೇವೆಯಲ್ಲಿ ಬೇಕಾದರು ಕಾರ್ಯನಿರ್ವಹಿಸಲು ನನ್ನನ್ನೇ ನಾನು ವಿನಯಪೂರ್ವಕವಾಗಿ ವಾಗ್ದಾನ ಮಾಡುತ್ತಿದ್ದೇನೆ. ಸರಕಾರಕ್ಕೆ ನನ್ನ ಸೇವೆ ಎಲ್ಲಿ ಉತ್ತಮವೆಂದು ತೋರುವುದೋ ಅಲ್ಲಿ. ದೇಶ ನನ್ನಂತಹ ಅಪ್ರಸಕ್ತನಾದ ವ್ಯಕ್ತಿಯ ಸಹಾಯವನ್ನು ಆಶ್ರಯಿಸಿಕೊಂಡು ಮುಂದುವರಿಯುತ್ತಿಲ್ಲ. ಅದೇ ಹೊತ್ತು ಒಬ್ಬ ವ್ಯಕ್ತಿ ಅದೆಷ್ಟೇ ಅಪ್ರಸಕ್ತನಾಗಿದ್ದರೂ ದೇಶವನ್ನು ಸಂರಕ್ಷಿಸಲು ತನ್ನ ಸನ್ನದ್ಧತೆಯನ್ನು ತೋರ್ಪಡಿಸುವುದು ಆತನ ಅಥವಾ ಆಕೆಯ ಕರ್ತವ್ಯವೆಂದೂ ನನಗೆ ತಿಳಿದಿದೆ. ಭಾರತದಲ್ಲಿ ರಾಜಕೀಯ ಅಕ್ರಮಗಳನ್ನು ನಡೆಸಿದ ಕಾರಣಕ್ಕೆ ಬಂಧಿತರಾದವರನ್ನು ಬಿಡುಗಡೆಗೊಳಿಸುವ ಮೂಲಕ ಭಾರತೀಯರ ನಿಷ್ಠೆಯನ್ನು ಇನ್ನಷ್ಟು ವಿಸ್ತರಿಸಲು ಮತ್ತು ಅಗಾಧಗೊಳಿಸಲು ಸಾಧ್ಯವೆಂದು ಇದೇ ಹೊತ್ತು ತಾಳ್ಮೆಯಿಂದ ನೆನಪಿಸುತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ಕೈಗೊಳ್ಳುವ ಇಂತಹದ್ದೊಂದು ತೀರ್ಮಾನದಿಂದ ವಿದೇಶಿಯರ ಆಡಳಿತದಡಿಯಲ್ಲಿ ಬದುಕುತ್ತಿರುವ ಭಾರತೀಯರು ತಮಗೆ ಸಮಾನ ಹಕ್ಕುಗಳು ಸಿಗಬೇಕೆಂದರೆ ಸಾಮ್ರಾಜ್ಯದ ಒಳಗಡೆ ಇದ್ದುಕೊಂಡೇ ಹೋರಾಡಬೇಕು ಎಂಬ ಮಾಯಾಚಿಂತನೆಯನ್ನೇ ತಳ್ಳಿಹಾಕುತ್ತದೆ. ಜೊತೆಗೆ ಅದನ್ನು (ವಿದೇಶಿ ಆಡಳಿತವನ್ನು) ತೊಡೆದು ಹಾಕಲು ಹೋರಾಡುವುದು ಮತ್ತು ಅದಕ್ಕಾಗಿ ನಮ್ಮ ಜೊತೆಗೆ ಸೇರಿರಿ ಎಂದು ಉಳಿದವರೊಂದಿಗೆ ಹೇಳುವುದು ಮೊದಲಾದ ನೀಚ ಕಾರ್ಯಗಳನ್ನು ಇಲ್ಲವಾಗಿಸುತ್ತದೆ. ಎರಡನೆಯದಾಗಿ, ಈ ಖೈದಿಗಳು ಅಗಾಧವಾಗಿ ಸಂಬಂಧ ಹೊಂದಿರುವ ಶಕ್ತಿಗಳಿಗೆ, ಅವರನ್ನು ತಿದ್ದುವ ಮೂಲಕ ಬಲಶಾಲಿಗಳಿಗೆ ಮಾತ್ರವೇ ಕ್ಷಮಿಸಲು ಮತ್ತು ಮರೆಯಲು ಸಾಧ್ಯ ಎಂದು ತೋರಿಸಿಕೊಡಲೂ ಸಾಧ್ಯವಾಗುತ್ತದೆ. ಅದಕ್ಕಿಂತ ಮಿಗಿಲಾಗಿ ಹಾರ್ಡಿಂಗ್‌ ಪ್ರಭುಗಳ ಸಂವಿಧಾನದ ವಿಜಯದ ರಾಜಬೀದಿಯ ಉದ್ಘಾಟನೆಯು ನೆತ್ತರು ಮತ್ತು ಅಕ್ರಮಗಳ ಮುಳ್ಳು ತುಂಬಿದ ದಾರಿಯಾದ ಕೆಡುಕು ಮತ್ತು ಭಯೋತ್ಪಾದನೆಯಿಂದ ಅವರನ್ನು ರಕ್ಷಿಸುವುದಿಲ್ಲವೇ? ಎಲ್ಲಕ್ಕಿಂತ ಮಿಗಿಲಾಗಿ, ಭಾರತದ ಸಾವಿರಾರು ಕುಟುಂಬಗಳು, ಅವರಿಗೆ ಜರ್ಮನ್ನರ ಮೇಲೆ ಅದೆಷ್ಟೇ ಸಿಟ್ಟಿದ್ದರೂ, ಅವರ ಗಂಡನೋ ಮಗನೋ ಅಪ್ಪನೋ ಗೆಳೆಯನೋ ಜೈಲಿನಲ್ಲಿ ನರಕ ಯಾತನೆ ಅನುಭವಿಸುತ್ತಿರುವಾಗ, ರಕ್ತವು ನೀರಿಗಿಂತ ಗಟ್ಟಿಯಾಗಿರುವುದರಿಂದ ಸರಕಾರದೊಂದಿಗೆ ಸಂಪೂರ್ಣವಾದ ಸಮರ್ಪಣೆಯಿಂದ ಕೂಡಿದ ನಿಜವಾದ ತಮ್ಮತನವನ್ನು ತೋರ್ಪಡಿಸುವುದಿಲ್ಲ ಎಂಬುದು ಪರಮ ಸತ್ಯವೇ ಆಗಿದೆ. ಆದರೆ, (ರಾಜಕೀಯ ಖೈದಿಗಳ) ಬಿಡುಗಡೆ, ವಿಶೇಷವಾಗಿ ಇಂತಹದ್ದೊಂದು ಮುಹೂರ್ತದಲ್ಲಿ, ಭಾರತದ ಮಹಾಜನತೆಯ ಒಳಗಡೆ ಆಳವಾದ ಅನುಭವವನ್ನು ಸೃಷ್ಠಿಸುತ್ತದೆ. ಯುದ್ಧ ಮುಗಿಯುವಾಗ ನಡೆಸುವ ಎಲ್ಲ ವಿಜೃಂಭನೆಗಳಿಗಿಂತಲೂ ಮಹತ್ತರವಾದ ಎತ್ತರಕ್ಕೆ ಅವರ ಭಾವನೆಯನ್ನು ಬಡಿದೆಬ್ಬಿಸಲು ಇದರಿಂದ ಸಾಧ್ಯವಾಗುತ್ತದೆ. ಅದು ಎಲ್ಲ ಕೆಡುಕುಗಳಾಚೆ, (ಬ್ರಿಟಿಷ್)‌ ಸಾಮ್ರಾಜ್ಯದ ರಕ್ಷಣೆಯ ವಿಷಯದಲ್ಲಿ, ಭಾರತ ಮತ್ತು ಇಂಗ್ಲೆಂಡಿನ ಮಕ್ಕಳ ನಡುವೆ ಸಂಪೂರ್ಣವಾದ ನಂಬಿಕೆಯನ್ನು ಹುಟ್ಟಿಸುತ್ತದೆ.

೪. ಇದನ್ನೆಲ್ಲ ಬರೆಯುವುದರ ಹಿಂದಿನ ಉದ್ದೇಶ ನನ್ನ ಬಿಡುಗಡೆ ಮಾತ್ರವೇ ಆಗಿದೆಯೆಂದು ಸರಕಾರಕ್ಕೆ ಸಂಶಯವಿರುವುದೇ ಆಗಿದ್ದರೆ, ನನ್ನನ್ನು ಮಾತ್ರವೇ ಬಿಡುಗಡೆ ಮಾಡಬೇಕಾಗಿಲ್ಲವೆಂದು ವಿನಂತಿಸಿಕೊಳ್ಳುತ್ತಿದ್ದೇನೆ. ನನ್ನನ್ನು ಬಿಟ್ಟು ಉಳಿದ (ರಾಜಕೀಯ) ಖೈದಿಗಳ ಬಿಡುಗಡೆ ಮಾಡುವ ಮೂಲಕ ಚಳುವಳಿ ಮುಂದುವರಿಯಲಿ. ಆ ಮೂಲಕ ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿದ ಸಂತೋಷವನ್ನು ಮಾತ್ರ ನಾನು ಪಡೆದುಕೊಳ್ಳುತ್ತೇನೆ. ಒಂದು ಉತ್ತಮ ಕೆಲಸವನ್ನು ಪೂರ್ತಿಗೊಳಿಸುವ ನಿಜವಾದ ಆಗ್ರಹದಿಂದಲೇ ನಾನು ನಿಷ್ಠೆಯಿಂದಲೂ ತೆರೆದ ಮನಸ್ಸಿನಿಂದಲೂ ಈ ನಿವೇದನೆಯನ್ನು ತಮ್ಮ ಮಹತ್ತರವಾದ ಪರಿಗಣನೆಗಾಗಿ ಸಮರ್ಪಿಸುತ್ತಿದ್ದೇನೆ.ʼ

೧೯೧೩ರಲ್ಲಿ ರೆಜಿನಾಲ್ಡ್‌ ಕ್ರಡೋಕಿಗೆ ನೀಡಿದ ಕ್ಷಮಾಪಣಾ ಪತ್ರವನ್ನು ತಳ್ಳಿ ಹಾಕಲಾಯಿತೆಂದು ನಾವು ಗಮನಿಸಿದೆವು. ಸಾವರ್ಕರ್‌ ಹೇಳುತ್ತಿದ್ದ ಮನಃಪರಿವರ್ತನೆ ಮತ್ತು ವಿಧೇಯತೆಗೆ ಅಷ್ಟು ಬೇಗ ತಲೆ ಕೊಡಲು ಬ್ರಿಟಿಷ್‌ ಅಧಿಕಾರಿಗಳು ತಯಾರಿರಲಿಲ್ಲ. ಜೈಲಿನ ಹೊರಗೆ ಅಂಡಮಾನ್‌ ದ್ವೀಪದಲ್ಲಿ ಇರಬಹುದೆಂಬ ಗಡೀಪಾರು ಶಿಕ್ಷೆಯಾಗಿ ಶಿಕ್ಷೆಯನ್ನು ಕಡಿತಗೊಳಿಸಿದರೆ, ಯುರೋಪಿನಲ್ಲಿರುವ ಸಾವರ್ಕರ್‌ ಅನುಯಾಯಿಗಳು ಮತ್ತು ಇತರ ಅರಾಜಕತಾವಾದಿಗಳು ಸೇರಿಕೊಂಡು ದೋಣಿಯ ಮೂಲಕ ಸಾವರ್ಕರನ್ನು ಭಾರತಕ್ಕೆ ಅಥವಾ ಬೇರೆ ಇತರ ದೇಶಕ್ಕೆ ಪಾರು ಮಾಡಿಬಿಡಬಹುದೆಂದು ಅವರು ಅಂದಾಜಿಸಿದ್ದರು.

೧೯೧೪ರಲ್ಲಿ ಮೇಲೆ ಹೇಳಿದ ಕ್ಷಮಾಪಣಾ ಪತ್ರದಲ್ಲಿ ಬ್ರಿಟಿಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಲು ಆಗ್ರಹ ವ್ಯಕ್ತಪಡಿಸುವ ಸಂದರ್ಭದಲ್ಲಿಯೇ, ಹಿಂದೂ ಮಹಾಸಾಗರದ ಬ್ರಿಟಿಷ್‌ ಅಧಿಪತ್ಯವನ್ನು ಎದುರಿಸಲು ಕೈಸರನ ಜರ್ಮನಿ ಆಟ್ಟೊಮನ್‌ ಟರ್ಕಿಯೊಂದಿಗೆ ಒಪ್ಪಂದಕ್ಕೆ ಬರುತ್ತಿತ್ತು. ಅದರ ಭಾಗವಾಗಿ ಭಾರತದಲ್ಲಿ ಹಲವು ಭೂಗತ ಪಕ್ಷಗಳಲ್ಲಿ ಕೆಲಸ ಮಾಡುತ್ತಿದ್ದವರು, ಸ್ವತಃ ಸಾವರ್ಕರ್‌ ಅವರ ಅಭಿನವ್‌ ಭಾರತ್‌ ಕಾರ್ಯಕರ್ತರು ಕೂಡ ಆ ಹೊತ್ತು ಸಾವರ್ಕರ್‌ ನಿರ್ಧಾರಕ್ಕೆ ವಿರುದ್ಧವಾಗಿ ಜರ್ಮನಿಯೊಂದಿಗೆ ಕೂಡಿಕೊಂಡು ಬ್ರಿಟಿಷರನ್ನು ಎದುರಿಸುವ ಹಾದಿಯಲ್ಲಿ ಮುಂದುವರಿದಿದ್ದರು. ಒಂದು ಕಾಲದಲ್ಲಿ ಸಾವರ್ಕರ್‌ ಗೆಳೆಯನೂ ಪಾಲುದಾರನೂ ಆಗಿದ್ದ ವೀರೇಂದ್ರ ಕುಮಾರ್‌ ಚಟ್ಟೋಪಾಧ್ಯಾಯ ಎಂಬ ಚಟ್ಟೋ, ಲಾಲಾ ಹರ್‌ ದಯಾಲ್‌, ಮಲಯಾಳಿಯಾದ ಡಾ. ಚೆಂಬನ್‌ ರಾಮನ್‌ ಪಿಳ್ಳೆ, ತಮಿಳನೂ ಇಂಡಿಯಾ ಹೌಸಿನ ನಿವಾಸಿಯೂ ಆಗಿದ್ದ ಎಂ.ಪಿ.ಟಿ. ತಿರುಮಲ ಆಚಾರ್ಯ ಎಲ್ಲ ಸೇರಿಕೊಂಡು ಇಂಡಿಯನ್‌ ನ್ಯಾಷನಲ್‌ ಪಾರ್ಟಿ ಎಂಬ ಸಂಘಟನೆಯನ್ನು ಹುಟ್ಟು ಹಾಕಿದ್ದರು. ಜರ್ಮನಿಯೊಂದಿಗೆ ಸೇರಿಕೊಂಡು ಬ್ರಿಟಿಷ್‌ ಇಂಡಿಯಾದ ಮೇಲೆ ದಾಳಿ ಮಾಡುವುದು ಅವರ ಗುರಿಯಾಗಿತ್ತು. ಇದೇ ಹೊತ್ತಲ್ಲಿ ತನ್ನ ಬಿಡುಗಡೆಯನ್ನೇ ಗುರಿಯಾಗಿಸಿಕೊಂಡು, ಒಂದು ಕಾಲದಲ್ಲಿ ತನ್ನ ಅನುಯಾಯಿಗಳೂ ತನ್ನ ಸಿದ್ಧಾಂತಕ್ಕೆ ಹೊಂದಿಕೊಂಡವರೂ ಆದ ಯಾರಿಗೂ ಕೂಡ ತಿಳಿಸದೆ ಸಾವರ್ಕರ್‌ ಕ್ಷಮಾಪಣಾ ಪತ್ರ ಬರೆಯುತ್ತಾರೆ. ಮತ್ತೆ ಮತ್ತೆ ಬ್ರಿಟಿಷರ ಸಂವಿಧಾನದ ಪ್ರಕಾರ ಕೆಲಸ ಮಾಡಲು ಮತ್ತು ಬ್ರಿಟಿಷ್‌ ಸಾಮ್ರಾಜ್ಯದ ವಿಜಯಕ್ಕಾಗಿ ಯುದ್ಧ ಮಾಡಲು ತಾನು ತಯಾರಿದ್ದೇನೆಂದೂ ಹೇಳುತ್ತಾರೆ.

ನಂತರದ ಕಾಲದಲ್ಲಿ ಧನಂಜಯ್‌ ಕೀರ್‌ ತರಹದ ಆತ್ಮಕತೆಗಾರರು ಮತ್ತು ಸ್ವತಃ ಸಾವರ್ಕರ್‌ ಕೂಡ ಅದನ್ನು ಒಂದು ʼತಂತ್ರʼ ಮಾತ್ರವಾಗಿ ನ್ಯಾಯೀಕರಿಸುತ್ತಾರೆ. ಇಲ್ಲಿ ನಾವು ಗಮನಿಸಬೇಕಾಗಿರುವುದು ಸಾವರ್ಕರ್‌ ತನ್ನನ್ನು ಬಿಡುಗಡೆ ಮಾಡಿ ಎಂದು ಸುಮ್ಮನೆ ವಿನಂತಿಸಿಕೊಳ್ಳುತ್ತಿರುವುದಲ್ಲ. ಬ್ರಿಟಿಷ್‌ ಸಾಮ್ರಾಜ್ಯಕ್ಕೋಸಕ್ಕರ ಕೆಲಸ ಮಾಡುತ್ತೇನೆ ಎಂಬ ನಿಬಂಧನೆಯನ್ನೂ ಸೇರಿಸಿಕೊಂಡು ಕೇಳಿಕೊಳ್ಳುತ್ತಿರುವುದು. ಕ್ರಡೋಕಿಗೆ ನೀಡಿದ ಕ್ಷಮಾಪಣಾ ಪತ್ರದಲ್ಲಿ ಮೋರ್ಲಿ-ಮಿಂಟೋ ಸುಧಾರಣೆಗಳ ಬಗ್ಗೆ, ಅದರಲ್ಲೂ ಅತ್ಯಂತ ಮುಖ್ಯವಾಗಿ ಮುಸ್ಲಿಮರಿಗೆ ಪ್ರಾದೇಶಿಕ ಕೌನ್ಸಿಲ್‌ಗಳು ಮತ್ತು ಇತರ ಅನೇಕ ಉನ್ನತ ಕೌನ್ಸಿಲ್‌ಗಳಲ್ಲಿ ವಿಶೇಷ ಪ್ರಾತಿನಿಧ್ಯ ನೀಡಿತು ಎಂಬುದನ್ನು ಸಾವರ್ಕರ್‌ ಇಲ್ಲಿ ಮುಕ್ತಕಂಠದಿಂದ ಹೊಗಳುತ್ತಿರುವುದು. ಜರ್ಮನ್‌-ಟರ್ಕಿ ಒಪ್ಪಂದ ನಡೆದರೆ, ಅದು ಭಾರತೀಯ ಮುಸ್ಲಿಮರಲ್ಲಿ ಸೃಷ್ಠಿಸಬಹುದಾದ ಬ್ರಿಟಿಷ್‌ ವಿರೋಧಿ ಭಾವನೆಯನ್ನು ತಡೆಯುವುದು ಮತ್ತು ಬೆಳೆಯುತ್ತಿರುವ ಇಂಡಿಯನ್‌ ರಾಷ್ಟ್ರೀಯತೆಯನ್ನು ಒಡೆಯುವುದು ಅದರ ಮುಖ್ಯ ಉದ್ದೇಶವಾಗಿತ್ತು ಎಂದು ಇತಿಹಾಸಕಾರರು ದಾಖಲಿಸಿದ ಸಂಗತಿಯನ್ನು ಸಾವರ್ಕರ್‌ ಮುಕ್ತಕಂಠದಿಂದ ಶ್ಲಾಘಿಸುತ್ತಿರುವುದು. ಅದರ ನಂತರ ಬರೆದ ಪತ್ರದಲ್ಲಿ ಬ್ರಿಟಿಷರಿಗಾಗಿ ಯುದ್ಧ ಮಾಡಬಲ್ಲೆ ಎಂಬ ಸಂದೇಶವೂ ಇದೆ. ಅಂದರೆ , ಬ್ರಿಟಿಷರು ಆ ನಿಬಂಧನೆಗೆ ಒಪ್ಪಿ ಬಿಡುಗಡೆ ಮಾಡುವುದೇ ಆಗಿದ್ದರೆ, ಮೊದಲನೇ ವಿಶ್ವಯುದ್ಧದಲ್ಲಿ, ಅಲ್ಲಿಯ ತನಕ ಬುಡಮೇಲು ಮಾಡಲು ಪ್ರಯತ್ನಿಸುತ್ತಿದ್ದ, ತನ್ನ ಬ್ರಾಹ್ಮಣ ಸಾಮ್ರಾಜ್ಯವನ್ನು ಕೊನೆಗಾಣಿಸಿದ ಅದೇ ಬ್ರಿಟಿಷ್‌ ಸಾಮ್ರಾಜ್ಯಕ್ಕೋಸ್ಕರ ಯುದ್ಧ ಮಾಡಬೇಕಾಗಿ ಬರುತ್ತಿತ್ತು. ಆದ್ದರಿಂದಲೇ ನಂತರದ ಕಾಲದಲ್ಲಿ ಔರಂಗಜೇಬ್‌ ಮತ್ತು ಶಿವಾಜಿಯನ್ನು ತೋರಿಸಿಕೊಂಡು ನ್ಯಾಯೀಕರಿಸಲು ಇನ್ನಿಲ್ಲದ ಸಾಹಸ ಮಾಡಿದ ಸಾವರ್ಕರ್‌ ಅವರ ಕಾರಣಗಳೆಲ್ಲವೂ ದುರ್ಬಲವೂ ಪೊಳ್ಳೂ ಆಗಿದ್ದವು. ಉಳಿದವರಿಂದ ಇತಿಹಾಸದ ಕೆಂಡ ಬಾಚಿಸಿಕೊಂಡು ಅವರ ಬದುಕನ್ನೇ ಮೋಹಿಸಿದ ಸಾವರ್ಕರ್‌ ತಾನರಿಯದೆ ಸಿಲುಕಿದ ಪರಿಸ್ಥಿತಿಯಿಂದ ಬಚಾವಾಗಲು ತೋರಿಸುತ್ತಿರುವ ಲಜ್ಜಾಹೀನವಾದ ಶರಣಾಗತಿ ಮಾತ್ರವೇ ಆ ಕ್ಷಮಾಪಣಾ ಪತ್ರಗಳು.

ಸಾವರ್ಕರ್‌ ನೇತೃತ್ವದ ಅಭಿನವ್‌ ಭಾರತ್ ಸಂಘಟನೆಯ ತೀವ್ರವಾದಿ ಮತ್ತು ಭೂಗತ ಸ್ವಭಾವವನ್ನೇ ಹೊಂದಿದ್ದ ಲಾಲಾ ಹರ್‌ ದಯಾಲ್‌ನ ಗದ್ದರ್‌ ಪಾರ್ಟಿ ಮತ್ತು ಬಂಗಾಳದ ಜತೀಂದ್ರನಾಥ್‌ ಮುಖರ್ಜಿಯ ಯುಗಾಂತರ್‌ ಸಂಘಟನೆಗಳು ಜರ್ಮನಿಯೊಂದಿಗೆ ಸೇರಿಕೊಂಡು ಬ್ರಿಟಿಷ್‌ ಇಂಡಿಯಾದ ಮೇಲೆ ದಾಳಿ ಮಾಡುವ ಸಂಚಿಗೆ ಸಾವರ್ಕರ್‌ ಕೂಡ ಪಾಲುದಾರ ಎಂಬಂತೆ ವಿಕ್ರಂ ಸಂಪತ್‌ ಮಾಡುವ ವಾದವೂ ಕುಸಿದು ಬೀಳುವುದು ಈ ಕ್ಷಮಾಪಣಾ ಪತ್ರಗಳ ಬೆಳಕಿನಲ್ಲಿ. ಇನ್ನೂ ಚೂರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ೧೯೧೭ ಅಕ್ಟೋಬರ್‌ ೫ರಂದು ಸಾವರ್ಕರ್‌ ಬರೆದ ಕ್ಷಮಾಪಣಾ ಪತ್ರವನ್ನು ಒಮ್ಮೆ ನೋಡೋಣ. ೧೯೧೪ರ ಪತ್ರವನ್ನು ಬ್ರಿಟಿಷರು ತಳ್ಳಿ ಹಾಕಿದ ಕಾರಣದಿಂದ ಈ ಪತ್ರವನ್ನು ಬರೆಯುತ್ತಿರುವುದು. ಈ ಸಲ ಸಾವರ್ಕರ್‌ ಪತ್ರ ಬರೆಯುತ್ತಿರುವುದು ಗೃಹ ಇಲಾಖೆಯ ಸೆಕ್ರೆಟರಿಗೆ.

ʼತಾಳ್ಮೆಯಿಂದ ತಮ್ಮ ಮುಂದೆ ನಿವೇದಿಸಿಕೊಳ್ಳುತ್ತಿರುವುದೇನೆಂದರೆ:

ಸುಮಾರು ಮೂರು ವರ್ಷಗಳ ಹಿಂದೆ ೧೯೧೪ರಲ್ಲಿ ಈ ಕೆಳಗೆ ನೀಡಿರುವ ಸಂಗತಿಗಳನ್ನು ಎತ್ತಿ ತೋರಿಸಿಕೊಂಡು ಭಾರತ ಸರಕಾರಕ್ಕೆ ನಾನೊಂದು ಪತ್ರ ಬರೆದಿದ್ದೆ. ಹಾರ್ಡಿಂಗ್‌ ಪ್ರಭು ಅದಕ್ಕೆ ʼಅಸಾಧ್ಯʼ ಎಂಬ ಉತ್ತರವನ್ನು ನೀಡುವ ಮನಸ್ಸು ಮಾಡಿದರು. ಸರಕಾರ ಆ ಸಂಗತಿಗಳಿಗೆ ಅಸಮ್ಮತಿ ಸೂಚಿಸುತ್ತಿದೆ ಎಂಬ ಅರ್ಥದಲ್ಲಿ ಅಲ್ಲ, ಬದಲಿಗೆ ಸಧ್ಯದ ಪರಿಸ್ಥಿತಿಯಲ್ಲಿ ನನ್ನ ಯೋಚನೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂಬ ಅರ್ಥದಲ್ಲಿ.

ಯುದ್ಧ, ಅದರ ಪೂರ್ಣಾರ್ಥದಲ್ಲಿ ಖಂಡಿತವಾಗಿಯೂ ಎಲ್ಲ ಜನ, ಸರಕಾರಗಳು ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಭೌತಿಕವಾಗಿ ಬದಲಾಯಿಸಿಬಿಟ್ಟಿದೆ. ಎಲ್ಲ ಮನುಷ್ಯರ ಒಳಗಡೆ ಮತ್ತು ದೇಶಗಳ ಒಳಗಡೆ ಎದ್ದು ಬರುತ್ತಿರುವ, ಹೊಸ ಕಾಣ್ಕೆಗಳು ಮತ್ತು ಸಿದ್ಧಾಂತಗಳಿಂದ ಚಲಿಸಲ್ಪಡುತ್ತಿರುವ ಪ್ರಜ್ಞೆಯೊಂದು ಅದನ್ನು ಸಾಬೀತುಪಡಿಸುತ್ತಿದೆ. ಅದು ರಾಷ್ಟ್ರನಾಯಕರ ಮತ್ತು ಸಾಮ್ರಾಜ್ಯಗಳ ಮಂತ್ರಿಗಳ ಮಾತುಗಳಲ್ಲಿ ಸ್ವಯಂ ಹೊಳೆಯುತ್ತಿದೆ. ಭಾರತಕ್ಕೆ ಅಥವಾ ಒಟ್ಟು ಬ್ರಿಟಿಷ್‌ ಸಾಮ್ರಾಜ್ಯಕ್ಕೆ ಲೋಕದ ಈ ಮಹತ್ತರವಾದ ಪ್ರಜಾಪ್ರಭುತ್ವವಾದೀ ಕಂಪನದಿಂದ ಬಚಾವಾಗಲು ಸಾಧ್ಯವಿಲ್ಲ. ಜನಾಂಗೀಯ ಪ್ರಾಬಲ್ಯ ಮತ್ತು ಜನಾಂಗೀಯ ಪ್ರಜೆಗಳು ಎಂಬ ಹಳೆಯ ಶೈಲಿ ಈಗ ಸಹಕಾರ ಮತ್ತು ಕಲ್ಯಾಣಕ್ಕೆ ದಾರಿ ಮಾಡಿಕೊಡುತ್ತಿರುವುದಾಗಿ ಅವರು ಅರಿಯುತ್ತಿದ್ದಾರೆ. ಸಾಮ್ರಾಜ್ಯವಾದದ ಮಂತ್ರಿಮಂಡಲದ ಕೇಂದ್ರದಲ್ಲಿ, ನಾಮಿನೇಟ್‌ ಮಾಡಲ್ಪಟ್ಟವರಾದರೂ ಸರಿ, ಕಾಲನಿಗಳಿಂದ ಇಬ್ಬರು ಮತ್ತು ಭಾರತದಿಂದ ಇಬ್ಬರು ಪ್ರತಿನಿಧಿಗಳು ಇದ್ದಾರೆ. ಭೂಸೇನೆಯಲ್ಲಿ ಸನ್ನದ್ಧರಾಗಿ ಸೇವೆ ಸಲ್ಲಿಸಲು ಯುವಕರಿಗೆ ಬಾಗಿಲು ತೆರೆದು ಕೊಡಲಾಗಿದೆ. ಬ್ರಿಟಿಷ್‌ ಪ್ರಧಾನ ಮಂತ್ರಿಗಳ ಮಹತ್ತರವಾದ ಭಾಷಣದಲ್ಲಿ, ಬ್ರಿಟಿಷ್‌ ರಾಜತಾಂತ್ರಿಕತೆಯ ನಿಜವಾದ ಗೆಲುವು ಒಂದು ಹಂತದವರೆಗೆ ದಶಲಕ್ಷದಷ್ಟು ಭಾರತೀಯರಿಗೆ ಆಶ್ರಯ ತತ್ವಕ್ಕಿಂತ ಮಿಗಿಲಾಗಿ ʼನಿಜವಾದ ಪಾಲುದಾರಿಕೆʼಯ ಮನೋಭಾವವನ್ನು ಅಂಕುರಿಸುವ ಸಂಗತಿಯಾಗಿತ್ತು ಎಂದು ಘೋಷಿಸಿದರು. ಅಷ್ಟೇ ಅಲ್ಲ, ಅತ್ಯಂತ ಮುಖ್ಯವಾದ ಸಂಗತಿಯೆಂದರೆ ರಾಜನಿಗೋಸ್ಕರ (ಇಂಡಿಯನ್)‌ ಪ್ರಭುತ್ವದ ಸೆಕ್ರೆಟರಿ ನಡೆಸಿದ, ಭಾಗಶಃವಾದರೂ ಭಾರತದ್ದೇ ಆದ ಒಂದು ಆಡಳಿತ ವ್ಯವಸ್ಥೆಯ ನಿಶ್ಚಿತ ಮತ್ತು ಖಚಿತವಾದ ಘೋಷಣೆಯಾಗಿತ್ತದು. ಒಂದು ಗುರಿ ಎಂಬ ನಿಟ್ಟಿನಲ್ಲಿ ಮಾತ್ರವಲ್ಲ, ಆ ದಿಕ್ಕಿಗೆ ಸರಿಯಾದ ಹೆಜ್ಜೆ ಎಂಬ ನೆಲೆಯಲ್ಲಿ ಆ ಘೋಷಣೆ ನಡೆಯಿತು. ಈ ವಾಸ್ತವಗಳೆಲ್ಲವೂ ಸಂಶಯಾತೀತವಾಗಿ ಬೊಟ್ಟು ಮಾಡುತ್ತಿರುವುದು ಇನ್ನು ಮುಂದೆ ಭಾರತ ಸರಕಾರ ಭಾರತದ ಜನರ ಅಭಿಲಾಷೆಗಳಿಗೆ ತಕ್ಕಂತೆ ನಿರಂತರವಾಗಿ ಆಡಳಿತ ನಡೆಸುತ್ತದೆಯೆಂದು ಮಾತ್ರವಲ್ಲ, ಪ್ರಗತಿಯ ಮೊದಲ ತತ್ವ, ಅಭಿಲಾಷೆಗಳನ್ನು ತೀರ್ಮಾನಿಸುವ ಅತ್ಯಂತ ಪ್ರಮುಖ ಘಟಕ ಜನರಲ್ಲದೆ ಬೇರೆ ಯಾರೂ ಅಲ್ಲ ಎಂಬ ಅರಿವು ಮೂಡಿದೆ ಎಂಬುದು. ಆದ್ದರಿಂದ ಸನ್ನಿವೇಶಗಳು, ಹಾರ್ಡಿಂಗ್‌ ಪ್ರಭು ಬೊಟ್ಟು ಮಾಡಿದಂತೆ, ಮತ್ತಷ್ಟು ಒಳಿತಿಗಾಗಿ ಬದಲಾಯಿಸುತ್ತಲೂ ಬದಲಾಗುತ್ತಲೂ ಇವೆ.

ಆದ್ದರಿಂದ ನಾನು ಬೊಟ್ಟು ಮಾಡುವುದೇನೆಂದರೆ, ಎಲ್ಲೆಲ್ಲ ಇದನ್ನು ಕಾರ್ಯಗತಗೊಳಿಸಿದೆವೋ ಅಲ್ಲೆಲ್ಲ ದೊಡ್ಡ ವಿಜಯಗಳಿಸಿದ ಸಹಕಾರ ಮತ್ತು ಕಲ್ಯಾಣದ ನೀತಿಯನ್ನು, ಭಾರತದ ಆಡಳಿದ ರಂಗದಲ್ಲಿ ನಂತರ ಕಾರ್ಯಗತಗೊಳಿಸಿದ್ದನ್ನು, ದರ್ಬಾರುಗಳು ಮತ್ತು ವಿಜೃಂಭನೆಗಳಿಂದ ಸರಿಯಾಗಿ ಕೊಂಡಾಡಿದ್ದನ್ನು, ರಾಜಕೀಯ ಖೈದಿಗಳ ಬಿಡುಗಡೆಯ ತನಕ ಮುಂದುವರಿಸಬಾರದೇ? ರಾಜಕೀಯ ಘೋಷಣೆಗಳಿಗೂ ಗಜಘೋಷಯಾತ್ರೆಗಳಿಗೂ ನೀಡಲು ಅಸಾಧ್ಯವಾದ ಮಟ್ಟದಲ್ಲಿ ಭಾರತದ ಜನರ ಭಾವನೆಯನ್ನು ಮಾತ್ರವಲ್ಲ, ಹೃದಯಗಳನ್ನು ಮುಟ್ಟಲು ಮತ್ತು ಮುಂದಕ್ಕೆ ಚಲಿಸುವಂತೆ ಮಾಡಲು ಅವರ ಬಂಧು ಬಳಗದ ಬಿಡುಗಡೆಯಿಂದ ಸಾಧ್ಯವಿದೆ. ಆತ್ಮವಿಶ್ವಾಸವನ್ನು ಹೊರಗಡೆ ತೋರಿಸಿಕೊಂಡರೆ ಮಾತ್ರವೇ ಆತ್ಮವಿಶ್ವಾಸವನ್ನು ಬಡಿದೆಬ್ಬಿಸಲು ಸಾಧ್ಯ. ಕೆನಡಾದಲ್ಲಿ ಅಕ್ರಮಗಳು ಮತ್ತು ಕ್ರಾಂತಿಗಳು ಇದರ ಕ್ರಮವಾಗಿ ಬದಲಾಗಿತ್ತು. ಡುರ್‌ಹಾಂ ಪ್ರಭುವಿನಂತಹ ಒಬ್ಬ ಸಶಕ್ತ ರಾಜನೀತಿಜ್ಞ ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಆತ್ಮವಿಶ್ವಾಸ ತೋರಿಸಿಕೊಟ್ಟರು. ಈಗ ಆ ಕ್ರಾಂತಿಕಾರಿಗಳ ಮೊಮ್ಮಕ್ಕಳು ಬ್ರಿಟಿಷರೊಂದಿಗೆ ನಿಂತುಕೊಂಡು ಫ್ಲಾಂಡೆರ್ಸಲ್ಲಿ ಯುದ್ಧ ಮಾಡುತ್ತಿದ್ದಾರೆ. ಬೋವರ್‌ಗಳು ಹೋರಾಡಿ ಸೋತು ಹೋದರು. ಆದರೆ, ಇಂಗ್ಲಿಷರು ಸನ್ನಿವೇಶದ ಗಂಭೀರತೆ ಅರ್ಥ ಮಾಡಿಕೊಂಡು ಅಮೇರಿಕಾ ಮತ್ತು ಕೇಪ್‌ ಕಾಲನಿಯ ಚರಿತ್ರೆಯನ್ನು ನೆನಪಿಸಿಕೊಂಡು, ಬುದ್ಧಿವಂತರಂತೆ ನಡೆದುಕೊಂಡು ಅವರಿಗೆ ಸ್ವಯಂ ಆಡಳಿತ ನೀಡಿದರು. ಅದರ ಫಲವಾದರೋ, ಒಂದು ಡಿವೆಟ್‌ ಅದನ್ನು ವಿರೋಧಿಸಿದರೆ, ಒಂದು ಡಿವೆಟನ್ನು ಮಾತ್ರವೇ ಸೋಲಿಸಬೇಕಾಯಿತು. ಇನ್ನೊಬ್ಬ ಬೋತೆಯನ್ನು ಬೀಳಿಸಬೇಕಾಗಿ ಬರಲಿಲ್ಲ! ಅಥವಾ ಇಂಡಿಯಾ ಎಂಬುದು, ಬ್ರಿಟಿಷ್‌ ಜನರನ್ನು ಮನಃಪೂರ್ವಕವಾಗಿ ಮತ್ತು ಉದಾರವಾಗಿ ನಡೆಸಿಕೊಳ್ಳುವುದರಲ್ಲಿ ನಂಬಿಕೆಯಿಲ್ಲದ, ಇಡುಕಿರಿದ ಜಾಗವಾಗಿ ಸಂಶಯಿಸಲ್ಪಡುತ್ತಿದೆಯೇ? ಇತಿಹಾಸ ತೋರಿಸುತ್ತಿರುವುದು – ಭಾರತದ ತಪ್ಪು, ಅದು ತಪ್ಪೇ ಆಗಿದ್ದರೆ – ಭಾರತ ಹೆಚ್ಚು ಉದಾರತೆ ಮತ್ತು ನಂಬಿಕೆ ತೋರಿಸಿತು ಎಂದು. ಅದಲ್ಲದೆ ಇದರ ತದ್ವಿರುದ್ಧ ಅಲ್ಲ. ಸ್ವಯಂ ಆಡಳಿತವನ್ನು, ಪೂರ್ತಿ ಮನಸ್ಸಿನೊಂದಿಗೆ ನೀಡುವುದೇ ಆದರೆ ನಮ್ಮ ಜನರನ್ನು ನಮ್ಮ ಅಭಿಲಾಷೆಗಳಿಗಾಗಿ ಈ ಸಾಮ್ರಾಜ್ಯದೊಂದಿಗೆ ಇನ್ನಷ್ಟು ಹತ್ತಿರವಾಗಿಸುತ್ತದೆ. ನಮ್ಮ ಅಭಿಲಾಷೆಗಳನ್ನು ಸಂರಕ್ಷಿಸುವಷ್ಟು ಕಾಲವೂ, ಯಾವ ಕಾಲನಿಯಲ್ಲೂ ಇಲ್ಲಿಯ ತನಕ ಉಂಟಾಗದ ರೀತಿಯ ಗಟ್ಟಿ ಸಂಬಂಧ ಅದಾಗಿರುತ್ತದೆ.

ಎರಡನೆಯದಾಗಿ, ಗುಂಪಿನಲ್ಲಿ ಒಬ್ಬ ಎಂಬ ನೆಲೆಯಲ್ಲಿ, ನನಗೆ ಹೇಳಲು ಸಾಧ್ಯವಿದೆ. ನನ್ನ ಪರಿಚಯದ ಅಷ್ಟೂ ಜನರಲ್ಲಿ ಬಹುಪಾಲು ಜನರಿಗೆ ಸಾಮ್ರಾಜ್ಯದೊಂದಿಗೆ ಸಾಸಿವೆಯಷ್ಟೂ ಕೂಡ ಶತೃತ್ವ ಇಲ್ಲ. ಅದು ಯಾಕೆ ಹೀಗೆ ಅಂದರೆ, ಅದು ಹೀಗೆಯೇ ಇದ್ದದ್ದು ಎಂದು ಅರ್ಥವೇ? ಖಂಡಿತಾ ಅಲ್ಲ. ಎಲ್ಲ ರಾಜಕೀಯ ತತ್ವಶಾಸ್ತ್ರಗಳ ಮತ್ತು ರಾಜಕೀಯ ಚಟುವಟಿಕೆಗಳ ಆದರ್ಶ ಎಂಬುದು ಅಥವಾ ಮನುಷ್ಯಾವಸ್ಥೆಯ ಆದರ್ಶ ಎಂಬುದು, ಪ್ರಗತಿಯ ಮತ್ತು ತನ್ನನ್ನು ತಾನು ಉಳಿದವರ ನಡುವೆ ಗೌರವಿಸುವ ಸ್ವಾತಂತ್ರ್ಯದ ಸಂಪೂರ್ಣವಾದ ಸಮಾನ ಅವಕಾಶದ ಅಡಿಪಾಯದಲ್ಲಿ ಉಳಿದ ಎಲ್ಲ ರಾಷ್ಟ್ರಗಳನ್ನು ಆಲಿಂಗನ ಮಾಡುವುದು ಎಂಬುದೇ ಆಗಿದೆ. ಮನುಷ್ಯಕುಲದ ಬಹುಪಾಲು ಇರುವ ಒಂದು ಪ್ರದೇಶದ ಸಾಮ್ರಾಜ್ಯ ಇಡಿಯಾಗಿ ನಮ್ಮ ನಡುವೆ ಆ ಆದರ್ಶದ ಸನಿಹ ನಿಲ್ಲುವ ಸಂಗತಿಯನ್ನು ತರುವುದೇ ಆದರೆ, ಆ ಸಾಮ್ರಾಜ್ಯದೊಂದಿಗೆ ಸಹಾನುಭೂತಿಯಲ್ಲದೆ ಬೇರೇನು ನನಗೆ ಮೂಡುತ್ತಿಲ್ಲ. ಭಾರತ ಒಂದು ಸಮಾನಕಲ್ಯಾಣದ (Commonwealth) ಭಾಗವಾಗಿ ಇದ್ದುಕೊಂಡು ಮತ್ತು ಸದ್ಯೋಭವಿಷ್ಯತ್ತಿನಲ್ಲಿ ಅತ್ಯಂತ ಕಮ್ಮಿಯೆಂದರೂ ಭಾರತದ ವೈಸ್‌ರಾಯಿಯ ಕೌನ್ಸಿಲ್‌ ಬಹುಮತ ಗಳಿಸಿದರೆ, ನಾವು ಇಲ್ಲಿಯ ತನಕ ಗಳಿಸಿದ ಗೆಲುವುಗಳನ್ನು ನೆಲೆನಿಲ್ಲಿಸಲು ನಮ್ಮ ಪೂರ್ತಿ ಶಕ್ತಿಯನ್ನು ವಿನಿಯೋಗಿಸಿ ಸಮಾಜದಲ್ಲಿ ಕೆಲ ಒತ್ತಡಗಳನ್ನು ಮತ್ತು ಶುದ್ದೀಕರಣಗಳನ್ನು ಮಾಡಬೇಕಾಗುತ್ತದೆ. ಅದು ತೀವ್ರವಾದ ಪರ ಅಲ್ಲ, ಎಲ್ಲ ಸಾಮ್ರಾಜ್ಯಗಳಿಗೂ ಎದುರು ನಿಲ್ಲುವ ಅರಾಜಕತಾವಾದಕ್ಕಿಂತ ಚೂರು ಕೆಳ ಮಟ್ಟದ್ದು. ಆದರೆ, ಒಂದು ಪ್ರಚೋದನೆ ಪ್ರಗತಿಯ ಕಡೆಗಿರುವ ಎಲ್ಲ ದಾರಿಗಳೂ ʼಅತಿಕ್ರಮ ಪ್ರವೇಶ ಮಾಡಿದವರನ್ನು ಶಿಕ್ಷಿಸಲಾಗುತ್ತದೆʼ ಎಂಬ ಸೂಚನೆಯಲ್ಲಿ ಮುಚ್ಚಿ ಹಾಕಲಾಗಿರುವ ನಾಡಿನಲ್ಲಿ ನಿರಾಶೆಯ ಮನಃಪೂರ್ವಕವಾದ ವಿನಾಶಕಾರಿ ಗುಣ ಏನಾದರೂ ದೊಡ್ಡ ಮಟ್ಟದ ಮುನ್ನಡೆಯನ್ನು ತರಬಲ್ಲದು. ಅದುವೇ ನಮ್ಮನ್ನು ರಾಜಕೀಯದ ಅಪಾಯಕಾರಿ ಕಾಲುದಾರಿಗಳಿಗೆ ಓಡಿಸಿತ್ತು. ಸಂವಿಧಾನವೇ ಇಲ್ಲದಿರುವಾಗ ಸಾಂವಿಧಾನಿಕ ನಡೆಗಳ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ. ಆದರೆ, ಈಗ ಒಂದು ಸಂವಿಧಾನ ಇರುವಾಗ, ಸ್ವಯಂ ಆಡಳಿತವು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾದ ಧಾರಾಳ ಚಟುವಟಿಕೆಗಳನ್ನು ನಡೆಸಲು ತೀರ್ಮಾನಿಸಿರುವಾಗ, ಆ ಚಟುವಟಿಕೆಗಳನ್ನು ಸಂವಿಧಾನಾತ್ಮಕವಾಗಿ ಸರಕಾರ ನಡೆಸುತ್ತಿರುವಾಗ, ಈಗಿನ ರಾಜಕೀಯ ಖೈದಿಗಳಲ್ಲಿ ಯಾರು ಕೂಡ ವಿನೋದಕ್ಕಾಗಿ ಭೂಗತ ಚಟುವಟಿಕೆಗಳನ್ನು ನಡೆಸಿ, ಎಂದೂ ಕೇಳಿರದ ಯಾತನೆಯ ಕಥೆಗಳನ್ನು ಸ್ವಯಂ ಅನುಭವಿಸಬೇಕಾದ ಅಗತ್ಯವಿಲ್ಲ. ಆದ್ದರಿಂದ ರಾಜಕೀಯ ಖೈದಿಗಳ ಬಿಡುಗಡೆ, (ಬ್ರಿಟಿಷ್)‌ ಸಾಮ್ರಾಜ್ಯದ ಒಳಗಡೆ ಭಾರತದ ಪದವಿಯನ್ನು ಮತ್ತು ಅದರ ಆಡಳಿತ ಶೈಲಿಯನ್ನು ಬದಲಾಯಿಸುವ ಮನಃಪೂರ್ವಕವಾದ ಕೆಲಸಗಳನ್ನು ಬ್ರಿಟಿಷ್‌ ಸರಕಾರ ಆರಂಭಿಸಿದೆ ಎಂದು ಮನದಟ್ಟಾದರೆ, ಅದು ಭಾರತೀಯರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಸಿಗಬಹುದಾದ ಈ ಲಾಭದ ಜೊತೆಗೆ ಭವಿಷ್ಯದಲ್ಲಿ ಅದು ಯಾವ ತೊಂದರೆಯನ್ನು ಕೂಡ ಸೃಷ್ಟಿಸುವುದಿಲ್ಲ ಎಂಬ ಖಾತರಿಯೂ ಅದರಿಂದ ಸಿಗುತ್ತದೆ.

ಮೂರನೆಯದಾಗಿ, ಖೈದಿಗಳ ಬಿಡುಗಡೆಯಿಂದ ಮಾತ್ರವೇ ಭಾರತದ ಅಶಾಂತಿಯ ತಾಯಿಬೇರನ್ನು ಕೀಳಲಾಗುವುದಿಲ್ಲ. ಅದರ ಜೊತೆ ಜೊತೆಗೆ ದೂರಗಾಮಿಯಾದ ಸುಧಾರಣಾ ಕ್ರಮಗಳನ್ನು ಅದರ ಬೆನ್ನ ಹಿಂದೆಯೇ ನಡೆಸಬೇಕು. ಹಾಗೆಯೇ, ಜನರ ಮನಸ್ಸು ಹೃದಯಗಳನ್ನು ಗೆದ್ದು ಅವರನ್ನು ಸಂತೃಪ್ತರನ್ನಾಗಿಸಿದರೆ ಮಾತ್ರವೇ ಆ ಸುಧಾರಣೆಗಳ ಕಂತುಗಳನ್ನು ಸ್ವೀಕರಿಸಲು ಅವರು ತಯಾರಾಗುತ್ತಾರೆ. ಖೈದಿಗಳ ಬಿಡುಗಡೆ ನಡೆಯದಿದ್ದರೆ ಅದು ಅಸಾಧ್ಯ. ಸಾವಿರಗಟ್ಟಲೆ ಕುಟುಂಬಗಳು ನಿಜಾರ್ಥದಲ್ಲಿ ಹರಿದು ಚೂರಾಗಿ ಹೋಗಿರುವಾಗ, ಪ್ರತಿ ಎರಡರಲ್ಲಿ ಒಂದು ಮನೆಯ ಮಡಿಲಿನಿಂದ ಸಹೋದರ, ಮಗ, ಗಂಡ, ಪ್ರಿಯತಮರನ್ನು ಕಿತ್ತುಕೊಂಡು ಜೈಲಿಗೆ ಹಾಕಿರುವಾಗ, ಅದು ಹೇಗೆ ಈ ನಾಡಿನಲ್ಲಿ ಶಾಂತಿ ಮತ್ತು ಪರಸ್ಪರ ನಂಬಿಕೆ, ಸ್ನೇಹಗಳು ಹುಟ್ಟಿಕೊಳ್ಳುವುದು? ಅದು ಮನುಷ್ಯತ್ವಕ್ಕೆ ವಿರುದ್ಧವಾದ ಕೆಲಸ. ಯಾಕೆಂದರೆ, ರಕ್ತ ನೀರಿಗಿಂತ ಗಟ್ಟಿಯಾಗಿರುತ್ತದೆ.

ನಾಲ್ಕನೆಯದಾಗಿ, ರಾಜಕೀಯದ ಹೆಸರಿನಲ್ಲಿ ಬಂಧಿಸಲ್ಪಟ್ಟಿರುವ ಎಲ್ಲರಿಗೂ ಜೈಲಿನ ಬಾಗಿಲುಗಳನ್ನು ವಿಶ್ವದೆಲ್ಲೆಡೆ ತೆರೆದು ಕೊಡಲಾಗುತ್ತಿದೆ. ರಷ್ಯಾದಲ್ಲಿ ಹೇಳಲೇ ಬೇಕಾಗಿಲ್ಲ. ಜೊತೆಗೆ ಫ್ರಾನ್ಸ್‌, ಐರ್ಲೆಂಡ್‌ ಮತ್ತು ಟ್ರಾನ್ಸ್‌ವಾಲಲ್ಲಿ. ಯುದ್ಧ ಈಗಲೂ ಅವರ ಮೇಲೆ ಭಾರವಾಗಿ ತೂಗಿ ನಿಲ್ಲುತ್ತಿದ್ದರೂ ಆಸ್ಟ್ರಿಯಾ ಕೂಡ ರಾಜಕೀಯ ಖೈದಿಗಳ ಬಿಡುಗಡೆಯನ್ನು ನಿಷೇಧಿಸಲಿಲ್ಲ. ಹಾಗೆ ಬಿಡುಗಡೆಗೊಂಡ ಖೈದಿಗಳು ʼಸಾಮಾನ್ಯ ಪಾಲುದಾರಿಕೆಯನ್ನು ಮಾತ್ರʼ ಹೊಂದಿದ್ದವರೆಂದು ಹೇಳಲೂ ಆಗದು. ಯಾಕೆಂದರೆ, ವೋಟಿಂಗ್‌ ಹಕ್ಕಿಗಾಗಿ ಹೋರಾಡಿದವರನ್ನೇ ತೆಗೆದು ನೋಡುವುದಾದರೆ ಅವರಲ್ಲಿ ಬಹುಪಾಲು ಜನರು ಕೂಡ ʼವೈಯಕ್ತಿಕ ಕೃತ್ಯಗಳಿಗಾಗಿʼ ಜೈಲಿಗೆ ಹಾಕಲ್ಪಟ್ಟವರಾಗಿದ್ದರು. ಮಿಸ್ಟರ್‌ ಬೋನಾರ್‌ ಲೋಯ ಮಾತನ್ನೇ ಹೇಳುವುದಾದರೆ, ಕಟ್ಟಡಗಳಿಗೆ ಅನಧಿಕೃತವಾಗಿ ಬೆಂಕಿಯಿಟ್ಟವರು ಕೂಡ ಯುದ್ಧ ಶುರುವಾದ ನಂತರ ಬಿಡುಗಡೆಗೊಂಡರು. ಪ್ರಪಂಚದ ಎಲ್ಲ ದೇಶಗಳಲ್ಲೂ ಉತ್ತಮವೆಂದು ಅಂಗೀಕರಿಸಿದ ಈ ಕೆಲಸವನ್ನು, ಭಾರತದಲ್ಲಿ ಮಾತ್ರ ವಿನಾಶಕಾರಿ ಎಂದು ನಂಬಲಾಗಿದೆ.

ಐದನೆಯದಾಗಿ, ಸರಿಯೋ ತಪ್ಪೋ, ಸಾವಿರಗಟ್ಟಲೆ ಜನರಿಂದ ಆರಾಧಿಸಲ್ಪಡುವವರು ಸಮಕಾಲೀನ ಚಟುವಟಿಕೆಗಳ ಎದುರಾಳಿಗಳೆಂದು ಬಗೆದು ಜೈಲಲ್ಲಿ ಕೊಳೆಸುವ ತನಕವೂ ಅಧಿಕಾರಿಗಳನ್ನು ಎದುರಿಸುವ ಒಂದು ಪರಂಪರೆಯನ್ನು, ಅವರ ಭಕ್ತರನ್ನು ಮತ್ತು ಅಂಧರಾದ ಅನುಯಾಯಿಗಳನ್ನು ಸೃಷ್ಠಿಸುತ್ತಲೇ ಇರುತ್ತದೆ. ಆದರೆ, ಈ ಮನುಷ್ಯರನ್ನು ಬಿಡುಗಡೆಗೊಳಿಸುವುದಾದರೆ, ಅವರಲ್ಲಿ ಕೆಲವರಾದರೂ ದೇಶದ ಒಳಿತಿಗಾಗಿ ಬ್ರಿಟಿಷರೊಂದಿಗೆ ಸಹಕರಿಸುವುದು ಅಪಾಯಕಾರಿಯಲ್ಲವೆಂದು ಅರ್ಥಮಾಡಿಕೊಂಡು, ಅದನ್ನು ಭಾಷಣಗಳ ಮೂಲಕ ಹೇಳಿಕೊಂಡು, ಆ ಪ್ರಭಾವಕ್ಕಾಗಿ ಉದಾಹರಣೆಯನ್ನೂ ಸೃಷ್ಠಿಸಿದರೆಂದರೆ, ಅವರನ್ನು ಮಾದರಿಯಗಿ ಕಾಣುವವರು ಒಂದು ಹೊಸದಿನ ಹುಟ್ಟಿತೆಂದೂ ಭೂತಕಾಲದ ಕತ್ತಲಿಗೆ ಸಾಹಸಯಾತ್ರೆ ಮಾಡುವುದನ್ನು ಕೈಬಿಟ್ಟುಕೊಂಡು ಶುದ್ಧಗಾಳಿ ಮತ್ತು ಸೂರ್ಯನ ಬೆಳಕು ತುಂಬಿದ ಹೊಸ ದಾರಿಯಲ್ಲಿ ಹೊಸ ಆರಂಭ ಶುರುವಾಗಿದೆಯೆಂದೂ ಅವರು ನಂಬುತ್ತಾರೆ.

ಆರನೆಯದಾಗಿ, ಭಾರತದ ಖೈದಿಗಳಲ್ಲಿ ಬಹುತೇಕ ಖೈದಿಗಳನ್ನು ಬಂಧಿಸಿರುವುದು ಗೂಢಾಲೋಚನೆ ಪ್ರಕರಣಗಳಲ್ಲಿ. ಇಂತಹ ಪ್ರಕರಣಗಲ್ಲಿ ತನ್ನ ಚಟುವಟಿಕೆಯ ಫಲದ ಜೊತೆಗೆ ಉಳಿದವರ ಚಟುವಟಿಕೆಯ ಫಲವನ್ನೂ ಸಹಿಸಬೇಕಾಗುತ್ತದೆ. ಅವರಲ್ಲಿ ಕೆಲವರು ಈಗಾಗಲೇ ಹತ್ತೋ ಒಂಭತ್ತೋ ಎಂಟೋ ವರ್ಷಗಳಿಂದ ಜೈಲಲ್ಲಿ ಕಳೆಯುತ್ತಿದ್ದಾರೆ. ಕೆಲವರು ಎರಡು ವರ್ಷಗಳಿಂದ ಕಠಿಣವೂ ತ್ರಾಸದಾಯಕವೂ ಇನ್ನಿಲ್ಲದ ಕೆಟ್ಟ ದಾಸ್ಯದಲ್ಲೂ. ಇಂಡಿಯನ್‌ ಜೈಲು ವ್ಯವಸ್ಥೆಯ ಪ್ರಕಾರವೇ, ಕಾಲ ಮತ್ತು ಆರೋಗ್ಯದ ಪರಿಸ್ಥಿತಿಯನ್ನು ಗಮನಿಸಿಕೊಂಡು ಅವರಲ್ಲಿ ಹಲವರು ಬಿಡುಗಡೆಗೆ ಅರ್ಹರಾಗಿದ್ದಾರೆ.

ಈ ಎಲ್ಲ ಕಾರಣಗಳಿಂದ ನಾನು ಈ ನಿವೇದನೆಯನ್ನು ನನ್ನ ಉತ್ತಮ ನಂಬಿಕೆ ಮತ್ತು ನಿರೀಕ್ಷೆಯೊಂದಿಗೆ ಗೃಹ ಕಾರ್ಯದರ್ಶಿಗಳು ನಮ್ಮ ದ್ವೀಪಕ್ಕೆ ಸಂದರ್ಶನ ನೀಡುವ ಸಂದರ್ಭದಲ್ಲಿ ಅವರ ಗಮನಕ್ಕೆ ಬರಬಹುದು ಎಂಬ ನಿರೀಕ್ಷೆಯೊಂದಿಗೆ ಮುಕ್ತ ಮನಸ್ಸಿನಿಂದ ಸಮರ್ಪಿಸುತ್ತಿದ್ದೇನೆ.

ಸಂಕ್ಷಿಪ್ತವಾಗಿ, ಎಲ್ಲ ನಿಷ್ಠೆಯನ್ನು ಸೇರಿಸಿಕೊಂಡು ನಾನು ಸೇರಿಸಲು ಬಯಸುವುದೇನೆಂದರೆ, ನನ್ನ ಮಾತ್ರ ಬಿಡುಗಡೆ ಬಯಸಿ ನಾನಿದನ್ನು ಬರೆಯುತ್ತಿದ್ದೇನೆಂದು ಸರಕಾರ ಭಾವಿಸುವುದೇ ಆಗಿದ್ದರೆ ಅಥವಾ ಈ ಬಿಡುಗಡೆಗೆ ನನ್ನ ಹೆಸರು ಮಾತ್ರವೇ ಅಡ್ಡಗಾಲಾಗಿ ನಿಂತಿರುವುದಾದರೆ, ಸರಕಾರ ನನ್ನ ಹೆಸರನ್ನು ಕೈಬಿಟ್ಟು ಉಳಿದ ಎಲ್ಲರನ್ನು ಬಿಡುಗಡೆ ಮಾಡಬೇಕು. ಅದು ನನಗೆ ಬಿಡುಗಡೆ ಸಿಕ್ಕಷ್ಟೇ ಸಂತೋಷವನ್ನು ನನಗೆ ನೀಡುತ್ತದೆ. ಸರಕಾರ ಅಂತಹದ್ದೊಂದು ನಿರ್ಧಾರ ತೆಗೆದುಕೊಳ್ಳುವುದೇ ಆಗಿದ್ದರೆ, ಭಾರತದಿಂದ ದೂರಕ್ಕೆ ಗಡೀಪಾರು ಶಿಕ್ಷೆಗೆ ಗುರಿಯಾದವರು ಕೂಡ ಬಿಡುಗಡೆ ಕಾಣುವಂತಾಗುತ್ತಾರೆ. ಸ್ವಂತ ನಾಡಿನಲ್ಲಿ ಅಪರಿಚಿತರಾಗಿ ಬದುಕುತ್ತಿರುವ ಅವರು ಭಾರತ ಸರಕಾರದೊಂದಿಗೆ ವಿರೋಧಿ ನಿಲುವನ್ನು ತಳೆಯುವ ಸಾಧ್ಯತೆ ಇದೆ. ಆದರೆ, ಮರಳಿ ಬರಲು ಅನುವು ಮಾಡಿಕೊಡುವುದಾದರೆ, ಈ ಹೊಸ ಮತ್ತು ನಿಜವಾದ ಸಂವಿಧಾನವನ್ನು ಕಾರ್ಯಗತಗೊಳಿಸುವುದೇ ಆಗಿದ್ದರೆ ಅವರಲ್ಲಿ ಬಹುತೇಕ ಜನರು ಮಾತೃಭೂಮಿಗಾಗಿ ಪ್ರತ್ಯಕ್ಷವಾಗಿ ಮತ್ತು ಸಂವಿಧಾನಾತ್ಮಕವಾಗಿ ಕೆಲಸವನ್ನೂ ಮಾಡುತ್ತಾರೆ.

ಗೌರವಯುತರಾದ ತಾವು ಸ್ಟೇಟ್‌ ಸೆಕ್ರೆಟರಿ ಎದುರು ನನ್ನ ನಿವೇದನೆಯನ್ನು ಸಮರ್ಪಿಸುವಲ್ಲಿ ಹಿಂದೇಟು ಹಾಕುವುದಿಲ್ಲವೆಂದು ನಂಬಿಕೊಂಡು, ಜನರಿಗಾಗಿ ಒಬ್ಬ ಖೈದಿ.

ಇತೀ ತಮ್ಮ ವಿಶ್ವಾಸಿ,

ಸಹಿ,

ವಿ.ಡಿ. ಸಾವರ್ಕರ್

Related Articles

ಇತ್ತೀಚಿನ ಸುದ್ದಿಗಳು