Home ಇನ್ನಷ್ಟು ಕೋರ್ಟು - ಕಾನೂನು ಸೌಜನ್ಯಾ ನ್ಯಾಯಕ್ಕಾಗಿ ಮತ್ತೆ ಒಂದಾದ ಧ್ವನಿ

ಸೌಜನ್ಯಾ ನ್ಯಾಯಕ್ಕಾಗಿ ಮತ್ತೆ ಒಂದಾದ ಧ್ವನಿ

0

ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಸೌಜನ್ಯಾ ಹಾಗೂ ಅಲ್ಲಿ ನಡೆದ ಅಸಹಜ ಸಾವುಗಳ ತನಿಖೆಯನ್ನು ಸಿಟ್‌ ಮೂಲಕ ನಡೆಸಬೇಕೆಂದು ಕರ್ನಾಟಕದ ಸಂವೇದನಾಶೀಲರು, ಸಂಘಟನೆಗಳು ಬೃಹತ್‌ ಪ್ರತಿಭಟನೆಯನ್ನು ಹಮ್ಮಿಕೊಂಡಿವೆ. ಈ ಹಿನ್ನೆಲೆಯಲ್ಲಿ ಸೌಜನ್ಯಾ ಪರ ಹೋರಾಟದ ಝಲಕ್‌ ಇಲ್ಲಿದೆ.

ಧರ್ಮಸ್ಥಳ ಗ್ರಾಮಪಂಚಾಯತ್‌ ವ್ಯಾಪ್ತಿಯ ಪಾಂಗಾಳ ನಿವಾಸಿ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ ಇದೀಗ ಮತ್ತೊಮ್ಮೆ ರಾಜ್ಯದೆಲ್ಲೆಡೆ ಸದ್ದು ಮಾಡುತ್ತಿದೆ. ಸೌಜನ್ಯಾ ಪರ ನ್ಯಾಯಕ್ಕಾಗಿ ಜನರು ಮತ್ತೆ ಒಂದಾಗಿ ಹೋರಾಟಕ್ಕೆ ಧುಮುಕಿದ್ದಾರೆ. 

ಇಂದು ಆಗಸ್ಟ್‌ 28ರ ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ಕೇಂದ್ರದಲ್ಲಿ ವೇದವಲ್ಲಿ, ಪದ್ಮಲತಾ ಹಾಗೂ ಸೌಜನ್ಯಾ ಅಂತೆಯೇ ತಾಲ್ಲೂಕಿನಲ್ಲಿ ನಡೆದ ಅಸಹಜ ಸಾವುಗಳ ತನಿಖೆಯನ್ನು ಎಸ್‌ಐಟಿ ಮೂಲಕ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಜನಪರ ಸಂಘಟನೆಗಳ ಒಕ್ಕೂಟ ದಕ್ಕಿಣ ಕನ್ನಡ ಹಾಗೂ ಜನಪರ ಸಂಘಟನೆಗಳ ಜಂಟಿ ವೇದಿಕೆ ಕರ್ನಾಟಕ ನೇತೃತ್ವದಲ್ಲಿ ಚಲೋ ಬೆಳ್ತಂಗಡಿ ಕಾರ್ಯಕ್ರಮ ಹಮ್ಮಿಕೊಂಡಿವೆ. 

ಸೌಜನ್ಯಾ ಅತ್ಯಾಚಾರ, ಸಾವಿನ ಸಂದರ್ಭದಲ್ಲಿ ಎಡಪಂಥೀಯ ಸಂಘಟನೆಗಳು, ಜನಪರ ಸಂಘಟನೆಗಳು ಒಗ್ಗಟ್ಟಾಗಿ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿತ್ತು. ಪ್ರಕರಣ ಸಿಒಡಿ, ಸಿಬಿಐ ತನಿಖೆಗೆ ಒಳಪಟ್ಟರೂ ಸೌಜನ್ಯಾ ಅತ್ಯಾಚಾರಿಗಳು ಇನ್ನು ಪತ್ತೆಯಾಗಿಲ್ಲ. 

ಸೌಜನ್ಯಾ ಪರ ಮಾತನಾಡಿದ್ದಕ್ಕೆ ನೋಟಿಸ್‌

‘ನಾವು ಸಿಬಿಐ ತನಿಖೆಗೆ ದೊಡ್ಡ ರೀತಿಯಲ್ಲಿ ಹೋರಾಟವನ್ನು ರೂಪಿಸಿದ್ದೆವು. ಡಿವಿ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಅವರ ಮನೆಗೂ ಮುತ್ತಿಗೆ ಹಾಕಿದ್ದೆವು. ಆದರೂ ಸಿಬಿಐಗೆ ಒಪ್ಪಿಸಿರಲಿಲ್ಲ. ಆ ನಂತರ ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾದರೂ ಸಿಬಿಐ ತನಿಖೆಗೆ ಒಪ್ಪಿಸಿರಲಿಲ್ಲ. ಆನಂತರ ಚುನಾವಣೆ ನಡೆದು ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಸಿಬಿಐ ತನಿಖೆಗೆ ಒಪ್ಪಿಸಿತ್ತು. ಶಾಸಕ ವಸಂತ ಬಂಗೇರರೂ ಸಹಕಾರ ನೀಡಿದ್ದರು. ಒಂದು ಹಂತದಲ್ಲಿ ಯಶಸ್ವಿಯೂ ಆಯಿತು’ ಎನ್ನುವುದು ಚಲೋ ಬೆಳ್ತಂಗಡಿ ಕಾರ್ಯಕ್ರಮದ ಸಂಚಾಲಕ, ಸೌಜನ್ಯಾ ಪರ ನಿರಂತರ ಧ್ವನಿ ಎತ್ತುತ್ತಲೇ ಬಂದ ಬಿಎಂ. ಭಟ್‌ ಅವರ ಅನುಭವದ ಮಾತು.

‘ನಾವು ಹತ್ತು ವರ್ಷದ ಹಿಂದೆಯೇ ಸಂತೋಷ್‌ ರಾವ್‌ ಅಪರಾಧಿ ಅಲ್ಲ ಎಂದಿದ್ದೆವು. ನ್ಯಾಯಾಲಯ 11 ವರ್ಷದ ನಂತರ ಇದೇ ಮಾತನ್ನು ಹೇಳಿದೆ. ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ತೀರ್ಪು ಬಂದಾಗ ನಾನೊಂದು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದೆ. ಸಂತೋಷ್‌ರಾವ್‌ ನಿರಪರಾಧಿ ಎಂದಾದರೆ, ಅಪರಾಧಿ ಯಾರು? ಕೇಂದ್ರದಲ್ಲಿರುವ ಸಿಬಿಐ ಈ ವಿಷಯದಲ್ಲಿ ನ್ಯಾಯ ಕೊಡುತ್ತದೆ ಎಂಬ ಭರವಸೆ ಇರಲಿಲ್ಲ. ಯಾಕೆಂದರೆ ಗುಜರಾತ್‌ನಲ್ಲಿ ಅತ್ಯಾಚಾರ ಮಾಡಿದ ಅಪರಾಧಿಗಳನ್ನು ಜೈಲಿನಿಂದ  ಬಿಡುಗಡೆಗೆ ಕ್ರಮ ಕೈಗೊಂಡ ಸರ್ಕಾರ ಕೇಂದ್ರದಲ್ಲಿದೆ. ಮಣಿಪುರದಲ್ಲಿ ಬೆತ್ತಲೆ ಮೆರವಣಿಗೆ ಮಾಡಿ, ದೌರ್ಜನ್ಯ ನಡೆಸಿದ ಸರ್ಕಾರ ಇದೆ. ಹೀಗಾಗಿ ಸಿಬಿಐಯಿಂದ ನ್ಯಾಯ ಸಿಗುವುದಿಲ್ಲ ಎನ್ನುವುದು ಅರ್ಥವಾಗಿತ್ತು. ನಾವು ರಾಜಕೀಯವನ್ನೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಸೌಜನ್ಯಾ ಹಿಂದು, ನರೇಂದ್ರ ಮೋದಿಯೂ ಹಿಂದು. ಈ ಹಿನ್ನೆಲೆಯಲ್ಲಿ ನಾನು ಮಾತನಾಡಿದ್ದೆ. ಈ ಪ್ರಕರಣ ಮರುತನಿಖೆ ಆಗಬೇಕು ಎಂದಿದ್ದೆ’. 

‘ಸಿದ್ದರಾಮಯ್ಯ ಮಹಿಳೆಯರಿಗೆ ಬೇಕಾದ ಯೋಜನೆ ಜಾರಿ ಮಾಡಿದ್ದಾರೆ. ಹೀಗಾಗಿ ನಿಜವಾಗಿ ಮಹಿಳಾಪರ ಅವರು ಇದ್ದಿದ್ದೇ ಆದರೆ ಮರುತನಿಖೆ ಮಾಡಿ ನ್ಯಾಯ ಕೊಡಿಸಬೇಕು ಎಂದಿದ್ದೆ. ಒಂದಷ್ಟು ಸೌಜನ್ಯಾ ಪ್ರಕರಣದ ಸಾಕ್ಷಿಗಳು ಆತ್ಮಹತ್ಯೆ ಮಾಡಿದ್ದೇಕೆ ಎಂದು ತನಿಖೆ ನಡೆಸುವಂತೆ ಹೇಳಿದ್ದೆ. ಇತ್ತೀಚೆಗೆ ನನಗೆ ಬೆಂಗಳೂರು ಕೋರ್ಟಿಂದ ನೋಟಿಸ್‌ ಬಂತು. ನಾನು ವೀರೇಂದ್ರ ಹೆಗ್ಗಡೆಗೆ, ಹೆಗ್ಗಡೆ ಕುಟುಂಬಕ್ಕೆ, ಧರ್ಮಸ್ಥಳ ಕ್ಷೇತ್ರಕ್ಕೆ, ಅಣ್ಣಪ್ಪ ಸ್ವಾಮಿಗೆ ಅವಮಾನ ಮಾಡಿದ್ದೇನೆಂದು ಸ್ಟೇ ಆರ್ಡರ್‌ ತಂದಿದ್ದಾರೆ. ಇದಕ್ಕೆ ಆಧಾರ ಏನು ಗೊತ್ತೇ,  ನಾನು ಸೌಜನ್ಯಾ ಅತ್ಯಾಚಾರ, ಕೊಲೆ ಮಾಡಿದ್ದು ಯಾರೇ ಆಗಿರಲಿ ಅವರನ್ನು ಹಿಡಿದು ಶಿಕ್ಷೆ ನೀಡುವಂತೆ ಆಗ್ರಹಿಸಿದ್ದೆ. ಇದರ ವಿಡಿಯೋವನ್ನೂ ನೋಟಿಸ್‌ನೊಂದಿಗೆ ಕಳುಹಿಸಿದ್ದಾರೆ. ಶೀನಪ್ಪ ಮೊದಲಾದವರು ಕೇಸ್‌ ಹಾಕಿದ್ದಾರೆ. ಶೀನಪ್ಪ ಅವರು ನನಗೆ  ಉತ್ತರಿಸಬೇಕು. ಸೌಜನ್ಯಾ ಕೊಲೆಗಾರರನ್ನು ಹಿಡಿಯಬೇಕೆಂದು ಹೇಳಿದ್ದು ವೀರೇಂದ್ರ ಹೆಗ್ಗಡೆಗೆ ಅವಮಾನ ಹೇಗೆ ಎಂದು. ಈಗ ನನಗೆ ಶೀನಪ್ಪ ಅವರ ಮೇಲೆಯೇ ಅನುಮಾನ. ಸೌಜನ್ಯಾಗೆ ನ್ಯಾಯ ಕೇಳಿದ ಕೂಡಲೇ ಕ್ಷೇತ್ರಕ್ಕೇ ಅಪಮಾನ ಎಂದು ಸ್ಟೇ ತರುವಿರಲ್ವಾ. ಅದಕ್ಕೆ ಕಾರಣ ಏನು ಎಂದು ಹೇಳಬೇಕು. ಸೌಜನ್ಯಾಳಿಗೆ ನ್ಯಾಯ ಸಿಗಬಾರದೇ. ಶೀನಪ್ಪ ಮೊದಲಾದವರನ್ನು ತನಿಖೆಗೆ ಒಳಪಡಿಸಿದರೆ ಸತ್ಯಾಂಶ ಹೊರಬರಬಹುದು’ ಎನ್ನುತ್ತಾರೆ ಬಿಎಂ ಭಟ್‌.

ಇಂದು ಬೆಳ್ತಂಗಡಿಯಲ್ಲಿ..


ಹೋರಾಟಕ್ಕೆ ಮತ್ತೆ ಇಳಿದಿದ್ದೇವೆ. 60 ಜನಪರ ಸಂಘಟನೆಗಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಈಗಾಗಲೇ ಪ್ರತಿಭಟನೆ ನಡೆಸಿದ್ದೇವೆ, ನಮಗೆ ಸೌಜನ್ಯಾ ಅತ್ಯಾಚಾರಿ ಯಾರು, ಕೊಲೆ ನಡೆಸಿದವರು ಯಾರು ಜತೆಗೆ ಈಶೀನಪ್ಪ ಯಾರು ಎಂಬುದಕ್ಕೆ ಉತ್ತರ ಬೇಕು. ಅದಕ್ಕೆ ಶೀನಪ್ಪ ಅವರೇ ಉತ್ತರ ನೀಡಬೇಕು. 

ಇದೀಗ, ಆಗಸ್ಟ್‌ 28 ರಂದು ಚಲೋ ಬೆಳ್ತಂಗಡಿ ಕಾರ್ಯಕ್ರಮವು ನಡೆಯುತ್ತಿದೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಬಂದು ಸೌಜನ್ಯಾ ಪರವಾಗಿ ನಿಲ್ಲಬೇಕು ಎಂಬುದು ಬಿಎಂಭಟ್‌ ಅವರು ಈಗಾಗಲೇ ವಿನಂತಿಸಿಕೊಂಡಿದ್ದಾರೆ.

ಹೋರಾಟದ ಪ್ರಮುಖ ಘಟನಾವಳಿಗಳು

ಸೆಪ್ಟೆಂಬರ್‌ 2013 ರಲ್ಲಿ ಬೆಳ್ತಂಗಡಿ ತಾಲ್ಲೂಕು ಕೇಂದ್ರದಲ್ಲಿ ಡಿವೈಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. 

ಅಕ್ಟೋಬರ್‌ 2013 ರಲ್ಲಿ ಡಿವೈಎಫ್‌ಐ, ಜನವಾದಿ ಮಹಿಳಾ ಸಂಘಟನೆಯಿಂದ ವಾಹನ ಜಾಥಾ ನಡೆಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಬಹಿರಂಗ ಸಭೆ ನಡೆಸಿ ಸೌಜನ್ಯಾ ನ್ಯಾಯಕ್ಕಾಗಿ ಆಗ್ರಹಿಸಲಾಗಿತ್ತು.

ಅಕ್ಟೋಬರ್‌ 2013 ರಲ್ಲಿ ಸೌಜನ್ಯಾ ಪ್ರಕರಣದ ಸಿಬಿಐ ತನಿಖಾ ವರದಿಯನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಬೆಳ್ತಂಗಡಿ ತಾಲ್ಲೂಕು ಕಚೇರಿ ಎದುರು ಡಿವೈಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು.

ಅಕ್ಟೋಬರ್‌ನಲ್ಲಿ ಸೌಜನ್ಯಾ ಹುಟ್ಟಿದ ದಿನಾಚರಣೆ ಸಂದರ್ಭದಲ್ಲಿ ನೇತೃತ್ವದಲ್ಲಿ ಡಿವೈಎಫ್‌ಐ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗಿತ್ತು.

2013ರ ನವೆಂಬರ್‌ 21ರಿಂದ 26ರ ವರೆಗೆ ಸುಪ್ರಿಂ ಕೋರ್ಟ್‌ ಸುಪರ್ದಿಯಲ್ಲಿ ಧರ್ಮಸ್ಥಳ ಸುತ್ತಮುತ್ತ ನಡೆದ ಅಸಹಜ ಸಾವುಗಳ ತನಿಖೆ ನಡೆಸಲು ಒತ್ತಾಯಿಸಿ ಸೌಜನ್ಯಾ ಮನೆಯಿಂದ ಒಂದುಕಡೆ ಮತ್ತು ಸುಳ್ಯ ತಾಲ್ಲೂಕಿನಿಂದ ಕಾಲ್ನಡಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶ ನಡೆಸಲಾಗಿತ್ತು.

ಸಂತೋಷ್‌ ನಿರಪರಾಧಿ ಎಂದು ತೀರ್ಪು ಬಂದ ಬಳಿಕ ಕರ್ನಾಟಕದಾದ್ಯಂತ ಸೌಜನ್ಯಾ ಪರ ಪ್ರತಿಭಟನೆ ವ್ಯಕ್ತವಾಗಿದೆ.

You cannot copy content of this page

Exit mobile version