Thursday, June 13, 2024

ಸತ್ಯ | ನ್ಯಾಯ |ಧರ್ಮ

ಸೌಜನ್ಯಾ ಪ್ರಕರಣ | ಪ್ರಶ್ನೆಗಳು, ಅನುಮಾನಗಳು, ಅಸಹಾಯಕತೆ…

ರಾಜೀವ ಗಾಂಧಿ ಹತ್ಯೆಯಲ್ಲಿ ಸೂಕ್ತ ಸುಳಿವುಗಳೇ ಸಿಗದಿದ್ದಾಗಲೂ ಪ್ರತಿಯೊಬ್ಬ ಆರೋಪಿಯನ್ನೂ ಬೇಟೆಯಾಡಿದವರು, ಗೌರಿ ಲಂಕೇಶ್ ಹತ್ಯೆಯ ಬಗ್ಗೆ ತಿಲಮಾತ್ರ ಸುಳಿವು ಇಲ್ಲವಾದಾಗಲೂ ಬೆರಗು ಗೊಳಿಸುವ ರೀತಿಯಲ್ಲಿ ಕಾರ್ಯಾಚರಿಸಿ ಪ್ರತಿಯೊಬ್ಬ ಆರೋಪಿಯನ್ನೂ ಹಿಡಿದು ಕಂಬಿಯ ಹಿಂದೆ ತಳ್ಳಿದವರು ನಮ್ಮ ಪೊಲೀಸರು. ನಮ್ಮ ಪೊಲೀಸರು ಮನಸು ಮಾಡಿದರೆ, ತನಿಖೆಯನ್ನು ಸೂಕ್ತ ಅಧಿಕಾರಿಗಳಿಗೆ ವಹಿಸಿದರೆ ಮತ್ತು ಸರಕಾರ ಅವರಿಗೆ ಪೂರ್ಣ ಸ್ವಾತಂತ್ರ್ಯ ನೀಡಿದರೆ ಅವರು ಎಂತಹ ಪ್ರಕರಣಗಳನ್ನೂ ಭೇದಿಸಬಲ್ಲರು – ಶ್ರೀನಿವಾಸ ಕಾರ್ಕಳ

ಬರ್ಬರ ಅತ್ಯಾಚಾರ ಮತ್ತು ಕೊಲೆಗೆ ಈಡಾದ ಧರ್ಮಸ್ಥಳದ ಯುವತಿ ಸೌಜನ್ಯಾಳದ್ದು ನಿಜಕ್ಕೂ ದುರದೃಷ್ಟದಲ್ಲಿ ದುರದೃಷ್ಟ. ಬಡವರ ಮನೆಯ ಹೆಣ್ಣಾದ ಕಾರಣಕ್ಕೆ, ಮಾನವರು ಎಂದು ಹೇಳಿಕೊಳ್ಳಲು ಅನರ್ಹರಾದ ಮಂದಿಯ ಕೈಯಲ್ಲಿ ಆಕೆ ನರಕ ಯಾತನೆ ಅನುಭವಿಸಿ, ಎಳೆಯ ಹರೆಯದಲ್ಲಿ (17.ವ) ತನ್ನ ಜೀವನ ಪಯಣವನ್ನು ಕೊನೆಗೊಳಿಸಬೇಕಾಯಿತು. ಎರಡನೆಯದಾಗಿ, ಆಕೆಯ ಅತ್ಯಾಚಾರ ಮತ್ತು ಹತ್ಯೆ ನಡೆದುದು (9, ಅಕ್ಟೋಬರ್, 2012) ದೇಶದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾದ ದೆಹಲಿ ಯುವತಿಯ (23 ವ.) ಬರ್ಬರ ಅತ್ಯಾಚಾರ ಮತ್ತು ಹತ್ಯೆಯ (16 ಡಿಸೆಂಬರ್, 2012) ಕೇವಲ ಎರಡು ತಿಂಗಳ ಮೊದಲು.

ದೆಹಲಿಯ ಯುವತಿ, ಫಿಸಿಯೋಥೆರಪಿ ವಿದ್ಯಾರ್ಥಿನಿ ಜ್ಯೋತಿ ಸಿಂಗ್ ಪಾಂಡೆ (ನಿರ್ಭಯಾ)ಯನ್ನು ಬಸ್ ನಲ್ಲಿ ಅಮಾನುಷವಾಗಿ ಅತ್ಯಾಚಾರ ಮಾಡಿ, ಆಕೆ ಸಾಯುವಂತೆ ಮಾಡಿದ ಘಟನೆ ದೇಶದಾದ್ಯಂತ ತೀವ್ರ ಸಂಚಲನ ಉಂಟು ಮಾಡಿತು (ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದ್ದುದರಿಂದ ಬಲಪಂಥೀಯ ಶಕ್ತಿಗಳು, ಬಲಪಂಥೀಯ ಒಲವಿನ ಮಾಧ್ಯಮ ಇದರಲ್ಲಿ ದೊಡ್ಡ ಪಾತ್ರ ವಹಿಸಿದವು). ಆದ್ದರಿಂದ, ಜನರಲ್ಲಿ ಹೊಸ ಎಚ್ಚರ ಮೂಡುವಂತಾಯಿತು, ಸರಕಾರಗಳೂ ಎಚ್ಚೆತ್ತುಕೊಳ್ಳುವಂತಾಯಿತು.

ದೆಹಲಿ ಪ್ರಕರಣದ ಪರಿಣಾಮವಾಗಿ ನ್ಯಾ. ವರ್ಮಾ ಅವರ ನೇತೃತ್ವದ ತ್ರಿಸದಸ್ಯ ಸಮಿತಿ (ಮಾಜಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಹ್ಮಣ್ಯಂ ಮತ್ತು ಜಸ್ಟಿಸ್ ಲೀಲಾ ಸೇಠ್ ಸದಸ್ಯರು) ನೇಮಕವಾಗಿ, ಅದರ ಶಿಫಾರಸುಗಳ ಅನುಸಾರ ಲೈಂಗಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಅತ್ಯಂತ ಕಠಿಣ ಕಾನೂನು ಜಾರಿಗೆ ಬಂದಿತು. ಆನಂತರ ಎಲ್ಲೇ ಅತ್ಯಾಚಾರ ಪ್ರಕರಣಗಳು ನಡೆಯಲಿ, ಆರೋಪಿಗಳ ಮೇಲೆ ಕಠಿಣ ಕ್ರಮ ಜರುಗಿಸಲು ಪೊಲೀಸರಿಗೆ ಮತ್ತು ನ್ಯಾಯಾಂಗಕ್ಕೆ ಹೊಸ ಅಸ್ತ್ರ ದೊರೆತಂತಾಯಿತು. ವಿಶೇಷವಾಗಿ ಅತ್ಯಾಚಾರ ಪ್ರಕರಣಗಳನ್ನು ಲಘುವಾಗಿ ಪರಿಗಣಿಸುವುದನ್ನು ಪೊಲೀಸರು ನಿಲ್ಲಿಸಿದರು.

ಆದರೆ, ಈಗಾಗಲೇ ಉಲ್ಲೇಖಿಸಿದ ಹಾಗೆ, ದುರದೃಷ್ಟವಶಾತ್ ಸೌಜನ್ಯಾ ಪ್ರಕರಣ ನಡೆದುದು ಇದಕ್ಕೆ ಎರಡು ತಿಂಗಳ ಹಿಂದೆ. ಸದರಿ ಪ್ರಕರಣವನ್ನು ಎರಡು ಕಾರಣಕ್ಕೆ ಪೊಲೀಸರು ಗಂಭೀರವಾಗಿ ಪರಿಗಣಿಸದಿರುವ ಅನುಮಾನವಿದೆ. ಮೊದಲನೆಯದಾಗಿ, ಸೌಜನ್ಯ ಬಡವರ ಮನೆಯ ಮಗಳು. ಸಾಮಾಜಿಕವಾಗಿಯಾಗಲೀ, ರಾಜಕೀಯವಾಗಿಯಾಗಲೀ ಪ್ರಭಾವಿಗಳ ಮಗಳಲ್ಲ. ಬಡವರ ಮನೆಯ ಮಕ್ಕಳ ವಿಷಯ ಬಂದಾಗ ನಮ್ಮ ಪೊಲೀಸ್ ವ್ಯವಸ್ಥೆ ಹೇಗೆ ನಡೆದುಕೊಳ್ಳುತ್ತದೆ ಎನ್ನುವುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ.  ‘ನಮ್ಮ ಮಗಳು ಕಾಣಿಸುತ್ತಿಲ್ಲ., ಮನೆಯಿಂದ ಹೋದವಳು ಬಂದಿಲ್ಲ’ ಎಂದು ಬಡ ತಂದೆ ತಾಯಿ ದೂರಿತ್ತರೆ, ಬಹುತೇಕ ಬಾರಿ ನಮ್ಮ ಪೊಲೀಸರು, ‘ಎಲ್ಲೋ ಹೋಗಿರಬಹುದು, ಯಾರೊಂದಿಗೋ ಹೋಗಿರಬಹುದು, ಬರುತ್ತಾಳೆ ಬಿಡಿ…’ ಎಂದು ಸಾಗ ಹಾಕುತ್ತಾರೆ. ಕ್ರಮ ಜರುಗಿಸಲೇಬೇಕಾದ ಅಮೂಲ್ಯ ವೇಳೆಯನ್ನು ಹಾಳು ಮಾಡುತ್ತಾರೆ. ಬಡವರ ವಿಚಾರದಲ್ಲಿ ಪೊಲೀಸರ  ಇಂಥ ಉದಾಸೀನ ನಿಲುವಿನ ಕಾರಣವಾಗಿಯೇ ಸಯನೈಡ್ ಮೋಹನ್ ಕೈಯಲ್ಲಿ 20 ಯುವತಿಯರು ಜೀವ ಕಳೆದುಕೊಳ್ಳಬೇಕಾಯಿತು ಎಂಬುದನ್ನು ಮರೆಯದಿರೋಣ.

ಸಯನೈಡ್ ಮೋಹನ್‌ ಪ್ರಕರಣ

ಎರಡನೆಯದಾಗಿ, ಸೌಜನ್ಯಾ ಪ್ರಕರಣದಲ್ಲಿ ಜನರು ಅನುಮಾನ ಮೂಡಿಸಿದ್ದು ಸಾರ್ವಜನಿಕವಾಗಿ ಅತ್ಯಂತ ಪ್ರಭಾವಿ ಎನಿಸಿಕೊಂಡವರ ಮೇಲೆ. ಎಷ್ಟು ಪ್ರಭಾವಿ ಎಂದರೆ, ಸರಕಾರವೇ ಅವರ ಮುಂದೆ ಮಂಡಿಯೂರುತ್ತದೆ. ಹಾಗಾಗಿ, ಅದೇ ಸರಕಾರಿ ವ್ಯವಸ್ಥೆಯ ಭಾಗವಾದ ಪೊಲೀಸರೂ ಇಲ್ಲಿ ನಿಜ ಕರ್ತವ್ಯ ದಕ್ಷತೆಯನ್ನು ತೋರಿರದ ಸಾಧ್ಯತೆಯೂ ಇದೆ. ಸಂತೋಷ್ ರಾವ್ ನನ್ನು ಖುಲಾಸೆಗೊಳಿಸಿದ ಸಂದರ್ಭದಲ್ಲಿ ನ್ಯಾಯಾಲಯ ಕೂಡಾ ಈ ಲೋಪವನ್ನು ಎತ್ತಿ ತೋರಿಸಿದೆ. ‘ಸಂತ್ರಸ್ತೆಯ ಯೋನಿದ್ರವವನ್ನು ಒಣಗಿಸಿಡಬೇಕಿತ್ತು, ಹಾಗೆ ಮಾಡದ ಕಾರಣವಾಗಿ ಅದರಲ್ಲಿ ಫಂಗಸ್ ಬೆಳೆದು ಡಿ ಎನ್ ಎ ಪರೀಕ್ಷೆ ಸೂಕ್ತ ಸಾಕ್ಷ್ಯ ಒದಗಿಸದಂತಾಯಿತು’ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಎಲ್ಲರಿಗೂ ಗೊತ್ತಿದ್ದ ವಿಚಾರ

ನಿರ್ಭಯಾ ಪ್ರಕರಣ
ಪ್ರಕರಣದ ಆರೋಪಿ ಸಂತೋಷ್ ರಾವ್ ನ ತನಿಖೆ ನಮ್ಮ ಇಡೀ ನ್ಯಾಯದಾನ ವ್ಯವಸ್ಥೆ ಎಷ್ಟೊಂದು ಹಾಸ್ಯಾಸ್ಪದವಾಗಿ ಕೆಲಸ ಮಾಡುತ್ತದೆ ಎಂಬುದಕ್ಕೆ ಕನ್ನಡಿ ಹಿಡಿದಂತಿತ್ತು. ಸೌಜನ್ಯಾ 17 ರ ಹರೆಯದ ದಷ್ಟಪುಷ್ಟ ಹೆಣ್ಣುಮಗಳು. ಹಳ್ಳಿಯ ಹೆಣ್ಣುಮಗಳು ಎಂದರೆ ಅವರು ಎಷ್ಟು ಬಲಶಾಲಿಗಳಾಗಿರುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಂತಹ ಯುವತಿಯನ್ನು ಯಃಕಶ್ಚಿತ್ ನರಪೇತಲನಂತಿರುವ ಸಂತೋಷ ರಾವ್ ಎತ್ತಿಕೊಂಡು ಹೋಗಿ ಅತ್ಯಾಚಾರ ಮಾಡಿ ಕೊಲೆ ಮಾಡುವುದು ಸಾಧ್ಯವೇ?! ಕಾಮನ್ ಸೆನ್ಸ್ ಇರುವ ಯಾರಿಗೂ, ಇದರಲ್ಲಿ ಒಬ್ಬರಲ್ಲ ಕನಿಷ್ಠ ಮೂರು ನಾಲ್ಕು ಮಂದಿ ಒಳಗೊಂಡಿದ್ದಾರೆ ಎನ್ನುವುದು ಅರ್ಥವಾಗುವಂತಿತ್ತು. ಹಾಗಾಗಿಯೇ ಸಂತೋಷ್ ರಾವ್ ನನ್ನು ಪೊಲೀಸರು ಬಂಧಿಸಿದಾಗ ಪ್ರತಿಯೊಬ್ಬರೂ ಸಂಶಯ ವ್ಯಕ್ತಪಡಿಸಿದರು, ಆತ ಖಂಡಿತಾ ಆ ಕೃತ್ಯ ಎಸಗಿದವನಲ್ಲ ಎಂದು ಹೇಳಿದ್ದರು.

ಆದರೂ ಆತನನ್ನು ಬಂಧಿಸಿ ಹತ್ತು ವರ್ಷಗಳ ಕಾಲ ನ್ಯಾಯಾಲಯದಲ್ಲಿ ವಾದ ಪ್ರತಿವಾದ ಮಾಡಿ ಕೊನೆಗೆ ಬಂದ ತೀರ್ಪು ಏನು? ಆತ ನಿರಪರಾಧಿ ಎಂದು! ಅಪರಾಧಿಗಳನ್ನು ಹಿಡಿಯುವ ಇದೆಂತಹ ಪೊಲೀಸ್ ವೈಖರಿ! ಸಂತೋಷ್ ರಾವ್ ಆರೋಪಿ ಎಂದು ಸಾರ್ವಜನಿಕರ ಮುಂದೆ ಬಿಂಬಿಸಿದ ಪೊಲೀಸರು ಪ್ರಕರಣದ ಇತರ ಮಗ್ಗುಲುಗಳನ್ನು ತನಿಖೆ ಮಾಡುವ, ಒಳಗೊಂಡಿರಬಹುದಾದ ಇತರರನ್ನು ಪತ್ತೆ ಹಚ್ಚುವ ಕೆಲಸವನ್ನೇ ನಿಲ್ಲಿಸಿದರು. ಇದು ಪೊಲೀಸ್ ತನಿಖೆಯ ಒಂದು ಮಾಮೂಲು ವಿಧಾನ ಕೂಡಾ. ಸಾರ್ವಜನಿಕ ಆಕ್ರೋಶ ತಣಿಸಲು ಯಾರನ್ನೋ ಬಂಧಿಸುತ್ತಾರೆ, ವರ್ಷ ವರ್ಷಗಳ ಕಾಲ ತನಿಖೆ ನಡೆದು ಬಂಧಿತ ವ್ಯಕ್ತಿ ನಿರಪರಾಧಿ ಎಂದು ತೀರ್ಮಾನವಾಗುತ್ತದೆ, ಅಷ್ಟಾಗುವಾಗ ನಿಜ ಆರೋಪಿಗಳು ತಪ್ಪಿಸಿಕೊಂಡು ಹಾಯಾಗಿರುತ್ತಾರೆ. ಕೇಸು ಹಳ್ಳ ಹಿಡಿದಿರುತ್ತದೆ.

ಸೌಜನ್ಯಾ ಪ್ರಕರಣದಲ್ಲಿಯೂ ಆಗಿರುವುದು ಹೀಗೆಯೇ ಅಲ್ಲವೇ? ಆಕೆಯನ್ನು ಯಾರು ಕೊಂದುದು ಎಂಬುದು ಇಬ್ಬರಿಗಂತೂ ಸ್ಪಷ್ಟವಾಗಿ ಗೊತ್ತಿದೆ. ಸೌಜನ್ಯಾಗೆ ಮತ್ತು ಆಕೆಯ ಹಂತಕರಿಗೆ. ಸತ್ಯ ಹೇಳಲು ಸೌಜನ್ಯಾ ಬದುಕಿಲ್ಲ. ಹಂತಕರು ಯಾರು ಎಂಬುದು ನ್ಯಾಯಾಲಯ ಮೂಲಕ ತೀರ್ಮಾನವಾಗಿಲ್ಲದಿರಬಹುದು, ಆದರೆ ಅವರು ಪತ್ತೆಯಾಗಿಲ್ಲದಿರುವುದು, ಆ ಕಾರಣ ಹಾಯಾಗಿ ಓಡಾಡಿಕೊಂಡಿರುವುದು ಸತ್ಯವೇ ಅಲ್ಲವೇ?

ಹೈ ಪ್ರೊಫೈಲ್ ಪ್ರಕರಣಗಳು

ಮುಂಬೈ ಶಕ್ತಿಮಿಲ್ ಪ್ರಕರಣ

ದೆಹಲಿ ಪ್ರಕರಣದ ಯುವತಿಯಾಗಲೀ, ಮುಂಬೈ ಶಕ್ತಿಮಿಲ್ ಪ್ರಕರಣದ (22, ಆಗಸ್ಟ್ 2013) ಯುವತಿಯಾಗಲೀ, ಹೈದರಾಬಾದ್ ಪ್ರಕರಣದ (28, ನವೆಂಬರ್ 2019) ಯುವತಿಯಾಗಲೀ, ಇವರೆಲ್ಲ ತಕ್ಕ ಮಟ್ಟಿಗೆ ಪ್ರಭಾವೀ ಕುಟುಂಬಗಳಿಂದ ಬಂದವರು. ಹಾಗಾಗಿ ಇವರ ಪ್ರಕರಣಗಳನ್ನು ಮಾಧ್ಯಮಗಳು ಗಂಭೀರವಾಗಿ ತೆಗೆದುಕೊಂಡು ವರದಿ ಮಾಡಿದವು, ಪರಿಣಾಮವಾಗಿ ಪೊಲೀಸರೂ ಗಂಭೀರವಾಗಿ ಕೆಲಸ ಮಾಡುವಂತಾಯಿತು, ಪ್ರಕರಣದ ಪ್ರತಿಯೊಬ್ಬ ಆರೋಪಿಯನ್ನೂ ಬಂಧಿಸುವುದು ಸಾಧ್ಯವಾಯಿತು. ದೆಹಲಿ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲಾಯಿತು. ಮುಂಬೈ ಶಕ್ತಿಮಿಲ್ ಪ್ರಕರಣದ ಅಪರಾಧಿಗಳಿಗೆ ಜೀವಾವಧಿಯಂತಹ ಶಿಕ್ಷೆಯಾಯಿತು. ಹೈದರಾಬಾದ್ ಪ್ರಕರಣದ ಆರೋಪಿಗಳು ಪೊಲೀಸ್ ಎನ್ ಕೌಂಟರ್ ಗೆ ಬಲಿಯಾದರು. ಆದರೆ ಸೌಜನ್ಯಾ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆಯಾಗುವ ಮಾತಂತಿರಲಿ, ಅವರ ಬಂಧನವೂ ಆಗಿಲ್ಲ ಎಂದರೆ ಏನನ್ನೋಣ? ಇದರ ಹಿಂದಿರುವುದು ಆಕೆ ಬಡವರ ಮಗಳು, ಪ್ರಭಾವಿಗಳ ಮಗಳಲ್ಲ ಎಂಬ ಕಾರಣವೇ? ದೇಶದಲ್ಲಿ ಬಡವರಿಗೊಂದು ಧನಿಕರಿಗೊಂದು ಎಂದು ಎರಡು ತೆರನ ನ್ಯಾಯ ವ್ಯವಸ್ಥೆ ಇದೆಯೇ?

ಸೌಜನ್ಯಾಳ ನ್ನು ಅತ್ಯಾಚಾರ ನಡೆಸಿ ಕೊಂದುದು ನಿಜವಲ್ಲವೇ? ನ್ಯಾಯಾಲಯವೇ ಈಗ ತೀರ್ಪು ನೀಡಿರುವ ಪ್ರಕಾರ ಸಂತೋಷ್ ರಾವ್ ಆ ಕೃತ್ಯ ಎಸಗಿದುದು ಅಲ್ಲ ಅಲ್ಲವೇ? ಹಾಗಾದರೆ ಆಕೆಯನ್ನು ಕೊಂದವರು ಯಾರು, ಆ ಆರೋಪಿಗಳನ್ನು ಬಂಧಿಸಿ ಶಿಕ್ಷಿಸಿ ಎಂದಷ್ಟೇ ಅಲ್ಲವೇ ಸೌಜನ್ಯಾ ಕುಟುಂಬದವರು ಮತ್ತು ಸಾರ್ವಜನಿಕರು ಹೇಳುತ್ತಿರುವುದು? ಧರ್ಮಸ್ಥಳದಲ್ಲಿ ಅತ್ಯಂತ ಶಕ್ತಿಶಾಲಿ ಎಂದು ಕೊಂಡಿರುವ ಅಣ್ಣಪ್ಪ ಮತ್ತು ಮಂಜುನಾಥ ಎಂಬ ದೈವ ದೇವರುಗಳಿದ್ದಾರೆ. ಅವರು ಎಂತೆಂತಹದೋ ಪ್ರಕರಣಗಳ ಅಪರಾಧಿಗಳು ಶಿಕ್ಷೆ ಅನುಭವಿಸುವಂತೆ ಮಾಡಿದ ಬಗ್ಗೆ ಜನರಲ್ಲಿ ನಂಬಿಕೆ ಇದೆ. ಅವರಾದರೂ ಈ ಕೊಲೆ ಪ್ರಕರಣದ ಅಪರಾಧಿಗಳನ್ನು ಶಿಕ್ಷಿಸಿ ಆ ಮೂಲಕ ಅವರ ಮೇಲೆ ಜನರಿಗೆ ಇನ್ನಷ್ಟು ವಿಶ್ವಾಸ ಮೂಡುವಂತೆ ಮಾಡಬಹುದಲ್ಲವೇ? ಯಾಕೆ ಮಾಡುತ್ತಿಲ್ಲ?!

ಶಿಕ್ಷೆಯಿಂದ ನ್ಯಾಯ ಸಾಧ್ಯವೇ?

ಸೌಜನ್ಯಾ ಪ್ರಕರಣದ ಅಪರಾಧಿಗಳನ್ನು ಶಿಕ್ಷಿಸಿದಾಕ್ಷಣ ಸೌಜನ್ಯಳಿಗೆ ನ್ಯಾಯ ದೊರಕುತ್ತದೆಯೇ? ಇಲ್ಲ. ಆಕೆಗೆ ಮರಳಿ ಜೀವ ಕೊಡುವುದು, ಬದುಕು ಕೊಡುವುದು ಸಾಧ್ಯವಾದಾಗ ಮಾತ್ರ ನಿಜವಾದ ನ್ಯಾಯ ಸಿಗುವುದು ಸಾಧ‍್ಯ. ಅದು ಸಾಧ‍್ಯವಿಲ್ಲದ ಮಾತು. ಆದರೆ, ಅಪರಾಧಿಗಳಿಗೆ ಶಿಕ್ಷೆಯಾದಾಗ ಎರಡು ಸಕಾರಾತ್ಮಕ ಪರಿಣಾಮಗಳಾಗುತ್ತವೆ. ಮೊದಲನೆಯದಾಗಿ, ಮುಂದೆ ಅಪರಾಧ ಕೃತ್ಯ ಎಸಗುವವರಲ್ಲಿ ಭಯ ಮೂಡುತ್ತದೆ, ಅವರು ಅಪರಾಧ ಕೃತ್ಯ ನಡೆಸುವುದನ್ನು ತಡೆಯುವುದು ಸಾಧ್ಯವಾಗುತ್ತದೆ (ಕೆಲ ಇಸ್ಲಾಮಿಕ್ ದೇಶಗಳ ಶಿಕ್ಷೆಯನ್ನು ನೆನಪಿಸಿಕೊಳ್ಳಿ). ಇನ್ನಷ್ಟು ಹೆಣ್ಣುಮಕ್ಕಳ ಮಾನ ಮತ್ತು ಪ್ರಾಣ ಉಳಿಯುತ್ತದೆ. ಎರಡನೆಯದಾಗಿ, ನಮ್ಮ ನ್ಯಾಯ ವ್ಯವಸ್ಥೆಯ ಬಗ್ಗೆ ಗೌರವ, ಅದರ ಮೇಲೆ ವಿಶ‍್ವಾಸ ಮೂಡುತ್ತದೆ.

ಬೆಳ್ತಂಗಡಿಯಲ್ಲಿ ಸೌಜನ್ಯಾ ಪರ ಹೋರಾಟ

ಪ್ರಕರಣ ನಡೆದು 11 ವರ್ಷಗಳು ಸಂದಿವೆ. ಸೌಜನ್ಯಾಳ ತಾಯಿ ಮತ್ತು ಸಂಬಂಧಿಕರ ಹೋರಾಟ ಈಗಲೂ ಮುಂದುವರಿದಿದೆ. ಅವರ ಬೇಡಿಕೆ ತೀರಾ ಸಣ್ಣದು. ಆರ್ಥಿಕ ಪರಿಹಾರ ಅಲ್ಲ. ಕೇವಲ ಸೌಜನ್ಯಾಳ ಹತ್ಯೆಯ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಿ ಎನ್ನುವುದು. ಇದು ಸಾಧ್ಯವಿಲ್ಲ ಎನ್ನುತ್ತೀರಾ? ನಮ್ಮ ಪೊಲೀಸರು ಮನಸು ಮಾಡಿದರೆ, ತನಿಖೆಯನ್ನು ಸೂಕ್ತ ಅಧಿಕಾರಿಗಳಿಗೆ ವಹಿಸಿದರೆ ಮತ್ತು ಸರಕಾರ ಅವರಿಗೆ ಪೂರ್ಣ ಸ್ವಾತಂತ್ರ್ಯ ನೀಡಿದರೆ ಅವರು ಎಂತಹ ಪ್ರಕರಣಗಳನ್ನೂ ಭೇದಿಸಬಲ್ಲರು. ಅಂತಹ ದಕ್ಷ ಪೊಲೀಸರು ನಮ್ಮಲ್ಲಿದ್ದಾರೆ.

ರಾಜೀವ ಗಾಂಧಿ ಹತ್ಯೆಯಲ್ಲಿ ಸೂಕ್ತ ಸುಳಿವುಗಳೇ ಸಿಗದಿದ್ದಾಗಲೂ ಪ್ರತಿಯೊಬ್ಬ ಆರೋಪಿಯನ್ನೂ ಬೇಟೆಯಾಡಿದವರು ನಮ್ಮ ಪೊಲೀಸರು. ಗೌರಿ ಲಂಕೇಶ್ ಹತ್ಯೆಯ ಬಗ್ಗೆ ತಿಲಮಾತ್ರ ಸುಳಿವು ಇಲ್ಲವಾದಾಗಲೂ ಬೆರಗು ಗೊಳಿಸುವ ರೀತಿಯಲ್ಲಿ ಕಾರ್ಯಾಚರಿಸಿ ಪ್ರತಿಯೊಬ್ಬ ಆರೋಪಿಯನ್ನೂ ಹಿಡಿದು ಕಂಬಿಯ ಹಿಂದೆ ತಳ್ಳಿದವರು, ಆಮೂಲಕ ಅನೇಕ ಸಾಹಿತಿ, ಚಿಂತಕರ ಕೊಲೆಗಳನ್ನು ತಡೆದವರು ನಮ್ಮ ಪೊಲೀಸರು. ದೆಹಲಿ ಯುವತಿಯ ಅತ್ಯಾಚಾರಿಗಳು, ಮುಂಬೈ ಶಕ್ತಿಮಿಲ್ ಅತ್ಯಾಚಾರಿಗಳು, ಹೈದರಾಬಾದ್ ಯುವತಿಯ ಅತ್ಯಾಚಾರಿಗಳು ಹೀಗೆ ಪ್ರತಿಯೊಬ್ಬರನ್ನೂ ಗಂಟೆಗಳಲ್ಲಿ ಪತ್ತೆ ಹಚ್ಚಿದವರು ನಮ್ಮ ಪೊಲೀಸರು.

ಅವುಗಳಿಗೆ ಹೋಲಿಸಿದರೆ ಸೌಜನ್ಯಾ ಪ್ರಕರಣ ತೀರಾ ಸರಳವಾದುದು. ಅದರ ಅಪರಾಧಿಗಳನ್ನು ಪತ್ತೆ ಹಚ್ಚಿ ನ್ಯಾಯಾಲಯದ ಕಟ ಕಟೆಯಲ್ಲಿ ನಿಲ್ಲಿಸುವುದು ನಮ್ಮ ಪೊಲೀಸರಿಗೆ ಒಂದು ಸವಾಲೇ ಅಲ್ಲ. ಅದನ್ನು ಮಾಡಿತೋರಿಸಲಿ ಎಂಬುದಷ್ಟೇ ಸೌಜನ್ಯಾಪರ ದನಿ ಎತ್ತಿರುವ ಪ್ರತಿಯೊಬ್ಬರ ಬೇಡಿಕೆ ಮತ್ತು ಆಗ್ರಹ.

ಶ್ರೀನಿವಾಸ ಕಾರ್ಕಳ

ಚಿಂತಕರೂ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡವರು.

ಇದನ್ನೂ ಓದಿ- ಸೌಜನ್ಯಾ ನ್ಯಾಯಕ್ಕಾಗಿ ಮತ್ತೆ ಒಂದಾದ ಧ್ವನಿ

Related Articles

ಇತ್ತೀಚಿನ ಸುದ್ದಿಗಳು