Thursday, August 21, 2025

ಸತ್ಯ | ನ್ಯಾಯ |ಧರ್ಮ

ಮತ್ತೆ ಅದೇ ಸುಳ್ಳಿನ ಮುಖ ನೋಡಿ ಬಿಜೆಪಿಗೆ ಮತ ಹಾಕಿದರೆ ಆ ಮತಕ್ಕೆ ಘನತೆ ಬರುತ್ತದಾ: ಸಿ.ಎಂ ಪ್ರಶ್ನೆ

ಬೆಂಗಳೂರು ಏ 7: ನಾವು ಬರೀ ಭಾವನಾತ್ಮಕವಾಗಿ ನಿಮ್ಮನ್ನು ಕೆರಳಿಸಿ ವಂಚಿಸಲ್ಲ. ನಿಮ್ಮ ಭಾವನೆಗಳನ್ನು ಗೌರವಿಸುತ್ತಲೇ ನಿಮ್ಮ ಬದುಕಿಗೆ ಸ್ಪಂದಿಸುತ್ತೇವೆ. ಆದ್ದರಿಂದ ಕಾಂಗ್ರೆಸ್ ಗೆಲ್ಲಿಸಿ ದೇಶ ಉಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಸೌಮ್ಯರೆಡ್ಡಿ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡು, ಆರು ಕಿಲೋಮೀಟರ್ ರೋಡ್ ಶೋ ನಡೆಸಿ ಮತಯಾಚಿಸಿ ಮಾತನಾಡಿದರು.

ಸಂಸದ ತೇಜಸ್ವಿ ಸೂರ್ಯ ಸಂಸದರಾಗಿ ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ಒಮ್ಮೆಯೂ ಧ್ವನಿ ಎತ್ತಿಲ್ಲ. ಮೋದಿ ಮುಖ ತೋರಿಸಿ ಓಟು ಕೇಳುವ ದುರ್ಗತಿ ಬಿಜೆಪಿಗೆ ಬಂದಿದೆ. ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಮತ ಕೇಳುವ ಮುಖ ಇಲ್ಲ. ಏಕೆಂದರೆ ಇವರು ಅಭಿವೃದ್ಧಿ ಕಾರ್ಯಗಳನ್ನೇ ಮಾಡಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷಗಳಲ್ಲಿ ಭಾರತೀಯರಿಗೆ ಕೊಟ್ಟ ಒಂದು ಮಾತನ್ನೂ ಉಳಿಸಿಕೊಂಡಿಲ್ಲ. ಕಪ್ಪುಹಣ ವಾಪಾಸ್ ತರಲಿಲ್ಲ. ಭಾರತೀಯರ ಖಾತೆಗೆ 15 ಲಕ್ಷ ಹಾಕಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದ ಮೋದಿ ರೈತರ ಖರ್ಚು ಹೆಚ್ಚಾಗುವಂತೆ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ, ಬೇಳೆ ಕಾಳುಗಳ ಬೆಲೆ ಇಳಿಸಲಿಲ್ಲ. ಮತ್ತೆ ಅದೇ ಮುಖ ನೋಡಿ ಮತ ಹಾಕಿದರೆ ಆ ಮತಕ್ಕೆ ಘನತೆ ಬರುತ್ತದಾ ಎಂದು ಪ್ರಶ್ನಿಸಿದರು.‌

ಸೌಮ್ಯರೆಡ್ಡಿ ಗೆದ್ದರೆ ನಾನು ಗೆದ್ದಂತೆ. ನಿಮ್ಮ ಹೃದಯದ ಮಾತು ಕೇಳಿ ಮತ ಹಾಕಿ. ಬರೀ ಭಾವನಾತ್ಮಕವಾಗಿ ಕೆರಳಿ ಮತ ಹಾಕಿದ್ದಕ್ಕೆ ಹತ್ತು ವರ್ಷದಲ್ಲಿ ದೇಶಕ್ಕೆ, ನಿಮಗೆ ಸಿಕ್ಕಿದ್ದೇನು ಎಂದು ಪ್ರಶ್ನಿಸಿ ಸೌಮ್ಯರೆಡ್ಡಿಯವರನ್ನು ಗೆಲ್ಲಿಸಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸಹಕರಿಸಿ ಎಂದು ಕೋರಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page