Friday, June 14, 2024

ಸತ್ಯ | ನ್ಯಾಯ |ಧರ್ಮ

ದೀಪಾವಳಿ ತರದಿರಲಿ ಬದುಕಲ್ಲಿ ಕತ್ತಲೆ..

ಪಟಾಕಿ ಸಿಡಿಸುವುದರಿಂದ ಆಗುವ ಅನಾಹುತ, ಅದು ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು, ಪರಿಸರದ ಮೇಲೆ ಬೀರುವ ಹಾನಿ ಇತ್ಯಾದಿಗಳ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ದಿವಾಕರ್‌ ಡಿ.

ಎರಡು ವರ್ಷದಿಂದ ಕೋವಿಡ್‌ ಕಾರಣಕ್ಕೆ ಕಳೆಗುಂದಿದ್ದ ದೀಪಾವಳಿಯು ಈ ಬಾರಿ ಪಟಾಕಿಗಳ ಸದ್ದಿನೊಂದಿಗೆ ಹೆಚ್ಚಿನ ಸಂಭ್ರಮದೊಂದಿಗೆ  ಆಚರಣೆಗೊಂಡಿದೆ. ದೀಪಾವಳಿ ಬಂದಿತೆಂದರೆ ಹೊಸ ಬಟ್ಟೆ ಧರಿಸಿ, ವಿಧ ವಿಧವಾದ ತಿನಿಸುಗಳ ಜೊತೆಗೆ ಮನಸೂರೆಗೊಳ್ಳುವ, ಕಣ್ಣಿಗೆ ಮುದ ನೀಡುವ ಕಿವಿಗಡಚಿಕ್ಕುವ ಪಟಾಕಿ ಹಚ್ಚಿ ಮನೆ ಮಂದಿಯೆಲ್ಲ ಸಂಭ್ರಮಿಸುವುದನ್ನೇ  ಬೆಳಕಿನ ಹಬ್ಬವೆಂದು ಬೀಗುವ ಜನಗಳಿಗೆ ಮಣ್ಣಿನ ಹಣತೆಯಲ್ಲಿ ದೀಪಗಳನ್ನು  ಹಚ್ಚುವುದರ ಮೂಲಕ ಪರಿಸರ ಸ್ನೇಹಿ ದೀಪಾವಳಿಯನ್ನಾಗಿ ಆಚರಿಸಬಹುದು ಎಂಬುದು ಗೊತ್ತೇ ಇಲ್ಲವೇನೋ.

ಬೆಳಕಿನ ಹಬ್ಬ ದೀಪಾವಳಿ ಎಲ್ಲರಿಗೂ ತುಂಬಾ ದೊಡ್ಡ ಹಬ್ಬವೇ ಸರಿ  ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಹಬ್ಬದ ಕೆಲವು ಆಚರಣೆಗಳು ಪರಿಸರಕ್ಕೆ ಹಾನಿಯಾಗಿ ಪರಿಣಮಿಸುತ್ತಿವೆ. ದೀಪಾವಳಿ ಹಬ್ಬದಲ್ಲಿ ಹೊಡೆಯುವ ಪಟಾಕಿಗಳು ವಾಯು ಮತ್ತು ಶಬ್ದಮಾಲಿನ್ಯ ಉಂಟು ಮಾಡುತ್ತವೆ ಎಂದು ಹಲವಾರು ವರ್ಷಗಳಿಂದ ಹಲವು ಪರಿಸರ ತಜ್ಞರು ಹಾಗು ಸರ್ಕಾರಗಳು ಅನೇಕ ಕಾರ್ಯಕ್ರಮಗಳ ಮೂಲಕ ಪ್ರಜೆಗಳಿಗೆ ತಿಳುವಳಿಕೆ ಮೂಡಿಸುತ್ತಿದ್ದರೂ ಅವುಗಳಿಂದ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಅಕ್ಷರಶಃ ಸತ್ಯ. ಪಟಾಕಿಗಳಿಗೆ  ರಾಸಾಯನಿಕ ವಸ್ತುಗಳನ್ನು ಮಿಶ್ರ ಮಾಡುವುದರಿಂದ ಅದು ಮಣ್ಣನ್ನು ಕಲುಷಿತಗೊಳಿಸುತ್ತದೆ  ಹಾಗೂ ಶಬ್ದ ಮಾಲಿನ್ಯಕ್ಕೂ ಕಾರಣವಾಗುತ್ತದೆ. ಪಟಾಕಿಗಳಿಗೆ ಬಳಸುವ  ರಾಸಾಯನಿಕ ವಸ್ತುಗಳು ಪರಿಸರಕ್ಕೆ ಪೂರಕವಾಗಿಲ್ಲ ಎಂದು ತಿಳುವಳಿಕೆಯಿದ್ದರೂ ಅದನ್ನೆಲ್ಲಾ ಮರೆತು ಕೇವಲ ಒಂದು ದಿನ ಪಟಾಕಿ ಸಿಡಿಸಿದರೆ ಪರಿಸರ ಹಾಳಾಗಿಬಿಡುತ್ತದೆಯೇ ಎಂದು ವಾದಿಸುವ ವಿತಂಡವಾದಿಗಳಿಗೂ ನಮ್ಮಲ್ಲಿ ಕಡಿಮೆ ಇಲ್ಲ.

 ದೀಪಾವಳಿಯು ಹೇಗೆ ಬೆಳಕಿನ‌ ಹಬ್ಬವೋ ಹಾಗೇ ಅತ್ಯಂತ ಜಾಗರೂಕತೆಯಿಂದ ಆಚರಿಸಬೇಕಾದ ಹಬ್ಬ ಕೂಡ ಹೌದು‌. ಈ ಹಬ್ಬದಲ್ಲಿ ಪಟಾಕಿಗಳನ್ನು ಸಿಡಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೆ ಅದರಿಂದ ಆಘಾತಕಾರಿಯಾದ, ಜೀವಕ್ಕೆ ಹಾನಿ  ಮಾಡುವ ಅನಾಹುತಗಳು ಕೂಡ ಸಂಭವಿಸಬಹುದು. ಇದಕ್ಕೆ ಸಂಬಂಧಿಸಿದಂತೆ, ಹಬ್ಬದ ದಿನಗಳಲ್ಲಿ ನಿತ್ಯ ರಾತ್ರಿ ಎಂಟು ಗಂಟೆಯಿಂದ ಹತ್ತರವರೆಗೆ ಮಾತ್ರ ಅಂದರೆ ಕೇವಲ ಎರಡು ಗಂಟೆ ಮಾತ್ರ ಪಟಾಕಿ ಸಿಡಿಸಬಹುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸುತ್ತೋಲೆ ಹೊರಡಿಸಿದೆ. ಜೊತೆಗೆ ಈ ಹಬ್ಬದ ವೇಳೆ ಸುಪ್ರೀಂ ಕೋರ್ಟ್‌ ನೀಡಿದ ನಿರ್ದೇಶನ ಪಾಲಿಸುವಂತೆ ಕೂಡ ಮಂಡಳಿ ಸೂಚಿಸಿದೆ. ಇನ್ನುಳಿದಂತೆ ಉಳಿದ ಸಮಯದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದ್ದು,  ಒಂದು ವೇಳೆ ನಿಗದಿಪಡಿಸಿದ ಸಮಯ ಬಿಟ್ಟು ನಿಷೇಧಿತ ಅವಧಿಯಲ್ಲಿ ಪಟಾಕಿ ಸಿಡಿಸುವುದು ಅಥವಾ ಮಾರಾಟ ಮಾಡಿದರೆ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಅಲ್ಲದೆ, ಪಟಾಕಿ ಸಿಡಿಸುವವರು ಆ ಪಟಾಕಿಗಳಿಂದ ಉಂಟಾದ ಘನತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಸಹ ಕಟ್ಟುನಿಟ್ಟಾಗಿ ಸೂಚಿಸಿದೆ. ಇದರ ಜೊತೆಗೆ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಕೂಡ ನಾಡಿನ ಜನರೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ ಪರಿಸರ ಉಳಿಸುವ ಸಲುವಾಗಿ ಪರಿಸರ ಸ್ನೇಹಿ ದೀಪಾವಳಿ ಆಚರಿಸೋಣ. ಶಬ್ದ ಹಾಗೂ ವಾಯು ಮಾಲಿನ್ಯ ತಡೆಯೋಣ. 125 ಡೆಸಿಬಲ್‌ಗಿಂತ ಕಡಿಮೆ ಇರುವ ಪಟಾಕಿಗಳನ್ನು ಬಳಸಿ” ಎಂದು ಕೋರಿಕೊಂಡಿದ್ದಾರೆ.

ಆದರೆ, ಬೆಂಗಳೂರಿನಲ್ಲಿ ಈ ಎಲ್ಲ ಆದೇಶ, ಕೋರಿಕೆಗಳನ್ನು ಧಿಕ್ಕರಿಸಿ ಪರಿಸರ ಸ್ನೇಹಿ ದೀಪಾವಳಿಯ ಬದಲಾಗಿ ಪರಿಸರ ವಿರೋಧಿ ದೀಪಾವಳಿಯನ್ನು ಆಚರಣೆ ಮಾಡಲಾಗಿದೆ. ಜಗತ್ತಿನಲ್ಲಿ ಬೆಂಗಳೂರು ಸಿಲಿಕಾನ್ ಸಿಟಿ, ಅಧಿಕ ಜನಸಂಖ್ಯೆಯನ್ನು ಹೊಂದಿರುವುದರ ಜೊತೆಗೆ ಹೆಚ್ಚಿನ ವಿದ್ಯಾವಂತರು ಹಾಗು ಉದ್ಯಮಿಗಳು ಇರುವ ನಗರವೆಂದು ಗುರುತಿಸಿಕೊಂಡಿದೆ. ಹೀಗೆ ತಿಳುವಳಿಕೆಯುಳ್ಳವರೇ ಅಜ್ಞಾನಿಗಳಂತೆ ಪರಿಸರದ ಬಗ್ಗೆ ಸ್ವಲ್ಪವೂ ಯೋಚಿಸದೆ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಪಟಾಕಿಗಳನ್ನು ಸಿಡಿಸುತ್ತಿದ್ದರೆ‌ ಇವರಿಗೆ ಬುದ್ದಿ ಹೇಳುವವರು ಯಾರು?

ಇದಕ್ಕೆ ಒಂದು ರೀತಿಯಲ್ಲಿ ಸರ್ಕಾರವನ್ನೇ ದೂರಬೇಕಾಗುತ್ತದೆ. 125 ಡೆಸಿಬಲ್ ಗಿಂತ ಅಧಿಕ ಶಬ್ದವನ್ನುಂಟು ಮಾಡುವ ಪಟಾಕಿಗಳನ್ನು ಸಿಡಿಸಬಾರದೆಂದು ಆದೇಶವೇನೋ ತಂದಿದ್ದಾರೆ. ಆದರೆ ಈ ಅಧಿಕ ಶಬ್ದದ ಪಟಾಕಿಗಳನ್ನು ಉತ್ಪಾದನೆ ಹಾಗೂ ಮಾರಾಟ ಮಾಡುವವರ ವಿರುದ್ಧ ಯಾವುದೇ ಕಾನೂನು ಕ್ರಮಗಳನ್ನು ಕೈಗೊಳ್ಳದೆ ಉತ್ಪಾದನೆ ಹಾಗೂ ಮಾರಾಟದ ಮೇಲೆ ಕೇವಲ ತೆರಿಗೆ ವಿಧಿಸಿ ಆದಾಯವನ್ನು ಗಳಿಸುವುದರಲ್ಲೇ ನಿರತವಾಗಿದೆ.

ಪಟಾಕಿಯಿಂದ ಉತ್ಪತ್ತಿಯಾಗುವ ಕಸದ ರಾಶಿ

ಈಗಾಗಲೇ ಬೆಂಗಳೂರಿನ ಸಮೀಪದ ನಂದಿದುರ್ಗದಲ್ಲಿ ಪಟಾಕಿ ಕಿಡಿಯಿಂದ ಅಗ್ನಿ ಅವಘಡ ಸಂಭವಿಸಿ 14 ಕಾರುಗಳು ಬೆಂಕಿಗಾಹುತಿಯಾದರೆ, ಇದೇ ಬೆಂಗಳೂರಿನ‌ ವಿವಿಧ ಸ್ಥಳಗಳಲ್ಲಿ‌  ದೀಪಾವಳಿಗೂ ಹಿಂದಿನ ದಿನವೇ ಪಟಾಕಿ ಅವಘಡಗಳು ಸಂಭವಿಸಿ ಗಾಯಗೊಂಡು ನಾರಾಯಣ ನೇತ್ರಾಲಯ ಆಸ್ಪತ್ರೆಯಲ್ಲಿ 7 ಜನರು ಹಾಗೂ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ರೀತಿಯಲ್ಲಿ ಕಳೆದ ವರ್ಷ ಅಂದರೆ 2021 ರಲ್ಲಿ ಸುಮಾರು ನೂರಕ್ಕಿಂತ ಹೆಚ್ಚು ಜನರು ದೀಪಾವಳಿಯ ಹಬ್ಬದ ಪಟಾಕಿ ಹಚ್ಚುವ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ಗಾಯಗೊಂಡು ಕೆಲವರಿಗೆ ಶಾಶ್ವತವಾದ ಅಂಗ ಊನತೆಯೂ ಸಹ ಉಂಟಾಗಿದೆ ಎಂದು ವರದಿಯಾಗಿದೆ.

ಇಷ್ಟಾದರೂ, ಈ ದೀಪಾವಳಿಯಲ್ಲಿ ಎಲ್ಲವನ್ನೂ ಮರೆತು ಮತ್ತೆ ಪಟಾಕಿ ಸಿಡಿಸುವುದರಲ್ಲೇ ಜನರು ನಿರತರಾದರು. ಪಟಾಕಿ ಹಚ್ಚುವ ವೇಳೆ ಉಂಟಾಗುವ ಅಪಘಾತಗಳ ಬಗ್ಗೆ ಎಲ್ಲರೂ ಜಾಗೃತಿ ವಹಿಸಬೇಕಾದ ಅಗತ್ಯವಿದೆ. ಈ ಪಟಾಕಿ ಅನಾಹುತವು  ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವುದರಿಂದ ಪೋಷಕರು ಮುಂಜಾಗ್ರತೆ ವಹಿಸೋದು ಒಳ್ಳೆಯದು. ಕಣ್ಣಿಗೆ, ಕಿವಿಗೆ ಅಥವಾ ಇತರ ಅಂಗಗಳಿಗೆ ಏನಾದರೂ ತೊಂದರೆಯಾದರೆ, ಭಾಗಶಃ ಅಥವಾ ಶಾಶ್ವತವಾದ ಅಂಗವೈಕಲ್ಯವು ಸಹ ಉಂಟಾಗಬಹುದಾದ ಸಂದರ್ಭಗಳು ಇರುವುದರಿಂದ ಪೋಷಕರು ಮಕ್ಕಳ ಬಗ್ಗೆ ಎಚ್ಚರ ವಹಿಸಲೇ ಬೇಕು. ಹಾಗೂ ಕೆಲವೊಂದು ಆಕಸ್ಮಿಕ, ಅಹಿತಕರ ಘಟನೆಗಳು ಸಂಭವಿಸಿದರೆ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆಯನ್ನು ಕೊಡಿಸಬೇಕು. ನಿರ್ಲಕ್ಷ್ಯ ವಹಿಸಿ ಪಟಾಕಿಗಳನ್ನು ಸಿಡಿಸಿ ಅವಘಡಗಳನ್ನು ಮಾಡುವುದರ ಬದಲಾಗಿ ಆದಷ್ಟು ಪಟಾಕಿ ಸಿಡಿಸದೆ ಪರಿಸರ ಸ್ನೇಹಿ  ಹಬ್ಬ ಮಾಡುವುದು ಎಲ್ಲರ ಆರೋಗ್ಯ ಮತ್ತು ಪರಿಸರಕ್ಕೆ ಒಳ್ಳೆಯದೇ ಅಲ್ಲವೇ?

ಕೊನೆಯಲ್ಲಿ, ಬೆಂಗಳೂರಿನ ಪಕ್ಕದ ಜಿಲ್ಲೆಯಾದ ಕೋಲಾರದಲ್ಲಿ ವಿಭಿನ್ನವಾಗಿ ದೀಪಾವಳಿ ಹಬ್ಬ ಆಚರಿಸಲಾಯಿತು. ಪಟಾಕಿ ಖರೀದಿಸಲು ಬರುವ ಮಹಿಳೆಯರು ಹಾಗೂ ಮಕ್ಕಳಿಗೆ ಸಸಿ ಕೊಟ್ಟು, ಪಟಾಕಿ ಸಿಡಿಸುವುದರಿಂದ ಪರಿಸರದ ಮೇಲಾಗುವ  ಹಾನಿಯ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಕಳೆದ ಮೂರು ವರ್ಷಗಳಿಂದಲೂ ಈ ಕಾರ್ಯಕ್ರಮವು ನಡೆದುಕೊಂಡು ಬರುತ್ತಿದೆ.  ಈ ಅರ್ಥಪೂರ್ಣ ಕಾರ್ಯಕ್ರಮವು ಕೇವಲ ಕೋಲಾರ ಜಿಲ್ಲೆಗೆ ಮಾತ್ರ ಸೀಮಿತವಾಗದೆ ದೇಶದೆಲ್ಲೆಡೆ ಕಾರ್ಯಗತವಾಗಿ ಪರಿಸರ ಉಳಿದು ಮುಂದಿನ ಪೀಳಿಗೆಗೆ ಉಸಿರಾಡಲು ಶುದ್ಧಗಾಳಿ ದೊರಕಲಿ ಎಂಬುದು ನಮ್ಮ ಆಶಯ ಕೂಡ.

ದಿವಾಕರ್ ಡಿ. ಮಂಡ್ಯ

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿ.

Related Articles

ಇತ್ತೀಚಿನ ಸುದ್ದಿಗಳು