Saturday, December 27, 2025

ಸತ್ಯ | ನ್ಯಾಯ |ಧರ್ಮ

ಮರ್ಯಾದಾ ಹತ್ಯೆ ತಡೆಗೆ ಕಠಿಣ ಶಿಕ್ಷೆಯ ವಿಶೇಷ ಕಾಯ್ದೆ ಅಗತ್ಯ ; ಸಮಾನ ಮನಸ್ಕರ ವೇದಿಕೆಯಿಂದ ಡಿ.30ರಂದು ಸಿಎಂಗೆ ಮನವಿ ಸಲ್ಲಿಕೆ:

ಸಾಮಾಜಿಕ ಪಿಡುಗಾಗಿರುವ ಮರ್ಯಾದಾ ಹತ್ಯೆಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಕಠಿಣ ಶಿಕ್ಷೆಯೊಂದಿಗೆ ವಿಶೇಷ ಕಾನೂನು ರೂಪಿಸಬೇಕೆಂದು ಸಮಾನ ಮನಸ್ಕರ ವೇದಿಕೆ ಆಗ್ರಹಿಸಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪ್ರಮುಖರು ಹಾಗೂ ಹಿರಿಯ ಪತ್ರಕರ್ತರಾದ ಎನ್. ರವಿಕುಮಾರ್ (ಟೆಲೆಕ್ಸ್) ಮತ್ತು ದೇಶಾದ್ರಿ ಹೊಸ್ಮನಿ, ಡಿಸೆಂಬರ್ 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಅಂತರಜಾತಿ ವಿವಾಹ ಅಥವಾ ಪರಸ್ಪರ ಪ್ರೀತಿಸಿದ ಕಾರಣಕ್ಕಾಗಿ ಪೋಷಕರೇ ತಮ್ಮ ಮಕ್ಕಳನ್ನು ಯಾವುದೇ ಕಾನೂನು ಭಯವಿಲ್ಲದೆ ಮರ್ಯಾದೆಯ ಹೆಸರಿನಲ್ಲಿ ಹತ್ಯೆ ಮಾಡುತ್ತಿರುವ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಇಂತಹ ಕ್ರೌರ್ಯಗಳು ಮುಂದಿನ ದಿನಗಳಲ್ಲಿ ಜಾತಿವಾದಿಗಳಿಂದ ‘ಸಾಮಾಜಿಕ ಘನತೆ’ ಎಂಬಂತೆ ಪ್ರತಿಷ್ಠಾಪನೆಗೊಳ್ಳುವ ಅಪಾಯವಿದ್ದು, ಇದನ್ನು ತಡೆಯಲು ಸರ್ಕಾರ ಕಠಿಣ ಶಿಕ್ಷೆಯ ಕಾಯ್ದೆ ಜಾರಿಗೆ ತರಬೇಕಾಗಿದೆ ಎಂದರು.

ಹುಬ್ಬಳ್ಳಿಯ ವೀರಾಪುರದಲ್ಲಿ ಇನಾಂ ದಲಿತ ಸಮುದಾಯದ ಯುವಕನನ್ನು ಮದುವೆಯಾಗಿ ತುಂಬು ಗರ್ಭಿಣಿಯಾಗಿದ್ದ ಸ್ವಂತ ಮಗಳನ್ನು ತಂದೆಯೇ ಜಾತಿ ದ್ವೇಷದಿಂದ ಹತ್ಯೆಗೈದ ಘಟನೆ ಹಾಗೂ ದಲಿತ ಕುಟುಂಬದ ಮೇಲೆ ನಡೆದ ಮಾರಣಾಂತಿಕ ಹಲ್ಲೆ, ಸಮ ಸಮಾಜದ ಕನಸನ್ನು ಕಂಡ ಕ್ರಾಂತಿಪುರುಷ ಬಸವಣ್ಣನವರ ನಾಡಿಗೆ ದೊಡ್ಡ ಕಳಂಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಮರ್ಯಾದೆ ಹತ್ಯೆ ಪ್ರಕರಣಗಳಲ್ಲಿ ಜಾತಿ ದ್ವೇಷದ ಭೀಕರ ಮುಖ ಬಹಿರಂಗವಾಗುತ್ತಿದೆ. ‘ಮಗಳು ದಲಿತ ಯುವಕನನ್ನು ಮದುವೆಯಾದರೆ ಸಮಾಜದಲ್ಲಿ ತನ್ನ ಗೌರವ ಕಳೆದುಹೋಗುತ್ತದೆ’ ಎಂಬ ಮನೋಭಾವವೇ ಇಂತಹ ಕ್ರೌರ್ಯಗಳಿಗೆ ಕಾರಣವಾಗುತ್ತಿದೆ. ಇಂತಹ ಜಾತಿ ಆಧಾರಿತ ಹಿಂಸಾಚಾರಗಳು ರಾಜ್ಯಾದ್ಯಂತ ಮರುಮರು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದರು.

ಮರ್ಯಾದೆ ಹತ್ಯೆ ಎಂಬ ಹೆಸರಿನಲ್ಲಿ ನಡೆಯುವ ಜಾತಿ ಭಯೋತ್ಪಾದನೆಗೆ ಬಲಿಯಾದ ಮಾನ್ಯಾಳ ಹೆಸರಿನಲ್ಲಿ ಕಠಿಣ ಶಿಕ್ಷೆಯ ಕಾಯ್ದೆ ರೂಪಿಸಬೇಕೆಂದು ಸಾಮಾಜಿಕ ಜಾಲತಾಣಗಳ ಮೂಲಕ ಆಂದೋಲನ ಆರಂಭಿಸಲಾಗಿದೆ. ಈ ಆಂದೋಲನಕ್ಕೆ ನೂರಾರು ಸಮಾನ ಮನಸ್ಕರು ಬೆಂಬಲ ಸೂಚಿಸಿದ್ದು, ಸಾಮಾಜಿಕ ಜಾಲತಾಣದ ಮೂಲಕ ಸಹಿ ಸಂಗ್ರಹವೂ ನಡೆಯುತ್ತಿದೆ ಎಂದು ತಿಳಿಸಿದರು.

ಸಂಗ್ರಹಿಸಿದ ಎಲ್ಲ ಅಭಿಪ್ರಾಯಗಳು ಹಾಗೂ ಸಹಿಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ, ಇಂತಹ ಘೋರ ಅಪರಾಧಗಳಿಗೆ ಉಗ್ರ ಶಿಕ್ಷೆ ವಿಧಿಸುವ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಲಾಗುವುದು ಎಂದರು.

ಈ ಪ್ರಸ್ತಾವಿತ ಕಾಯ್ದೆಗೆ ‘ಮಾನ್ಯಾ ಕಾಯ್ದೆ’ ಎಂದು ಹೆಸರಿಡುವ ಮೂಲಕ, ಇದುವರೆಗೂ ಮರ್ಯಾದೆ ಹತ್ಯೆಗೆ ಬಲಿಯಾದ ಜೀವಗಳಿಗೆ ಪ್ರತಿನಿಧಿಯಾಗಲಿ ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿಟ್ಟ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ವೇದಿಕೆಯ ಪ್ರಮುಖರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page