Thursday, June 20, 2024

ಸತ್ಯ | ನ್ಯಾಯ |ಧರ್ಮ

ಅಪರೂಪಕ್ಕೊಮ್ಮೆ ಅಪರೂಪದ ವ್ಯಕ್ತಿ

ಒಂಬತ್ತನೆಯ ತರಗತಿಯವರೆಗೆ ಮಾತ್ರ ಓದಿಕೊಂಡಿರುವ ಶೋಭಾ ಟಿ.ಗುನ್ನಾಪೂರ ಸಾಹಿತ್ಯದ ಓದು-ಬರಹದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡು ಅಪರೂಪದ ಕತೆಗಳನ್ನು ʼಭೂಮಿಯ ಋಣʼ ಕಥಾ ಸಂಕಲನದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಪುಸ್ತಕದ ಬಿಡುಗಡೆ ಸಮಾರಂಭವು ನಾಳೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಲೇಖಕಿಯ ಕುರಿತಾಗಿ ಆಪ್ತವಾಗಿ ಬರೆದಿದ್ದಾರೆ ಕಾನೂನು ವಿದ್ಯಾರ್ಥಿ ಶಿವರಾಜ ಮೋತಿ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದವರಾದ ಶೋಭಾ ಟಿ ಗುನ್ನಾಪೂರ ಅವರ ತವರುಮನೆ ಶಿರಶ್ಯಾಡ ಎಂಬ ಗ್ರಾಮ. ಕೃಷಿ ಮತ್ತು ಸಾಹಿತ್ಯದಲ್ಲಿ ಅಪಾರ ಆಸಕ್ತಿ, ಪತಿ ತುಕಾರಾಮ್ ಗುನ್ನಾಪೂರ ಅವರು ಸಹ ರೈತರಾಗಿದ್ದಾರೆ. ಇವರಿಗೆ ಮೂವರು ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳು ಇದಾರೆ. ಓದುವ ಹವ್ಯಾಸ ಉಳ್ಳವರು ಎಲ್ಲಿದ್ದರೂ, ಹೇಗಿದ್ದರೂ ಸುಖಿಯಾಗಿರಬಲ್ಲರು ಎಂಬ ಮಾತೊಂದಿದೆ. ಈ ಮಾತಿಗೆ ಕೈಗನ್ನಡಿ ಹಾಗೂ ಅಲ್ಪ‌ವಿದ್ಯೆ ಮಹಾಗರ್ವಿ ಎಂಬ ಮಾತಿಗೆ ತದ್ವಿರುದ್ಧವಾಗಿದ್ದಾರೆ ಇವರು ಎಂದರೂ ಸಹ ಅತಿಶಯೋಕ್ತಿ ಎನಿಸಲಾರದು

ನೆನಪುಗಳ ಕನವರಿಕೆ

ಓದಿದ್ದು ಕೇವಲ ಒಂಬತ್ತನೇ ತರಗತಿಯವರೆಗೆ ಮಾತ್ರ. ಆದರೂ ಕನ್ನಡ ಸಾಹಿತ್ಯವನ್ನು ಅದರಲ್ಲೂ ಸೃಜನಶೀಲ ಸಾಹಿತ್ಯ, ವಿಚಾರ ಸಾಹಿತ್ಯವನ್ನು ಓದುವ ಅಪಾರ ಆಸಕ್ತಿ ಇರಿಸಿಕೊಂಡಿದ್ದಾರೆ. “ನಮ್ಮ ಬಾಲ್ಯದ ಸಮಯದಲ್ಲಿ ಮುಂದೆ ಕಲಿಯಲು ಹಳ್ಳಿಯಲ್ಲಿ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹವಿರಲಿಲ್ಲ. ಹಾಗಾಗಿ ನಮ್ಮ ತಂದೆಯವರು ನಾನು ದೊಡ್ಡವಳಾದ ಬಳಿಕ ನನ್ನನ್ನು ಶಾಲೆಗೆ ಕಳುಹಿಸುವುದು ಬೇಡವೆಂದು ತೀರ್ಮಾನಿಸಿ ನನಗೆ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಬಿಟ್ಟರು” ಎನ್ನುವ ಇವರು “ನನಗಿನ್ನೂ ಕಲಿಯಬೇಕೆಂಬ ಆಸಕ್ತಿ ಇತ್ತು. ಆದರೆ ಹಳ್ಳಿಯಲ್ಲಿ ದೊಡ್ಡವರಾದ ಬಳಿಕ ಮತ್ತೆಲ್ಲಿ ಶಾಲೆಗೆ ಕಳಿಸಬೇಕಂತ ಆಲೋಚಿಸಿಯೇ ಮದುವೆ ಮಾಡಿದರು” ಎಂದು ಇವರು ಹೇಳುತ್ತಾರೆ.

“ಆದರೆ ನನಗೆ ಕಲಿಯಲೇಬೇಕೆಂಬ ಛಲ ಇದ್ದಿದ್ದರಿಂದ ಬರೆಯಲು, ಓದಲು ರೂಢಿಸಿಕೊಂಡೆ. ಕಸದಲ್ಲಿ ಯಾವುದಾದರೂ ಪೇಪರ್ ಬಿದ್ದಿತ್ತೆಂದರೂ ಸಹ ಅದರಲ್ಲಿನ ಅಕ್ಷರಗಳನ್ನು ಓದದೇ ಹೋದರೆ ನನಗೆ ಸಮಾಧಾನವೇ ಆಗುತ್ತಿರಲಿಲ್ಲ. ನಮ್ಮದು ಕೂಡು ತುಂಬು ಕುಟುಂಬ. ಏಳು ಮಂದಿ ಅಣ್ಣ-ತಮ್ಮಂದಿರು, ಏಳು ಮಂದಿ ಹೆಣ್ಣುಮಕ್ಕಳು, ಅತ್ತೆ, ಮಾವ ಅಷ್ಟಿದ್ದರೂ ಅವರ ಜೊತೆ ನಾನು ಕೆಲಸ ಮಾಡಿ ಓದು ಬರಹದ ಕಡೆ ಲಕ್ಷ್ಯ, ಸಮಯವೂ ಕೊಡುತ್ತಿದ್ದೆ. ಬೇಕಾದಷ್ಟು ಕೆಲಸವಿದ್ದರೂ ಸಹ ಓದು ಬರಹಕ್ಕೆಂದೇ ಎರಡು ಗಂಟೆ ಕಡ್ಡಾಯವಾಗಿ ಸಮಯ ಮೀಸಲು ಮಾಡಿ ಓದುತ್ತಿದ್ದೆ, ಬರೆಯುತ್ತಿದ್ದೆ. ಅಮ್ಮ ನೀನು ಇಷ್ಟೆಲ್ಲಾ ಕತೆ, ಕಾದಂಬರಿ ಓದುತ್ತಿಯಾ, ಚಿಕ್ಕ ಪುಟ್ಟದು ಬರೆಯುತ್ತೀಯಾ, ಏನಾದರೂ ಪುಸ್ತಕ ಬರೆ ಎಂದು ಬರಬರುತ್ತಾ ನನ್ನ ಮಕ್ಕಳು ನನಗೆ ಬುದ್ಧಿ ಹೇಳತೊಡಗಿದರು” ಎಂದು ನೆನಪುಗಳನ್ನು ಮೆಲುಕು ಹಾಕುತ್ತಾರೆ.

 ಇವರ ಎರಡು ಪುಸ್ತಕಗಳು ಮಕ್ಕಳ ಒತ್ತಾಯದ ಪರಿಣಾಮವೇ ಇರಬಹುದು. ʼಭೂಮಿಯ ಋಣʼ ಕಥಾ ಸಂಕಲನ ಇದೇ ಅಕ್ಟೋಬರ್ ೧೬ ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಆತ್ಮಚರಿತ್ರೆ ಮುದ್ರಣದ ಹಂತದಲ್ಲಿದೆ. ಇವರು ಬರೆದ ಕವಿತೆಗಳು ಪಂಜಾಬಿ ಭಾಷೆಗೆ ಅನುವಾದಗೊಂಡಿವೆ ಹಾಗೂ ಕತೆಗಳು ಸಂಯುಕ್ತ ಕರ್ನಾಟಕ ಮತ್ತು ಇನ್ನಿತರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಸಮಾಜಮುಖಿ ಹೆಜ್ಜೆಗಳು

ಸಾಮಾನ್ಯ ಹಳ್ಳಿಯ ಹೆಣ್ಣುಮಗಳಾದ ಶೋಭಾ ಗುನ್ನಾಪೂರ ಅವರು ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘದ ಪ್ರತಿನಿಧಿಯಾಗಿ ಅನೇಕ ಹೆಣ್ಣುಮಕ್ಕಳ ಬದುಕಿಗೆ ಸ್ಪೂರ್ತಿಯಾಗಿದ್ದಾರೆ. ಪ್ರಗತಿಪರ ರೈತರೂ ಎನಿಸಿಕೊಂಡಿದ್ದಾರೆ. ಇವರಿಗೆ 2019ರಲ್ಲಿ ಮಾತಾ ಜೀವಿ ಪ್ರಶಸ್ತಿ ಲಭಿಸಿದೆ. ಹಿರೇಮಸಳಿಯಲ್ಲಿ ಕುಡಿತ ಬಿಡಿಸಲು, ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು, ನೊಂದ ಮಹಿಳೆಯರಿಗೆ ಸಾಂತ್ವನ ನೀಡಿ ಆಸರೆಯಾಗಿ ನಿಲ್ಲಲು ಶ್ರಮಿಸಿದ್ದಾರೆ.

ಇವರು ಮಕ್ಕಳಿಗಾಗಿ ಆಸ್ತಿ ಮಾಡಲಿಲ್ಲ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿದ್ದಾರೆ.

ಇಂದು ಇವರ ಕುಟುಂಬ ಸುಸ್ಥಿರವಾಗಿದೆ. ಮಕ್ಕಳು ಉತ್ತಮವಾದ ಉದ್ಯೋಗದಲ್ಲಿದ್ದಾರೆ. ಸುನಿಲ್ ಕುಮಾರ್ ಗುನ್ನಾಪೂರ ಬೆಂಗಳೂರಿನಲ್ಲಿ ಹೈಕೋರ್ಟ್ ವಕೀಲರಾಗಿದ್ದು ಸಾಮಾಜಿಕ ಕಾರ್ಯಕರ್ತರೂ ಆಗಿದ್ದಾರೆ. ಅನಿಲ್ ಕುಮಾರ್ ಗುನ್ನಾಪೂರ ಬಾಗಲಕೋಟೆಯಲ್ಲಿ ಸರ್ವೆಯರ್ ಆಗಿದ್ದು ಬರಹಗಾರರಾಗಿದ್ದಾರೆ. ಇನ್ನೊಬ್ಬರು ಭೀಮರಾವ್ ಗುನ್ನಾಪೂರ ಉನ್ನತ ಅಧಿಕಾರಿಯಾಗಬೇಕೆಂಬ ಮಹಾದಾಸೆಯೊಂದಿಗೆ ಅಭ್ಯಾಸ ಮಾಡುತ್ತಿದ್ದಾರೆ. ಇನ್ನೊಬ್ಬ ಹೆಣ್ಣುಮಗಳು ಅನಿತಾ ಮದುವೆಯಾಗಿ ಗಂಡನ ಮನೆಯಲ್ಲಿ ಸುಖವಾಗಿದ್ದಾರೆ.

ನಾಳೆ ಅಂದರೆ ಅಕ್ಟೋಬರ್‌ 16ರಂದು ಸಾಮಾಜಿಕ ನ್ಯಾಯಕ್ಕಾಗಿ ವಕೀಲರು, ಕರ್ನಾಟಕ ಹಾಗೂ ವೈಷ್ಣವಿ ಪ್ರಕಾಶನ ಸಹಯೋಗದಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು, ಅಕ್ಕಮಹಾದೇವಿ ಸಭಾಂಗಣದಲ್ಲಿ ಬೆಳಿಗ್ಗೆ 10:30ರಿಂದ ಕಾರ್ಯಕ್ರಮ ಪ್ರಾರಂಭವಾಗಲಿದೆ.

ಪದವಿ, ಸರ್ಟಿಫೀಕೇಟ್ ಗಳು ಸಾಧನೆಗೆ ಅನಿವಾರ್ಯವಲ್ಲ ಎಂದು ತೋರಿಸಿ ಇಂದು ನಮ್ಮ ಮುಂದೆ ಮಾದರಿಯಾಗಿ ನಿಂತಿದ್ದಾರೆ ಶೋಭಾ ಗುನ್ನಾಪೂರ ಇವರು. ಪ್ರಚಾರದಿಂದ ದೂರ ಇರುವ ಇವರು ಎಲೆಮರೆಯ ಕಾಯಿಯಂತೆ ತಮ್ಮ ಕೆಲಸವನ್ನು ಪ್ರೀತಿಯಿಂದ ಮಾಡುತ್ತಾ ಸಾಗುತ್ತಿದ್ದಾರೆ. ಅವರ ಬರಹಗಳೂ, ಸೇವೆಯೂ, ಹೀಗೆಯೇ ಸಾಗುತ್ತಿರಲಿ ಮತ್ತು ಸಾಹಿತ್ಯ ಲೋಕದಲ್ಲಿ ಇವರ ಹೆಸರು ಶಾಶ್ವತವಾಗುಳಿಯಲಿ  ಎಂದು ಆಶಿಸೋಣ.

ಶಿವರಾಜ್‌ ಮೋತಿ (ಕಾನೂನು ವಿದ್ಯಾರ್ಥಿ)

Related Articles

ಇತ್ತೀಚಿನ ಸುದ್ದಿಗಳು