ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಸ್ವಪ್ರೀತಿಯನ್ನು ಕಂಡುಕೊಳ್ಳಬೇಕಾದ ಮಹಿಳೆ

P

Peepal Media • ವಿಶೇಷ

• 3 ನಿಮಿಷದ ಓದು

ಸ್ವಪ್ರೀತಿಯನ್ನು ಕಂಡುಕೊಳ್ಳಬೇಕಾದ ಮಹಿಳೆ

ನಾವಿಂದು ಹೆಣ್ಣು ಮಕ್ಕಳಿಗೆ ಕಲಿಸಿ ಕೊಡಬೇಕಾದುದು ಸ್ವಪ್ರೀತಿ. ಅವಳಲ್ಲಿ ತಾನು ಗಂಡಿಗಿಂತ ಕೀಳಲ್ಲ, ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸ ಬಹುದೆನ್ನುವ ಆತ್ಮವಿಶ್ವಾಸವನ್ನು ಉದ್ದೀಪನಗೊಳಿಸುವುದು ಮತ್ತು ತನ್ನನ್ನು ಮನಸಾರೆ ಒಪ್ಪಿಕೊಂಡು ಪ್ರೀತಿಸುವುದನ್ನು ತಿಳಿಸಿ ಹೇಳುವುದು…. ಮಹಿಳಾ ದಿನಾಚರಣೆಯ ನೆನಪಲ್ಲಿ  ಹೀಗೊಂದು ಲಿಂಗತ್ವ ಸೂಕ್ಷ್ಮತೆಯ ವಿಶ್ಲೇ಼ಷಣೆ ಮಾಡಿದ್ದಾರೆ ತುಮಕೂರು ವಿಶ್ವವಿದ್ಯಾನಿಲಯದ ಡಾ. ಜ್ಯೋತಿ.

ಮಾರ್ಚ್ 8, ವಿಶ್ವ ಮಹಿಳಾ ದಿನ. ಈ ದಿನ, ಮಹಿಳೆಯರ ಸ್ಥಾನಮಾನ, ಹಕ್ಕು, ಸಾಮರ್ಥ್ಯದ ಕುರಿತಂತೆ ಸಾಕಷ್ಟು ಚರ್ಚೆಯಾಗುತ್ತದೆ. ಇವುಗಳಲ್ಲಿ ನನಗೆ ಬಹಳ ಮುಖ್ಯವೆನಿಸುವುದು ನಾವು ನಮ್ಮ ಗಂಡು ಮತ್ತು ಹೆಣ್ಣು ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ಇರುವ ವ್ಯತ್ಯಾಸ ಮತ್ತು ಅದನ್ನು ಸರಿಪಡಿಸುವುದರ ಮೂಲಕ ಲಿಂಗ ಸಮಾನತೆಯನ್ನು ಸಾಧ್ಯವಾಗಿಸಬಹುದೆನಿಸುತ್ತದೆ. ಯಾಕೆಂದರೆ, ಬಾಹ್ಯ ಪ್ರಪಂಚದ ಆಗುಹೋಗುಗಳನ್ನು ನಿಯಂತ್ರಿಸುವ ಶಕ್ತಿ ನಮ್ಮೆಲ್ಲರ ಕೈಯಲ್ಲಿ ಇಲ್ಲದಿರಬಹುದು. ಆದರೆ, ಅಲ್ಲಿಗೆ ಭವಿಷ್ಯದ ಮತ್ತು ಜವಾಬ್ದಾರಿಯುತ ನಾಗರಿಕರನ್ನು ಪೂರೈಕೆಮಾಡುವುದು ಪ್ರತಿ ಕುಟುಂಬದ ತಾಯಿ ತಂದೆಯರು. ಆದ್ದರಿಂದ, ನಾವು ಪಾಲನೆಮಾಡುವ ಮಕ್ಕಳು ನಮ್ಮ ಸುಪರ್ದಿಯಲ್ಲಿ ಇರುವಾಗ, ಅವರಿಗೆ ಮುಂದಿನ ದಿನಗಳಲ್ಲಿ ಹೇಗೆ ಲಿಂಗ ಸಮಾನತೆಯನ್ನು ಕಾಯ್ದುಕೊಂಡು ಬದುಕಬೇಕೆಂದು ತಿಳಿಹೇಳಿ ಬೆಳೆಸಿದಲ್ಲಿ ಸಾಕಷ್ಟು ಸಾಮಾಜಿಕ ಸಮಸ್ಯೆಗಳು, ಸಮಸ್ಯೆಗಳಾಗಿ ಉಳಿಯುವುದಿಲ್ಲ. ಮಕ್ಕಳು ಹೆಚ್ಚಾಗಿ ತಮ್ಮ ಹೆತ್ತವರ ವರ್ತನೆಗಳನ್ನು ನೋಡಿ ಅದನ್ನೇ ರೂಢಿಸಿಕೊಳ್ಳುತ್ತಾರೆ. ಅವರ ಮುಂದೆ ನಮ್ಮ ನಡವಳಿಕೆಗಳು ಲಿಂಗ ಸಮಾನತೆಯನ್ನು ಪ್ರತಿಬಿಂಬಿಸಿದಲ್ಲಿ, ಅವರಿಗೂ ಉತ್ತಮ ಮಾದರಿ ದೊರೆತಂತಾಗುತ್ತದೆ.  ಹಾಗಿದ್ದಲ್ಲಿ, ನಮ್ಮ ಗಂಡು ಮತ್ತು ಹೆಣ್ಣು ಮಕ್ಕಳನ್ನು ಹೇಗೆ ಬೆಳೆಸಬೇಕು? ನಾವು ಇಲ್ಲಿಯವರೆಗೆ ಬೆಳೆಸುತ್ತಿದ್ದ ಕ್ರಮಗಳಲ್ಲಿನ ಸಮಸ್ಯೆಗಳೇನು? ಇಲ್ಲಿ ತಾಯಿಯಾಗಿ ಹೆಣ್ಣಿನ ಜವಾಬ್ದಾರಿಯೇನು?

ಮೊದಲನೆಯದಾಗಿ, ನಮ್ಮ ದೇಶದಲ್ಲಿ ಮಹಿಳೆಯರ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳಿವೆ. ಆದರೂ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಇದೆ. ಇದನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು? ಮಹಿಳೆಯರನ್ನು ಹೀನಾಯವಾಗಿ ನೋಡುವುದು ಒಂದು ವೈಯಕ್ತಿಕ ಸಮಸ್ಯೆಯೇ ಅಥವಾ ಸಾಮಾಜಿಕ ಸನ್ನಿಯೇ? ನಮ್ಮ ಸಾಮಾನ್ಯ ಪ್ರಜ್ಞೆಗೆ ಗೊತ್ತಿರುವಂತೆ ಮಹಿಳೆಯರನ್ನು ಕೀಳಾಗಿ ಕಾಣುವುದು ಒಂದು ಸಾಮಾಜಿಕ ಸಮಸ್ಯೆ, ಇದೊಂದು ಕೆಟ್ಟ ಮನಸ್ಥಿತಿ. ಈ ಸಮಸ್ಯೆಯ ಬೀಜ, ನಾವು ನಮ್ಮ ಗಂಡುಮಕ್ಕಳನ್ನು ಬೆಳೆಸುವುದರಲ್ಲಿಯೇ ಇದೆ. ಸಾಮಾನ್ಯವಾಗಿ ಮಕ್ಕಳನ್ನು ಬೆಳೆಸುವ ಹೆಚ್ಚಿನ ಜವಾಬ್ದಾರಿ ತಾಯಂದಿರೇ ನಿಭಾಯಿಸುವುದರಿಂದ, ತಮ್ಮ ಗಂಡು ಮಕ್ಕಳನ್ನು ಸರಿಯಾಗಿ ಬೆಳೆಸುವುದರಲ್ಲಿ ತಾಯಂದಿರು ಜಾಗರೂಕತೆ ವಹಿಸುವುದು, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೊಡುಗೆಯೆನ್ನಬಹುದು. ನಾವು ಗಮನಿಸುವಂತೆ, ಗಂಡುಮಕ್ಕಳಿಗೆ ಮನೆಕೆಲಸವನ್ನು ಕಲಿಸುವುದಾಗಲಿ, ತನ್ನ ಬಟ್ಟೆ ಒಗೆದು ಕೊಳ್ಳುವುದಾಗಲಿ, ಮತ್ತು ಅಡುಗೆ ಮಾಡುವುದನ್ನು ಹೇಳಿಕೊಡುವುದಾಗಲಿ ಅಥವಾ ಮಾಡಿಸುವ ತಾಯಂದಿರು ಬಹಳ ಕಡಿಮೆಯೆನ್ನಬಹುದು. ಇದನ್ನು ಕಲಿಸಿಕೊಡುವುದರಿಂದ ಗಂಡುಮಕ್ಕಳು ಸ್ವಾವಲಂಬಿಯಾಗಿ ಬದುಕಲು ಕಲಿಯುವುದಲ್ಲದೆ, ಈ ಕೆಲಸವನ್ನು ಸಾಂಪ್ರದಾಯಿಕವಾಗಿ ಮಾಡುತ್ತಾ ಬಂದಿರುವ ಹೆಣ್ಣು ಮಕ್ಕಳನ್ನು ಗೌರವಿಸುವುದನ್ನು ಕಲಿಯುತ್ತಾರೆ. ಇಲ್ಲವಾದಲ್ಲಿ, ಈ ಕೆಲಸ ಮಾಡುವ ಮನೆಯ ಹೆಣ್ಣುಮಕ್ಕಳನ್ನು ಸೇವಕರಂತೆಯೇ ಕಾಣುತ್ತಾರೆ. ನಾವು, ನಮ್ಮ ಗಂಡುಮಕ್ಕಳು ಬೇಕಾಬಿಟ್ಟಿಯಾಗಿ ಬದುಕುವುದನ್ನು ಗಂಭೀರವಾಗಿ ತಲೆಕೆಡಿಸಿಕೊಳ್ಳುವುದಿಲ್ಲ, ಬದಲಾಗಿ ಗಂಡು ಮಕ್ಕಳು ಇರುವುದೇ ಹೀಗೆ ಎಂದು ಸಮರ್ಥನೆ ಮಾಡಿಕೊಳ್ಳುತ್ತೇವೆ. ಜೊತೆಗೆ, ಹೆಣ್ಣುಮಕ್ಕಳನ್ನು ಸಮಾನವಾಗಿ, ಗೌರವದಿಂದ ನಡೆಸಿಕೊಳ್ಳುವುದನ್ನು ನಮ್ಮ ಗಂಡು ಮಕ್ಕಳಿಗೆ ಹೇಳಿಕೊಟ್ಟಲ್ಲಿ, ಮುಂದಿನ ಜನಾಂಗದ ಹೆಣ್ಣುಮಕ್ಕಳಾದರೂ ನೆಮ್ಮದಿಯಿಂದ ಮತ್ತು ಸುರಕ್ಷಿತವಾಗಿ ಬದುಕುತ್ತಾರೆ. ಇದು ಪ್ರತಿ ಗಂಡು ಹೆತ್ತ ತಾಯಿ, ತನ್ನ ಹೆಣ್ಣು ಕುಲಕ್ಕೆ ಮಾಡುವ ಸಮಾಜಸೇವೆ. ಇದನ್ನು, ‘ನಾನು ಅನುಭವಿಸದ ಸ್ವಾತಂತ್ರ್ಯ ಉಳಿದವರು ಯಾಕೆ ಅನುಭವಿಸಬೇಕು’ ಎನ್ನುವ ಸಂಕುಚಿತ ದೃಷ್ಟಿಕೋನದಿಂದ ಹೊರಬಂದು, ತಾಯಂದಿರು ಸ್ವಸ್ಥ ಸಮಾಜವನ್ನು ನಿರ್ಮಿಸಬೇಕಾಗಿದೆ.

ಇನ್ನು ನಮ್ಮ ಹೆಣ್ಣುಮಕ್ಕಳನ್ನು ಬೆಳೆಸುವಾಗ ನಾವು ಮಾಡುವ ದೊಡ್ಡ ತಪ್ಪೆಂದರೆ, ಅವರಿಗೆ ಪ್ರಪಂಚದ ಕುರಿತಾಗಿ ಅತಿಯಾದ ಭೀತಿಯನ್ನು ತಲೆಯಲ್ಲಿ ತುಂಬುವುದು. ಇದರಿಂದಾಗಿ ಅವರು ಸಹಜವಾಗಿ ಬದುಕುವುದನ್ನು ಕಲಿಯುವುದಿಲ್ಲ, ಬದಲಾಗಿ, ಜಗತ್ತಿನ ಕುರಿತಂತೆ ಭಯದಿಂದಲೇ ಮತ್ತು ಮನೆಯವರಿಗೆ ಅವಲಂಬಿತರಾಗಿಯೇ ಬದುಕುತ್ತಾರೆ. ಹೆಣ್ಣುಮಕ್ಕಳಿಗೆ ನಾವು ಪ್ರತಿ ಮಾತಿನಲ್ಲೂ, ‘ನೀನು ಹೆಣ್ಣು, ಹಾಗಾಗಿ ಹೀಗಿರಬೇಕು, ಅಥವಾ ಹೀಗಿರಬಾರದು’ ಎನ್ನುತ್ತಾ ಅವರಲ್ಲಿ ಆತ್ಮವಿಶ್ವಾಸವನ್ನು ಕುಗ್ಗಿಸುತ್ತೇವೆ. ಹೆಣ್ಣನ್ನು ಹೀಗೆ ಅತಿಯಾದ ನಿಯಂತ್ರಣದಲ್ಲಿ ಮತ್ತು ತನ್ನ ಸ್ವಅರಿವು ಕಂಡುಕೊಳ್ಳದಂತೆ ಬೆಳೆಸುತ್ತಿರುವುದರಿಂದಲೇ, ಅವಳನ್ನು ವಸ್ತುವಾಗಿ ಪರಿಗಣಿಸುವ ದರಿದ್ರ ಮನಸ್ಥಿತಿ ಸಮಾಜದಲ್ಲಿ ನಿರಾಂತಕವಾಗಿ ಮುಂದುವರಿದಿದೆ.

ಹಾಗಾಗಿ ನಾವಿಂದು ಹೆಣ್ಣು ಮಕ್ಕಳಿಗೆ ಕಲಿಸಿ ಕೊಡಬೇಕಾದುದು ಸ್ವಪ್ರೀತಿ. ಅವಳಲ್ಲಿ ತಾನು ಗಂಡಿಗಿಂತ ಕೀಳಲ್ಲ, ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸ ಬಹುದೆನ್ನುವ ಆತ್ಮವಿಶ್ವಾಸವನ್ನು ಉದ್ದೀಪನಗೊಳಿಸುವುದು ಮತ್ತು ತನ್ನನ್ನು ಮನಸಾರೆ ಒಪ್ಪಿಕೊಂಡು ಪ್ರೀತಿಸುವುದನ್ನು ತಿಳಿಸಿ ಹೇಳುವುದು. ಇದು ಹೆಣ್ಣಿನ ಸ್ವಾರ್ಥವಲ್ಲ, ಬದಲಾಗಿ, ಆತ್ಮಗೌರವ ಬೆಳೆಸಿಕೊಳ್ಳಲು ಅಗತ್ಯ. ಸಾಮಾನ್ಯವಾಗಿ, ಹೆಣ್ಣುಮಕ್ಕಳನ್ನು ಬೆಳೆಸುವಾಗ, ಎಲ್ಲರನ್ನು ಪ್ರೀತಿಸುವ ಮತ್ತು ಸೇವೆ ಮಾಡುವ ಬುದ್ಧಿಮಾತುಗಳನ್ನು ಹೇಳುತ್ತಾ, ಎಲ್ಲಾ ಕೆಲಸಗಳನ್ನು ಕಲಿಸುತ್ತಾ, ಅವಳಲ್ಲಿ ಒಂದು ಪರಿಪೂರ್ಣ ವ್ಯಕ್ತಿತ್ವ ರೂಪಿಸುತ್ತಿದ್ದೇವೆ ಎನ್ನುವ ಭ್ರಮೆಯಲ್ಲಿರುತ್ತೇವೆ. ಆದರೆ, ಅವರಲ್ಲಿ ಮುಖ್ಯವಾಗಿ ಉದ್ದೀಪನಗೊಳಿಸಬೇಕಾದ ಸ್ವಪ್ರೀತಿಯನ್ನು ಮರೆತುಬಿಡುತ್ತೇವೆ. ಅವಳಲ್ಲಿ, ಎಲ್ಲರನ್ನು ಪ್ರೀತಿಯಿಂದ ನೋಡಿಕೊಳ್ಳುವ, ಗೌರವಿಸುವ ಸೇವಾ ಮನೋಭಾವ ಬೆಳೆಸುವ ನಾವು, ತನ್ನ ಕುರಿತಂತೆ ಕೀಳರಿಮೆ ತುಂಬುತ್ತೇವೆ. ತನ್ನ ಸಂಸಾರದವರನ್ನು ಖುಷಿ ಪಡಿಸುವುದರಲ್ಲಿಯೇ ತನ್ನ ಬಾಳಿನ ಸಾರ್ಥಕ್ಯ ಅಡಗಿದೆ ಎಂದು ಪರಿಭಾವಿಸುವ ಹೆಣ್ಣಿಗೆ, ತನ್ನ ಬದುಕಿನತ್ತ ಒಂದು ಕ್ಷಣ ಒಳನೋಟ ಬೀರುವ ಆಸ್ಪದವನ್ನೇ ಅವಳಿಗೆ ನೀಡುವುದಿಲ್ಲ.

ಬಹುಶಃ, ಅದಕ್ಕಾಗಿಯೇ ಹೆಣ್ಣುಮಕ್ಕಳಿಗೆ ಬಾಲ್ಯವಿವಾಹ ಮಾಡುತ್ತಿದ್ದಾರೆನಿಸುತ್ತದೆ. ತನ್ನನ್ನು ತಾನು ಮತ್ತು ಪ್ರಪಂಚದ ಆಗುಹೋಗುಗಳನ್ನು ಅರಿಯುವ ಮೊದಲೇ ವಿವಾಹವಾಗಿ, ಮಕ್ಕಳ ಹೆತ್ತು, ತಾಯ್ತನದ ಜವಾಬ್ದಾರಿ ಹೊರುವ ಹೆಣ್ಣು, ಅದರಲ್ಲಿಯೇ ತನ್ನ ಉಳಿದ ಜೀವತಾವಧಿಯನ್ನು ಕಳೆದು ಹೋಗುವುದೇ ಹೆಚ್ಚು. ಒಂದು ವೇಳೆ ಹೆಣ್ಣು ತನ್ನ ಸಾಮರ್ಥ್ಯವನ್ನು ಅರಿತುಕೊಳ್ಳುವ ಪ್ರಬುದ್ಧ ವಯಸ್ಸು ಮತ್ತು ಜ್ಞಾನ ಲಭಿಸಿದಲ್ಲಿ, ಈ ಪ್ರಪಂಚದ ಅಸಮತೋಲಿತ ವ್ಯವಸ್ಥೆಯನ್ನು ಪ್ರಶ್ನಿಸುವುದಲ್ಲದೆ, ಅವುಗಳಿಗೆ ಸವಾಲೊಡ್ಡಿ ಬದುಕಿ ಸಾಧಿಸುವ ಸಾಧ್ಯತೆಯೇ ಅಧಿಕ. ಹಾಗಾಗಿ, ಹೆಣ್ಣನ್ನು ಸ್ವಅರಿವಿನ ಜಗತ್ತಿಗೆ ಪರಿಚಯಿಸದೇ, ಬರಿ ಚಾಕರಿ ಮಾಡಿಸಿಕೊಂಡು, ಗಂಡು ವಿಜೃಂಭಿಸುತ್ತಾನೆ.

ಆದ್ದರಿಂದ, ನಮ್ಮ ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ತಮ್ಮಿಷ್ಟದ ಬದುಕನ್ನು ತಾವೇ ರೂಪಿಸಿಕೊಳ್ಳುವ ಆತ್ಮಬಲವನ್ನು ಪ್ರತಿ ಹೆಣ್ಣು ಹೆತ್ತ ತಾಯಂದಿರು ಬೆಳೆಸಬೇಕು. ಹೆಣ್ಣು ಮಕ್ಕಳನ್ನು ಬೆಳೆಸುವುದೆಂದರೆ, ಒಂದಿಷ್ಟು ಚಿನ್ನ, ಆಸ್ತಿ ಮಾಡಿ ವಿಜೃಂಭಣೆಯಿಂದ ಮದುವೆ ಮಾಡಿ ಜವಾಬ್ದಾರಿಯಿಂದ ಕೈತೊಳೆದುಕೊಳ್ಳುವುದಲ್ಲ. ಅವರಲ್ಲಿ ಸ್ವಪ್ರೀತಿ ತುಂಬಿ, ತಮ್ಮ ಕಾಲ ಮೇಲೆ ತಾವೇ ನಿಲ್ಲುವಂತೆ ಮಾಡುವುದು. ವರ್ತಮಾನ ಕಾಲದ ತಾಯಂದಿರಿಂದು ‘ತಾವು ಹೇಗೂ ತಮ್ಮಿಚ್ಛೆಯಂತೆ ಬದುಕನ್ನು ಕಟ್ಟಿಕೊಳ್ಳಲಾಗಲಿಲ್ಲ. ತನ್ನ ಮಗಳಾದರೂ ಅವಳ ಮನದಾಸೆಯಂತೆ ಬದುಕನ್ನು ರೂಪಿಸಿಕೊಳ್ಳಲಿ. ಆತ್ಮವಿಶ್ವಾಸದಿಂದ ಬದುಕನ್ನು ಪರಿಪೂರ್ಣವಾಗಿ ಅನುಭವಿಸಲಿ’ ಎಂದು ಯೋಚಿಸಿ ಮನಃಪೂರ್ವಕವಾಗಿ ಬೆಂಬಲಿಸಬೇಕು. ಈ ರೀತಿ, ಪ್ರತಿ ತಾಯಿ ಯೋಚಿಸಿದಲ್ಲಿ, ಮತ್ತು ಅದರಂತೆ ನಡೆದುಕೊಂಡಲ್ಲಿ, ಹೆಣ್ಣು ಮಕ್ಕಳು ಗಂಡಿನ ಹಂಗಿನಲ್ಲಿ ಎರಡನೆಯ ದರ್ಜೆಯ ಪ್ರಜೆಯಾಗಿ ಬದುಕುವುದು ತಪ್ಪುತ್ತದೆ. ಒಂದು ಹೆಣ್ಣು ಸ್ವಅರಿವು ಜಾಗ್ರತ ಗೊಳಿಸಿಕೊಂಡಲ್ಲಿ, ಇದರಿಂದ ಸುತ್ತಲಿನ ಹಲವಾರು ಹೆಣ್ಣುಮಕ್ಕಳು ಪ್ರೇರಣೆ ಪಡೆದು ಅದರಂತೆ ತಾವೂ ನಡೆದುಕೊಳ್ಳುತ್ತಾರೆ.

ಹಾಗಾಗಿ, ನಮ್ಮ ಸಬಲೀಕರಣ ನಮ್ಮ ಕೈಯಲ್ಲಿದೆ. ಈ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಂಡು, ಅಸಾಧ್ಯವಾದುದನ್ನು ಸಾಧ್ಯವಾಗಿಸೋಣ. ನಾವು ಪ್ರತಿಯೊಬ್ಬರೂ ಸ್ವಪ್ರೀತಿ ಬೆಳೆಸಿಕೊಂಡು ಆತ್ಮವಿಶ್ವಾಸದಿಂದ ಯಾರ ಹಂಗಿಲ್ಲದೆ ಬದುಕಿ ತೋರಿಸಿದರೆ, ಪ್ರಪಂಚವು ಹೆಣ್ಣುಮಕ್ಕಳನ್ನು ನೋಡುವ ದೃಷ್ಟಿ ತನ್ನಷ್ಟಕ್ಕೆ ಬದಲಾಗುತ್ತದೆ.

ಡಾ. ಜ್ಯೋತಿ

ಇಂಗ್ಲಿಷ್‌ ಸಾಹಿತ್ಯದಲ್ಲಿ ಡಾಕ್ಟರೇಟ್‌ ಪಡೆದಿರುವ ಇವರು ಪ್ರಸಕ್ತ, ತುಮಕೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ವೈಚಾರಿಕ ಲೇಖನಗಳು, ಸಣ್ಣ ಕಥೆಗಳು, ವಿಮರ್ಶಾ ಬರಹಗಳು ಮತ್ತು ಅನುವಾದಗಳನ್ನು ಬರೆದು ಪ್ರಕಟಿಸುತ್ತಿದ್ದಾರೆ.

ವಿಷಯಗಳು: #india #kannada #karnataka #peepal #peepalmedia
P

Peepal Media

Peepal Media · ವಿಶೇಷ ವಿಭಾಗ

ಸಂಬಂಧಿತ ಸುದ್ದಿಗಳು

Exit mobile version