Home ದೇಶ ಪಾಕ್‌ ಪರ ಗೂಢಚಾರಿಕೆ: ಗುರುಗ್ರಾಮ ಮೂಲದ ವಕೀಲ ರಿಜ್ವಾನ್ ಬಂಧನ

ಪಾಕ್‌ ಪರ ಗೂಢಚಾರಿಕೆ: ಗುರುಗ್ರಾಮ ಮೂಲದ ವಕೀಲ ರಿಜ್ವಾನ್ ಬಂಧನ

0

ಪಾಕಿಸ್ತಾನಕ್ಕಾಗಿ ಗೂಢಚಾರಿಕೆ (Spying) ನಡೆಸಿದ ಪ್ರಕರಣವು ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ಹಲವಾರು ಜನರನ್ನು ಬಂಧಿಸಲಾಗಿದ್ದು, ಇದೀಗ ಈ ಜಾಲದ ಮತ್ತೊಬ್ಬ ಪ್ರಮುಖ ವ್ಯಕ್ತಿಯನ್ನು, ಹರಿಯಾಣದ ಗುರುಗ್ರಾಮಕ್ಕೆ ಸೇರಿದ ವಕೀಲ ರಿಜ್ವಾನ್ ಎನ್ನುವನನ್ನು ಪೊಲೀಸರು ಬಂಧಿಸಿದ್ದಾರೆ. ರಿಜ್ವಾನ್ ಅವರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಗಾಗಿ ಗೂಢಚಾರಿಕೆ ನಡೆಸುತ್ತಿದ್ದ ಎಂಬ ಗಂಭೀರ ಆರೋಪವಿದೆ.

ಈ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ರಿಜ್ವಾನ್‌ನ ಸ್ನೇಹಿತ ಮುಷರಫ್ ಅಲಿಯಾಸ್ ಪರ್ವೇಜ್ ಎಂಬಾತನ ಮೂಲಕ ಈ ಗೂಢಚಾರಿಕೆಯ ಜಾಲ ಬಯಲಾಗಿದೆ. ಮೂರು ವರ್ಷಗಳ ಹಿಂದೆ ಸೋಹ್ನಾ ನ್ಯಾಯಾಲಯದಲ್ಲಿ ರಿಜ್ವಾನ್ ಮತ್ತು ಮುಷರಫ್‌ಗೆ ಪರಿಚಯವಾಗಿ, ಅವರು ಆಪ್ತ ಸ್ನೇಹಿತರಾಗಿದ್ದರು. ವೃತ್ತಿಪರವಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದರೂ, ಆಗಾಗ್ಗೆ ಭೇಟಿಯಾಗುತ್ತಿದ್ದರು.

ತನಿಖೆಯ ವೇಳೆ, ಮುಷರಫ್ ಪೊಲೀಸರಿಗೆ ರಿಜ್ವಾನ್ ಅವರು ಹಣ ಪಡೆಯಲು ಏಳು ಬಾರಿ ಅಮೃತಸರಕ್ಕೆ ಪ್ರಯಾಣ ಬೆಳೆಸಿರುವುದಾಗಿ ತಿಳಿಸಿದ್ದಾನೆ. ಈ ಜುಲೈನಲ್ಲಿ ತಾನು ಕೂಡ ಅವರೊಂದಿಗೆ ಅಮೃತಸರಕ್ಕೆ ಹೋಗಿದ್ದೆ. ಆಗ ವಾಘಾ ಗಡಿಯಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಒಂದು ಬ್ಯಾಗ್‌ನಲ್ಲಿ ರಿಜ್ವಾನ್‌ಗೆ ಹಣವನ್ನು ನೀಡಿದ್ದರು ಎಂದು ಮುಷರಫ್ ಹೇಳಿದ್ದಾನೆ.

ಮುಷರಫ್ ನೀಡಿದ ಮಾಹಿತಿ ಆಧರಿಸಿ ಅಧಿಕಾರಿಗಳು ತನಿಖೆ ನಡೆಸಿದಾಗ, ರಿಜ್ವಾನ್‌ಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಇಂಡಸ್‌ಇಂಡ್ ಬ್ಯಾಂಕ್‌ಗಳಲ್ಲಿ ಖಾತೆಗಳಿವೆ ಎಂದು ತಿಳಿದುಬಂದಿದೆ. ಆದರೆ, ಹಣಕಾಸು ವಹಿವಾಟುಗಳ ಮಿತಿ ಮೀರಿದ ಕಾರಣ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆಯನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಈ ಎಲ್ಲಾ ಅಂಶಗಳ ಆಧಾರದ ಮೇಲೆ ಪೊಲೀಸರು ರಿಜ್ವಾನನ್ನು ಬಂಧಿಸಿದ್ದಾರೆ. ಈ ಗೂಢಚಾರಿಕೆ ಜಾಲದ ಸಂಪೂರ್ಣ ಉದ್ದೇಶ ಮತ್ತು ಇತರರ ಭಾಗವಹಿಸುವಿಕೆಯ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ.

You cannot copy content of this page

Exit mobile version