ರಾಜಕೀಯ ಮತ್ತು ಅಸ್ಥಿರತೆ ಮತ್ತು ಕೊರೋನಾ ಹೊಡೆತದಿಂದ ತತ್ತರಿಸಿರುವ ಶ್ರೀಲಂಕಾ ತನ್ನ ದೇಶದ ಆರ್ಥಿಕತೆಯ ಬೆನ್ನೆಲುಬಾದ ಪ್ರವಾಸೋದ್ಯವನ್ನು ಸುಧಾರಿಸುವ ಸಲುವಾಗಿ ಬಃಳ ಮುಖ್ಯವಾದ ಕ್ರಮವೊಂದನ್ನು ಘೋಷಿಸಿದೆ.
ಅದು ಭಾರತ ಸೇರಿದಂತೆ ಏಳು ದೇಶಗಳ ನಾಗರಿಕರಿಗೆ ವೀಸಾ ಇಲ್ಲದೆ (visa free entry) ಶ್ರೀಲಂಕಾದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವುದಕ್ಕೆ ಅವಕಾಶ ನೀಡಲು ನಿರ್ಧರಿಸಿದೆ.
ಭಾರತದೊಂದಿಗೆ ಚೀನಾ, ರಷ್ಯಾ, ಮಲೇಷ್ಯಾ, ಜಪಾನ್, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್ ಪ್ರವಾಸಿಗರಿಗೆ ಉಚಿತ ವೀಸಾ ನೀಡಲು ಶ್ರೀಲಂಕಾ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ವಿಷಯವನ್ನು ಆ ದೇಶದ ವಿದೇಶಾಂಗ ಸಚಿವ ಅಲಿ ಸಬ್ರಿ ಬಹಿರಂಗಪಡಿಸಿದ್ದಾರೆ. ಮುಂದಿನ ವರ್ಷ ಮಾರ್ಚ್ 31ರವರೆಗೆ ಈ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಅವರ ಟ್ವಿಟರ್ ಖಾತೆಯ ಮೂಲಕ ಪ್ರಕಟಿಸಲಾಗಿದೆ.
https://x.com/alisabrypc/status/1716645950238970008?s=20
ಪ್ರವಾಸೋದ್ಯಮವೇ ಈ ದೇಶದ ಆರ್ಥಿಕ ಮೂಲವಾಗಿದ್ದು, ದೇಶದ ಜಿಡಿಪಿಗೆ ಇದು ಶೇಕಡಾ ಹತ್ತರಷ್ಟು ಕೊಡುಗೆ ನೀಡುತ್ತದೆ. ಕೊರೋನಾ ಪಿಡುಗಿಗೂ ಮೊದಲು ಆ ದೇಶದ ಪ್ರವಾಸೋದ್ಯಮದ ಆದಾಯವು 360 ಮಿಲಿಯನ್ ಡಾಲರ್ ಆಗಿತ್ತು, ಆದರೆ ಈಗ ಅದು 60 ಮಿಲಿಯನ್ ಡಾಲರ್‌ಗಿಂತ ಕಡಿಮೆಯಾಗಿದೆ. ಅದಕ್ಕೆ ಪೂರಕವಾಗಿ ಆರ್ಥಿಕ ಮತ್ತು ರಾಜಕೀಯ ಅನಿಶ್ಚಿತತೆಯಿಂದಾಗಿ ಇಡೀ ದೇಶವೇ ಬಿಕ್ಕಟ್ಟಿಗೆ ಸಿಲುಕಿತ್ತು. ಇದರಿಂದಾಗಿ ದೇಶಕ್ಕೆ ಪ್ರವಾಸಿಗರ ಆಗಮನ ಕ್ರಮೇಣ ಕಡಿಮೆಯಾಗಿದೆ.
ಪ್ರತಿ ವರ್ಷ ಶ್ರೀಲಂಕಾಕ್ಕೆ ಬರುವ ಪ್ರವಾಸಿಗರಲ್ಲಿ 30 ಪ್ರತಿಶತ ಪ್ರವಾಸಿಗರು ರಷ್ಯಾ, ಉಕ್ರೇನ್, ಪೋಲೆಂಡ್ ಮತ್ತು ಬೆಲಾರಸ್ ದೇಶಗಳಿಂದ ಬರುತ್ತಿದ್ದರು. ಯುದ್ಧದ ಕಾರಣ, ಪ್ರವಾಸಿಗರ ಆಗಮನದ ಕೊರತೆಯುಂಟಾಗಿದ್ದು, ಇದರಿಂದ ಶ್ರೀಲಂಕಾದ ಆದಾಯದ ಮೇಲೆ ಮತ್ತಷ್ಟು ಪರಿಣಾಮವಾಗಿದೆ.
ಇದರೊಂದಿಗೆ, ಶ್ರೀಲಂಕಾ ಈಗ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ 2023ರ ವೇಳೆಗೆ 20 ಲಕ್ಷ ಜನರನ್ನು ತಮ್ಮ ದೇಶದತ್ತ ಸೆಳೆಯುವ ಗುರಿ ಹೊಂದಲಾಗಿದೆ.
ಇದರ ಭಾಗವಾಗಿ ಉಚಿತ ವೀಸಾ ನೀತಿಯನ್ನು ತರಲಾಗಿದೆ. ಏತನ್ಮಧ್ಯೆ, ಶ್ರೀಲಂಕಾದಲ್ಲಿ ಈಗ ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತಿದೆ. ಸೆಪ್ಟೆಂಬರ್ 2023ರಲ್ಲಿ 10 ಲಕ್ಷ ಪ್ರವಾಸಿಗರು ಶ್ರೀಲಂಕಾಕ್ಕೆ ಹೋಗಿದ್ದಾರೆ. 2019ರ ನಂತರ ಇಷ್ಟೊಂದು ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿರುವುದು ಇದೇ ಮೊದಲು.