Monday, October 27, 2025

ಸತ್ಯ | ನ್ಯಾಯ |ಧರ್ಮ

ಒಂದು ಬಾಗಿಲು ಮುಚ್ಚಿಕೊಂಡಾಗ ಇನ್ನೊಂದು ಬಾಗಿಲು ತೆರೆದುಕೊಳ್ಳುತ್ತದೆ

ಅಂಗ ವೈಕಲ್ಯ ಹೊಂದಿದ ಬಹುತೇಕರು ನನ್ನಿಂದ ಏನೂ ಸಾಧ್ಯವಿಲ್ಲ ಎಂಬ ಮನೋಭಾವನೆಯಲ್ಲಿ ಬದುಕುವುದೇ ಹೆಚ್ಚು. ಆದರೆ, ಅಂತ:ಶಕ್ತಿ ಮತ್ತು ಆತ್ಮವಿಶ್ವಾಸಗಳೆಂಬ ಅದಮ್ಯ ಶಕ್ತಿಗಳಿದ್ದರೆ ಎಂತಹಾ ವೈಕಲ್ಯವನ್ನು ಕೂಡ ಮೆಟ್ಟಿ ನಿಲ್ಲಬಹುದು ಎಂಬುದನ್ನು ಶ್ರೀನಿವಾಸ ಕಾರ್ಕಳ ಸ್ವತ: ಅನುಭವಿಸಿ ಬರೆದಿದ್ದಾರೆ. ಈ ಲೇಖನ ಕೆಲವರಿಗಾದರೂ ಸ್ಪೂರ್ತಿಯಾಗಿ ಅವರ ಬದುಕಿನಲ್ಲಿ ಉತ್ಸಾಹ ಪ್ರೀತಿ ಚಿಮ್ಮಿಸಲಿ ಎಂಬುದು ಪೀಪಲ್‌ ಮೀಡಿಯಾದ ಆಶಯವಾಗಿದೆ.( ಡಿ.3 ವಿಶ್ವ ವಿಶೇಷ ಚೇತನರ ದಿನಾಚರಣೆ)

ಒಂದು ಸಣ್ಣ ಅವಘಡ. ಒಂದು ಸಣ್ಣ ಏಟು. ಬಿದ್ದುದು ಮಾತ್ರ ಅತ್ಯಂತ ಸೂಕ್ಷ್ಮ ಜಾಗಕ್ಕೆ. ಒಂದು ಆಸ್ಪತ್ರೆಯಲ್ಲಿ ಎರಡು ದಿನ. ಆನಂತರ ಮಣಿಪಾಲಕ್ಕೆ ಪಯಣ. ಸ್ಟ್ರೆಚರ್ ನಲ್ಲಿ ಮಲಗಿಯೇ ಇದ್ದೇನೆ. ಒಳ್ಳೆಯ ಆಸ್ಪತ್ರೆಗೆ ಬಂದಿದ್ದೇನೆ. ಎಲ್ಲವೂ ಸರಿಹೋಗುತ್ತದೆ ಎಂಬ ಧೈರ್ಯ. ಬೆಳಗಿನ ಹೊತ್ತು ಸುಮಾರು ಆರೋ ಏಳೋ ಗಂಟೆ ಇರಬಹುದು. ಸರ್ಜರಿ ಮಾಡಲಿರುವ ಡಾಕ್ಟರ್ ಮೊಹಂತಿ ಬಳಿ ಬಂದರು. ವೈದ್ಯಕೀಯ ವರದಿಗಳನ್ನು ನೋಡಿದರು. ಸಾಧ‍್ಯತೆ 50:50. ‘ನರಕ್ಕೆ ಆದ ಹಾನಿಯನ್ನು ಜಗತ್ತಿನ ಎಲ್ಲೂ ಸರಿಪಡಿಸಲು ಸಾಧ್ಯವಿಲ್ಲ, ನಮ್ಮ ಕೆಲಸ ನಾವು ಮಾಡುತ್ತೇವೆ’ ಎಂದರು. ಒಮ್ಮೆ ಚಿಂತೆಯಾಯಿತು. ಆದರೂ ಏನೋ ಭರವಸೆ. ಯಾಕೆಂದರೆ ಭವಿಷ್ಯ ಹೇಳಲು ಯಾರಿಗೂ ಸಾಧ್ಯವಿಲ್ಲ ಅಲ್ಲವೇ? ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂದು ರೀತಿಯಲ್ಲವೇ? ಆರೋಗ್ಯಕ್ಕೆ ಸಂಬಂಧಿಸಿದಂತೆ ಪವಾಡದಂತಹ ಘಟನೆಗಳು ನಡೆದ ಉದಾಹರಣೆಗಳು ಎಷ್ಟಿಲ್ಲ? ಅಲ್ಲದೆ ಡಾಕ್ಟರ್ ಅರ್ಧದಷ್ಟು ಅವಕಾಶ ಇದೆಯೆಂದಿದ್ದಾರಲ್ಲ?! ಮನಸಿನಲ್ಲಿ ನಕಾರಾತ್ಮಕ ಭಾವನೆಗಳು ಬರಲೇ ಇಲ್ಲ. ಮುಗ್ಧತೆಯೋ, ಮಾನಸಿಕ ಆಘಾತದ ಪರಿಣಾಮವೋ, ಪ್ರಬುದ್ಧತೆಯೋ ಅರಿಯದು.

ಮಧ್ಯಾಹ್ನ ಸುಮಾರು ಎರಡು ಗಂಟೆಗೆ ಆಪರೇಶನ್ ಥಿಯೇಟರ್ ಗೆ ಒಯ್ದರು. ಕೈಗೆ ಏನೇನೋ ವಯರ್ ಸಿಕ್ಕಿಸಿದರು. ಅರಿವಳಿಕೆ ಕೊಟ್ಟಿರಬೇಕು. ನಿಮ್ಮ ಹೆಸರು? ಏನಾದುದು? ಹೀಗೆ ಏನೇನೋ ಪ್ರಶ್ನೆ ಕೇಳುತ್ತಿದ್ದರು. ನಾನು ದಿಟ್ಟವಾಗಿ ಉತ್ತರಿಸುತ್ತಿದ್ದೆ. ಆಮೇಲೆ ಮಂಪರಿನಲ್ಲಿಯೇ ಏನೇನೋ ಬಡಬಡಿಸಿದೆ.  ಬಳಿಕ ಏನಾಯಿತೋ ಗೊತ್ತಿಲ್ಲ. ಎಚ್ಚರಗೊಳ್ಳುವಾಗ ಪೋಸ್ಟ್ ಆಪರೇಶನ್ ಥಿಯೇಟರ್ ನಲ್ಲಿದ್ದೆ. ನಸುಕಿನ ಹೊತ್ತು. ಆರೇಳು ಗಂಟೆಗಳ ಸರ್ಜರಿಗೆ ಒಳಗಾಗಿದ್ದೆ ಎಂಬುದು ತಿಳಿಯಿತು.

ಬೆಳಗಾದ ಮೇಲೆ ತಂದು ಜನರಲ್ ವಾರ್ಡ್ ಗೆ ಹಾಕಿದರು. ಕಾಲುಗಳನ್ನು ಅತ್ತಿತ್ತ ಮಾಡುವುದಿರಲಿ, ಅವು ಇವೆಯೋ ತಿಳಿಯುತ್ತಿರಲಿಲ್ಲ. ಬೆನ್ನು ಮೂಳೆಗೆ ‘ಹ್ಯಾರಿಂಗ್ ಟನ್ ರಾಡ್’ ನ ಬೆಂಬಲಕೊಟ್ಟಿದ್ದಾರೆ ಎಂದು ತಿಳಿಯಿತು. ಒಂದೆರಡು ವಾರಗಳ ಬಳಿಕ ದೇಹದ ಮುಂಭಾಗ ಮತ್ತು ಬೆನ್ನಿಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಜಾಕೆಟ್ ಬಿಗಿದು, ಸ್ವಲ್ಪ ದಿನಗಳ ನಂತರ ಬನ್ನಿ ಎಂದು ಹೇಳಿ ಮನೆಗೆ ಕಳುಹಿಸಿಕೊಟ್ಟರು.

ಏಳುವಂತಿಲ್ಲ. ಮಲಗಿಕೊಂಡೇ ಇರಬೇಕು. ಇಷ್ಟು ದಿನ ದೇಹದ ಬಗ್ಗೆ ಮಾತ್ರ ಯೋಚಿಸುತ್ತಿದ್ದ ಮನಸು ಈಗ ಬದುಕಿನ ಬಗ್ಗೆ ಯೋಚಿಸಲಾರಂಭಿಸಿತು. ಐದನೆಯ ತರಗತಿಯಲ್ಲಿ ಓದುತ್ತಿದ್ದ ಮಗ. ಉದ್ಯೋಗಿಯಲ್ಲದ ಸಂಗಾತಿ. ಮುಂದೆ ಬದುಕು ಹೇಗೆ? ಒಮ್ಮೊಮ್ಮೆ ಅಳುವೇ ಬರುತ್ತಿತ್ತು. ನನ್ನನ್ನು ಅರಬೀ ಕಡಲಿಗೆ ಒಯ್ದ ಕಾಲು, ಪಶ್ಚಿಮ ಘಟ್ಟಗಳ ನೆತ್ತಿಯಲ್ಲಿ ಓಡಾಡಿಸಿದ ಕಾಲು, ಮುಂಬೈ, ದೆಹಲಿ, ಶಿಮ್ಲಾ ಸುತ್ತಿಸಿದ ಕಾಲು, ನಾಟಕ, ಕವಿಗೋಷ್ಠಿ, ಆಕಾಶವಾಣಿ, ಸಾಹಿತ್ಯ ಸಮ್ಮೇಳನ ಹೀಗೆ ಕಾಲಿಗೆ ಚಕ್ರ ಸಿಕ್ಕಿಸಿ ಕೊಂಡಂತೆ ಓಡಾಡುತ್ತಿದ್ದಾತನ ಕಾಲು ಇದ್ದೂ ಇಲ್ಲದಂತಾದರೆ ಪರಿಸ್ಥಿತಿ ಹೇಗಿರಬಹುದು?

ಆ ಒಂದು ಭರವಸೆಯ ಮಾತು

ಐದಾರು ತಿಂಗಳು ಕಳೆಯಿತು. ಒಂದೆಡೆ ಆರೋಗ್ಯದ ಚಿಂತೆಯಾದರೆ ಇನ್ನೊಂದೆಡೆ ಉದ್ಯೋಗದ ಮತ್ತು ಬದುಕಿನ ಚಿಂತೆ. ಒಂದು ದಿನ ತುಂಬಾ ತುಂಬ ಚಿಂತೆಯಿಂದ ಮನಸು ಭಾರವಾಗಿ ಅನ್ಯ ಮನಸ್ಕನಾಗಿದ್ದ ಹೊತ್ತು “ನೀವು ಚಿಂತೆ ಮಾಡುವುದು ಯಾಕೆ? ನಿಮ್ಮಲ್ಲಿ ಪ್ರತಿಭೆ ಇದೆ, ಹೇಗಾದರೂ ಬದುಕೋಣ” ಎಂದಳು ಸಂಗಾತಿ. ಆ ಒಂದು ಧೈರ್ಯದ ಭರವಸೆಯ ಮಾತು ಇದ್ದಕ್ಕಿದ್ದಂತೆ ಸಂಜೀವಿನಿಯಂತೆ ಕೆಲಸ ಮಾಡಿತು. ಬದುಕಿನ ಟರ್ನಿಂಗ್ ಪಾಯಿಂಟ್ ನಂತಾಯಿತು.

ಇಷ್ಟು ದಿನ ನಾನು ದುಡಿಯಲು ಹೋಗುತ್ತಿದ್ದೆ. ಆಕೆ ಮನೆಯಲ್ಲಿರುತ್ತಿದ್ದಳು. ಈಗ ಆಕೆ ದುಡಿಯಲು ಹೊರಗೆ ಹೋದಳು, ನಾನು ಮನೆಯಲ್ಲಿದ್ದೆ. ನನ್ನ ಚಿಕಿತ್ಸೆ, ಆರೈಕೆ, ಮನೆಯ ಸಾಮಾನ್ಯ ಕೆಲಸಗಳು, ಹೊರಗೆ ದುಡಿಮೆಯ ಕೆಲಸ, ಆಕೆಯ ಮೇಲಿನ ಹೊರೆಯಾದರೋ ಅಸಾಧ್ಯವಾದುದು. ಆದರೆ ಆಕೆ ಅದನ್ನು ತೋರಿಸುತ್ತಿರಲಿಲ್ಲ. ಹಾಗೆ ತೋರಿಸುವುದು ಆಕೆಯ ಜಾಯಮಾನವೇ ಆಗಿರಲಿಲ್ಲ. ಬಹುಷಃ ಇದುವೇ ನನ್ನ ಭರವಸೆಯಾಗಿತ್ತು. ನಾನು ಮಗುವಿನಂತಾಗಿದ್ದೆ. ನನ್ನ ಪಾಲಿಗೆ ಹೆಂಡತಿಯಾಗಿದ್ದವಳು ಈಗ ಅಕ್ಷರಶಃ ತಾಯಿಯಾಗಿದ್ದಳು.

ನನ್ನ ಹಿಂದಿನ ಸಾಹಿತ್ಯ ಚಟುವಟಿಕೆ ಈಗ ಉಪಯೋಗಕ್ಕೆ ಬರಲಾರಂಭಿಸಿತು. ಗೆಳೆಯರೊಬ್ಬರ ಮೂಲಕ ಸಿಕ್ಕ ಅನುವಾದದ ಕೆಲಸವನ್ನು ಮಾಡ ತೊಡಗಿದೆ. ಇಂಗ್ಲಿಷ್ ನಿಂದ ಕನ್ನಡಕ್ಕೆ. ಬಹಳ ಅಲ್ಲವಾದರೂ ಒಂದಷ್ಟು ಹಣ ಬರುತ್ತಿತ್ತು. ಏನೋ ಸಂಪಾದನೆ ಮಾಡುತ್ತಿದ್ದೇನೆ ಎಂಬ ಸಮಾಧಾನ.

ಮೂರ್ನಾಲ್ಕು ತಿಂಗಳ ಬಳಿಕ ಹಾಸಿಗೆಯಿಂದ ಗಾಲಿಕುರ್ಚಿಗೆ ಪ್ರಮೋಶನ್ ಆಯಿತು. ಅಶಕ್ತತೆಯ ಎಲ್ಲ ಸಮಸ್ಯೆಯ ನಡುವೆಯೂ ಏನೋ ಆತ್ಮವಿಶ‍್ವಾಸ. ಹೊಸ ಬದುಕಿಗೆ ಹೊಂದಿಕೊಳ್ಳಲಾರಂಭಿಸಿದೆ. ಹೆಚ್ಚು ಹೆಚ್ಚು ಸ್ವಾವಲಂಬಿಯಾದೆ. ಬರೆವಣಿಗೆಯ ಕೆಲಸಗಳು ನಿರಂತರವಾದವು. ಅಂದಾಜು ವರ್ಷ ಕಳೆಯಿತು. ಈಗ ಇನ್ನಷ್ಟು ಸ್ವಾವಲಂಬಿ. ಸಂಗಾತಿ ಬೆಳಗ್ಗೆ ಮನೆಯಿಂದ ಹೊರಟು ಹೋದರೆ ಸಂಜೆ ವಾಪಸ್ ಬರುವವರೆಗೂ ಮನೆಯಲ್ಲಿ ಒಬ್ಬನೇ ಇರುತ್ತಿದ್ದೆ. ಎಲ್ಲ ಮ್ಯಾನೇಜ್ ಮಾಡುತ್ತಿದ್ದೆ.

ಜಗತ್ತು ನಾವಂದುಕೊಂಡಷ್ಟು ಕೆಟ್ಟದಾಗಿಲ್ಲ

ನಾವು ಗೆಳೆಯರು, ಹಿತೈಷಿಗಳು ಎಂದು ಕೊಂಡಿದ್ದ ಅನೇಕರು ನಮ್ಮ ಕಷ್ಟ ಕಾಲದಲ್ಲಿ ಕೈಕೊಟ್ಟಾಗ ಮನುಷ್ಯ ಸಂಬಂಧಗಳು, ಇಡೀ ಸಮಾಜದ ಬಗ್ಗೆಯೇ ಭ್ರಮ ನಿರಸನಗೊಳ್ಳುವುದಿದೆ. ಇಡೀ ಸಮಾಜವೇ ದುಷ್ಟ ಮತ್ತು ಸಂವೇದನಾಹೀನ ಅಂದುಕೊಳ್ಳುವುದಿದೆ. ಆದರೆ ಇದು ಪೂರ್ಣ ಸರಿಯಲ್ಲ. ಸಮಾಜ ಇರುವುದೇ ಹೀಗೆ ಎಂದು ಮುಂದೆ ಹೋಗುತ್ತಿರಬೇಕು. ನಾನು ಹಾಸಿಗೆ ಹಿಡಿದು ಆದಾಯವೇ ಇಲ್ಲದ ಹೊತ್ತು ನನ್ನ ಸಹೋದ್ಯೋಗಿಗಳು ನನ್ನನ್ನು ವರ್ಷಗಳ ಕಾಲ ಸಾಕಿದರು. ನನ್ನ ಮನೆಯವರು ನನ್ನ ಸಂಗಾತಿಯ ಮನೆಯವರು ಎಲ್ಲ ರೀತಿಯಲ್ಲಿಯೂ ಜತೆಗಿದ್ದರು. ಕೆಲ ಪರಿಚಿತರು ನಮ್ಮನ್ನು ಮರೆತರು ಅನಿಸಿದಾಗ ನಮಗೆ ಪರಿಚಯವೇ ಇಲ್ಲದವರು ದೇವರ ಹಾಗೆ ಸಹಾಯಕ್ಕೆ ಬಂದರು. ಪರಿಚಯವೇ ಇಲ್ಲದ ವಕೀಲರೊಬ್ಬರು ಲಕ್ಷಗಳ ವಿಮಾ ಪರಿಹಾರ ತೆಗೆಸಿಕೊಟ್ಟು ‘ಶುಲ್ಕ ಎಷ್ಟು?’ ಎಂದು ಕೇಳಿದಾಗ ‘ಶುಲ್ಕ ಬೇಡ, ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯಾಗುವುದಾದರೆ ಒಂದು ರುಪಾಯಿ ಕೊಡಿ’ ಅಂದರು! ಜಗತ್ತಿನಲ್ಲಿ ಇಂಥವರೂ ಇದ್ದಾರೆ. ಇವರೇ ಜಗತ್ತಿನ, ಬದುಕಿನ ಭರವಸೆ.

ನನ್ನ ಬಳಿ ಒಂದು ಪುಟ್ಟ ನಿವೇಶನ ಇತ್ತು. ಮನೆ ಕಟ್ಟಿರಲಿಲ್ಲ. ನಾನು ತೊಂದರೆಗೀಡಾದ ಬಳಿಕ ಸೂಕ್ತವಾದ ಮನೆಯ ಅಗತ್ಯ ಇತ್ತು. ಕೊಲ್ಲಿ ರಾಷ್ಟ್ರಗಳ ದುಡಿಯುತ್ತಿದ್ದ ನನ್ನ ಅನೇಕ ಗೆಳೆಯರು ಉಡುಗೊರೆಯ ನೆಪದಲ್ಲಿ ಒಂದಷ್ಟು ಆರ್ಥಿಕ ನೆರವು ನೀಡಿದರು. ಕಲಾವಿದ ಗೆಳೆಯ ಮತ್ತು ಆತನ ಆರ್ಕಿಟೆಕ್ಟ್ ತಮ್ಮ ಸೇರಿ ಚಂದದ ಮನೆಯ ವಿನ್ಯಾಸ ಮಾಡಿದರು. ವರ್ಷದಲ್ಲಿ ಮನೆ ಸಿದ್ಧವಾಯಿತು. ಅತ್ಯಂತ ಖುಷಿಯಿಂದ ಹೊಸ ಮನೆಗೆ ಬಂದೆವು. ನಮ್ಮದೇ ಮನೆ. ಗಂಜಿ ಕುಡಿದರೂ ಸರಿಯೇ ಹಂಗಿನ ಅರಮನೆಯಲ್ಲವಲ್ಲ?

ಆಗುವುದೆಲ್ಲ ಒಳ್ಳೆಯದಕ್ಕೆ ಎಂದುಕೊಂಡು ಮುಂದೆ ಹೋಗಿ

ಕಂಪ್ಯೂಟರ್ ನಲ್ಲಿ ಡಾಸ್ ಕಾಲ ಮುಗಿದು ವಿಂಡೋಸ್ ಬಂದಾಗಿತ್ತು. ನಿಧಾನಕ್ಕೆ ಇಂಟರ್ ನೆಟ್ ಕೂಡಾ ಬಂತು. ಹಿಂದೆ ಡಾಸ್ ಆಪರೇಟಿಂಗ್ ಸಿಸ್ಟಮ್ ನಲ್ಲಿ ಸ್ವಲ್ಪ ಕಾಲ ಕಂಪ್ಯೂಟರ್ ಕಲಿತಿದ್ದೆ. ಈಗ ವಿಂಡೋಸ್. ವರ್ಡ್ಸ್, ಪೇಜ್ ಮೇಕರ್ ಎಲ್ಲ ಸ್ವತಃ ಕಲಿತೆ. ಹಿಂದೆ ಬೇರೆಯವರಿಂದ ಟೈಪ್ ಮಾಡಿಸುತ್ತಿದ್ದೆ. ಈಗ ನಾನು ಅನುವಾದಿಸಿದ ಪಠ್ಯಗಳನ್ನು ನಾನೇ ಟೈಪಿಸಿ ಇಂಟರ್ ನೆಟ್ ಮೂಲಕ ಕಳಿಸಿಲಾರಂಭಿಸಿದೆ. ಇಂಟರ್ ನೆಟ್ ಬಂದ ಮೇಲೆ ನಾನು ಮನೆಯೊಳಗಿದ್ದೇನೆ ಅನಿಸಲಿಲ್ಲ. ಇಡೀ ಜಗತ್ತಿನಲ್ಲಿ ಎಲ್ಲಿ ಬೇಕಾದರಲ್ಲಿ ಓಡಾಡುತ್ತಿದ್ದೇನೆ. ಮನೆಗೆ ಗೋಡೆಗಳೇ ಇಲ್ಲ ಎಂಬ ಅನುಭವ. ಆಮೇಲೆ ನಾವು ತಿರುಗಿ ನೋಡಲೇ ಇಲ್ಲ. ಮುಂದೆ ಮುಂದೆ, ಮೇಲೆ ಮೇಲೆ ಹೋದೆವು. ಮಗ ಚೆನ್ನಾಗಿ ಓದಿದ. ಎಂಜಿನೀಯರಿಂಗ್ ಮುಗಿಸಿ ಒಳ್ಳೆಯ ಉದ್ಯೋಗ ಹಿಡಿದ (ಈಗ ಕೆನಡಾದಲ್ಲಿದ್ದಾನೆ).

ಆಗುವುದೆಲ್ಲ ಒಳ್ಳೆಯದಕ್ಕೋ ಗೊತ್ತಿಲ್ಲ. ಆದರೆ ಆಗುವುದೆಲ್ಲ ಒಳ್ಳೆಯದಕ್ಕೆ ಎಂದುಕೊಂಡು ಮುಂದೆ ಹೋಗುತ್ತಲೇ ಇರಿ. ನಿಮಗೆ ಗೊತ್ತೇ ಅಗದ ರೀತಿಯಲ್ಲಿ ನಿಮ್ಮ ಗಮ್ಯ ತಲಪಿರುತ್ತೀರಿ.

ಮೂಢನಂಬಿಕೆಯಿಂದ ದೂರ ಇರಿ

ನಮ್ಮ ಸಮಾಜದ ಬಹುದೊಡ್ಡ ಸಮಸ್ಯೆ ಏನು ಗೊತ್ತೇ? ಪುಕ್ಕಟೆ ಸಲಹೆ ನೀಡುವುದು. ಇದೊಂದು ಕೆಟ್ಟ ಗುಣ ಎನ್ನಲಾಗದು. ನಿಮಗೇನಾದರೂ ಒಳ್ಳೆಯದಾಗಲಿ ಎಂಬ ಸದುದ್ದೇಶದಿಂದಲೇ ಅವರು  ಮಾಡುತ್ತಿರುತ್ತಾರೆ. ಆದರೆ ಅವರು ಹೇಳಿದ್ದನ್ನೆಲ್ಲ ಕೇಳುತ್ತಾ ಹೋದರೆ ನೀವು ಲಗಾಡಿ ಹೋಗುವುದು ಗ್ಯಾರಂಟಿ. ಯಾವುದನ್ನು ಎಷ್ಟು ತೆಗೆದುಕೊಳ್ಳಬೇಕು ಎಂಬ ವಿವೇಚನೆ ನಿಮ್ಮಲ್ಲಿರಬೇಕು. ನಾನು ವಿಜ್ಞಾನದ ವಿದ್ಯಾರ್ಥಿ. ನನ್ನ ಸಂಗಾತಿ ಕೂಡಾ ಮೂಢ ನಂಬಿಕೆಯಿಂದ ಬಹಳ ದೂರ. ನಾವು ಕ್ಯಾಲೆಂಡರ್ ದೇವರೊಂದಿಗೆ ಅಂತರ ಕಾಪಾಡಿ ಕೊಂಡವರು. ದೇವರನ್ನು ಯಾವತ್ತೂ ಅದು ಬೇಕು ಇದು ಬೇಕು ಎಂದು ಪೀಡಿಸಿದವರಲ್ಲ. ಅದನ್ನು ಕೊಟ್ಟರೆ ನಿನಗೆ ಇದನ್ನು ಕೊಡುತ್ತೇನೆ ಎಂದು ಲಂಚದ ಅಥವಾ ಟಿಪ್ಸ್ ನ ಆಮಿಷ ಕೊಟ್ಟವರೂ ಅಲ್ಲ. ದೇವರು ಅವರ ಪಾಡಿಗೆ ಇರುತ್ತಾರೆ, ನಾವು ನಮ್ಮ ಪಾಡಿಗೆ ಇರುತ್ತೇವೆ. ನಮ್ಮ ಹೊಸ ಮನೆಗೆ ನಾವು ಗಣಹೋಮ ಸಹಿತ ಯಾವ ಹೋಮವನ್ನೂ ಮಾಡಲಿಲ್ಲ. ನಾವು ಕಾರಂತ ಮತ್ತು ತೇಜಸ್ವಿ ಫೋಟೋ ಹಿಡಿದುಕೊಂಡು ಮನೆ ಪ್ರವೇಶಿಸಿದವರು. ನಾವು ಗೃಹಪ್ರವೇಶಿಸುತ್ತಿದ್ದಂತೆಯೇ ಒಳಗಿದ್ದ ಎಲ್ಲ ಭೂತ ಪ್ರೇತ ಪೀಡೆಗಳು ಹೊರಗೋಡಿ ಹೋದವು!.

ನಾನು ವಿಜ್ಞಾನದ ವಿದ್ಯಾರ್ಥಿ ಎಂದೆನಲ್ಲ, ನನ್ನ ದೈಹಿಕ ಸಮಸ್ಯೆಯ ಬಗ್ಗೆ ಪುಸ್ತಕಗಳನ್ನು ಓದಲಾರಂಭಿಸಿದೆ. ಸಮಸ್ಯೆ ಅರ್ಥವಾಯಿತು. ವಿಜ್ಞಾನದ ಹಾದಿ ಹಿಡಿದೆವು. ವೈದ್ಯರನ್ನು ನಂಬಿದೆವು. ಅಲ್ಲಿಗೆ ಹೋಗು ಅಲ್ಲಿ ಎಣ್ಣೆ ತಿಕ್ಕುತ್ತಾರಂತೆ, ಇಲ್ಲಿಗೆ ಹೋಗು ಅಲ್ಲಿ ಪ್ರಾರ್ಥನೆ ಮಾಡಿದರೆ ಎಲ್ಲವೂ ಸರಿ ಹೋಗುತ್ತದಂತೆ ಹೀಗೆ ನೂರಾರು ಪುಕ್ಕಟೆ ಸಲಹೆಗಳು. ಮದ್ದು ಬಹಳ ಮಂದಿ ಅರೆಯುತ್ತಾರೆ, ಕುಡಿಯಬೇಕು ನಾವು ತಾನೇ? ಸಲಹೆಗಳನ್ನು ಈ ಕಿವಿಯಿಂದ ಕೇಳಿ, ಥ್ಯಾಂಕ್ಸ್ ಎಂದು ಹೇಳಿ, ಇನ್ನೊಂದು ಕಿವಿಯಿಂದ ಆಚೆ ಕಳಿಸಿದೆವು. ರಿಹ್ಯಾಬಿಲಿಟೇಶನ್ ನತ್ತ ಹೆಚ್ಚು ಹೆಚ್ಚು ಗಮನ ಹರಿಸಿದೆವು.

ಹಿಂದಿನ ಬಗ್ಗೆ ಇಂದಿನ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟು ಮುಂದಿನ ಬಗ್ಗೆ ಯೋಚಿಸುತ್ತ ಹೋದೆವು. ಇರದುದರ ಬಗ್ಗೆ ಯೋಚಿಸದೆ ಇರುವುದರ ಬಗ್ಗೆ ಯೋಚಿಸಿದೆವು. ಓದು, ಬರೆವಣಿಗೆ ಇತ್ಯಾದಿ ಬಿಡುವಿರದ ಹವ್ಯಾಸಗಳ ನಡುವೆ ನಮ್ಮ ನೋವಿನ ಬಗ್ಗೆ ಯೋಚಿಸುವುದಕ್ಕೆ ಸಮಯವೇ ಇರುತ್ತಿರಲಿಲ್ಲ. ‘ನೀನು ಮನೆಯಲ್ಲಿಯೇ ಇದ್ದೀಯಲ್ಲ.. ಹೇಗೆ ಸಮಯ ಕಳೆಯುತ್ತಿ, ಬೋರ್ ಆಗುವುದಿಲ್ಲವಾ?’ ಎಂದು ಕೇಳುವವರಿದ್ದಾರೆ. ಕಳೆಯುವುದಕ್ಕೆ ಸಮಯ ಇದ್ದರಲ್ಲವೇ? ಆ ಕೆಲಸ ಈ ಕೆಲಸ ಎಂದು ರಾತ್ರಿ ಮಲಗುವಾಗ 12 ಕಳೆದಿರುತ್ತದೆ.

ಸರಕಾರಿ ವ್ಯವಸ್ಥೆಯ ಕ್ರೌರ್ಯ

ಆ ದಿನ ಮಂಗಳೂರಿನ ಸರಕಾರಿ ವೆನ್ ಲಾಕ್ ಆಸ್ಪತ್ರೆಗೆ ಪ್ರಮಾಣ ಪತ್ರವೊಂದಕ್ಕಾಗಿ ಹೋಗಿದ್ದೆ. ಅಲ್ಲಿ ಅಂಗವಿಕಲ ಪ್ರಮಾಣ ಪತ್ರಕ್ಕಾಗಿ ಅನೇಕ ಬಡವರು ಬಂದುದು ನೋಡಿದೆ. ಇಪ್ಪತ್ತು ಇಪ್ಪತ್ತೈದು ವಯಸಿನವರನ್ನು ಕೇವಲ ಒಂದು ಪ್ರಮಾಣ ಪತ್ರಕ್ಕಾಗಿ ಒಂದೆರಡು ಜನ ಎತ್ತಿಕೊಂಡು ಬರುತ್ತಿದ್ದರು. ಇಂತಹ ವ್ಯಕ್ತಿಗಳನ್ನು ಇಪ್ಪತ್ತು ಮುವ್ವತ್ತು ಕಿಲೋಮೀಟರ್ ದೂರದಿಂದ ಬರಲು ಹೇಳುವ ಬದಲು ಒಬ್ಬ ವೈದ್ಯರು ಅವರಲ್ಲಿಗೇ ಹೋಗಿ ತಪಾಸಣೆ ಮಾಡುವ ಕೆಲಸ ಮಾಡಬಾರದೇ ಅನಿಸುತ್ತಿತ್ತು. ಆದರೆ ನಮ್ಮ ಸರಕಾರಿ ವ್ಯವಸ್ಥೆ ಅತ್ಯಂತ ಕ್ರೂರವಾಗಿದೆ. ಅಲ್ಲಿ ಇರುವ ಅನೇಕರಲ್ಲಿ ಮನುಷ್ಯ ಸಂವೇದನೆಯೇ ಇಲ್ಲ. ಪ್ರತಿಯೊಂದಕ್ಕೂ ಅಶಕ್ತರನ್ನು ತಾವು ಇರುವಲ್ಲಿಗೇ ಬರ ಹೇಳುತ್ತಾರೆ. ನಮ್ಮ ಬಹುತೇಕ ವೈದ್ಯರು ಇರುವಲ್ಲಿಗೆ, ಸಾರ್ವಜನಿಕ ಕಚೇರಿಗಳಿಗೆ ಅಶಕ್ತರು ಬಿಡಿ ಶಕ್ತರೂ ಹೋಗುವಂತಿರುವುದಿಲ್ಲ. ಇಂತಹ ವ್ಯವಸ್ಥೆ ವರ್ಷಕ್ಕೊಮ್ಮೆ ಅಶಕ್ತರ ದಿನಾಚರಣೆ ಮಾಡುತ್ತದೆ; ಕಾಟಾಚಾರಕ್ಕೆ. ‘ನೀವು ಸರಿ ಇದ್ದೀರೋ ಬದುಕಿ ಇಲ್ಲವಾದರೆ ಸಾಯಿರಿ’ ಎಂಬ ಧೋರಣೆ ನಮ್ಮ ಸರಕಾರಿ ವ್ಯವಸ್ಥೆಯದ್ದು. ಅವರಿಗೆ ಕೊಡುವ ಪಿಂಚಣಿಯಾದರೂ ಎಷ್ಟು? ಅದರಿಂದ ಅವರಿಗೆ ಎಷ್ಟು ಪ್ರಯೋಜನವಾದೀತು? ಆ ಪಿಂಚಣಿಗಾಗಿ ಕೊಡುವ ಕಾಟ ಎಷ್ಟು? ಈ ಬಗ್ಗೆ ನಮ್ಮ ಸಂಸದರು ಎಂದಾದರೂ ಸಂಸತ್ತಿನಲ್ಲಿ ದನಿ ಎತ್ತಿದ್ದಿದೆಯೇ? ಅಶಕ್ತರು ಬಳಸುವ ಗಾಲಿ ಕುರ್ಚಿಯ ಬಿಡಿ ಭಾಗಗಳಿಗೂ ಜಿಎಸ್ ಟಿ ವಿಧಿಸುವ ಕ್ರೂರ ಸರಕಾರಗಳಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ?

ಅಶಕ್ತರನ್ನು ಹೇಗೆ ನೋಡಿಕೊಳ್ಳಬೇಕು

ನಿಮ್ಮ ಮನೆಯಲ್ಲಿ ಯಾರಾದರೂ ಅಂಗವಿಕಲರಿದ್ದಾರೋ? ಅವರನ್ನು ಹೇಗೆ ನೋಡಿಕೊಳ್ಳಬೇಕು? ನೆನಪಿರಲಿ, ಅವರಿಗೆ ನಿಮ್ಮ ಅನುಕಂಪ ಬೇಕಾಗಿಲ್ಲ. ನಿಮ್ಮಿಂದ ಅವರನ್ನು ಪ್ರತ್ಯೇಕವಾಗಿ ನೋಡುವುದನ್ನು ಅವರು ಬಯಸುವುದಿಲ್ಲ. ಅವರನ್ನು ನಿಮ್ಮಲ್ಲೇ ಒಬ್ಬರಂತೆ ನೋಡಿ. ಅವರು ಕ್ಷಣ ಕ್ಷಣವೂ ಸ್ವಾವಲಂಬಿಗಳಾಗಲು ಯತ್ನಿಸುತ್ತಲೇ ಇರುತ್ತಾರೆ. ಅವರು ಕೇಳದೆ ಅವರಿಗೆ ಸಹಾಯ ಮಾಡಬೇಡಿ. ಯಾಕೆಂದರೆ ಅವರ ಬೇಕು ಏನು ಎಂಬುದು ನಿಮಗೆ ಗೊತ್ತಾಗದು. ಅಲ್ಲದೆ, ಅವರಲ್ಲಿ ವೈದ್ಯಲೋಕಕ್ಕೂ ಗೊತ್ತಿರದಂತಹ ದಾರಿ ಕಂಡುಕೊಳ್ಳುವ ವಿಶೇಷ ಶಕ್ತಿ ಸಾಮರ್ಥ್ಯ ಇರುತ್ತದೆ. ಕಣ್ಣು ಇಲ್ಲದಾತ ನಮಗಿಂತ ಚೆನ್ನಾಗಿ ನೋಡಬಲ್ಲ. ಇನ್ನು, ಅಶಕ್ತರೊಬ್ಬರ ಬಗ್ಗೆ ನಿಮಗೆ ಕುತೂಹಲ ಇದೆಯೋ? ಅವರಲ್ಲಿ ಆ ಬಗ್ಗೆ ನೇರ ಕೇಳಬೇಡಿ. ಬೇರೆಯವರಲ್ಲಿ ಅವರ ಬಗ್ಗೆ ಕೇಳಿ. ಅವರ ಭೂತಕಾಲವನ್ನು ಕೆದಕಲು ಹೋಗಬೇಡಿ. ಅವರು ಭೂತಕಾಲವನ್ನು ಮರೆತು ತುಂಬ ದೂರ ಬಂದಿರುತ್ತಾರೆ. ಅವರಿಗೆ ಅವನ್ನು ಮತ್ತೆ ಮತ್ತೆ ನೆನಪಿಸಿಕೊಟ್ಟು ಅವರನ್ನು ಖಿನ್ನತೆಗೆ ತಳ್ಳಬೇಡಿ.

ಹಾದಿಗಳು ತೆರೆದುಕೊಳ್ಳುತ್ತಲೇ ಹೋಗುತ್ತವೆ

ಕಷ್ಟಗಳು ಮನುಷ್ಯನಿಗೆ ಬರದೆ ಕಲ್ಲು ಬಂಡೆಗಳಿಗೆ ಬರುತ್ತವೆಯೇ? ಬದುಕು ಎಂದ ಮೇಲೆ ಕಷ್ಟ ಇದ್ದೇ ಇದೆ. ಎಲ್ಲರಿಗೂ ಒಂದೊಂದು ರೀತಿಯ ಕಷ್ಟ. ಕೆಲವರದು ಸಣ್ಣದು, ಕೆಲವರದು ದೊಡ್ಡದು. ಕೆಲವರು ಹೇಳಿಕೊಳ್ಳುತ್ತಾರೆ ಕೆಲವರು ಹೇಳಿಕೊಳ್ಳುವುದಿಲ್ಲ, ಅಷ್ಟೇ. “ಸುಖ ನಿಮ್ಮ ಜತೆಗೆ ಊಟ ಮಾಡುತ್ತಿರುವಾಗ ದುಃಖ ನಿಮ್ಮನ್ನು ಹಾಸಿಗೆಯಲ್ಲಿ ಕಾಯುತ್ತಿರುತ್ತದೆ” ಎನ್ನುತ್ತಾನೆ ಖಲೀಲ್ ಗಿಬ್ರಾನ್.

ನನಗೆ ಬಂದ ಸಮಸ್ಯೆ ಲಕ್ಷಕ್ಕೊಬ್ಬರಿಗೆ ಬರುವ ಸಮಸ್ಯೆ. ಇಂತಹ ಭಯಂಕರ ಕಷ್ಟ ಬಂದಾಗ ನಮ್ಮ ಮುಂದೆ ಇರುವ ಆಯ್ಕೆ ಎಷ್ಟು? ಎರಡು. ಒಂದೋ ಆತ್ಮಹತ್ಯೆ ಮಾಡಿಕೊಳ್ಳುವುದು. ಅಥವಾ ಬದುಕನ್ನು ಎದುರಿಸುವುದು. ಆತ್ಮಹತ್ಯೆ ಬಹಳ ಸುಲಭ. ಅದಕ್ಕೆ ಬೇಕಿರುವುದು ಒಂದೆರಡು ನಿಮಿಷ ಅಷ್ಟೇ. ಇನ್ನೊಂದು ಬಂದುದನ್ನು, ಬದುಕನ್ನು ಎದುರಿಸುವುದು. ಇದು ಸುಲಭವಲ್ಲವಾದರೂ ಇದುವೇ ಸರಿಯಾದ ಮಾರ್ಗ. ಬದುಕು ಸಾಧ್ಯವೇ ಇಲ್ಲ ಎಂಬ ಹಂತದಲ್ಲಿಯೂ ಬದುಕಬೇಕು ಎಂಬ ಗಟ್ಟಿ ನಿರ್ಧಾರ ಮಾಡಿ. ಆಮೇಲೆ ಹಾದಿಗಳು ತೆರೆದುಕೊಳ್ಳುತ್ತಲೇ ಹೋಗುತ್ತದೆ. ಮುಂದೊಂದು ದಿನ ತಿರುಗಿ ನೋಡುವಾಗ ನೀವೇ ಬೆರಗಾಗುವ ರೀತಿಯಲ್ಲಿ ನೀವು ನಡೆದು ಬಂದ ದಾರಿ ನಿಮಗೆ ಕಾಣುತ್ತದೆ. ನನ್ನ ಉದಾಹರಣೆಯೇ ನಿಮ್ಮ ಮುಂದಿದೆ. ಹೆಚ್ಚೆಂದರೆ ಮೂರು ವರ್ಷ ಬದುಕಬಹುದು ಎಂದು ಹೇಳುತ್ತಿದ್ದರು. ಇಪ್ಪತ್ತಮೂರು ವರ್ಷ ಆಯಿತು. ಈಗಲೂ ಗಾಡಿ ಓಡುತ್ತಿದೆ. ಬದುಕಿನಲ್ಲಿ ನೆಮ್ಮದಿ, ಸಮಾಧಾನ ಬೇಕೇ? ನಿಮಗಿಂತ ಕೆಳಗಿನವರನ್ನು ನೋಡಿ; ಮೇಲಿನವರನ್ನಲ್ಲ.

ಶ್ರೀನಿವಾಸ ಕಾರ್ಕಳ

ಚಿಂತಕರು, ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page