Home ಬ್ರೇಕಿಂಗ್ ಸುದ್ದಿ SSLC ಪರೀಕ್ಷೆ ಸಕಲ ಸಿದ್ಧತೆ – ಜಿಲ್ಲಾಧಿಕಾರಿ ಕೆ.ಎಸ್. ಲತಾ

SSLC ಪರೀಕ್ಷೆ ಸಕಲ ಸಿದ್ಧತೆ – ಜಿಲ್ಲಾಧಿಕಾರಿ ಕೆ.ಎಸ್. ಲತಾ

0

ಹಾಸನ : 2026ರ ಎಸ್.ಎಸ್.ಎಲ್.ಸಿ ಪರೀಕ್ಷೆ-1ನ್ನು ಸುಗಮ, ಪಾರದರ್ಶಕವಾಗಿ ನಡೆಸಲು ಜಿಲ್ಲೆಯಾದ್ಯಂತ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, sslc ಪರೀಕ್ಷೆ-1 ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1:15ರವರೆಗೆ ನಡೆಯಲಿದೆ ಎಂದು ಹೇಳಿದರು. ಹಾಸನ ಜಿಲ್ಲೆಯಲ್ಲಿ 19,718 ಹೊಸ ವಿದ್ಯಾರ್ಥಿಗಳು, 343 ಖಾಸಗಿ ಅಭ್ಯರ್ಥಿಗಳು, 615 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 74 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಒಟ್ಟು 20,750 ಮಂದಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಒಟ್ಟು 78 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ಪ್ರದೇಶವನ್ನು BNSS 163ರ ಅನ್ವಯ ನಿಷೇಧಿತ ಪ್ರದೇಶವಾಗಿ ಘೋಷಿಸಲಾಗುವುದು. ಪ್ರತಿಯೊಂದು ಕೇಂದ್ರದಲ್ಲೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಕೇಂದ್ರಗಳಲ್ಲಿ ಸಿ.ಸಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ವೆಬ್ ಕಾಸ್ಟಿಂಗ್ ಮೂಲಕ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಪ್ರತಿಯೊಂದು ಪರೀಕ್ಷಾ ಕೊಠಡಿಯ ಚಟುವಟಿಕೆಗಳ ಮೇಲ್ವಿಚಾರಣೆ ನಡೆಯಲಿದೆ ಎಂದರು. ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಇತರ ಸಿಬ್ಬಂದಿಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ವಿದ್ಯಾರ್ಥಿಗಳಿಗೆ ಮೊಬೈಲ್, ರಿಸ್ಟ್ ವಾಚ್, ಬ್ಲೂಟೂತ್ ಸೇರಿದಂತೆ ಯಾವುದೇ ವಿದ್ಯುನ್ಮಾನ ಉಪಕರಣಗಳನ್ನು ತರಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪರೀಕ್ಷಾ ಕಾರ್ಯಕ್ಕೆ ಸಂಬಂಧಪಡದವರಿಗೆ ಕೇಂದ್ರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎಂದರು.

ವಿದ್ಯಾರ್ಥಿಗಳು ಮತ್ತು ಕೊಠಡಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಸೂಕ್ಷ್ಮ ಅಥವಾ ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಿಲ್ಲ. ಕಳೆದ ಮೂರು ವರ್ಷಗಳಿಂದ ಯಾವುದೇ ಪರೀಕ್ಷಾ ದುರಾಚರಣೆ ಪ್ರಕರಣಗಳು ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ವಿಕಲಚೇತನ ವಿದ್ಯಾರ್ಥಿಗಳಿಗೆ ಎರಡು ಭಾಷೆಯಿಂದ ವಿನಾಯಿತಿ, ವಾಚಕರ ಸಹಾಯ, ಹೆಚ್ಚುವರಿ ಒಂದು ಗಂಟೆ ಕಾಲಾವಕಾಶ ಹಾಗೂ ನೆಲ ಮಹಡಿಯಲ್ಲಿ ಆಸನ ವ್ಯವಸ್ಥೆ ಸೇರಿದಂತೆ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಬಾರಿ 225 ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯಲಿದ್ದಾರೆ ಎಂದರು.

ಪರೀಕ್ಷಾ ದಿನಗಳಲ್ಲಿ ನಿರಂತರ ವಿದ್ಯುತ್ ಸಂಪರ್ಕಕ್ಕಾಗಿ CHESCOM ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷೆಗಳು ಮುಗಿಯುವವರೆಗೂ ಬಸ್ ಸಂಚಾರದಲ್ಲಿ ವ್ಯತ್ಯಯವಾಗದಂತೆ KSRTC ಅಧಿಕಾರಿಗಳಿಗೆ ತಿಳಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

You cannot copy content of this page

Exit mobile version